ಪದ್ಯ ೫೩: ಭೀಮನು ಯಕ್ಷರ ಮೇಲೆ ಹೇಗೆ ಪ್ರಹಾರ ಮಾಡಿದನು?

ಗಾಢಿಸಿತು ಗಜಬಜ ಕುಬೇರನ
ಬೀಡಿನಗ್ಗದ ಸುಭಟರೇ ಕೈ
ಮಾಡಿರೈ ಕೊಳಗಾಹಿಗಳು ಫಡ ಹೋಗದಿರಿಯೆನುತ
ಝಾಡಿಸಿದ ಮಣಿಮಯದ ಗದೆಯಲಿ
ತೋಡುವೊಯ್ಲಿನ ತುಡುಕುಗಾಯದ
ನೀಡುಮೊನೆಗಳ ವಿಗಡನಿಕ್ಕಿದನದಟ ರಕ್ಕಸರ (ಅರಣ್ಯ ಪರ್ವ, ೧೧ ಸಂಧಿ, ೫೩ ಪದ್ಯ)

ತಾತ್ಪರ್ಯ:
ರಣದಬ್ಬರ ತೀವ್ರವಾಯಿತು. ಕೊಳವನ್ನು ಕಾಯುವ ಕುಬೇರನ ಬೀಡಿನ ಸೈನಿಕರೇ, ಯುದ್ಧಮಾಡಿರಿ, ಓಡಿಹೋಗಬೇಡಿ ಎಂದು ಗರ್ಜಿಸುತ್ತಾ ಭೀಮನು ಗದೆಯಿಂದ ಹೊಯ್ಯಲು, ಭೀಮನ ಗದೆಯ ತಿವಿತಕ್ಕೆ ಗಾಯಗೊಂಡು ರಾಕ್ಷಸರು ನೆಲಕುರುಳಿದರು.

ಅರ್ಥ:
ಗಾಢ: ಹೆಚ್ಚಳ, ಅತಿಶಯ; ಗಜಬಜ: ಗಲಾಟೆ, ಕೋಲಾಹಲ; ಬೀಡು: ಮನೆ, ವಾಸಸ್ಥಳ; ಅಗ್ಗ: ಶ್ರೇಷ್ಠ; ಭಟ: ಸೈನಿಕ; ಕೊಳ: ಸರೋವರ; ಕಾಹಿ: ರಕ್ಷಿಸುವವ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹೋಗು: ತೆರಳು; ಝಾಡಿಸು: ಅಲುಗಾಡಿಸು, ಒದರು; ಮಣಿ: ಬೆಲೆಬಾಳುವ ರತ್ನ; ಗದೆ: ಮುದ್ಗರ; ತೋಡು: ಅಗೆ, ಹಳ್ಳ ಮಾಡು, ಚುಚ್ಚು; ತುಡುಕು: ಹೋರಾಡು, ಸೆಣಸು; ಗಾಯ: ಪೆಟ್ಟು; ಅದಟ: ಶೂರ, ಪರಾಕ್ರಮಿ; ಮೊನೆ: ಚೂಪಾದ; ವಿಗಡ: ಶೌರ್ಯ, ಪರಾಕ್ರಮ;

ಪದವಿಂಗಡಣೆ:
ಗಾಢಿಸಿತು +ಗಜಬಜ +ಕುಬೇರನ
ಬೀಡಿನ್+ಅಗ್ಗದ +ಸುಭಟರೇ +ಕೈ
ಮಾಡಿರೈ +ಕೊಳ+ಕಾಹಿಗಳು +ಫಡ +ಹೋಗದಿರಿ+ಎನುತ
ಝಾಡಿಸಿದ +ಮಣಿಮಯದ +ಗದೆಯಲಿ
ತೋಡುವೊಯ್ಲಿನ+ ತುಡುಕುಗಾಯದ
ನೀಡುಮೊನೆಗಳ +ವಿಗಡನ್+ಇಕ್ಕಿದನ್+ಅದಟ +ರಕ್ಕಸರ

ಅಚ್ಚರಿ:
(೧) ವಿಗಡ, ಅದಟ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ