ಪದ್ಯ ೧೪: ಧರ್ಮಜನು ಮತ್ತಾರ ಆಶ್ರಮಕ್ಕೆ ಹೋದನು?

ಅರಸ ಕೇಳೈ ಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊಂದು ವತ್ಸರವ
ಧರಣಿಪತಿ ಬೃಹದಶ್ವನಾಶ್ರಮ
ವರಕೆ ಬಂದನು ತೀರ್ಥ ಸೇವಾ
ಪರಮ ಪಾವನ ಕರಣನಿರ್ದನು ಪರ್ಣಶಾಲೆಯಲಿ (ಅರಣ್ಯ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಕಾರ್ತಿಕೇಯನ ಆಶ್ರಮಕ್ಕೆ ಹೋಗಿ ಮುನಿಗಳೊಡನೆ ಒಂದು ವರ್ಷಕಾಲ ಸಂತೋಷದಿಂದಿದ್ದನು. ಅಲ್ಲಿಂದ ಮುಂದೆ ಬೃಹದಶ್ವನ ಆಶ್ರಮಕ್ಕೆ ಹೋಗಿ ಪರ್ಣಶಾಲೆಯಲ್ಲಿದ್ದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ವರ: ಶ್ರೇಷ್ಠ; ಮಹಾ: ದೊಡ್ಡ, ಶ್ರೇಷ್ಠ; ಆಶ್ರಮ: ಕುಟೀರ; ಮುನಿ: ಋಷಿ; ಸಹಿತ: ಜೊತೆ; ಒಲವು: ಪ್ರೀತಿ; ನೂಕು: ತಳ್ಳು; ವತ್ಸರ: ವರ್ಷ; ಧರಣಿಪತಿ: ರಾಜ; ಬಂದನು: ಆಗಮಿಸು; ತೀರ್ಥ: ಪುಣ್ಯಕ್ಷೇತ್ರ; ಸೇವೆ: ಉಪಚಾರ, ಶುಶ್ರೂಷೆ, ಪೂಜೆ; ಪರಮ: ಶ್ರೇಷ್ಠ; ಪಾವನ: ಪವಿತ್ರವಾದ; ಪರ್ಣಶಾಲೆ: ಕುಟೀರ; ಐದು: ಬಂದುಸೇರು;

ಪದವಿಂಗಡಣೆ:
ಅರಸ+ ಕೇಳೈ +ಕಾರ್ತಿಕೇಯನ
ವರ +ಮಹಾಶ್ರಮಕ್+ಐದಿದನು +ಮುನಿ
ವರರು +ಸಹಿತ್+ಒಲವಿನಲಿ +ನೂಕಿದನ್+ಒಂದು +ವತ್ಸರವ
ಧರಣಿಪತಿ +ಬೃಹದಶ್ವನ್+ಆಶ್ರಮ
ವರಕೆ+ ಬಂದನು +ತೀರ್ಥ +ಸೇವಾ
ಪರಮ +ಪಾವನ +ಕರಣನಿರ್ದನು +ಪರ್ಣಶಾಲೆಯಲಿ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ಸೇವಾ ಪರಮ ಪಾವನ ಕರಣ
(೨) ಅರಸ, ಧರಣಿಪತಿ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ