ಪದ್ಯ ೪೭: ಯಕ್ಷರು ಭೀಮನಲ್ಲಿ ಏನು ಕೇಳಿದರು?

ಎದ್ದರವರಿದಿರಾಗಿ ಭೀಮನ
ಹೊದ್ದಿದರು ನೀನಾರು ಹದ್ದಿಗೆ
ಬಿದ್ದಿನನೊ ಮೇಣ್ ಮಿತ್ರಭಾವದಲೆಮಗೆ ಬಿದ್ದಿನನೊ
ಉದ್ದುರುಟುತನ ನಿನ್ನ ಮೋರೆಯ
ಲುದ್ದುದೈ ನೀನಾರು ನಿನಗೇ
ನಿದ್ದುದಿಲ್ಲಿಯೆನುತ್ತ ನುಡಿದರು ಯಕ್ಷರನಿಲಜನ (ಅರಣ್ಯ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಭೀಮನ ಆಗಮನವನ್ನು ಕಂಡ ಯಕ್ಷರು ಅವನಿಗೆ ಎದುರಾಗಿ ಬಂದು, ನೀನಾರು, ನಮ್ಮ ವೈರಿಯಾಗಿ ಹದ್ದಿಗೆ ಊಟವಾಗಲು ಬಂದಿರುವೆಯೋ ಸ್ನೇಹ ಭಾವದಿಂದ ನಮ್ಮ ಅತಿಥಿಯಾಗಿ ಬಂದಿರುವೆಯೋ? ನಿನ್ನ ಮುಖದ ಮೇಲೆ ಬಹಳ ದಿಟ್ಟತನವೆದ್ದು ಕಾಣಿಸುತ್ತಿದೆ, ನಿನಗೆ ಇಲ್ಲಿರುವ ಕೆಲಸವಾದರು ಏನು ಎಂದು ಯಕ್ಷರು ಭೀಮನನ್ನು ಕೇಳಿದರು.

ಅರ್ಥ:
ಎದ್ದು: ಮೇಲೇಳು; ಇದಿರಾಗು: ಎದುರಾಗು; ಹೊದ್ದು: ಆವರಿಸು; ಹದ್ದು: ಪಕ್ಷಿಯ ಜಾತಿ; ಬಿದ್ದು: ಬೀಳು; ಮೇಣ್: ಅಥವಾ; ಮಿತ್ರ: ಸ್ನೇಹ; ಉದ್ದುರುಟುತನ: ಒರಟುತನ, ಕಠೋರ; ಮೋರೆ: ಮುಖ; ನುಡಿ: ಮಾತಾಡು; ಅನಿಲಜ: ವಾಯು ಪುತ್ರ (ಭೀಮ);

ಪದವಿಂಗಡಣೆ:
ಎದ್ದರ್+ಅವರ್+ಇದಿರಾಗಿ+ ಭೀಮನ
ಹೊದ್ದಿದರು +ನೀನಾರು +ಹದ್ದಿಗೆ
ಬಿದ್ದಿನನೊ+ ಮೇಣ್+ ಮಿತ್ರಭಾವದಲ್+ಎಮಗೆ +ಬಿದ್ದಿನನೊ
ಉದ್ದುರುಟುತನ +ನಿನ್ನ +ಮೋರೆಯಲ್
ಉದ್ದುದೈ +ನೀನಾರು +ನಿನಗೇನ್
ಇದ್ದುದ್+ಇಲ್ಲಿ+ಎನುತ್ತ +ನುಡಿದರು +ಯಕ್ಷರ್+ಅನಿಲಜನ

ಅಚ್ಚರಿ:
(೧) ಬಿದ್ದಿನನೊ – ೩ ಸಾಲಿನ ಮೊದಲ ಹಾಗು ಕೊನೆ ಪದ
(೨) ನೀನಾರು – ೨, ೫ ಸಾಲಿನೆ ೨ನೇ ಪದ

ಪದ್ಯ ೪೬: ಸರೋವರವನ್ನು ಯಾರು ಕಾಯುತ್ತಿದ್ದರು?

ಸಾರೆ ಬರೆ ಬರೆ ಕಂಡನಲ್ಲಿ ಕು
ಬೇರನಾಳಿದ್ದುದು ತದೀಯ ಸ
ರೋರುಹದ ಕಾಹಿನಲಿ ಯಕ್ಷರು ಲಕ್ಷಸಂಖ್ಯೆಯಲಿ
ಸಾರೆ ಚಾಚಿದ ಹರಿಗೆಗಳ ಬಲು
ಕೂರಲಗು ಹೊದೆಯಂಬು ಚಾಪ ಕ
ಠಾರಿ ಸೆಲ್ಲೆಯ ಸಬಳಗಳ ಸೋಪಾನ ಪಂಕ್ತಿಯಲಿ (ಅರಣ್ಯ ಪರ್ವ, ೧೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಭೀಮನು ಕಮಲದ ಸರೋವರದ ಹತ್ತಿರಕ್ಕೆ ಹೋದಗ ಆ ಸರೋವರದ ಮೆಟ್ಟಿಲುಗಳ ಮೇಲೆ ಕುಬೇರನ ಯೋಧರರಾದ ಯಕ್ಷರು ಲಕ್ಷ ಲಕ್ಷ ಸಂಖ್ಯೆಗಳಲ್ಲಿದ್ದುದನು ನೋಡಿದನು. ಕತ್ತಿ, ಗುರಾಣಿ, ಬಿಲ್ಲು ಬಾಣ, ಈಟಿ, ಭರ್ಜಿಗಳಿಂದ ಶಸ್ತ್ರಸನ್ನದ್ಧರಾಗಿ ಅವರು ಸರೋವರವನ್ನು ಕಾಯುತ್ತಿದ್ದರು.

ಅರ್ಥ:
ಸಾರೆ: ಹತ್ತಿರ, ಸಮೀಪ; ಬರೆ: ಆಗಮನ; ಕಂಡು: ನೋಡು; ಆಳು: ಸೇವಕ; ತದೀಯ: ಅದಕ್ಕೆ ಸಂಬಂಧಪಟ್ಟ; ಸರೋರುಹ: ಕಮಲ; ಕಾಹಿ: ರಕ್ಷಿಸುವ; ಸಂಖ್ಯೆ: ಎಣಿಕೆ; ಚಾಚು: ಹರಡು; ಹರಿಗೆ: ಚಿಲುಮೆ, ತಲೆಪೆರಿಗೆ; ಕೂರಲಗು: ಹರಿತವಾದ ಬಾಣ; ಹೊದೆ: ಬತ್ತಳಿಕೆ; ಅಂಬು: ಬಾಣ; ಚಾಪ: ಬಿಲ್ಲು; ಕಠಾರಿ: ಬಾಕು, ಚೂರಿ, ಕತ್ತಿ; ಸಬಲ: ಈಟಿ; ಸೋಪಾನ: ಮೆಟ್ಟಿಲು; ಸೆಲ್ಲೆ: ಉತರೀಯ; ಪಂಕ್ತಿ: ಗುಂಪು;

ಪದವಿಂಗಡಣೆ:
ಸಾರೆ +ಬರೆ +ಬರೆ +ಕಂಡನಲ್ಲಿ +ಕು
ಬೇರನ್+ಆಳ್+ಇದ್ದುದು +ತದೀಯ +ಸ
ರೋರುಹದ +ಕಾಹಿನಲಿ +ಯಕ್ಷರು +ಲಕ್ಷ+ಸಂಖ್ಯೆಯಲಿ
ಸಾರೆ +ಚಾಚಿದ +ಹರಿಗೆಗಳ +ಬಲು
ಕೂರಲಗು +ಹೊದೆ+ಅಂಬು +ಚಾಪ +ಕ
ಠಾರಿ +ಸೆಲ್ಲೆಯ +ಸಬಳಗಳ +ಸೋಪಾನ +ಪಂಕ್ತಿಯಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೆಲ್ಲೆಯ ಸಬಳಗಳ ಸೋಪಾನ

ಪದ್ಯ ೪೫: ಭೀಮನೇಕೆ ಉತ್ಸಾಹಗೊಂಡನು?

ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇದ ಸ್ವೇದ ಬಿಂದುಗ
ಳೊಳಸರಿಯೆ ರೋಮಾಳಿಕಾಣಿಸೆ ತೃಷೆಯ ದೆಸೆ ಮುರಿಯೆ
ತಳಿತುದಾಪ್ಯಾಯಾನ ಮನೋರಥ
ಫಲಿಸಿತರಸಿಯ ಹರುಷದರ್ಪಣ
ಬೆಳಗುವುದು ಮಝಬಾಪೆನುತ ಭುಲ್ಲವಿಸಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ತಂಗಾಳಿಯ ಆಲಿಂಗನದಿಂದ ಭೀಮನ ಮಾರ್ಗಾಯಾಸವು ಮುರಿದು ಹೋಯಿತು. ಬೆವರ ಹನಿಗಳು ಆರಿದವು. ಕೂದಲುಗಳು ಆ ತಂಪಿಗೆ ಎದ್ದು ನಿಂತವು. ಬಾಯಾರಿಕೆ ಕಡಿಮೆಯಾಗಿ ಆನಂದದ ಭಾವನೆ ಹೆಚ್ಚಿತು. ದ್ರೌಪದಿಯ ಮನೋರಥವು ಫಲಿಸಿತು ಆಕೆಯ ಹರ್ಷದ ಕನ್ನಡಿ ನಿರ್ಮಲವಾಯಿತು, ಭಲೇ ಭಲೇ ಎಂದು ಯೋಚಿಸುತ್ತಾ ಭೀಮನು ಹಿಗ್ಗಿದನು.

ಅರ್ಥ:
ಝಳ: ಪ್ರಕಾಶ, ಕಾಂತಿ; ಲಳಿ: ರಭಸ; ಲಟಕಟ: ಚಕಿತನಾಗು; ಮಾರ್ಗ: ದಾರಿ; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ಖೇದ: ದುಃಖ; ಸ್ವೇದ: ಬೆವರು; ಬಿಂದು: ಹನೆ; ಒಳಸರಿ: ಆವಿಯಾಗು; ರೋಮಾಳಿ: ಕೂದಲುಗಳು; ಕಾಣಿಸೆ: ತೋರು; ತೃಷೆ: ನೀರಡಿಕೆ; ದೆಸೆ: ದಿಕ್ಕು; ಮುರಿ: ಸೀಳು; ತಳಿತ: ಚಿಗುರಿದ; ಆಪ್ಯಾಯನ: ಸುಖ, ಹಿತ; ಮನೋರಥ: ಆಸೆ, ಬಯಕೆ; ಫಲಿಸಿತು: ದೊರೆತುದು; ಅರಸಿ: ರಾಣಿ; ಹರುಷ: ಸಂತಸ; ದರ್ಪಣ: ಕನ್ನಡಿ; ಬೆಳಗು: ಪ್ರಕಾಶಿಸು; ಮಝಬಾಪು: ಭಲೇ; ಭುಲ್ಲವಿಸು: ಉತ್ಸಾಹಗೊಳ್ಳು;

ಪದವಿಂಗಡಣೆ:
ಝಳದ +ಲಳಿ+ ಲಟಕಟಿಸೆ +ಮಾರ್ಗ
ಸ್ಖಲಿತ+ ಖೇದ +ಸ್ವೇದ +ಬಿಂದುಗಳ್
ಒಳಸರಿಯೆ +ರೋಮಾಳಿಕಾಣಿಸೆ +ತೃಷೆಯ +ದೆಸೆ +ಮುರಿಯೆ
ತಳಿತುದ್+ಆಪ್ಯಾಯಾನ +ಮನೋರಥ
ಫಲಿಸಿತರಸಿಯ + ಹರುಷ+ದರ್ಪಣ
ಬೆಳಗುವುದು +ಮಝಬಾಪೆನುತ+ ಭುಲ್ಲವಿಸಿದನು+ ಭೀಮ

ಅಚ್ಚರಿ:
(೧) ಆಯಾಸ ಕಡಿಮೆಯಾಯಿತೆಂದು ಹೇಳುವ ಪರಿ – ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇದ ಸ್ವೇದ ಬಿಂದುಗಳೊಳಸರಿಯೆ ರೋಮಾಳಿಕಾಣಿಸೆ ತೃಷೆಯ ದೆಸೆ ಮುರಿಯೆ

ಪದ್ಯ ೪೪: ಮಾರುತನು ಯಾರನ್ನು ಆಲಂಗಿಸಿದನು?

ಒಗುಮಿಗೆಯ ಪರಿಮಳದ ಕಂಪಿನ
ತಗಡ ತೆಕ್ಕೆಯ ಬೀದಿವರಿಗಳ
ಮುಗುಳ ಮೊಗ್ಗೆಯ ತೆಗೆವ ತುಂಬಿಯ ಲಳಿಯ ಲಗ್ಗೆಗಳ
ಹೊಗರ ಹೊರಳಿಯ ಕಿರುದೆರೆಯ ನೂ
ಕುಗಳ ತಳಿತ ತುಷಾರ ಭಾರದ
ಸೊಗಸ ಸೇರಿಸಿ ಮಂದಮಾರುತನಪ್ಪಿದನು ಮಗನ (ಅರಣ್ಯ ಪರ್ವ, ೧೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ದಟ್ಟವಾಗಿ ಬೆಳದ ಪರಿಮಳ ಭರಿತ ಹೂವುಗಳನ್ನು ದಾಟಿ, ಪುಷ್ಪದ ಮೊಗ್ಗುಗಳನ್ನರಳಿಸಿ, ಮಕರಂದವನ್ನು ಹೀರುವ ದುಮ್ಬಿಗಳ ರಭಸವನ್ನು ಆವರಿಸಿ, ಕಿರುದೆರೆಗಳ ಚಲನೆಯ ಇಬ್ಬನಿಯನ್ನು ಒಳಗೊಂಡು ನಿಧಾನವಾಗಿ ಬೀಸುವ ಗಾಳಿಯು ತನ್ನ ಮಗನಾದ ಭೀಮನನ್ನು ಆಲಂಗಿಸಿತು.

ಅರ್ಥ:
ಒಗುಮಿಗೆ: ಆಧಿಕ್ಯ, ಹೆಚ್ಚಳ; ಪರಿಮಳ: ಸುಗಂಧ; ಕಂಪು: ಸುಗಂಧ; ತಗಡ: ದಟ್ಟಣೆ, ಸಾಂದ್ರತೆ; ತೆಕ್ಕೆ: ಅಪ್ಪುಗೆ, ಆಲಿಂಗನ, ಗುಂಪು; ಬೀದಿವರಿ: ಸಂಚಾರ, ಚಲನೆ; ಮುಗುಳು: ಮೊಗ್ಗು; ಮೊಗ್ಗು: ಪೂರ್ತಿಯಾಗಿ ಅರಳದೆ ಇರುವ ಹೂವು; ತೆಗೆ:ಹೊರತರು; ತುಂಬಿ: ಭ್ರಮರ; ಲಳಿ: ರಭಸ, ಆವೇಶ; ಲಗ್ಗೆ: ಮುತ್ತಿಗೆ, ಆಕ್ರಮಣ; ಹೊಗರು: ಕಾಂತಿ, ಪ್ರಕಾಶ, ಹೆಚ್ಚಳ; ಹೊರಳಿ:ಗುಂಪು, ಸಮೂಹ; ಕಿರುದೆರೆ: ಚಿಕ್ಕ ಅಲೆ; ನೂಕು: ತಳ್ಳು; ತಳಿತ: ಚಿಗುರಿದ; ತುಷಾರ: ಹಿಮ, ಮಂಜು, ಇಬ್ಬನೆ; ಭಾರ: ಹೊರೆ; ಸೊಗಸು: ಚೆಂದ; ಸೇರಿಸು: ಜೋಡಿಸು; ಮಂದ: ನಿಧಾನ; ಮಾರುತ: ವಾಯು; ಅಪ್ಪು: ಆಲಂಗಿಸು; ಮಗ: ಸುತ;

ಪದವಿಂಗಡಣೆ:
ಒಗುಮಿಗೆಯ+ ಪರಿಮಳದ+ ಕಂಪಿನ
ತಗಡ+ ತೆಕ್ಕೆಯ+ ಬೀದಿವರಿಗಳ
ಮುಗುಳ +ಮೊಗ್ಗೆಯ +ತೆಗೆವ+ ತುಂಬಿಯ +ಲಳಿಯ ಲಗ್ಗೆಗಳ
ಹೊಗರ+ ಹೊರಳಿಯ+ ಕಿರುದೆರೆಯ+ ನೂ
ಕುಗಳ +ತಳಿತ +ತುಷಾರ +ಭಾರದ
ಸೊಗಸ +ಸೇರಿಸಿ +ಮಂದ+ಮಾರುತನ್+ಅಪ್ಪಿದನು +ಮಗನ

ಅಚ್ಚರಿ:
(೧) ತಂಗಾಳಿಯು ಭೀಮನ ಮೇಲೆ ಬೀಸಿತು ಎಂದು ಹೇಳುವ ಸುಂದರ ಕಲ್ಪನೆ
(೨) ಜೋಡಿ ಅಕ್ಷರ ಪದಗಳ ಬಳಕೆ – ತಗಡ ತೆಕ್ಕೆಯ; ಮುಗುಳ ಮೊಗ್ಗೆಯ; ತೆಗೆವ ತುಂಬಿಯ; ಲಳಿಯ ಲಗ್ಗೆಗಳ; ಹೊಗರ ಹೊರಳಿಯ; ತಳಿತ ತುಷಾರ; ಸೊಗಸ ಸೇರಿಸಿ

ಪದ್ಯ ೪೩: ಭೀಮನು ಸಂತೋಷ ಪಡಲು ಕಾರಣವೇನು?

ಧರಣಿಪತಿ ಕೇಳ್ ಬಹಳ ವಿಪಿನಾಂ
ತರವನಂತವ ಕಳೆದು ಬರೆಬರೆ
ಸರಸಿಜದ ಮೋಹರದ ಮುಂದೈತಪ್ಪ ಪರಿಮಳದ
ಮೊರೆವ ತುಂಬಿಯ ಥಟ್ಟುಗಳ ತನಿ
ವರಿವ ತಂಪಿನ ತುರಗಲಿನ ತ
ತ್ಸರಸಿಯನು ದೂರದಲಿ ಕಂಡುಬ್ಬಿದನು ಕಲಿಭೀಮ (ಅರಣ್ಯ ಪರ್ವ, ೧೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಭೀಮನು ಅನೇಕ ವನಗಳನ್ನು ದಾಟಿ ಮುನ್ನಡೆದು ಬರುತ್ತಿರಲು, ದೂರದಲ್ಲಿ ಕಮಲ ಪುಷ್ಪಗಳ ಸಮೂಹದ ಮೇಲೆ ಹಾದು ಬರುವ ಸುಗಂಧ, ಹೂಗಳಿಗೆ ಮುತ್ತುವ ದುಂಬಿಗಳ ದಂಡು ಮತ್ತು ತಂಪು ತುಂಬಿದ ಸೌಗಂಧಿಕ ಕುಸುಮ ಸರೋವರವನ್ನು ಕಂಡು ಸಂತೋಷದಿಂದ ಹಿಗ್ಗಿದನು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ; ಪತಿ: ಒಡೆಯ; ಕೇಳ್: ಆಲಿಸು; ಬಹಳ: ತುಂಬ; ವಿಪಿನ: ಕಾಡು; ಅಂತರ: ದೂರ; ಅಂತ: ಕೊನೆ; ಕಳೆದು: ತೊರೆ, ನಿವಾರಣೆ; ಬರೆ: ಆಗಮಿಸು; ಸರಸಿಜ: ಕಮಲ ಮೋಹರ: ಗುಂಪು, ಸಮೂಹ; ತುಂಬು: ಭರ್ತಿ; ಥಟ್ಟು: ಗುಂಪು; ತನಿ: ಚೆನ್ನಾಗಿ ಬೆಳೆದುದು; ತಂಪು: ತಣಿವು, ಶೈತ್ಯ; ತುರಗ: ವೇಗವಾಗಿ ಚಲಿಸುವುದುತ; ಸರಸಿ: ಸರೋವರ; ದೂರ: ಬಹಳ ಅಂತರ; ಕಂಡು: ನೋಡಿ; ಉಬ್ಬು: ಹಿಗ್ಗು; ಕಲಿ: ಶೂರ; ಐತಪ್ಪ: ಬರುತ್ತಿರುವ;

ಪದವಿಂಗಡಣೆ:
ಧರಣಿಪತಿ +ಕೇಳ್ +ಬಹಳ+ ವಿಪಿನಾಂ
ತರವನ್+ಅಂತವ +ಕಳೆದು +ಬರೆಬರೆ
ಸರಸಿಜದ+ ಮೋಹರದ+ ಮುಂದ್+ಐತಪ್ಪ+ ಪರಿಮಳದ
ಮೊರೆವ+ ತುಂಬಿಯ +ಥಟ್ಟುಗಳ+ ತನಿ
ವರಿವ+ ತಂಪಿನ +ತುರಗಲಿನ +ತ
ತ್ಸರಸಿಯನು +ದೂರದಲಿ +ಕಂಡುಬ್ಬಿದನು+ ಕಲಿ+ಭೀಮ

ಅಚ್ಚರಿ:
(೧) ತ ಕಾರದ ಸಾಲು ಪದ – ತುಂಬಿಯ ಥಟ್ಟುಗಳ ತನಿವರಿವ ತಂಪಿನ ತುರಗಲಿನ ತತ್ಸರಸಿಯನು