ಪದ್ಯ ೩೫: ಕಲಿಯುಗದ ಮನುಜರ ಸ್ವಭಾವ ಎಂತಹುದು?

ಹೀನಸತ್ವರು ಸತ್ಯಧರ್ಮವಿ
ಹೀನರರ್ಥಪರಾಯಣರು ಕುಜ
ನಾನುರಕ್ತರು ವರ್ಣಧರ್ಮಾಶ್ರಮ ವಿದೂಷಕರು
ದಾನಿಗಳು ದುಷ್ಪಾತ್ರದಲಿ ಗುಣ
ಮೌನಿಗಳು ಗರ್ವಿತರು ಮಿಥ್ಯಾ
ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳೆಂದ (ಅರಣ್ಯ ಪರ್ವ, ೧೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕಲಿಯುಗದ ಮನುಷ್ಯರ ಗುಣಗಳನ್ನು ಹೇಳುತ್ತಾ, ಕಲಿಯುಗದ ಮನುಷ್ಯರು ಹೀನವಾದ ಸತ್ವವುಳ್ಳವರು. ಸತ್ಯ ಧರ್ಮಗಳಿಲ್ಲದವರು, ಐಶ್ವರ್ಯ ಗಳಿಕೆಯೇ ಅವರ ಮುಖ್ಯವಾದ ಉದ್ದೇಶವಾಗಿರುತ್ತದೆ, ಅವರು ಕೆಟ್ಟಜನರನ್ನು ಪ್ರೀತಿಸುತ್ತಾರೆ. ವರ್ಣ ಧರ್ಮಗಳನ್ನು, ಆಶ್ರಮ ಧರ್ಮಗಳನ್ನೂ ವಿಶೇಷವಾಗಿ ದೂಷಿಸುತ್ತಾರೆ. ದುಷ್ಪಾತ್ರರಿಗೆ ದಾನ ಮಾಡುತ್ತಾರೆ, ಗುಣಗಳನ್ನು ಗುರುತಿಸಿದರೂ ಹೇಳುವುದಿಲ್ಲ. ಗರ್ವಿಗಳು, ಮಿಥ್ಯಾಜ್ಞಾನಿಗಳೂ ಆಗಿರುತ್ತಾರೆ ಎಂದು ಹನುಮನು ಭೀಮನಿಗೆ ತಿಳಿಸಿದನು.

ಅರ್ಥ:
ಹೀನ:ಕೀಳಾದ, ಕೆಟ್ಟ; ಸತ್ವ: ಶಕ್ತಿ, ಬಲ; ಸತ್ಯ: ದಿಟ; ಧರ್ಮ: ಧಾರಣೆ ಮಾಡಿದುದು; ವಿಹೀನ: ತೊರೆದ, ತ್ಯಜಿಸಿದ; ಅರ್ಥ: ಐಶ್ವರ್ಯ; ಪರಾಯಣ: ಪ್ರಮುಖವಾದ ಉದ್ದೇಶ, ಪರಮಗುರಿ; ಕುಜನ: ಕೆಟ್ಟಜನ, ದುಷ್ಟ; ಅನುರಕ್ತ: ಮೋಹಗೊಂಡ; ವರ್ಣ: ಬಣ, ಪಂಗಡ; ಆಶ್ರಮ: ಜೀವನದ ನಾಲ್ಕು ಘಟ್ಟಗಳು (ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸ); ವಿದೂಷಕ: ಹಾಸ್ಯದ, ತಮಾಷೆಯ, ದೂಷಣೆ ಮಾಡುವವನು; ದಾನಿ: ದಾನ ಮಾಡುವವನು; ದುಷ್ಪಾತ್ರ: ಕೆಟ್ಟಜನ; ಮೌನಿ: ಮಾತನ್ನಾಡದೆ ಇರುವವನು; ಗರ್ವ: ಸೊಕ್ಕು, ಹೆಮ್ಮೆ; ಮಿಥ್ಯ: ಸುಳ್ಳು; ಜ್ಞಾನಿ: ತಿಳಿದವನು, ವಿದ್ವಾಂಸ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ಕೇಳು: ಆಲಿಸು;

ಪದವಿಂಗಡಣೆ:
ಹೀನಸತ್ವರು +ಸತ್ಯಧರ್ಮ+ವಿ
ಹೀನರ್+ಅರ್ಥ+ಪರಾಯಣರು +ಕುಜನ
ಅನುರಕ್ತರು+ ವರ್ಣಧರ್ಮಾಶ್ರಮ+ ವಿದೂಷಕರು
ದಾನಿಗಳು +ದುಷ್ಪಾತ್ರದಲಿ +ಗುಣ
ಮೌನಿಗಳು +ಗರ್ವಿತರು+ ಮಿಥ್ಯಾ
ಜ್ಞಾನಿಗಳು +ಕಲಿಯುಗದ +ಮನುಜರು +ಭೀಮ +ಕೇಳೆಂದ

ಅಚ್ಚರಿ:
(೧) ದಾನಿಗಳು, ಮೌನಿಗಳು, ಜ್ಞಾನಿಗಳು – ಪ್ರಾಸ ಪದಗಳು
(೨) ವಿಹೀಣ, ವಿದೂಷಕ – ವಿ ಕಾರದ ಪದಗಳ ಬಳಕೆ
(೩) ಜೋಡಿ ಪದಗಳು – ದಾನಿಗಳು ದುಷ್ಪಾತ್ರದಲಿ; ಗುಣಮೌನಿಗಳು ಗರ್ವಿತರು

ನಿಮ್ಮ ಟಿಪ್ಪಣಿ ಬರೆಯಿರಿ