ಪದ್ಯ ೩೯: ಅರ್ಜುನನೇಕೆ ಆಯಾಸಗೊಂಡ?

ದೊರೆಗಳೇರಿತು ರಥತುರಂಗಮ
ಕರಿಗಳಲಿ ಕಾಲಾಳ ಬಿಂಕವ
ನರಸ ಬಣ್ಣಿಸಲರಿಯೆನಾಸುರ ಕಲಹಕರ್ಮವಲೆ
ಸರಿಗರೆದ್ದುದು ಮೂರು ಕೋಟಿಯ
ಸುರರು ಸರಿಗಳಲಿಟ್ಟರಶನಿಯ
ಶರದಲೆಡೆಯಲಿ ತರುಬಿದರು ಕೈಸೋತುದೆನಗೆಂದ (ಅರಣ್ಯ ಪರ್ವ, ೧೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ರಾಕ್ಷಸರಾಜರು ರಥಗಳನ್ನೇರಿದರು. ಆನೆ ಕುದುರೆ ಕಾಳಾಳುಗಳ ಶೌರ್ಯವನ್ನು ಹೇಗೆ ವರ್ಣಿಸಲಿ? ಅದು ರಾಕ್ಷಸೀ ಕಲಹ. ಸರಿಸಮಾನ ಬಲರಾದ ಮೂರು ಕೋಟಿ ರಾಕ್ಷಸರು ಮಳೆಯಂತೆ ವಜ್ರಶರಗಳನ್ನು ಬಿಟ್ಟು ನನ್ನನ್ನು ತಡೆದರು. ಯುದ್ಧ ಮಾಡಿ ನನ್ನ ಕೈ ಸೊತು ಹೋಯಿತು.

ಅರ್ಥ:
ದೊರೆ: ರಾಜ; ಏರು: ಮೇಲೆ ಹತ್ತು; ರಥ: ಬಂಡಿ; ತುರಗ: ಕುದುರೆ; ಕರಿ: ಆನೆ; ಕಾಲಾಳ: ಸೈನಿಕ; ಬಿಂಕ: ಗರ್ವ, ಜಂಬ, ಸೊಕ್ಕು; ಅರಸ: ರಾಜ; ಬಣ್ಣಿಸು: ವಿವರಿಸು; ಅರಿ: ತಿಳಿ; ಅಸುರ: ರಾಕ್ಷಸ; ಕಲಹ: ಜಗಳ; ಕರ್ಮ: ಕೆಲಸ; ಸರಿಗ: ಸಮಾನನಾದವ; ಸುರ: ದೇವತೆ; ಅಶನಿ: ಸಿಡಿಲು, ವಜ್ರಾಸ್ತ್ರ; ಶರ: ಬಾಣ; ತರುಬು: ತಡೆ, ನಿಲ್ಲಿಸು; ಸೋಲು: ಅಪಜಯ;

ಪದವಿಂಗಡಣೆ:
ದೊರೆಗಳ್+ಏರಿತು +ರಥ+ತುರಂಗಮ
ಕರಿಗಳಲಿ +ಕಾಲಾಳ +ಬಿಂಕವನ್
ಅರಸ +ಬಣ್ಣಿಸಲ್+ಅರಿಯೆನ್+ಅಸುರ +ಕಲಹ+ಕರ್ಮವಲೆ
ಸರಿಗರೆದ್ದುದು +ಮೂರು+ ಕೋಟಿಯ
ಸುರರು +ಸರಿಗಳಲ್+ಇಟ್ಟರ್+ಅಶನಿಯ
ಶರದಲ್+ಎಡೆಯಲಿ +ತರುಬಿದರು +ಕೈಸೋತುದ್+ಎನಗೆಂದ

ಅಚ್ಚರಿ:
(೧) ಯುದ್ಧದ ತೀವ್ರತೆ – ಸರಿಗಳಲಿಟ್ಟರಶನಿಯ ಶರದಲೆಡೆಯಲಿ ತರುಬಿದರು

ಪದ್ಯ ೩೮: ಅರ್ಜುನ ಮತ್ತು ರಾಕ್ಷಸರ ನಡುವೆ ಹೇಗೆ ಯುದ್ಧ ನಡೆಯಿತು?

ಝಗಝಗಿಪ ಬಾಣಾಗ್ನಿ ಭುಗುಭುಗು
ಭುಗಿಲೆನಲು ದಿವ್ಯಾಸ್ತ್ರ ತತಿಯಲಿ
ಹೊಗೆಯ ತೋರಿಸಿದೆನು ಚತುರ್ದಶ ಭುವನ ಭವನದಲಿ
ವಿಗಡರದ ಲೆಕ್ಕಿಸದೆ ಲೋಟಿಸಿ
ಮಗುಚಿದರು ಮದ್ಬಾಣ ಮಹಿಮೆಯ
ನೊಗಡಿಸಿತು ಕಾಲಾಗ್ನಿ ಕಾಲಾಂತಕರಿಗಾ ಸಮರ (ಅರಣ್ಯ ಪರ್ವ, ೧೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಗ ನಾನು ಭುಗುಭುಗಿಸುವ ಜ್ವಾಲೆಯನ್ನುಳ್ಳ ದಿವ್ಯಾಸ್ತ್ರಗಳಿಂದ ಹದಿನಾಲ್ಕು ಲೋಕಗಳನ್ನು ಆವರಿಸುವ ಹೊಗೆಯನ್ನುಂಟು ಮಾಡಿದೆನು. ವೀರರಾದ ರಾಕ್ಷಸರು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ನನ್ನ ಬಾನಗಳನ್ನು ಹೊಡೆದುರುಳಿಸಿದರು. ಕಾಲಾಗ್ನಿಗೂ ಕಾಲಯಮನಿಗೂ ನಡೆಯಬಹುದಾದ ಯುದ್ಧದಮ್ತೆ ನನ್ನ ಮತ್ತು ಅಸುರರ ನಡುವೆ ಯುದ್ಧ ನಡೆಯಿತು.

ಅರ್ಥ:
ಝಗಝಗಿಸು: ಕಾಂತಿಯುಕ್ತವಾಗಿ ಹೊಳೆ; ಬಾಣ: ಸರಳು; ಅಗ್ನಿ: ಬೆಂಕಿ; ಭುಗುಭುಗಿಲು: ಭುಗು ಎಂದು ಶಬ್ದ ಮಾಡು; ದಿವ್ಯಾಸ್ತ್ರ: ಶ್ರೇಷ್ಠವಾದ ಶಸ್ತ್ರ; ತತಿ: ಸಮೂಹ; ಹೊಗೆ: ಧೂಮ; ತೋರಿಸು: ಪ್ರದರ್ಶಿಸು; ಭುವನ: ಲೋಕ; ಭವನ: ಆಲಯ; ವಿಗಡ: ಶೌರ್ಯ, ಪರಾಕ್ರಮ; ಲೆಕ್ಕಿಸು: ಎಣಿಸು; ಲೋಟಿಸು: ಉರುಳಿಸು, ಬೀಳಿಸು; ಮಗುಚು: ಹಿಂದಿರುಗಿಸು, ಮರಳಿಸು; ಮಹಿಮೆ: ಶ್ರೇಷ್ಠತೆ; ಒಗಡಿಸು: ಧಿಕ್ಕರಿಸು, ಹೇಸು; ಕಾಲಾಗ್ನಿ: ಪ್ರಳಯಕಾಲದ ಬೆಂಕಿ; ಕಾಲಾಂತಕ: ಶಿವ; ಸಮರ: ಯುದ್ಧ;

ಪದವಿಂಗಡಣೆ:
ಝಗಝಗಿಪ +ಬಾಣಾಗ್ನಿ +ಭುಗುಭುಗು
ಭುಗಿಲೆನಲು +ದಿವ್ಯಾಸ್ತ್ರ +ತತಿಯಲಿ
ಹೊಗೆಯ +ತೋರಿಸಿದೆನು+ ಚತುರ್ದಶ +ಭುವನ +ಭವನದಲಿ
ವಿಗಡರ್+ಅದ +ಲೆಕ್ಕಿಸದೆ +ಲೋಟಿಸಿ
ಮಗುಚಿದರು +ಮದ್ಬಾಣ +ಮಹಿಮೆಯನ್
ಒಗಡಿಸಿತು +ಕಾಲಾಗ್ನಿ +ಕಾಲಾಂತಕರಿಗಾ+ ಸಮರ

ಅಚ್ಚರಿ:
(೧) ಮ ಕಾರದ ಪದ – ಮಗುಚಿದರು ಮದ್ಬಾಣ ಮಹಿಮೆಯನ್
(೨) ಜೋಡಿ ಪದ – ಝಗಝಗಿಪ, ಭುಗುಭುಗು

ಪದ್ಯ ೩೭: ಅರ್ಜುನನು ರಾಕ್ಷಸರ ಮೇಲೆ ಹೇಗೆ ದಾಳಿ ಮಾಡಿದನು?

ಕರೆದರವದಿರು ಕಲ್ಪಮೇಘದ
ಬಿರುವಳೆಯವೊಲು ಸರಳನನಿತುವ
ತರಿದು ತೆತ್ತಿಸಿದೆನು ತದಂಗೋಪಾಂಗದಲಿ ಸರಳ
ಅರಿಯರೆನ್ನನು ಶಕ್ರನೆಂದೇ
ತರುಬಿ ದಿಙ್ಮಂಡಲವ ಮುಸುಕಿದ
ರಿರಿತಕಂಜದ ದಿಟ್ಟನಾವನು ಸುರರ ಥಟ್ಟಿನಲಿ (ಅರಣ್ಯ ಪರ್ವ, ೧೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕಲ್ಪಾಂತಕಾಲದ ಮೇಘಗಲು ಸುರಿಸುವ ಬಿರುಮಳೆಯಂತೆ ಸುರಿಯುತ್ತಿದ್ದ ಅಸುರರ ಬಾಣಗಳನ್ನು ಕತ್ತರಿಸಿದೆನು. ಅವರೆಲ್ಲರ ಮೈಯಲ್ಲೂ ಬಾಣಗಳು ನಡುವಂತೆ ಮಾಡಿದೆನು. ಅವರು ನನ್ನನ್ನು ಇಂದ್ರನೆಂದೇ ತಿಳಿದು ನನ್ನನ್ನು ನಿಲ್ಲಿಸಿ ದಿಕ್ಕುಗಳೆಲ್ಲವನ್ನೂ ಬಾಣಗಳಿಂದ ತುಂಬಿದರು. ಅವರ ಏಟಿಗೆ ಹೆದರದಿರುವ ದೇವತೆಗಳೇ ಇಲ್ಲ.

ಅರ್ಥ:
ಕರೆ: ಬರೆಮಾಡು; ಅವದಿರು: ಅವರು; ಕಲ್ಪ: ಬ್ರಹ್ಮನ ಒಂದು ದಿವಸ, ಪ್ರಳಯ; ಮೇಘ: ಮೋಡ; ಬಿರುವಳೆ: ಜೋರಾದ ಮಳೆ; ಸರಳ: ಬಾಣ; ಅನಿತು: ಅಷ್ಟು; ತರಿ: ಕಡಿ, ಕತ್ತರಿಸು; ತೆತ್ತಿಸು: ಜೋಡಿಸು, ಕೂಡಿಸು; ಅಂಗೋಪಾಂಗ: ದೇಹದ ಭಾಗ; ಸರಳ: ಬಾಣ; ಅರಿ: ತಿಳಿ; ಶಕ್ರ: ಇಂದ್ರ; ತರುಬು: ತಡೆ, ನಿಲ್ಲಿಸು, ದೂಡು; ದಿಙ್ಮಂಡಲ: ಎಲ್ಲಾ ದಿಕ್ಕು; ಮುಸುಕು: ಆವರಿಸು; ಇರಿ: ತಿವಿ, ಚುಚ್ಚು; ಅಂಜು: ಹೆದರು; ದಿಟ್ಟ: ಧೀರ; ಸುರ: ದೇವತೆ; ಥಟ್ಟು: ಪಕ್ಕ, ಕಡೆ, ಗುಂಪು;

ಪದವಿಂಗಡಣೆ:
ಕರೆದರ್+ಅವದಿರು +ಕಲ್ಪ+ಮೇಘದ
ಬಿರುವಳೆಯವೊಲು +ಸರಳನ್+ಅನಿತುವ
ತರಿದು+ ತೆತ್ತಿಸಿದೆನು +ತದ್+ಅಂಗೋಪಾಂಗದಲಿ+ ಸರಳ
ಅರಿಯರ್+ಎನ್ನನು +ಶಕ್ರನೆಂದೇ
ತರುಬಿ+ ದಿಙ್ಮಂಡಲವ+ ಮುಸುಕಿದರ್
ಇರಿತಕ್+ಅಂಜದ +ದಿಟ್ಟನಾವನು+ ಸುರರ+ ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಲ್ಪಮೇಘದ ಬಿರುವಳೆಯವೊಲು
(೨) ಸರಳ ಪದದ ಬಳಕೆ – ಸರಳನನಿತುವ ತರಿದು ತೆತ್ತಿಸಿದೆನು ತದಂಗೋಪಾಂಗದಲಿ ಸರಳ

ಪದ್ಯ ೩೬: ರಾಕ್ಷಸರು ಹೇಗೆ ಆಕ್ರಮಣ ಮಾಡಿದರು?

ತೋರು ತೋರಮರೇಂದ್ರನಾವೆಡೆ
ತೋರಿಸೈರಾವತವದೆತ್ತಲು
ತೊರಿಸುಚ್ಚೈಶ್ರವವನೆಲ್ಲಿಹರಗ್ನಿ ಯಮಗಿಮರು
ತೋರಿರೈ ಕೈಗುಣವನಸುರರ
ಗಾರುಗೆದರಿದ ಗರ್ವಿತರ ಮೈ
ದೋರ ಹೇಳಾ ಕಾಣಬಹುದೆನುತುರುಬಿದರು ಭಟರು (ಅರಣ್ಯ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ತೋರಿಸು ತೋರಿಸು ಇಂದ್ರನೆಲ್ಲಿದ್ದಾನೆ ತೋರಿಸು, ಇಂದ್ರನ ಆನೆ ಐರಾವತ, ಕುದುರೆ ಉಚ್ಚೈಶ್ರವಸುವುಗಳು ಎಲ್ಲಿವೆ ಎಂದು ತೋರಿಸು, ಅಗ್ನಿ, ಯಮಗಿಮರೆಲ್ಲಾ ಎಲ್ಲಿದ್ದಾರೆ ಸ್ವಲ್ಪ ತೋರಿಸು, ವೀರರೆ ನಿಮ್ಮ ಕೈ ಚಳಕವನ್ನು ತೋರಿಸಿರಿ, ರಾಕ್ಷಸರನ್ನು ಕೆಣಕಿದ ಆ ಹೀನ ದೇವತೆಗಳನ್ನು ಎದುರಿಗೆ ಕರೆ. ಆಗ ಅವರು ನಮ್ಮ ಕೈಯನ್ನು ನೋಡಬಹುದು ಎಂದು ರಾಕ್ಷಸರು ಮೇಲೆ ಬಿದ್ದರು.

ಅರ್ಥ:
ತೋರು: ಪ್ರದರ್ಶಿಸು; ಅಮರೇಂದ್ರ: ಇಂದ್ರ; ಐರಾವತ: ಇಂದ್ರನ ಆನೆ; ಉಚ್ಚೈಶ್ರವ: ಇಂದ್ರನ ಕುದುರೆ; ಅಗ್ನಿ: ಬೆಂಕಿ; ಕೈಗುಣ: ಹಸ್ತ ಚಳಕ; ಅಸುರ: ರಾಕ್ಷಸ; ಕೆದರು: ಹರಡು, ಚದರಿಸು; ಗರ್ವ: ಸೊಕ್ಕು; ಮೈ: ತನು; ಹೇಳು: ತಿಳಿಸು; ಕಾಣು: ತೋರು; ಉರುಬು: ಅತಿಶಯವಾದ ವೇಗ; ಭಟ: ರಾಕ್ಷಸ;

ಪದವಿಂಗಡಣೆ:
ತೋರು+ ತೋರ್+ಅಮರೇಂದ್ರನ್+ಆವೆಡೆ
ತೋರಿಸ್+ಐರಾವತವದ್+ಎತ್ತಲು
ತೊರಿಸ್+ಉಚ್ಚೈಶ್ರವವನ್+ಎಲ್ಲಿಹರ್+ಅಗ್ನಿ+ ಯಮಗಿಮರು
ತೋರಿರೈ +ಕೈಗುಣವನ್+ಅಸುರರಗ್
ಆರು+ಕೆದರಿದ +ಗರ್ವಿತರ+ ಮೈ
ತೋರ +ಹೇಳಾ +ಕಾಣಬಹುದ್+ಎನುತ್+ಉರುಬಿದರು +ಭಟರು

ಅಚ್ಚರಿ:
(೧) ಆಡು ಭಾಷೆಯ ಪ್ರಯೋಗ – ಯಮಗಿಮರು

ಪದ್ಯ ೩೫: ರಾಕ್ಷಸರ ದಾಳಿಯ ವೇಗೆ ಹೇಗಿತ್ತು?

ಏನನೆಂಬೆನು ಜೀಯ ಬಳಿಕಾ
ದಾನವಾಧಿಪರುಬ್ಬೆಯನು ಸುರ
ಮಾನವರು ತರಹರಿಸಲಳವೇ ಖಳರ ಘಲ್ಲಣೆಯ
ವೈನತೇಯನ ಪಕ್ಷಹತ ಪವ
ಮಾನನಂತಿರೆ ಭಟರ ಸುಯ್ಲಿನೊ
ಳಾ ನಿರೂಢಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ (ಅರಣ್ಯ ಪರ್ವ, ೧೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅಣ್ಣಾ ನಾನು ಏನೆಂದು ಹೇಳಲಿ, ಆ ರಾಕ್ಷಸ ವೀರರ ರಭಸವನ್ನು ದೇವತೆಗಳು, ಮನುಷ್ಯರು ತಡೆದುಕೊಳ್ಳಲು ಸಾಧ್ಯವೇ? ಗರುಡನ ರೆಕ್ಕೆಯ ಬಡಿತಕ್ಕೆ ಸದು ಮಾಡುತ್ತಾ ಬರುವ ಗಾಳಿಯೋ ಎಂಬಂತೆ ರಾಕ್ಷಸವೀರರ ನಿಶ್ವಾಸಕ್ಕೆ ದೇವತೆಗಳು ದಿಕ್ಕಾಪಾಲಾಗಿ ಓಡಿದರು.

ಅರ್ಥ:
ಜೀಯ: ಒಡೆಯ; ಬಳಿಕ: ನಂತರ; ದಾನವ: ರಾಕ್ಷಸ; ಅಧಿಪ: ರಾಜ; ಉಬ್ಬೆ: ರಭಸ, ಉದ್ವೇಗ; ಸುರ: ದೇವತೆ; ಮಾನವ: ನರ; ತರಹರಿಸು: ತಡಮಾಡು, ಸೈರಿಸು; ಖಳ: ದುಷ್ಟ; ಘಲ್ಲಣೆ: ಘಲ್ ಎಂಬ ಶಬ್ದ; ವೈನತೇಯ: ಗರುಡ; ಪಕ್ಷ: ರೆಕ್ಕೆ; ಹತ: ಹೊಡೆತ; ಪವಮಾನ: ಗಾಳಿ; ಭಟ: ಸೈನಿಕರು; ಸುಯ್ಲು: ನಿಟ್ಟುಸಿರು; ನಿರೂಢಿ: ಸಾಮಾನ್ಯ; ಸುರ: ದೇವತೆ; ಸೂಸು: ಹರಡು; ದೆಸೆ: ದಿಕ್ಕು;

ಪದವಿಂಗಡಣೆ:
ಏನನೆಂಬೆನು +ಜೀಯ +ಬಳಿಕ+ಆ
ದಾನವ+ಅಧಿಪರ್+ಉಬ್ಬೆಯನು +ಸುರ
ಮಾನವರು+ ತರಹರಿಸಲ್+ಅಳವೇ +ಖಳರ +ಘಲ್ಲಣೆಯ
ವೈನತೇಯನ +ಪಕ್ಷಹತ+ ಪವ
ಮಾನನಂತಿರೆ +ಭಟರ+ ಸುಯ್ಲಿನೊಳ್
ಆ+ ನಿರೂಢಿಯ +ಸುರರು +ಹಾರಿತು +ಸೂಸಿ +ದೆಸೆದೆಸೆಗೆ

ಅಚ್ಚರಿ:
(೧) ದಾನವ, ಖಳ – ರಾಕ್ಷಸರನ್ನು ಕರೆಯುವ ಪರಿ
(೨) ಉಪಮಾನದ ಪ್ರಯೋಗ – ವೈನತೇಯನ ಪಕ್ಷಹತ ಪವಮಾನನಂತಿರೆ