ಪದ್ಯ ೨೪: ಮೃಗಗಳಿಗೆ ಬೇಡರು ಎಲ್ಲಿ ಹುಡುಕಿದರು?

ಏನನೆಂಬೆನು ಜೀಯ ಹೊಕ್ಕನು
ಕಾನನವನನಿಲಜನು ಶಬರ ವಿ
ತಾನವಿಕ್ಕಿದ ವೇಡೆಗಳ ಬೆಳ್ಳಾರ ಸುತ್ತುಗಳ
ಕಾನನವನಳಿವಿನ ಶಿಲೋಚ್ಚಯ
ಸಾನುವಿನ ಗಹ್ವರದ ಗಂಡ
ಸ್ಥಾನ ದೀರ್ಘದ್ರೋಣಿಗಳಲರಸಿದರು ಮೃಗಕುಲವ (ಅರಣ್ಯ ಪರ್ವ, ೧೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಜನಮೇಜಯ ನಾನು ಏನೆಂದು ಹೇಳಲು, ಶಬರರು ಸುತ್ತ ಬಲೆಗಳನ್ನು ಹಾಕಿದ್ದ ಕಾಡನ್ನು ಭೀಮನು ಹೊಕ್ಕನು. ಕಾಡಿನ ಅಂಚುಗಳಲ್ಲಿ ಗುಂಡು ಕಲ್ಲುಗಳ ರಾಶಿಗಳ ಹಿಂದೆ, ಬೆಟ್ಟದ ಮೇಲಿನ ಪ್ರದೇಶದಲ್ಲಿ, ಕಂದರಗಳಲ್ಲಿ, ಗುಹೆಗಳಲ್ಲಿ, ಅಪಾಯದ ಸ್ಥಾನದ ಪ್ರದೇಶಗಳಲ್ಲಿ, ಬೇಡರು ಮೃಗಗಳನ್ನು ಹುಡುಕಿದರು.

ಅರ್ಥ:
ಜೀಯ: ಒಡೆಯ; ಹೊಕ್ಕು: ಸೇರು; ಕಾನನ; ಅರಣ್ಯ; ಅನಿಲಜ; ವಾಯುಪುತ್ರ (ಭೀಮ); ಶಬರ: ಬೇಡಾ; ವಿತಾನ: ಆಧಿಕ್ಯ, ಹೆಚ್ಚಳ; ವೇಡೆ: ಬಲೆ, ಜಾಲ; ಬೆಳ್ಳಾರ: ಒಂದು ಬಗೆಯ ಬಲೆ; ಸುತ್ತು: ಬಳಸಿರುವುದು, ಮಂಡಲ; ಅಳಿ: ಅಂಚು; ಶಿಲ: ಕಲ್ಲುಬಂಡೆ; ಉಚ್ಚಯ: ಸಮೂಹ, ರಾಶಿ ; ಸಾನು: ಬೆಟ್ಟದ ಮೇಲಿನ ಸಮತಲವಾದ ಪ್ರದೇಶ, ತುದಿ; ಗಹ್ವರ: ಗವಿ, ಗುಹೆ; ಗಂಡ: ಆಪತ್ತು, ಅಪಾಯ; ಸ್ಥಾನ: ಪ್ರದೇಶ; ದೀರ್ಘ: ಉದ್ದವಾದ; ದ್ರೋಣಿ: ಕಣಿವೆ, ಕಂದಕ; ಅರಸು: ಹುಡುಕು; ಮೃಗ: ಪ್ರಾಣಿ; ಕುಲ: ವಂಶ;

ಪದವಿಂಗಡಣೆ:
ಏನನೆಂಬೆನು +ಜೀಯ +ಹೊಕ್ಕನು
ಕಾನನವನ್+ಅನಿಲಜನು +ಶಬರ +ವಿ
ತಾನವಿಕ್ಕಿದ+ ವೇಡೆಗಳ+ ಬೆಳ್ಳಾರ +ಸುತ್ತುಗಳ
ಕಾನನವನ್+ಅಳಿವಿನ +ಶಿಲ+ಉಚ್ಚಯ
ಸಾನುವಿನ+ ಗಹ್ವರದ +ಗಂಡ
ಸ್ಥಾನ +ದೀರ್ಘದ್ರೋಣಿಗಳಲ್+ಅರಸಿದರು +ಮೃಗ+ಕುಲವ

ಅಚ್ಚರಿ:
(೧) ಕಾನನ – ೨, ೪ ಸಾಲಿನ ಮೊದಲ ಪದ
(೨) ಕಾಡಿನ ಪ್ರದೇಶಗಳನ್ನು ವಿವರಿಸುವ ಪರಿ – ಕಾನನವನಳಿವಿನ, ಶಿಲೋಚ್ಚಯ, ಸಾನುವಿನ, ಗಹ್ವರದ, ಗಂಡಸ್ಥಾನ, ದೀರ್ಘದ್ರೋಣಿ

ನಿಮ್ಮ ಟಿಪ್ಪಣಿ ಬರೆಯಿರಿ