ಪದ್ಯ ೫೪: ಭಟರು ಇಂದ್ರನಿಗೆ ಏನು ಹೇಳಿದರು?

ಕಟ್ಟುಗುಡಿಯನು ಖೋಡಿಯೇ ಜಗ
ಜಟ್ಟಿಗಳು ನುಗ್ಗಾಯ್ತಲೇ ನೀ
ನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ
ಕೆಟ್ಟುದಹಿತ ನಿವಾತಕವಚರ
ಥಟ್ಟು ಹುಡಿಹುಡಿಯಾಯ್ತು ದನುಜರ
ಹುಟ್ಟು ಉರಿದುದು ಜೀಯ ಚಿತ್ತೈಸೆಂದರಿಂದ್ರಂಗೆ (ಅರಣ್ಯ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಒಡೆಯಾ, ವಿಜಯ ಧ್ವಜವನ್ನೇರಿಸು, ದುರುಳತನದಿಂದ ಮೆರೆಯುತ್ತಿದ್ದ ದಾನವರ ಪರಾಕ್ರಮಿಗಳು ಅಳಿಸಿಹೋಗಿದ್ದಾರೆ, ನೀನ ನೆಟ್ಟ ಸಸಿ ಕಲ್ಪವೃಕ್ಷದ ಸಸಿ, ಅದು ಬಯಸಿದುದನ್ನು ನೀಡುತ್ತದೆ, ಶತ್ರುಗಳಾದ ನಿವಾತಕವಚರ ಸೈನ್ಯ ಪುಡಿಯಾಯಿತು, ಅಸುರರ ಹುಟ್ಟಡಗಿತು ಎಂದು ಭಟರು ಇಂದ್ರನಿಗೆ ಹೇಳಿದರು.

ಅರ್ಥ:
ಕಟ್ಟು: ಹೂಡು; ಗುಡಿ: ಧ್ವಜ, ಬಾವುಟ; ಖೋಡಿ: ದುರುಳತನ; ಜಗಜಟ್ಟಿ: ಪರಾಕ್ರಮಿ; ನುಗ್ಗು: ಚೂರಾಗು; ನಟ್ಟ: ಹೂಳು, ನಿಲ್ಲಿಸು; ಸಸಿ: ಎಳೆಯ ಗಿಡ, ಸಸ್ಯ; ಸುರ: ದೇವತೆ; ಕುಜ: ಗಿಡ, ಮರ; ಸುರಕುಜ: ದೇವತೆಗಳ ಮರ, ಕಲ್ಪವೃಕ್ಷ; ಕೊಡು: ನೀಡು; ಮನೋರಥ: ಆಸೆ, ಬಯಕೆ; ಕೆಟ್ಟು: ಹಾಳಾಗು; ಅಹಿತ: ವೈರಿ; ಥಟ್ಟು: ಗುಂಪು; ಹುಡಿ: ಪುಡಿ; ದನುಜ: ರಾಕ್ಷಸ; ಹುಟ್ಟು: ಜನನ; ಉರಿ: ಸುಡು; ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು; ಇಂದ್ರ: ಶಕ್ರ;

ಪದವಿಂಗಡಣೆ:
ಕಟ್ಟು+ಗುಡಿಯನು +ಖೋಡಿಯೇ +ಜಗ
ಜಟ್ಟಿಗಳು +ನುಗ್ಗಾಯ್ತಲೇ +ನೀ
ನಟ್ಟ +ಸಸಿ +ಸುರಕುಜವಲೇ +ಕೊಡದೇ +ಮನೋರಥವ
ಕೆಟ್ಟುದ್+ಅಹಿತ +ನಿವಾತಕವಚರ
ಥಟ್ಟು +ಹುಡಿಹುಡಿಯಾಯ್ತು +ದನುಜರ
ಹುಟ್ಟು +ಉರಿದುದು +ಜೀಯ +ಚಿತ್ತೈಸೆಂದರ್+ಇಂದ್ರಂಗೆ

ಅಚ್ಚರಿ:
(೧) ಅರ್ಜುನನ ಹಿರಿಮೆಯನ್ನು ಹೊಗಳುವ ಪರಿ – ನೀನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ

ಪದ್ಯ ೫೩: ದೇವತೆಗಳು ಎಲ್ಲಿಗೆ ಪ್ರಯಾಣ ಬೆಳೆಸಿದರು?

ಕಡುಹುವಗ್ಗದ ಕಾಲಕೇಯರ
ಗಡನವಡಗಿತು ಸುರರ ಬಲುಸೆರೆ
ಬಿಡಿಸಿದೆವು ಬಳಿಕಾಯ್ತು ಕಡುಸುಮ್ಮಾನ ಸುರಕುಲಕೆ
ಒಡೆದುದಿಳೆಯೆನೆ ಬಾಹುವಿನ ಬಿರು
ನುಡಿಯ ಕೈಗಳ ತುದಿವೆರಲ ಬೊ
ಬ್ಬಿಡಿಕೆಗಳ ಸುರಭಟರು ಹರಿದರು ಮುಂದೆ ಸುರಪುರಕೆ (ಅರಣ್ಯ ಪರ್ವ, ೧೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪರಾಕ್ರಮಶಾಲಿಗಳಾದ ಕಾಲಕೇಯರ ಸಮೂಹವು ನಾಶವಾಯಿತು. ಅವರ ಸೆರೆಯಲ್ಲಿದ್ದ ದೇವತೆಗಳ ಬಂಧನವು ಕೊನೆಗೊಂಡಿತು, ದೇವತೆಗಳ ಸಂತೋಷವು ಹೆಚ್ಚಿತು, ಅವರು ತೋಳು ತಟ್ಟಿದ ಶಬ್ದ, ಕೇಕೆ, ಚಪ್ಪಾಳೆಗಳು ಭೂಮಿಯೊಡೆಯುವುದೋ ಎಂಬಂತೆ ತೋರಿದವು. ದೇವತೆಗಳ ಸೈನಿಕರು ಅಮರಾವತಿಗೆ ತಮ್ಮ ಪ್ರಯಾಣ ಬೆಳೆಸಿದರು.

ಅರ್ಥ:
ಕಡುಹು: ಪರಾಕ್ರಮ, ಸಾಹಸ; ಅಗ್ಗ: ಶ್ರೇಷ್ಠ; ಗಡಣ: ಗುಂಪು; ಅಡಗು: ಮುಚ್ಚು; ಸುರ: ದೇವತೆ; ಬಲು: ಬಹಳ; ಸೆರೆ: ಬಂಧನ; ಬಿಡಿಸು: ಕಳಚು, ಸಡಿಲಿಸು; ಬಳಿಕ: ನಂತರ; ಕಡು: ವಿಶೇಷ, ಅಧಿಕ; ಸುಮ್ಮಾನ: ಸಂತೋಷ, ಹಿಗ್ಗು; ಸುರ: ದೇವತೆ; ಕುಲ: ವಂಶ; ಒಡೆ: ಬಿರುಕುಬಿಡು; ಇಳೆ: ಭೂಮಿ; ಬಾಹು: ಭುಜ; ಬಿರುನುಡಿ: ಒರಟಾದ ಮಾತು; ಕೈ: ಹಸ್ತ; ತುದಿ: ಅಗ್ರಭಾಗ; ವೆರಳ: ಬೆರಳು; ಬೊಬ್ಬಿಡು: ಗರ್ಜಿಸು; ಸುರ: ದೇವತೆ; ಭಟ: ಸೈನಿಕ; ಹರಿ: ಓಡು, ಧಾವಿಸು; ಸುರಪುರ: ಸ್ವರ್ಗ, ಅಮರಾವತಿ;

ಪದವಿಂಗಡಣೆ:
ಕಡುಹುವ್+ಅಗ್ಗದ +ಕಾಲಕೇಯರ
ಗಡನವ್+ಅಡಗಿತು +ಸುರರ +ಬಲು+ಸೆರೆ
ಬಿಡಿಸಿದೆವು+ ಬಳಿಕಾಯ್ತು +ಕಡುಸುಮ್ಮಾನ+ ಸುರಕುಲಕೆ
ಒಡೆದುದ್+ಇಳೆಯೆನೆ +ಬಾಹುವಿನ+ ಬಿರು
ನುಡಿಯ +ಕೈಗಳ +ತುದಿವೆರಳ +ಬೊ
ಬ್ಬಿಡಿಕೆಗಳ+ ಸುರಭಟರು +ಹರಿದರು +ಮುಂದೆ +ಸುರಪುರಕೆ

ಅಚ್ಚರಿ:
(೧) ಸುರಕುಲ, ಸುರಪುರ, ಸುರಭಟ – ಪದಗಳ ಬಳಕೆ
(೨) ಚಪ್ಪಾಳೆ ಎಂದು ಹೇಳಲು – ಕೈಗಳ ತುದಿವೆರಳ ಬೊಬ್ಬಿಡಿಕೆ

ಪದ್ಯ ೫೨: ಯಾರು ಸ್ವರ್ಗಕ್ಕೆ ಪ್ರಯಾಣ ಬೆಳೆಸಿದರು?

ಜೀಯ ವಿಗಡ ಬ್ರಹ್ಮಶರ ವಿಂ
ದ್ರಾಯುಧದ ಮುಂಗುಡಿಯಲಿರಿದುದು
ಮಾಯಕಾರರ ಮೋಹರವನುಬ್ಬಟೆ ಚತುರ್ಬಲವ
ಹೋಯಿತಸುರರ ಸೇನೆ ಸರಿದುದು
ನಾಯಕರು ನಾನಾ ದಿಗಂತ
ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಬ್ರಹ್ಮಾಸ್ತ್ರವು, ಇಂದ್ರಾಸ್ತ್ರವು ಮುಂಗುಡಿಯಲ್ಲಿ ಶತ್ರುಗಳನ್ನು ಮರ್ದಿಸಿತು. ಮಾಯಾಯುದ್ಧ ವಿಶಾರದರಾದ ಅಸುರರ ಚತುರಂಗ ಸೈನ್ಯವು ಸೋತಿತು. ದಂಡನಾಯಕರೂ, ಪ್ರಮುಖರೂ ಅನೇಕ ದಿಕ್ಕುಗಳಲ್ಲಿದ್ದವರೆಲ್ಲರೂ ಸ್ವರ್ಗಕ್ಕೆ ಪ್ರಯಾಣ ಬೆಳೆಸಿದರು.

ಅರ್ಥ:
ಜೀಯ: ಒಡೆಯ; ವಿಗಡ: ಶೌರ್ಯ, ಪರಾಕ್ರಮ; ಶರ: ಬಾಣ; ಆಯುಧ: ಶಸ್ತ್ರ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಇರಿ: ಚುಚ್ಚು; ಮಾಯ: ಗಾರುಡಿ, ಇಂದ್ರಜಾಲ; ಮೋಹರ: ಯುದ್ಧ; ಉಬ್ಬಟೆ: ಅತಿಶಯ; ಬಲ: ಸೈನ್ಯ; ಹೋಯಿತು: ನಾಶವಾಗು; ಅಸುರ: ರಾಕ್ಷಸ; ಸೇನೆ: ಸೈನ್ಯ; ಸರಿ: ಹೋಗು, ಗಮಿಸು; ನಾಯಕ: ಒಡೆಯ; ನಾನಾ: ಹಲವಾರು; ದಿಗಂತ: ದಿಕ್ಕು; ಸ್ಥಾಯಿ: ಸ್ಥಿರವಾಗಿರುವುದು; ಸಗ್ಗ: ಸ್ವರ್ಗ; ಭೋಗ: ಸುಖವನ್ನು ಅನುಭವಿಸುವುದು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜೀಯ +ವಿಗಡ +ಬ್ರಹ್ಮಶರವ್ +
ಇಂದ್ರಾಯುಧದ +ಮುಂಗುಡಿಯಲ್+ಇರಿದುದು
ಮಾಯಕಾರರ +ಮೋಹರವನ್+ಉಬ್ಬಟೆ +ಚತುರ್ಬಲವ
ಹೋಯಿತಸುರರ+ ಸೇನೆ +ಸರಿದುದು
ನಾಯಕರು +ನಾನಾ +ದಿಗಂತ
ಸ್ಥಾಯಿಗಳು +ಸಗ್ಗಾದಿ +ಭೋಗಕೆ+ ಭೂಪ+ ಕೇಳೆಂದ

ಅಚ್ಚರಿ:
(೧) ಅಳಿದರು ಎಂದು ಹೇಳಲು – ಸರಿದುದು ನಾಯಕರು ನಾನಾ ದಿಗಂತಸ್ಥಾಯಿಗಳು ಸಗ್ಗಾದಿ ಭೋಗಕೆ

ಪದ್ಯ ೫೧: ಅರ್ಜುನನ ಬಾಣಗಳು ಶತ್ರುಗಳ ಮೇಲೆ ಯಾವ ಪ್ರಭಾವ ಮಾಡಿದವು?

ಮುರಿದುದಸುರರ ಮಾಯೆ ಕಾಹಿ ನೊ
ಳೆರೆದ ರಸದವೊಲವರು ನಿಜದಲಿ
ತರುಬಿ ನಿಂದರು ತೂಳಿದರು ಗಜಹಯರಥೌಘದಲಿ
ತರಿದವುಗಿದವು ತುಂಡಿಸಿದವಗಿ
ದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ (ಅರಣ್ಯ ಪರ್ವ, ೧೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಅಸುರರ ಮಾಯೆಯು ಮಾಯವಾಗಲು, ಅಚ್ಚಿಗೆ ಹಾಕಿದ ರಸದಂತೆ ರಾಕ್ಶಸರ ನಿಜ ಸ್ವರೂಪವನ್ನು ಪಡೆದರು. ಚತುರಂಗ ಸೈನ್ಯದೊಡನೆ ನನ್ನನ್ನು ತಡೆದು ನಿಲ್ಲಿಸಿದರು. ನಾನು ಪ್ರಯೋಗಿಸಿದ ಬಾಣಗಳು ಶತ್ರು ರಾಕ್ಷಸರನ್ನು ತರಿದವು,ಚುಚ್ಚಿದವು, ಕಡಿದವು, ಅಪ್ಪಳಿಸಿದವು, ಸೀಳಿದವು, ಕೊಯ್ದವು ಕೊರೆದು ಕುಪ್ಪಳಿಸಿದವು.

ಅರ್ಥ:
ಮುರಿ: ಸೀಳು; ಅಸುರ: ರಾಕ್ಷಸ; ಮಾಯೆ: ಇಂದ್ರಜಾಲ, ಗಾರುಡಿ; ಕಾಹಿ: ರಕ್ಷಿಸುವವ; ಎರೆ: ಸುರಿ, ಹೊಯ್ಯು; ರಸ: ಸಾರ; ನಿಜ: ತನ್ನ, ದಿಟ; ತರುಬು: ತಡೆ, ನಿಲ್ಲಿಸು; ತೂಳು: ಆವೇಶ, ಉನ್ಮಾದ; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ಔಘ: ಗುಂಪು; ತರಿ: ಕಡಿ, ಕತ್ತರಿಸು; ಉಗಿ: ಹೊರಹಾಕು; ತುಂಡಿಸು: ಕತ್ತರಿಸು; ಎರಗು: ಬಾಗು; ಸೀಳು: ಕತ್ತರಿಸು; ಕೊಯ್ದು: ಕತ್ತರಿಸು; ಕೊರೆ: ಚೂರು, ಇರಿ; ಕುಪ್ಪಳಿಸು: ಜಿಗಿದು ಬೀಳು; ನಿಮಿಷ: ಕ್ಷಣ, ಕಾಲದ ಪ್ರಮಾಣ; ಶರ: ಬಾಣ; ಅರಿ: ವೈರಿ; ವ್ರಜ: ಗುಂಪು;

ಪದವಿಂಗಡಣೆ:
ಮುರಿದುದ್+ಅಸುರರ+ ಮಾಯೆ +ಕಾಹಿನೊಳ್
ಎರೆದ+ ರಸದವೊಲ್+ಅವರು+ ನಿಜದಲಿ
ತರುಬಿ+ ನಿಂದರು+ ತೂಳಿದರು+ ಗಜ+ಹಯ+ರಥ+ಔಘದಲಿ
ತರಿದವ್+ಉಗಿದವು +ತುಂಡಿಸಿದವ್+ಅಗಿದ್
ಎರಗಿದವು +ಸೀಳಿದವು +ಕೊಯ್ದವು
ಕೊರೆದು +ಕುಪ್ಪಳಿಸಿದವು+ ನಿಮಿಷಕೆ+ ಶರವ್+ಅರಿ+ವ್ರಜವ

ಅಚ್ಚರಿ:
(೧) ಆಯುಧಗಳ ಪ್ರಭಾವ – ತರಿದವುಗಿದವು ತುಂಡಿಸಿದವಗಿದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ

ಪದ್ಯ ೫೦: ಅರ್ಜುನನು ಹೇಗೆ ಮಾಯಾಜಾಲವನ್ನು ಭೇದಿಸಿದನು?

ಘೋರತರವದು ಬಳಿಕ ದುಷ್ಪ್ರತಿ
ಕಾರವಿತರರಿಗಿಂದು ಮೌಳಿಯ
ಸಾರತರ ಕೃಪೆಯಾಯ್ತಲೇ ಸರಹಸ್ಯಸಾಂಗದಲಿ
ಬಾರಿಸಿದುದಾವಂಗದಲಿ ಮಾ
ಯಾರಚನೆಯಾ ವಿವಿಧ ವಿವರಣ
ದಾರುಭಟೆಯಲಿ ಸೀಳಿ ಬಿಸುಟೆನು ಶಿಲ್ಪದಲಿ ಖಳರ (ಅರಣ್ಯ ಪರ್ವ, ೧೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅದು ಘೋರತರವಾದ ಮಾಯೆ. ಇತರರಿಗೆ ಅದರ ಪ್ರತೀಕಾರ ತಿಳಿಯದು. ಶಿವನ ಮಹಾ ಕೃಪೆಯಿಂದ ನನಗೆ ಅದರ ರಹಸ್ಯವು ಸಂಪೂರ್ಣವಾಗಿ ತಿಳಿಯಿತು. ರಾಕ್ಷಸರು ಯಾವ ರೀತಿಯಿಂದ ಹೇಗೆ ಮಾಯೆಯನ್ನು ಮಾಡಿದ್ದರೋ, ಅದರ ವಿವರವನ್ನು ಭೇದಿಸಿ ಅವರ ಮಾಯಾ ಶಿಲ್ಪವನ್ನು ಸೀಳಿ ಹಾಕಿದೆನು.

ಅರ್ಥ:
ಘೋರ: ಉಗ್ರವಾದುದು; ಬಳಿಕ: ನಂತರ; ಪ್ರತಿಕಾರ: ಮಾಡಿದು ದಕ್ಕೆ ಪ್ರತಿಯಾಗಿ ಮಾಡುವುದು; ಇಂದುಮೌಳಿ: ಶಿವ; ಸಾರ: ಶ್ರೇಷ್ಠ, ತಿರುಳು; ಕೃಪೆ: ಕರುಣೆ; ರಹಸ್ಯ: ಗುಟ್ಟು; ಸಾಂಗ: ಸಮಗ್ರತೆ; ಬಾರಿಸು: ನಿವಾರಿಸು, ಹೊಡೆ; ಅಂಗ: ಶರೀರದ ಭಾಗ; ಮಾಯ: ಇಂದ್ರಜಾಲ; ರಚನೆ: ನಿರ್ಮಾಣ; ವಿವಿಧ: ಹಲವಾರು; ವಿವರಣ:ವರ್ಣಿಸುವುದು; ಆರುಭಟೆ: ಜೋರಾಗಿ ಕೂಗು; ಸೀಳು: ಕಡಿ; ಬಿಸುಟು: ಹೊರಹಾಕು; ಶಿಲ್ಪ: ಕುಶಲ ವಿದ್ಯೆ; ಖಳ: ದುಷ್ಟ;

ಪದವಿಂಗಡಣೆ:
ಘೋರತರವದು +ಬಳಿಕ +ದುಷ್ಪ್ರತಿ
ಕಾರವ್+ಇತರರಿಗ್+ಇಂದುಮೌಳಿಯ
ಸಾರತರ +ಕೃಪೆಯಾಯ್ತಲೇ +ಸರಹಸ್ಯ+ಸಾಂಗದಲಿ
ಬಾರಿಸಿದುದಾವ್+ಅಂಗದಲಿ +ಮಾ
ಯಾ+ರಚನೆ+ಆ +ವಿವಿಧ+ ವಿವರಣದ್
ಆರುಭಟೆಯಲಿ +ಸೀಳಿ +ಬಿಸುಟೆನು+ ಶಿಲ್ಪದಲಿ +ಖಳರ

ಅಚ್ಚರಿ:
(೧) ಶಿವನ ಕೃಪೆಯ ಬಗ್ಗೆ ತಿಳಿಸುವ ಪರಿ – ಇಂದುಮೌಳಿಯ ಸಾರತರ ಕೃಪೆಯಾಯ್ತಲೇ ಸರಹಸ್ಯಸಾಂಗದಲಿ