ಪದ್ಯ ೬೬: ಅರ್ಜುನನನ್ನು ಯಾರು ಹರಸಿದರು?

ಅರಸ ಕಳುಹಿದನಿಂದ್ರಸೂತನ
ನರಮನೆಗೆ ಬಂದನು ಧನಂಜಯ
ವೆರಸಿ ಪರ್ಣದ ಔಕಿಗೆಯಲಿ ಮುನೀಂದ್ರ ಮೇಳದಲಿ
ಅರಸಿ ಬಣ್ಣದ ಸೊಡರ ಬಲಿದಳು
ಹರಸಿದರು ಮುನಿವಧುಗಳಕ್ಷತೆ
ವೆರಸಿ ಗದುಗಿನ ವೀರನಾರಾಯಣನ ಮೈದುನನ (ಅರಣ್ಯ ಪರ್ವ, ೧೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಮಾತಲಿಯನ್ನು ಇಂದ್ರನ ಅರಮನೆಗೆ ಕಳುಹಿಸಿ, ಅರ್ಜುನನೊಡನೆ ಮುನಿಗಳ ಸಮೇತವಾಗಿ ತನ್ನ ಪರ್ಣಶಾಲೆಯ ಅಂಗಳಕ್ಕೆ ಬಂದನು. ದ್ರೌಪದಿಯು ಬಣ್ಣದ ದೀಪಗಳನ್ನು ಹಚ್ಚಿದಳು. ಮುನಿ ಪತ್ನಿಯರು ಅರ್ಜುನನನ್ನು ಹರಸಿದರು.

ಅರ್ಥ:
ಅರಸ: ರಾಜ; ಕಳುಹಿದ: ಬೀಳ್ಕೊಡು; ಸೂತ: ರಥವನ್ನು ಓಡಿಸುವವ; ಅರಮನೆ: ರಾಜರ ಆಲಯ; ಬಂದು: ಆಗಮಿಸು; ಪರ್ಣ: ಎಲೆ; ಚೌಕಿಗೆ:ಮನೆಯ ಒಳ ಅಂಗಳ, ಹಜಾರ; ಮುನಿ: ಋಷಿ; ಮೇಳ: ಗುಂಪು; ಅರಸಿ: ರಾಣಿ; ಬಣ್ಣ: ವರ್ಣ; ಸೊಡರು: ದೀಪ; ಬಲಿ: ಹೆಚ್ಚಾಗು; ಹರಸು: ಆಶೀರ್ವದಿಸು; ಮುನಿವಧು: ಋಷಿ ಪತ್ನಿ; ಅಕ್ಷತೆ: ಮಂತ್ರಿಸಿದ ಅಕ್ಕಿ; ಮೈದುನ: ತಂಗಿಯ ಗಂಡ;

ಪದವಿಂಗಡಣೆ:
ಅರಸ +ಕಳುಹಿದನ್+ಇಂದ್ರ+ಸೂತನನ್
ಅರಮನೆಗೆ +ಬಂದನು +ಧನಂಜಯವ್
ಎರಸಿ+ ಪರ್ಣದ+ ಔಕಿಗೆಯಲಿ +ಮುನೀಂದ್ರ +ಮೇಳದಲಿ
ಅರಸಿ+ ಬಣ್ಣದ +ಸೊಡರ +ಬಲಿದಳು
ಹರಸಿದರು +ಮುನಿವಧುಗಳ್+ಅಕ್ಷತೆವ್
ಎರಸಿ+ ಗದುಗಿನ+ ವೀರನಾರಾಯಣನ +ಮೈದುನನ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ವೀರನಾರಾಯಣನ ಮೈದುನನ
(೨) ಅರಸಿ, ಹರಸಿ, ಎರಸಿ – ಪ್ರಾಸ ಪದಗಳು

ಪದ್ಯ ೬೫: ಧರ್ಮಜನ ಕೋರಿಕೆ ಅರ್ಜುನನು ಹೇಗೆ ಉತ್ತರಿಸಿದನು?

ಜೀಯ ನಿಮ್ಮರ್ತಿಯನು ಶಂಭುವಿ
ನಾಯುಧದಲೇ ಸಲಿಸಿದಪೆನಾ
ಗ್ನೇಯ ವಾರುಣ ವೈಂದ್ರ ಕೌಬೇರಾಸ್ತ್ರಕೌಶಲವ
ಆಯತವ ತೋರಿಸುವೆನೀಗಳ
ನಾಯತವು ರವಿ ತುರಗರಾಜಿಗೆ
ಲಾಯ ನೀಡಿತು ಪಶ್ಚಿಮಾಶಾಗಿರಿಯ ತಪ್ಪಲಲಿ (ಅರಣ್ಯ ಪರ್ವ, ೧೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಅಣ್ಣಾ ಪಾಶುಪತಾಸ್ತ್ರವನ್ನು ಪ್ರದರ್ಶಿಸುತ್ತೇನೆ, ಅದೊಂದೇ ಏಕೆ, ಆಗ್ನೇಯ, ವಾರುಣ, ಐಂದ್ರ, ಕೌಬೇರಾಸ್ತ್ರಗಳನ್ನು ಪ್ರದರ್ಶಿಸುತ್ತೇನೆ. ಆದರೆ ಈ ಹೊತ್ತು ಸರಿಯಲ್ಲ. ಸೂರ್ಯನ ಕುದುರೆಗಳು ಈಗ ಪಶ್ಚಿಮ ದಿಕ್ಕಿನ ಬೆಟ್ಟದ ತಪ್ಪಲಲ್ಲಿರುವ ಲಾಯವನ್ನು ಸೇರಿವೆ ಎಂದು ಹೇಳಿದನು.

ಅರ್ಥ:
ಜೀಯ: ಒಡೆಯ; ಅರ್ತಿ: ಪ್ರೀತಿ, ಸಂತೋಷ; ಶಂಭು: ಶಂಕರ; ಆಯುಧ: ಶಸ್ತ್ರ; ಸಲಿಸು:ಪೂರೈಸು; ಕೌಶಲ: ಜಾಣತನ, ಚದುರು; ಆಯತ: ಉಚಿತವಾದ ಕ್ರಮ, ವಾಸಸ್ಥಾನ; ಅನಾಯತ: ತಪ್ಪುಕೆಲಸ; ತೋರಿಸು: ಪ್ರದರ್ಶಿಸು; ತುರಗ: ಕುದುರೆ; ರಾಜಿ: ಗುಂಪು; ಲಾಯ: ಅಶ್ವಶಾಲೆ; ಪಶ್ಚಿಮ: ಪಡುವಣ; ಗಿರಿ: ಬೆಟ್ಟ; ತಪ್ಪಲು: ಬೆಟ್ಟದ ಕೆಳಗಿರುವ ಸಮತಟ್ಟು ಪ್ರದೇಶ;

ಪದವಿಂಗಡಣೆ:
ಜೀಯ +ನಿಮ್ಮ್+ಅರ್ತಿಯನು +ಶಂಭುವಿನ್
ಆಯುಧದಲೇ+ ಸಲಿಸಿದಪೆನ್
ಆಗ್ನೇಯ +ವಾರುಣವ್ + ಐಂದ್ರ+ ಕೌಬೇರಾಸ್ತ್ರ+ಕೌಶಲವ
ಆಯತವ +ತೋರಿಸುವೆನ್+ಈಗಳ್
ಅನಾಯತವು +ರವಿ +ತುರಗರಾಜಿಗೆ
ಲಾಯ +ನೀಡಿತು +ಪಶ್ಚಿಮಾಶಾ+ಗಿರಿಯ +ತಪ್ಪಲಲಿ

ಅಚ್ಚರಿ:
(೧) ಸೂರ್ಯ ಮುಳುಗಿದನು ಎಂದು ಹೇಳುವ ಪರಿ – ರವಿ ತುರಗರಾಜಿಗೆ ಲಾಯ ನೀಡಿತು ಪಶ್ಚಿಮಾಶಾಗಿರಿಯ ತಪ್ಪಲಲಿ
(೨) ಆಯತ, ಅನಾಯತ – ಪದಗಳ ಬಳಕೆ

ಪದ್ಯ ೬೪: ಧರ್ಮಜನು ಅರ್ಜುನನಿಗೆ ಯಾವ ಆಶೆಯನ್ನು ತೋಡಿಕೊಂಡನು?

ಶಿವನಘಾಟದ ಶರ ಚತುರ್ದಶ
ಭುವನ ಭಂಜನವಿದು ಮದೀಯಾ
ಹವಕೆ ಹೂಣಿಗನಾಯ್ತಲೇ ಹೇರಾಳ ಸುಕೃತವಿದು
ಎವಗೆ ತೋರಿಸಬೇಹುದೀಶಾಂ
ಭವಮಹಾಸ್ತ್ರ ಪೌಢಕೇಳೀ
ವಿವರಣವ ಕಾಂಬರ್ತಿಯಾಯ್ತೆಂದನು ಧನಂಜಯಗೆ (ಅರಣ್ಯ ಪರ್ವ, ೧೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಅಸಮಾನವಾದ ಪಾಶುಪತಾಸ್ತ್ರವು ಹದಿನಾಲ್ಕು ಲೋಕಗಳನ್ನು ಸುಡಬಲ್ಲದು, ಇದು ನಮ್ಮ ಸಮರಸಾಧನವಾದುದು ಮಹಾಪುಣ್ಯವೇ ಸರಿ. ಈ ಪಾಶುಪತಾಸ್ತ್ರದ ಪ್ರೌಢ ವಿಧಾನವನ್ನು ನೋಡಬೇಕೆಂಬಾಶೆಯಾಗಿದೆ, ತೋರಿಸು ಎಂದು ಧರ್ಮಜನು ಕೇಳಿದನು.

ಅರ್ಥ:
ಶಿವ: ಶಂಕರ; ಅಘಾಟ: ಅದ್ಭುತ, ಅತಿಶಯ; ಶರ: ಬಾಣ; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಭಂಜನ: ನಾಶಕಾರಿ; ಆಹವ: ಯುದ್ಧ; ಹೂಣಿಗ: ಬಿಲ್ಲುಗಾರ; ಹೇರಾಳ: ಬಹಳ; ಸುಕೃತ: ಒಳ್ಳೆಯ ಕಾರ್ಯ; ಎವಗೆ: ನನಗೆ; ತೋರಿಸು: ನೋಡು, ಗೋಚರಿಸು; ಮಹಾಸ್ತ್ರ: ದೊಡ್ಡ ಶಸ್ತ್ರ; ಪ್ರೌಢ: ಶ್ರೇಷ್ಠ; ವಿವರಣ: ವಿಚಾರ; ಕಾಂಬು: ನೋಡು;

ಪದವಿಂಗಡಣೆ:
ಶಿವನ್+ಅಘಾಟದ +ಶರ +ಚತುರ್ದಶ
ಭುವನ +ಭಂಜನವಿದು +ಮದೀಯ
ಆಹವಕೆ+ ಹೂಣಿಗನ್+ಆಯ್ತಲೇ +ಹೇರಾಳ +ಸುಕೃತವಿದು
ಎವಗೆ+ ತೋರಿಸಬೇಹುದ್+ಈಶಾಂ
ಭವ+ಮಹಾಸ್ತ್ರ +ಪೌಢ+ಕೇಳ್+ಈ
ವಿವರಣವ+ ಕಾಂಬರ್ತಿಯಾಯ್ತೆಂದನು +ಧನಂಜಯಗೆ

ಅಚ್ಚರಿ:
(೧) ಪಾಶುಪತಾಸ್ತ್ರದ ಹಿರಿಮೆ – ಶಿವನಘಾಟದ ಶರ ಚತುರ್ದಶ ಭುವನ ಭಂಜನವಿದು

ಪದ್ಯ ೬೩: ಪಾಂಡವರ ಆನಂದವು ಹೇಗಿತ್ತು?

ನೃಪನ ಮುದವನು ಭೀಮಸೇನನ
ವಿಪುಳ ಸಂತೋಷವನು ನಕುಲನ
ಚಪಳ ಮದವನು ಪುಳಕವನು ಸಹದೇವನವಯವದ
ದ್ರುಪದಸುತೆಯುತ್ಸವವ ಮುನಿಜನ
ದಪಗತ ಗ್ಲಾನಿಯನು ಪರಿಜನ
ದುಪಚಿತಾನಂದವನು ಬಣ್ಣಿಸಲರಿಯೆ ನಾನೆಂದ (ಅರಣ್ಯ ಪರ್ವ, ೧೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಧರ್ಮರಾಯನ ಸಂತೋಷ, ಭೀಮನ ಅತಿಶಯ ಮುದ, ನಕುಲನ ಉಬ್ಬು, ಸಹದೇವನ ರೋಮಾಂಚನ, ದ್ರೌಪದಿಯ ಮನಸ್ಸಿನ ಉತ್ಸವ, ಮುನಿಗಳು ಚಿಂತೆಯನ್ನು ಬಿಟ್ಟು ಸಮಚಿತ್ತವನ್ನು ಪಡೆದುದು, ಪರಿಜನರ ಆನಂದಗಳು ಇವನ್ನು ನಾನು ವರ್ಣಿಸಲಾರೆ.

ಅರ್ಥ:
ನೃಪ: ರಾಜ; ಮುದ: ಸಂತಸ; ವಿಪುಳ: ಬಹಳ, ಹೆಚ್ಚು; ಚಪಲ: ಚುರುಕಾದ; ಮದ: ಸೊಕ್ಕು, ಗರ್ವ; ಪುಳಕ: ಮೈನವಿರೇಳುವಿಕೆ; ಅವಯವ: ಅಂಗ; ಸುತೆ: ಮಗಳು; ಉತ್ಸವ: ಸಂಭ್ರಮ; ಮುನಿ: ಋಷಿ; ಪರಿಜನ: ಸಂಬಂಧಿಕರು; ಅಪಗತ: ದೂರ ಸರಿದ; ಗ್ಲಾನಿ: ಬಳಲಿಕೆ, ದಣಿವು; ಉಪಚಿತ: ಯೋಗ್ಯವಾದ; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ನೃಪನ +ಮುದವನು +ಭೀಮಸೇನನ
ವಿಪುಳ +ಸಂತೋಷವನು +ನಕುಲನ
ಚಪಳ +ಮದವನು +ಪುಳಕವನು +ಸಹದೇವನ್+ಅವಯವದ
ದ್ರುಪದಸುತೆ+ಉತ್ಸವವ +ಮುನಿಜನದ್
ಅಪಗತ+ ಗ್ಲಾನಿಯನು +ಪರಿಜನದ್
ಉಪಚಿತ್+ಆನಂದವನು +ಬಣ್ಣಿಸಲರಿಯೆ +ನಾನೆಂದ

ಅಚ್ಚರಿ:
(೧) ಚಪಳ, ವಿಪುಳ – ಪ್ರಾಸ ಪದಗಳು
(೨) ಮುದ, ಸಂತೋಷ – ಸಮನಾರ್ಥಕ ಪದ

ಪದ್ಯ ೬೨: ಧರ್ಮರಾಯನ ಸ್ಥಿತಿ ಹೇಗಿತ್ತು?

ಹೊಗಳಿನಿಲ್ಲದು ಜಿಹ್ವೆ ತೆಕ್ಕೆಯ
ಸೊಗಸಿನಲಿ ಮನ ದಣಿಯದೀಕ್ಷಣ
ಯುಗಳ ಬೀಯದು ನೋಡಿ ಪಾರ್ಥನ ಮಾತ ಸವಿಸವಿದು
ತೆಗೆದು ನಿಲ್ಲದು ಕರ್ಣಯುಗ ಸುರ
ನಗರಿಯುತ್ತಮ ಗಂಧಭರದಲಿ
ಮಗುಳದರಸನ ನಾಸಿಕವು ಭೂಪಾಲ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಎಷ್ಟು ಹೊಗಳಿದರೂ ನಾಲಿಗೆಗೆ ತೃಪ್ತಿಯಿಲ್ಲ. ಎಷ್ಟು ಆಲಂಗಿಸಿದರೂ ಮನಸ್ಸಿಗೆ ತೃಪ್ತಿಯಿಲ್ಲ. ಮನದಣಿಯುವಂತೆ ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಅರ್ಜುನನ ಮಾತನ್ನು ಎಷ್ಟು ಕೇಳಿದರೂ ಕಿವಿಗಳಿಗೆ ತೃಪ್ತಿಯಿಲ್ಲ. ಅರ್ಜುನನು ಲೇಪಿಸಿಕೊಂಡ ಸ್ವರ್ಗದ ಗಂಧದ ಪರಿಮಳವನ್ನು ಎಷ್ಟು ಮೂಸಿದರೂ ಮೂಗಿಗೆ ತೃಪ್ತಿಯಿಲ್ಲ.

ಅರ್ಥ:
ಹೊಗಳು: ಪ್ರಶಂಶಿಸು; ಜಿಹ್ವೆ: ನಾಲಗೆ; ತೆಕ್ಕೆ: ಅಪ್ಪುಗೆ; ಸೊಗಸು: ಚೆಲುವು; ಮನ; ಮನಸ್ಸು; ದಣಿವು: ಆಯಾಸ; ಈಕ್ಷಣ: ನೋಡು; ಯುಗಳ: ಎರದು; ಬೀಯ: ವ್ಯಯ, ಖರ್ಚು; ನೋಡಿ: ನೋಟ; ಮಾತು: ವಾಣಿ; ಸವಿ: ಸಿಹಿ; ತೆಗೆ: ಹೊರತರು; ನಿಲ್ಲು: ತಡೆ; ಕರ್ಣ: ಕಿವಿ; ಸುರನಗರಿ: ಅಮರಾವತಿ; ನಗರ: ಊರು; ಉತ್ತಮ: ಶ್ರೇಷ್ಠ; ಗಂಧ: ಪರಿಮಳ; ಭರ: ವೇಗ; ಮಗುಳು: ಮತ್ತೆ; ಅರಸ: ರಾಜ; ನಾಸಿಕ: ಮೂಗು; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊಗಳಿ+ನಿಲ್ಲದು +ಜಿಹ್ವೆ +ತೆಕ್ಕೆಯ
ಸೊಗಸಿನಲಿ +ಮನ +ದಣಿಯದ್+ಈಕ್ಷಣ
ಯುಗಳ+ ಬೀಯದು+ ನೋಡಿ +ಪಾರ್ಥನ +ಮಾತ +ಸವಿಸವಿದು
ತೆಗೆದು +ನಿಲ್ಲದು +ಕರ್ಣಯುಗ +ಸುರ
ನಗರಿ+ಉತ್ತಮ +ಗಂಧ+ಭರದಲಿ
ಮಗುಳದ್+ಅರಸನ+ ನಾಸಿಕವು+ ಭೂಪಾಲ +ಕೇಳೆಂದ

ಅಚ್ಚರಿ:
(೧) ಜಿಹ್ವೆ, ನೋಟ, ಮಾತು, ಕರ್ಣ – ಇವಗಳ ಸಂತಸದ ಸ್ಥಿತಿಯನ್ನು ವರ್ಣಿಸುವ ಪದ್ಯ

ಪದ್ಯ ೬೧: ಯುಧಿಷ್ಠಿರನೇಕೆ ಸಂತಸಗೊಂಡನು?

ಲೇಸುಮಾಡಿದೆ ನಾಕವನು ಖಳ
ರೀಸುದಿವಸ ವಿಭಾಡಿಸಿದರೆ ಸು
ರೇಶನಾಪತ್ತಿಂಗೆ ನಿರ್ವ್ವಾಪಣವ ರಚಿಸಿದೆಲ
ಈಸು ಪುಣ್ಯೋದಯಕೆ ಪೂರ್ವಮ
ಹೀಶಕುಲ ನೋಂತುದೆಯೆನುತ ಸಂ
ತೋಷಮಯ ಜಲಧಿಯಲಿ ಕೀಳಮೇಲಾದನವನೀಶ (ಅರಣ್ಯ ಪರ್ವ, ೧೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ಅರ್ಜುನನ ಮಾತುಗಳನ್ನು ಕೇಳಿ ಯುಧಿಷ್ಠಿರನು ಸಂತೋಷಗೊಂಡು, ಇಷ್ಟು ದಿನವೂ ಸ್ವರ್ಗಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದ ರಾಕ್ಷಸರನ್ನು ನಾಶ ಮಾಡಿ, ದೇವೇಂದ್ರನ ಆಪತ್ತನ್ನು ಹೋಗಲಾಡಿಸಿದುದು ಒಳ್ಳೆಯದಾಯಿತು. ನಮ್ಮ ವಂಶದ ಪೂರ್ವಜರು ಮಾಡಿದ ವ್ರತದಿಂದ ಈ ಕೆಲಸವಾಯಿತು ಎಂದು ಹೇಳಿ ಸಂತೋಷ ಸಾಗರದಲ್ಲಿ ಮುಳುಗೆದ್ದನು.

ಅರ್ಥ:
ಲೇಸು: ಒಳಿತು; ನಾಕ: ಸ್ವರ್ಗ; ಖಳ: ದುಷ್ಟ; ಈಸು: ಇಷ್ಟು; ದಿವಸ: ದಿನ; ವಿಭಾಡ: ನಾಶಮಾಡುವವನು; ಸುರೇಶ: ಇಂದ್ರ; ಆಪತ್ತು: ತೊಂದರೆ; ನಿರ್ವಾಪಣ: ನಿವಾರಣೆ; ರಚಿಸು: ನಿರ್ಮಿಸು; ಪುಣ್ಯ: ಸದಾಚಾರ; ಉದಯ: ಹುಟ್ತು; ಪೂರ್ವ: ಹಿಂದಿನ; ಮಹೀಶ: ರಾಜ; ಕುಲ: ವಂಶ; ನೋಂತು: ವ್ರತ; ಸಂತೋಷ: ಸಂತಸ, ಹರ್ಷ; ಜಲಧಿ: ಸಾಗರ; ತೇಕಾಡು: ಕೀಳು: ಕೆಳಮಟ್ಟ; ಮೇಲು: ಎತ್ತರದ, ಹೆಚ್ಚಾದ; ಅವನೀಶ: ರಾಜ;

ಪದವಿಂಗಡಣೆ:
ಲೇಸು+ಮಾಡಿದೆ+ ನಾಕವನು+ ಖಳರ್
ಈಸು+ದಿವಸ +ವಿಭಾಡಿಸಿದರೆ+ ಸು
ರೇಶನ್+ಆಪತ್ತಿಂಗೆ +ನಿರ್ವ್ವಾಪಣವ+ ರಚಿಸಿದೆಲ
ಈಸು +ಪುಣ್ಯೋದಯಕೆ +ಪೂರ್ವ+ಮ
ಹೀಶ+ಕುಲ +ನೋಂತುದೆ+ಎನುತ +ಸಂ
ತೋಷಮಯ +ಜಲಧಿಯಲಿ +ಕೀಳ+ಮೇಲಾದನ್+ಅವನೀಶ

ಅಚ್ಚರಿ:
(೧) ಅವನೀಶ, ಮಹೀಶ – ಸಮನಾರ್ಥಕ ಪದ
(೨) ರಾಜ ನನ್ನು ಕರೆಯುವ ಪರಿ – ಸುರೇಶ, ಮಹೀಶ, ಅವನೀಶ
(೩) ಯುಧಿಷ್ಠಿರನ ಪ್ರೌಢಿಮೆ – ಈಸು ಪುಣ್ಯೋದಯಕೆ ಪೂರ್ವಮಹೀಶಕುಲ ನೋಂತುದೆ
(೪) ಸಂತೋಷಪಟ್ಟನು ಎನ್ನುವ ಪರಿ – ಸಂತೋಷಮಯ ಜಲಧಿಯಲಿ ಕೀಳಮೇಲಾದನವನೀಶ

ಪದ್ಯ ೬೦: ಅರ್ಜುನನನ್ನು ಯಾರು ಕೊಂಡಾಡಿದರು?

ಸುರರು ಕೊಂಡಾಡಿದರು ಸುರಮುನಿ
ವರರ ಪರಮಾಶೀರ್ವಚೋ ವಿ
ಸ್ತರಕೆ ಫಲವಿದೆಲಾ ಭವತ್ಕರುಣಾಂಬಕಾಲೋಕ
ಅರಿಸುಭಟ ಸಂತೋಷಮಯ ಸಾ
ಗರವ ಸುರಿಯವೆ ಸರಳು ವಡಬ
ಸ್ಫುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ (ಅರಣ್ಯ ಪರ್ವ, ೧೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ದೇವತೆಗಳು ನನ್ನ ವಿಜಯವನ್ನು ಕೊಂಡಾಡಿದರು, ದೇವರ್ಷಿಗಳು ನನ್ನನ್ನು ಆಶೀರ್ವದಿಸಿದರು, ನಿಮ್ಮ ಕರುಣ ಕಟಾಕ್ಷಗಳ ಬಲದಿಂದ ಶತ್ರುಗಳ ಸಂತೋಷ ಸಾಗರವನ್ನು ನನ್ನ ಬಾಣಗಳು ವಡಬಾಗ್ನಿಯಂತೆ ಕರಿನಾಲಗೆಯಿಂದ ಕುಡಿದು ಹಾಕದೆ ಬಿದುವುದೇ? ಎಂದು ಅರ್ಜುನನು ಯುಧಿಷ್ಠಿರನಿಗೆ ಹೇಳಿದನು.

ಅರ್ಥ:
ಸುರ: ದೇವತೆ; ಕೊಂಡಾಡು: ಹೊಗಳು; ಸುರಮುನಿ: ದೇವರ್ಷಿ; ಆಶೀರ್ವಾದ: ಹರಕೆ, ಶುಭನುಡಿ; ವಿಸ್ತರ; ಹರಹು; ಫಲ: ಪ್ರಯೋಜನ; ಭವತ್: ನಿಮ್ಮ; ಕರುಣ: ದಯೆ; ಅಂಬಕ: ಕಣ್ಣು; ಆಲೋಕ: ನೋಟ; ಅರಿ: ವೈರಿ; ಸುಭಟ: ಸೈನಿಕ; ಸಂತೋಷ: ಹರ್ಷ; ಸಾಗರ: ಸಮುದ್ರ; ಸುರಿ: ವರ್ಷಿಸು; ಸರಳು: ಬಾಣ; ವಡಬ: ಸಮುದ್ರದಲ್ಲಿರುವ ಬೆಂಕಿ; ಸ್ಫುರಣ: ಹೊಳಪು; ಮೇಘ: ಮೋಡ; ಜ್ವಾಲೆ: ಬೆಂಕಿ; ಜಾಲ: ಬಲೆ; ಕರಾಳ: ಭಯಂಕರ; ಜಿಹ್ವೆ: ನಾಲಗೆ;

ಪದವಿಂಗಡಣೆ:
ಸುರರು +ಕೊಂಡಾಡಿದರು+ ಸುರಮುನಿ
ವರರ +ಪರಮ+ಆಶೀರ್ವಚೋ+ ವಿ
ಸ್ತರಕೆ+ ಫಲವಿದೆಲಾ+ ಭವತ್+ಕರುಣಾಂಬಕ+ಆಲೋಕ
ಅರಿ+ಸುಭಟ+ ಸಂತೋಷಮಯ +ಸಾ
ಗರವ+ ಸುರಿಯವೆ+ ಸರಳು+ ವಡಬ
ಸ್ಫುರಣ+ ಮೇಘಜ್ವಾಲೆ +ಜಾಲ +ಕರಾಳ +ಜಿಹ್ವೆಯಲಿ

ಅಚ್ಚರಿ:
(೧) ಶತ್ರುಗಳ ನಾಶವಾದರು ಎಂದು ಹೇಳುವ ಪರಿ – ಅರಿಸುಭಟ ಸಂತೋಷಮಯ ಸಾ
ಗರವ ಸುರಿಯವೆ ಸರಳು ವಡಬಸ್ಫುರಣ ಮೇಘಜ್ವಾಲೆ ಜಾಲ ಕರಾಳ ಜಿಹ್ವೆಯಲಿ

ಪದ್ಯ ೫೯: ಅರ್ಜುನನ ಏಳಿಗೆಗೆ ಯಾರ ಆಶೀರ್ವಾದ ಕಾರಣ?

ಇದಿರುವಂದನು ಪದಯುಗದಲೆರ
ಗಿದರೆ ತೆಗೆದಪ್ಪಿದನು ಸನ್ಮಾ
ನದ ಸಘಾಡವನೇನನೆಂಬೆನು ಸಾವಿರಾಲಿಗಳ
ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳಲೀಯ
ಭ್ಯುದಯವೇ ನಿಮ್ಮಡಿಯ ಕರುಣ ಕಟಾಕ್ಷಕೃತಿಯೆಂದ (ಅರಣ್ಯ ಪರ್ವ, ೧೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ನನ್ನೆದುರುಬಂದ ಸುರಪತಿಗೆ ನಾನು ನಮಸ್ಕರಿಸಿದೆನು, ಅವನು ನನ್ನನ್ನು ಮೇಲಕ್ಕೆತ್ತಿ ಅಪ್ಪಿಕೊಂಡು, ಸಾವಿರ ಕಣ್ಣುಗಳ ಸ್ನೇಹ ದೃಷ್ಟಿಯಿಂದ ನನ್ನನ್ನು ನೋಡಿದನು. ಅಣ್ಣಾ ಈ ನನ್ನ ಏಳಿಗೆಯು ನಿಮ್ಮ ಪಾದಗಳ ಕರುಣಕಟಾಕ್ಷದ ಕಾರ್ಯ ಎಂದು ಅರ್ಜುನನು ಧರ್ಮಜನಿಗೆ ಹೇಳಿದನು.

ಅರ್ಥ:
ಇದಿರು: ಎದುರು; ವಂದನು: ಬಂದನು; ಪದಯುಗ: ಚರಣದ್ವಯ; ಎರಗು: ನಮಸ್ಕರಿಸು; ಅಪ್ಪು: ಆಲಿಂಗನ; ಸನ್ಮಾನ: ವಿಶೇಷವಾದ ಗೌರವ; ಸಘಾಡ: ರಭಸ, ವೇಗ; ಸಾವಿರ: ಸಹಸ್ರ; ಆಲಿ: ಕಣ್ಣು; ಹೊದರು: ಗುಂಪು, ಸಮೂಹ; ಮಿಗೆ: ಅಧಿಕ; ನಾದು: ಒಲವು; ಹರುಷ: ಸಂತಸ; ಆಶ್ರು: ಕಣ್ಣಿರು; ಅಭ್ಯುದಯ: ಏಳಿಗೆ; ನಿಮ್ಮಡಿ: ನಿಮ್ಮ ಅಧೀನ; ಕರುಣ: ದಯೆ; ಕಟಾಕ್ಷ: ಅನುಗ್ರಹ; ಕೃತಿ: ಕಾರ್ಯ;

ಪದವಿಂಗಡಣೆ:
ಇದಿರು+ಬಂದನು+ ಪದಯುಗದಲ್+ಎರ
ಗಿದರೆ+ ತೆಗೆದ್+ಅಪ್ಪಿದನು +ಸನ್ಮಾ
ನದ +ಸಘಾಡವನ್+ಏನನೆಂಬೆನು +ಸಾವಿರ+ಆಲಿಗಳ
ಹೊದರಿನಲಿ+ ಹೊದಿಸಿದನು+ ಮಿಗೆ+ ನಾ
ದಿದನು +ಹರುಷ+ಆಶ್ರುಗಳಲ್+ಈ+
ಅಭ್ಯುದಯವೇ +ನಿಮ್ಮಡಿಯ +ಕರುಣ +ಕಟಾಕ್ಷ+ಕೃತಿಯೆಂದ

ಅಚ್ಚರಿ:
(೧) ಸ ಕಾರದ ಜೋಡಿ ಪದ – ಸನ್ಮಾನದ ಸಘಾಡ
(೨) ಪ್ರೀತಿಯನ್ನು ತೋರಿಸುವ ಪರಿ – ಸಾವಿರಾಲಿಗಳ ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳ್

ಪದ್ಯ ೫೮: ಅಮರಾವತಿಯಲ್ಲಿ ಯಾವ ವಾತಾವರಣವಿತ್ತು?

ಕವಿದುದಮರವ್ರಾತ ಕಾಂತಾ
ನಿವಹ ಹೊರವಂಟುದು ಸುರೇಂದ್ರನ
ಭವನದಲಿ ಗುಡಿನೆಗಹಿದವು ಸುರಪುರದ ಚೌಕದಲಿ
ತವತವಗೆ ತನಿವರಿವ ಜನದು
ತ್ಸವವನದನೇನೆಂಬೆನಂದಿನ
ದಿವಸದೊಸಗೆಯನಮರಲೋಕದಲರಸ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅಣ್ಣಾ ಆ ದಿನದ ಸಂಭ್ರಮದ ಉತ್ಸವವನ್ನು ಕೇಳು, ದೇವತೆಗಳೂ, ಅಪ್ಸರೆಯರೂ ಹೊರಬಂದರು, ಊರಿನ ಚೌಕದಲ್ಲೂ ಇಂದ್ರನ ಮನೆಯ ಮೇಲೂ ಧ್ವಜಗಳನ್ನು ಹಾರಿಸಿದರು. ದೇವಸಂಘದ ಮಹೋತ್ಸಾಹವನ್ನು ಏನೆಂದು ಹೇಳಲಿ ಆ ದಿನ ಅಮರಾವತಿಯಲ್ಲಿ ಸಂಭ್ರಮದ ವಾತಾವರಣವಿತ್ತು.

ಅರ್ಥ:
ಕವಿದು: ಆವರಿಸು; ಅಮರ: ದೇವತೆ; ವ್ರಾತ: ಗುಂಪು; ಕಾಂತ: ಪ್ರಿಯಕರ; ನಿವಹ: ಗುಂಪು; ಹೊರವಂಟು: ತೆರಳು; ಸುರೇಂದ್ರ: ಇಂದ್ರ; ಭವನ: ಆಲಯ; ಗುಡಿ: ಧ್ವಜ; ನೆಗಹು: ಮೇಲೆತ್ತು; ಸುರಪುರ: ಅಮರಾವತಿ; ಚೌಕ: ಅಚ್ಚು ಕಟ್ಟಾದ; ತವತವಗೆ: ಅವರವರಿಗೆ; ತನಿ: ಸವಿಯಾದುದು; ಜನ: ಜನತೆ, ವ್ಯಕ್ತಿ; ಉತ್ಸವ: ಸಂಭ್ರಮ; ದಿವಸ: ದಿನ; ಒಸಗೆ: ಶುಭ, ಮಂಗಳಕಾರ್ಯ; ಅಮರಲೋಕ: ಸ್ವರ್ಗ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕವಿದುದ್+ಅಮರ+ವ್ರಾತ +ಕಾಂತಾ
ನಿವಹ+ ಹೊರವಂಟುದು+ ಸುರೇಂದ್ರನ
ಭವನದಲಿ+ ಗುಡಿ+ನೆಗಹಿದವು +ಸುರಪುರದ+ ಚೌಕದಲಿ
ತವತವಗೆ+ ತನಿವರಿವ +ಜನದ್
ಉತ್ಸವವನ್+ಅದನೇನೆಂಬೆನ್+ಅಂದಿನ
ದಿವಸದ್+ಒಸಗೆಯನ್+ಅಮರ+ಲೋಕದಲ್+ಅರಸ+ ಕೇಳೆಂದ

ಅಚ್ಚರಿ:
(೧) ಸುರಪುರ, ಅಮರಲೋಕ – ಸಮನಾರ್ಥಕ ಪದ
(೨) ಸುರೇಂದ್ರ, ಸುರಪುರ – ಸುರ ಪದದ ಬಳಕೆ