ಪದ್ಯ ೪೨: ಭೀಮನು ತನ್ನ ಪ್ರಯಾಣವನ್ನು ಹೇಗೆ ಮುಂದುರವರೆಸಿದನು?

ಐಸೆ ಸಲಿಸಿದೆನೆನುತಲಾ ಕಪಿ
ಯಾ ಸಮಯದಲದೃಶ್ಯವಾಗೆ ವಿ
ಕಾಸವಾದುದು ವಿಸ್ಮಯಕೆ ಪವಮಾನ ನಂದನನ
ಆ ಸುಗಂಧಿತ ಕಮಲ ತಾನಿ
ನ್ನೇಸು ದೂರವೊ ದ್ರುಪದಸುತೆ ತನ
ಗೇಸು ಮುನಿವಳೊ ಹಾಯೆನುತ ಹರಿದನುವನಾಂತರವ (ಅರಣ್ಯ ಪರ್ವ, ೧೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭೀಮನ ಕೋರಿಕೆಯನ್ನು ಕೇಳಿದ ಹನುಮನು, ಅಷ್ಟೆ ತಾನೆ ಆಗಲಿ ಎಂದು ಅಭಯವನ್ನು ನೀಡಿ ಅದೃಶ್ಯನಾದನು. ಭೀಮನು ಆತನು ಅದೃಶ್ಯವಾದುದನ್ನು ಕಂಡು ವಿಸ್ಮಿತನಾದನು, ಬಳಿಕ ಆ ಸುಗಂಧಿಕ ಕಮಲವು ಇನ್ನು ಎಷ್ಟುದೂರವಿದೆಯೋ, ದ್ರೌಪದಿಯು ಅದೆಷ್ಟು ಕೋಪಗೊಳ್ಳುವಳೋ ಎಂದು ಚಿಂತಿಸುತ್ತಾ ವನದೊಳಗೆ ತನ್ನ ನಡಿಗೆಯನ್ನು ಮುಂದುವರೆಸಿದನು.

ಅರ್ಥ:
ಐಸೆ: ಅಷ್ಟು; ಸಲಿಸು: ಪೂರೈಸು; ಕಪಿ: ಹನುಮ; ಸಮಯ: ಕಾಲ; ಅದೃಶ್ಯ: ಕಾಣದಂತಾಗು; ವಿಕಾಸ: ಅರಳುವಿಕೆ, ಪ್ರಕಟನ; ವಿಸ್ಮಯ: ಆಶ್ಚರ್ಯ; ಪವಮಾನ: ವಾಯು; ನಂದನ: ಮಗ; ಸುಗಂಧಿತ: ಸುವಾಸನೆ ಭರಿತ; ಕಮಲ: ತಾವರೆ; ಏಸು: ಎಷ್ಟು; ದೂರ: ಅಂತರ; ಸುತೆ: ಮಗಳು; ಮುನಿ: ಕೋಪ; ಹರಿ: ತೆರಳು, ಚಲಿಸು; ವನ: ಕಾಡು;

ಪದವಿಂಗಡಣೆ:
ಐಸೆ +ಸಲಿಸಿದೆನ್+ಎನುತಲಾ +ಕಪಿ
ಆ +ಸಮಯದಲ್+ಅದೃಶ್ಯವಾಗೆ +ವಿ
ಕಾಸವಾದುದು +ವಿಸ್ಮಯಕೆ +ಪವಮಾನ +ನಂದನನ
ಆ +ಸುಗಂಧಿತ +ಕಮಲ +ತಾನಿನ್
ಏಸು +ದೂರವೊ +ದ್ರುಪದಸುತೆ+ ತನಗ್
ಏಸು +ಮುನಿವಳೊ+ ಹಾಯೆನುತ+ ಹರಿದನು+ವನಾಂತರವ

ಅಚ್ಚರಿ:
(೧) ಆಶ್ಚರ್ಯಗೊಂಡನು ಎಂದು ಹೇಳಲು – ವಿಕಾಸವಾದುದು ವಿಸ್ಮಯಕೆ

ನಿಮ್ಮ ಟಿಪ್ಪಣಿ ಬರೆಯಿರಿ