ಪದ್ಯ ೪೯: ಯಕ್ಷರು ಭೀಮನಿಗೆ ಯಾರ ಬಳಿ ಹೋಗಲು ಹೇಳಿದರು?

ಐಸಲೇ ತಪ್ಪೇನು ನೀ ಯ
ಕ್ಷೇಶನಲ್ಲಿಗೆ ಪೋಗಿ ಬೇಡುವು
ದೀ ಸರೋರುಹವಾವ ಘನ ಧನಪತಿಯುದಾರನಲೆ
ಮೀಸಲಿನ ಸರಸಿಯಲಿ ದೃಷ್ಟಿಯ
ಸೂಸಬಹುದೇ ರಾಯನಾಜ್ಞೆಯ
ಭಾಷೆಯಿಲ್ಲದೆ ಬಗೆಯಲರಿದೆಂದುದು ಭಟಸ್ತೋಮ (ಅರಣ್ಯ ಪರ್ವ, ೧೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಕೇಳಿದ ಕಾವಲಿನ ಯಕ್ಷರು ಅಷ್ಟೆ ತಾನೆ, ಯಕ್ಷರ ಒಡೆಯನಾದ ಕುಬೇರನ ಬಳಿಗೆ ಹೋಗಿ ಬೇಡಿಕೋ, ಕಮಲಪುಷ್ಪವೇನು ಹೆಚ್ಚಿನದು, ಕುಬೇರನು ಉದಾರಿ ಅವನು ಇದನ್ನು ನೀಡುತ್ತಾನೆ, ಈ ಸರೋವರವು ಅವನಿಗೆ ಮೀಸಲಾದ ಸರೋವರ, ಇತರರು ಇದನ್ನು ನೋಡಬಾರದು, ಅವನ ಅಪ್ಪಣೆಯಿಲ್ಲದೆ ಹೂವು ನಿನಗೆ ಸಿಕ್ಕಲಾರದು ಎಂದರು.

ಅರ್ಥ:
ಐಸಲೇ: ಅಷ್ಟೆ; ತಪ್ಪು: ಸರಿಯಿಲ್ಲದು; ಯಕ್ಷೇಶ: ಕುಬೇರ; ಪೋಗು: ಹೋಗು, ನಡೆ; ಬೇಡು: ಕೋರಿಕೊ; ಸರೋರುಹ: ಕಮಲ; ಘನ: ಶ್ರೇಷ್ಠ; ಧನಪತಿ: ಕುಬೇರ; ಉದಾರ: ದಾನ ಶೀಲನಾದ ವ್ಯಕ್ತಿ; ಮೀಸಲು: ಕಾಯ್ದಿಟ್ಟ; ಸರಸಿ: ಸರೋವರ; ದೃಷ್ಟಿ: ನೋಟ; ಸೂಸು: ಎರಚು, ಚಲ್ಲು; ರಾಯ: ರಾಜ; ಆಜ್ಞೆ: ಅಪ್ಪಣೆ; ಭಾಷೆ: ಮಾತು; ಬಗೆ: ಎಣಿಸು, ಲಕ್ಷಿಸು; ಅರಿ: ತಿಳಿ; ಭಟ: ಸೇವಕ; ಸ್ತೋಮ: ಗುಂಪು;

ಪದವಿಂಗಡಣೆ:
ಐಸಲೇ +ತಪ್ಪೇನು +ನೀ +ಯ
ಕ್ಷೇಶನಲ್ಲಿಗೆ+ ಪೋಗಿ +ಬೇಡುವುದ್
ಈ+ ಸರೋರುಹವ್+ಆವ+ ಘನ+ ಧನಪತಿ+ಉದಾರನಲೆ
ಮೀಸಲಿನ +ಸರಸಿಯಲಿ+ ದೃಷ್ಟಿಯ
ಸೂಸಬಹುದೇ +ರಾಯನ್+ಆಜ್ಞೆಯ
ಭಾಷೆಯಿಲ್ಲದೆ +ಬಗೆಯಲ್+ಅರಿದೆಂದುದು+ ಭಟಸ್ತೋಮ

ಅಚ್ಚರಿ:
(೧) ಯಕ್ಷೇಶ, ಧನಪತಿ – ಕುಬೇರನಿಗೆ ಬಳಸಿದ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ