ಪದ್ಯ ೧೬: ದೂತನು ರಾಜನಿಗೆ ಏನೆಂದು ಹೇಳಿದನು?

ಜೋಡಿಸಿದನಮರೇಂದ್ರನಮರರ
ವೇಡೆಯಾಯ್ತು ಹಿರಣ್ಯನಗರಿಗೆ
ಗಾಢಬಲರದೆ ಬಂದು ವರುಣ ಯಮಾಗ್ನಿ ವಾಯುಗಳು
ರೂಢಿಗಚ್ಚರಿಯಾಯ್ತಲಾ ಪರಿ
ಗೂಢ ಮೃಗಗಣ ಬಂದುದೀ ನಿ
ರ್ಮೂಢರನು ಹಿಡಿತರಿಸುಯೆಂದನು ದೂತನೊಡೆಯಂಗೆ (ಅರಣ್ಯ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ದೇವೇಂದ್ರನು ಸೈನ್ಯವನ್ನು ಜೋಡಿಸಿ ಹಿರಣ್ಯಪುರದ ಮೇಲೆ ದಾಳಿಗೆ ಕಳಿಸಿದ್ದಾನೆ, ವರುಣ, ಯಮ, ಅಗ್ನಿ ವಾಯು ಮೊದಲಾದ ಮಹಾ ಬಲಶಾಲಿಗಳು ಬಂದಿದ್ದಾರೆ, ಇದು ಪ್ರಪಂಚದಲ್ಲೇ ಆಶ್ಚರ್ಯಕರವಾದ ವಿಷಯ. ಅಪರೂಪದ ಪಶುಗಳು ಬಂದಿವೆ, ಅವನ್ನು ಬೇಟೆಯಲ್ಲಿ ಹಿಡಿಸಿ ತರಿಸು ಎಂದು ದೂತನು ರಾಜನಿಗೆ ಹೇಳಿದನು.

ಅರ್ಥ:
ಜೋಡಿಸು: ಕೂಡಿಸು; ಅಮರೇಂದ್ರ: ಇಂದ್ರ; ಅಮರ: ದೇವತೆ; ಈಡಿ: ಹೊಡೆ; ನಗರ: ಪುರ; ಗಾಢ: ಹೆಚ್ಚಳ, ಅತಿಶಯ; ಬಲ: ಶಕ್ತಿ, ಸೈನ್ಯ; ಬಂದು: ಆಗಮಿಸು; ವರುಣ: ನೀರಿನ ಅಧಿದೇವತೆ; ಯಮ: ಮೃತ್ಯುದೇವತೆ; ರೂಢಿ: ವಾಡಿಕೆ, ಬಳಕೆ; ಅಚ್ಚರಿ: ಆಶ್ಚರ್ಯ; ಪರಿಗೂಢ: ವಿಶೇಷ ಗುಟ್ಟಾದ; ಮೃಗಗಣ: ಪ್ರಾಣಿಗಳ ಗುಂಪು; ಮೂಢ: ತಿಳಿಗೇಡಿ, ಮೂರ್ಖ; ಹಿಡಿ: ಬಂಧಿಸು; ತರಿಸು: ಬರೆಮಾಡು; ದೂತ: ಸೇವಕ; ಒಡೆಯ: ರಾಜ;

ಪದವಿಂಗಡಣೆ:
ಜೋಡಿಸಿದನ್+ಅಮರೇಂದ್ರನ್+ಅಮರರವ್
ಈಡೆಯಾಯ್ತು+ ಹಿರಣ್ಯ+ನಗರಿಗೆ
ಗಾಢ+ಬಲರದೆ+ ಬಂದು +ವರುಣ +ಯಮ +ಅಗ್ನಿ +ವಾಯುಗಳು
ರೂಢಿಗ್+ಅಚ್ಚರಿಯಾಯ್ತಲಾ +ಪರಿ
ಗೂಢ +ಮೃಗಗಣ+ ಬಂದುದೀ+ ನಿ
ರ್ಮೂಢರನು +ಹಿಡಿ+ತರಿಸು+ಎಂದನು +ದೂತನ್+ಒಡೆಯಂಗೆ

ಅಚ್ಚರಿ:
(೧) ಗಾಢ, ಪರಿಗೂಢ, ನಿರ್ಮೂಢ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ