ಪದ್ಯ ೩೮: ಹನುಮನು ಹೇಗೆ ಪ್ರಜ್ವಲಿಸಿದನು?

ಮೇರುವಿನ ತಪ್ಪಲಲಿ ಬೆಳೆದ ಬ
ಲಾರಿ ಚಾಪವೊ ಮೇಣ್ ತ್ರಿವಿಕ್ರಮ
ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲುಮಿಣಿಯೊ
ಬಾರಿಸುವ ಬಲುಬಾಲವಾ ಜಂ
ಭಾರಿ ಭವನವನಳ್ಳಿರಿಯೆ ತ್ರಿಪು
ರಾರಿಯೊಡ್ಡಿನ ಹೊಳಹಿನಲಿ ಹೊಳೆಹೊಳೆದನಾ ಹನುಮ (ಅರಣ್ಯ ಪರ್ವ, ೧೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಹನುಮಂತನ ಬಾಲವು ಮೇರುಪರ್ವತದ ತಪ್ಪಲಿನಲ್ಲಿರುವ ಇಂದ್ರಚಾಪವೋ, ತ್ರಿವಿಕ್ರಮನ ಆರ್ಭಟಕ್ಕೆ ಒತ್ತಾಗಿ ಹೊಸೆದ ನಕ್ಷತ್ರಗಳ ಮಿಣಿಯೋ ಎಂಬಂತೆ ಇಂದ್ರಭವನ (ಸ್ವರ್ಗ)ದ ವರೆಗೂ ಹೋಯಿತು, ಶಿವನಂತೆ ಹನುಮನು ಪ್ರಜ್ವಲಿಸಿದನು.

ಅರ್ಥ:
ತಪ್ಪಲು: ಬೆಟ್ಟದ ಪಕ್ಕದ ಸಮವಾದ ಪ್ರದೇಶ; ಬೆಳೆ: ಮೇಲೇರು, ವೃದ್ಧಿಸು; ಬಲಾರಿ: ಇಂದ್ರ; ಚಾಪ: ಬಿಲ್ಲು; ಮೇಣ್: ಅಥವಾ; ತ್ರಿವಿಕ್ರಮ: ವಿಷ್ಣು; ಆರುಭಟೆ: ಗರ್ಜನೆ; ಜಡಿ: ಹೊಡೆತ; ಜ್ಯೋತಿ: ಬೆಳಕು; ಮಿಣಿ: ಚರ್ಮದ ಹಗ್ಗ; ಬಾರಿಸು: ಹೊಡೆ; ಬಾಲ: ಪುಚ್ಛ; ಜಂಭಾರಿ: ಇಂದ್ರ; ಭವನ: ಆಲಯ; ತ್ರಿಪುರಾರಿ: ಶಿವ; ಅರಿ: ವೈರಿ; ಹೊಳಹು: ಪ್ರಕಾಶ; ಹೊಳೆ: ಕಾಂತಿ; ಗಣ: ಗುಂಪು;

ಪದವಿಂಗಡಣೆ:
ಮೇರುವಿನ +ತಪ್ಪಲಲಿ +ಬೆಳೆದ +ಬ
ಲಾರಿ +ಚಾಪವೊ +ಮೇಣ್ +ತ್ರಿವಿಕ್ರಮನ್
ಆರುಭಟೆಯಲಿ +ಜಡಿವ ಜ್ಯೋತಿರ್ಗಣದ +ಬಲುಮಿಣಿಯೊ
ಬಾರಿಸುವ +ಬಲುಬಾಲವ್+ ಆ+ ಜಂ
ಭಾರಿ +ಭವನವನಳ್ಳಿರಿಯೆ+ ತ್ರಿಪು
ರಾರಿಯೊಡ್ಡಿನ +ಹೊಳಹಿನಲಿ +ಹೊಳೆಹೊಳೆದನಾ +ಹನುಮ

ಅಚ್ಚರಿ:
(೧) ಬಲಾರಿ, ಜಂಬಾರಿ, ತ್ರಿಪುರಾರಿ – ಪ್ರಾಸ ಪದಗಳು
(೨) ಇಂದ್ರನನ್ನು ಬಲಾರಿ, ಜಂಬಾರಿ ಎಂದು ಕರೆದಿರುವುದು
(೩) ಉಪಮಾನಗಳ ಬಳಕೆ – ಮೇರುವಿನ ತಪ್ಪಲಲಿ ಬೆಳೆದ ಬಲಾರಿ ಚಾಪವೊ; ತ್ರಿವಿಕ್ರಮ
ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲುಮಿಣಿಯೊ; ತ್ರಿಪುರಾರಿಯೊಡ್ಡಿನ ಹೊಳಹಿನಲಿ ಹೊಳೆಹೊಳೆದನಾ ಹನುಮ

ನಿಮ್ಮ ಟಿಪ್ಪಣಿ ಬರೆಯಿರಿ