ಪದ್ಯ ೨೨: ಮಾತಲಿಯು ಅರ್ಜುನನನ್ನು ಹೇಗೆ ಹೊಗಳಿದನು?

ರಥಮಹೇಂದ್ರನದೀತನೆಮ್ಮತಿ
ರಥನಲಾ ನೆರೆನೋಂತು ಪಡೆದಳೊ
ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ
ಮಥಿತರಿಪುವವಧಾನ ಲೋಕ
ಪ್ರಥಿತ ನಿರುಪಮವೆಂಬ ಸುರಸಾ
ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾರಥವ (ಅರಣ್ಯ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪಾಂಡವರ ಪರಿವಾರದಲ್ಲಿದ್ದ ಮುನಿಗಳು, ಇದು ಇಂದ್ರನ ರಥ, ಇದರಲ್ಲಿರುವವನು ಕುಂತಿಯು ವ್ರತಗಳನ್ನು ಮಾಡಿ ಪಡೆದ ಮಗನಾದ ಅರ್ಜುನನೆಂದು ರಥವನ್ನು ಬಳಲಿಸಿದರು. ಆಗ ಮಾತಲಿಯು ಶತುನಾಶಕನೇ, ಲೋಕದಲ್ಲಿ ಹೋಲಿಕೆಯೇ ಇಲ್ಲದಂತಹ ಪ್ರಖ್ಯಾತನೇ ಅವಧಾರು ಎಂದು ಹೊಗಳುತ್ತಿರಲು ಅರ್ಜುನನು ನಗುತ್ತಾ ರಥವನ್ನಿಳಿದನು.

ಅರ್ಥ:
ರಥ: ಬಂಡಿ; ಮಹೇಂದ್ರ: ಇಂದ್ರ; ನೆರೆ: ಕೂಡು; ಪಡೆ: ಹೊಂದು; ಪೃಥೆ: ಕುಂತಿ; ಅತಿರಥ: ಶೂರ; ಕವಿ: ಆವರಿಸು; ಮುನಿ: ಋಷಿ; ವ್ರಜ: ಗುಂಪು; ಮಿಕ್ಕವರು: ಉಳಿದ; ನಗು: ಸಂತಸ; ಮಥಿತ: ಸೋಲಿಸು; ರಿಪು: ವೈರಿ; ಅವಧಾರು: ಕೇಳು; ಲೋಕ: ಜಗತ್ತು; ಪ್ರಥಿತ: ಹೆಸರುವಾಸಿಯಾದ; ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ಸುರ: ದೇವತೆ; ಸಾರಥಿ: ರಥವನ್ನು ಓಡಿಸುವವ; ನೆಲ: ಭೂಮಿ; ಉಗ್ಗಡ: ಅತಿಶಯ; ನಗುತ: ಸಂತಸ; ಇಳಿ: ಕೆಳೆಗೆ ಬಂದು;

ಪದವಿಂಗಡಣೆ:
ರಥ+ಮಹೇಂದ್ರನದ್+ಈತನ್+ಎಮ್ಮ್+ಅತಿ
ರಥನಲಾ+ ನೆರೆನೋಂತು +ಪಡೆದಳೊ
ಪೃಥೆ+ಎನುತ +ಕವಿದುದು +ಮುನಿವ್ರಜ+ ಮಿಕ್ಕವರ+ ನಗುತ
ಮಥಿತ+ರಿಪುವ್+ಅವಧಾನ +ಲೋಕ
ಪ್ರಥಿತ +ನಿರುಪಮವೆಂಬ +ಸುರ+ಸಾ
ರಥಿಯ +ನೆಲನ್+ಉಗ್ಗಡಣೆಯಲಿ +ನಗುತ್+ಇಳಿದನ್+ಆ+ರಥವ

ಅಚ್ಚರಿ:
(೧) ಮಾತಲಿಯನ್ನು ಸುರಸಾರಥಿ ಎಂದು ಕರೆದಿರುವುದು
(೨) ರಥ, ಅತಿರಥ; ಮಥಿತ, ಪ್ರಥಿತ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ