ಪದ್ಯ ೧೭: ಯುಧಿಷ್ಠಿರನು ಏನೆಂದು ಯೋಚಿಸಿದನು?

ಮರೆದನೋ ನಮ್ಮಿನಿಬರನು ದಿಟ
ಮರೆಯಲುಚಿತವಲೇ ಸುರೆಂದ್ರನ
ಸೆರಗು ಸೋಂಕುವ ಸಲುಗೆಯುಂಟೇ ಮರ್ತ್ಯಜಾತಿಯಲಿ
ಉರುವ ಸುರಪನ ಸಾರ ಸೌಖ್ಯದೊ
ಳರಿಯನೋ ನಮ್ಮೀ ಪ್ರವಾಸದ
ಸೆರೆಗೆ ನರನಂಗೈಸನೆಂದವನೀಶ ಚಿಂತಿಸಿದ (ಅರಣ್ಯ ಪರ್ವ, ೧೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಅರ್ಜುನನ ಬಗ್ಗೆ ಚಿಂತಿಸುತ್ತಾ, ಅರ್ಜುನನು ನಮ್ಮನ್ನು ಮರೆತನೋ, ಏನೋ? ಇಂದ್ರನ ಸೆರಗನ್ನು ಮುಟ್ಟಲೂ ಅಸಮರ್ಥರಾದ ಮಾನವರಲ್ಲಿ ಹುಟ್ಟಿ ದೇವೇಂದ್ರನ ಗದ್ದುಗೆಯಲ್ಲಿ ಕುಳಿತ ಅವನು ನಮ್ಮನ್ನು ಮರೆಯುವುದು ಉಚಿತವೇ ಅಲ್ಲವೇ? ಸ್ವರ್ಗ ಸುಖದ ಸಂಭ್ರಮದಲ್ಲಿ ನಮ್ಮನ್ನು ಮರೆಯುವುದು ಆಶ್ಚರ್ಯವೇನಲ್ಲ, ನಮ್ಮೊಡನಿದ್ದರೆ ಈ ಕಾಡಿನಲ್ಲಿ ಅಲೆಯುವ ಸೆರೆಮನೆಯ ದುಃಖದಲ್ಲಿರಬೇಕು, ಅದನ್ನು ಅವನು ಒಲ್ಲನೋ ಏನೋ ಎಂದು ಚಿಂತಿಸಿದನು.

ಅರ್ಥ:
ಮರೆ: ನೆನಪಿನಿಂದ ದೂರ ಮಾಡು; ಇನಿಬರು: ಇಷ್ಟುಜನ; ದಿಟ: ನಿಜ; ಉಚಿತ: ಸರಿಯಾದ; ಸುರೇಂದ್ರ: ಇಂದ್ರ; ಸೆರಗು: ಅಂಚು, ತುದಿ; ಸೋಂಕು: ತಾಗು; ಸಲುಗೆ:ಸದರ; ಮರ್ತ್ಯ: ಮನುಷ್ಯ; ಜಾತಿ: ಕುಲ; ಉರು: ಶ್ರೇಷ್ಠ; ಸುರಪ: ಇಂದ್ರ; ಸಾರ: ಶ್ರೇಷ್ಠವಾದ, ಉತ್ಕೃಷ್ಟವಾದ; ಸೌಖ್ಯ: ಸುಖ; ಅರಿ: ತಿಳಿ; ಪ್ರವಾಸ: ಪ್ರಯಾಣ; ಸೆರೆ: ಬಂಧನ; ನರ: ಅರ್ಜುನ; ಐಸು: ಅಷ್ಟು; ಅವನೀಶ: ರಾಜ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಮರೆದನೋ +ನಮ್ಮ್+ಇನಿಬರನು +ದಿಟ
ಮರೆಯಲ್+ಉಚಿತವಲೇ +ಸುರೆಂದ್ರನ
ಸೆರಗು+ ಸೋಂಕುವ+ ಸಲುಗೆಯುಂಟೇ+ ಮರ್ತ್ಯ+ಜಾತಿಯಲಿ
ಉರುವ +ಸುರಪನ+ ಸಾರ +ಸೌಖ್ಯದೊ
ಳರಿಯನೋ +ನಮ್ಮೀ +ಪ್ರವಾಸದ
ಸೆರೆಗೆ+ ನರನಂಗ್+ಐಸನೆಂದ್+ಅವನೀಶ +ಚಿಂತಿಸಿದ

ಅಚ್ಚರಿ:
(೧) ಸುರಪ, ಸುರೇಂದ್ರ – ಇಂದ್ರನನ್ನು ಕರೆದ ಪರಿ
(೨) ಸ ಕಾರದ ಸಾಲು ಪದಗಳು – ಸುರೆಂದ್ರನಸೆರಗು ಸೋಂಕುವ ಸಲುಗೆಯುಂಟೇ

ನಿಮ್ಮ ಟಿಪ್ಪಣಿ ಬರೆಯಿರಿ