ಪದ್ಯ ೩೭: ಹನುಮನ ತನ್ನ ನಿಜ ಸ್ವರೂವನ್ನು ಹೇಗೆ ತೋರಿದನು?

ಆದಡಿನ್ನು ನಿರೀಕ್ಷಿಸೆನುತ ನಿ
ನಾದದಲಿ ನೆಲ ಬಿರಿಯೆ ಬಾಲದ
ಬೀದಿವರಿ ಬಾಸಣಿಸೆ ಘನ ನಕ್ಷತ್ರ ಮಂಡಲವ
ಮೇದಿನಿಯ ಹೊರೆಕಾರರಳ್ಳೆದೆ
ಯಾದರಳುಕಿದವದ್ರಿಗಳು ಸ
ಪ್ತೋದಧಿಗಳುಕ್ಕಿದವೆನಲು ಹೆಚ್ಚಿದನು ಹನುಮಂತ (ಅರಣ್ಯ ಪರ್ವ, ೧೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಮನ ಕೋರಿಕೆಯನ್ನು ಮನ್ನಿಸಿ, ಹಾಗಾದರೆ ನನ್ನ ರೂಪವನ್ನು ನೋಡು ಎನ್ನುತ್ತಾ ತನ್ನ ದೇಹವನನ್ನು ಬೆಳೆಸಿದನು. ಅವನ ಗರ್ಜನೆಗೆ ನೆಲ ಬಿರಿಯಿತು. ಬಾಲವು ಬೆಳೆಯುತ್ತಾ ನಕ್ಷತ್ರ ಮಂಡಲದವರೆಗೆ ಹಬ್ಬಿತು. ಭೂಭಾರಕರಾದ ದುಷ್ಟರೆದೆಗಳು ಬೆದರಿದವು. ಬೆಟ್ಟಗಳು ಅಳುಕಿದವು ಸಪ್ತಸಮುದ್ರಗಳು ಉಕ್ಕಿದಂತಾದವು.

ಅರ್ಥ:
ನಿರೀಕ್ಷಿಸು: ತಾಳು; ನಿನಾದ: ಶಬ್ದ; ನೆಲ: ಭೂಮಿ; ಬಿರಿ: ಸೀಳು; ಬಾಲ: ಪುಚ್ಛ; ಬೀದಿ: ವಿಸ್ತಾರ, ವ್ಯಾಪ್ತಿ, ಹರುಹು; ಬಾಸಣ: ಹೊದಿಕೆ, ಮುಸುಕು; ಘನ: ಶ್ರೇಷ್ಠ; ನಕ್ಷತ್ರ: ತಾರೆ; ಮಂಡಲ: ವರ್ತುಲಾಕಾರ; ಮೇದಿನಿ: ಭೂಮಿ; ಅಳ್ಳೆದೆ: ನಡುಗುವ ಎದೆ; ಅಳುಕು: ಹೆದರು; ಅದ್ರಿ: ಬೆಟ್ಟ; ಸಪ್ತ: ಏಳು; ಉದಧಿ: ಸಮುದ್ರ; ಉಕ್ಕು: ಮೇಲಕ್ಕೆ ಉಬ್ಬು, ಹಿಗ್ಗು; ಹೆಚ್ಚು: ಅಧಿಕ

ಪದವಿಂಗಡಣೆ:
ಆದಡ್+ಇನ್ನು+ ನಿರೀಕ್ಷಿಸ್+ಎನುತ +ನಿ
ನಾದದಲಿ +ನೆಲ +ಬಿರಿಯೆ +ಬಾಲದ
ಬೀದಿವರಿ+ ಬಾಸಣಿಸೆ +ಘನ +ನಕ್ಷತ್ರ+ ಮಂಡಲವ
ಮೇದಿನಿಯ +ಹೊರೆಕಾರರ್+ಅಳ್ಳೆದೆ
ಯಾದರ್+ಅಳುಕಿದವ್+ಅದ್ರಿಗಳು +ಸಪ್ತ
ಉದಧಿಗಳ್+ಉಕ್ಕಿದವೆನಲು+ ಹೆಚ್ಚಿದನು +ಹನುಮಂತ

ಅಚ್ಚರಿ:
(೧) ಹನುಮನ ದೊಡ್ಡ ಆಕಾರದ ವರ್ಣನೆ – ಮೇದಿನಿಯ ಹೊರೆಕಾರರಳ್ಳೆದೆ ಯಾದರಳುಕಿದವದ್ರಿಗಳು ಸಪ್ತೋದಧಿಗಳುಕ್ಕಿದವೆನಲು ಹೆಚ್ಚಿದನು ಹನುಮಂತ

ಪದ್ಯ ೩೬: ಭೀಮನು ಮತ್ತೆ ಹನುಮನ ಬಳೆ ಏನು ಬೇಡಿದನು?

ಅದರಿನೀ ದ್ವಾಪರದ ಕಡೆಯ
ಲ್ಲುದಿತ ಮಾನುಷ ಧರ್ಮ ಸಂಶಯ
ವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ
ಇದು ನಿಧಾನವು ಭೀಮಯೆನೆ ತ
ತ್ಪದಯುಗಕೆ ಮಗುಳೆರಗಿ ನಿರ್ಬಂ
ಧದಲಿ ಬಿನ್ನಹ ಮಾಡಲಮ್ಮೆನು ತೋರಬೇಕೆಂದ (ಅರಣ್ಯ ಪರ್ವ, ೧೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ದ್ವಾಪರಯುಗದ ಕೊನೆಯಲ್ಲಿರುವ ಮನುಷ್ಯರ ಧರ್ಮವು ಸಂಶಯಾಸ್ಪದ. ಈಗ ಮನುಷ್ಯರಿಗೆ ನಮ್ಮ ರೂಪವು ಕಾಣಿಸುವುದಿಲ್ಲ, ನಾನು ಇದ್ದುದನ್ನು ಇದ್ದಂತೆ ಹೇಳಿದ್ದೇನೆ ಎನ್ನಲು, ಭೀಮನು ಮತ್ತೆ ಹನುಮನ ಪಾದಯುಗಳಿಗೆ ನಮಸ್ಕರಿಸಿ, ನಾನು ನಿಮ್ಮನ್ನು ನಿರ್ಬಂಧಿಸಲಾರೆ, ಆದರೆ ನಿನ್ನ ರೂಪವನ್ನು ತೊರಿಸು ಎಂದು ಬೇಡಿದನು.

ಅರ್ಥ:
ಕಡೆ: ಕೊನೆ; ಉದಿತ: ಹುಟ್ಟಿದ; ಮಾನುಷ: ಮನುಷ್ಯರು; ಸಂಶಯ: ಅನುಮಾನ, ಸಂದೇಹ; ಧರ್ಮ: ಧಾರಣೆ ಮಾಡಿದುದು; ರೂಪ: ಆಕಾರ; ಗೋಚರ: ತೋರು; ಮರ್ತ್ಯ: ಮನುಷ್ಯ; ನಿಧಾನ: ವಿಳಂಬ, ನಿರ್ಧಾರ, ದೃಢ ಸಂಕಲ್ಪ; ಪದಯುಗ: ಎರಡು ಪಾದಗಳು; ಮಗುಳು: ಮತ್ತೆ; ಎರಗು: ನಮಸ್ಕರಿಸು; ನಿರ್ಬಂಧ: ಪಟ್ಟು ಹಿಡಿಯುವಿಕೆ, ದೃಢ ಸಂಕಲ್ಪ; ಬಿನ್ನಹ: ಕೋರಿಕೆ; ತೋರು: ಗೋಚರಿಸು;

ಪದವಿಂಗಡಣೆ:
ಅದರಿನ್+ಈ+ ದ್ವಾಪರದ +ಕಡೆಯಲ್
ಉದಿತ +ಮಾನುಷ +ಧರ್ಮ +ಸಂಶಯವ್
ಇದರೊಳ್+ಎಮ್ಮಯ +ರೂಪು +ಗೋಚರವಲ್ಲ+ ಮರ್ತ್ಯರಿಗೆ
ಇದು +ನಿಧಾನವು +ಭೀಮ+ಎನೆ+ ತತ್
ಪದಯುಗಕೆ+ ಮಗುಳೆರಗಿ+ ನಿರ್ಬಂ
ಧದಲಿ+ ಬಿನ್ನಹ +ಮಾಡಲಮ್ಮೆನು+ ತೋರಬೇಕೆಂದ

ಅಚ್ಚರಿ:
(೧) ಹನುಮನ ರೂಪವು ಏಕೆ ಕಾಣುವುದಿಲ್ಲ ವೆಂದು ಹೇಳುವ ಪರಿ – ದ್ವಾಪರದ ಕಡೆಯ
ಲ್ಲುದಿತ ಮಾನುಷ ಧರ್ಮ ಸಂಶಯವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ

ಪದ್ಯ ೩೫: ಕಲಿಯುಗದ ಮನುಜರ ಸ್ವಭಾವ ಎಂತಹುದು?

ಹೀನಸತ್ವರು ಸತ್ಯಧರ್ಮವಿ
ಹೀನರರ್ಥಪರಾಯಣರು ಕುಜ
ನಾನುರಕ್ತರು ವರ್ಣಧರ್ಮಾಶ್ರಮ ವಿದೂಷಕರು
ದಾನಿಗಳು ದುಷ್ಪಾತ್ರದಲಿ ಗುಣ
ಮೌನಿಗಳು ಗರ್ವಿತರು ಮಿಥ್ಯಾ
ಜ್ಞಾನಿಗಳು ಕಲಿಯುಗದ ಮನುಜರು ಭೀಮ ಕೇಳೆಂದ (ಅರಣ್ಯ ಪರ್ವ, ೧೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕಲಿಯುಗದ ಮನುಷ್ಯರ ಗುಣಗಳನ್ನು ಹೇಳುತ್ತಾ, ಕಲಿಯುಗದ ಮನುಷ್ಯರು ಹೀನವಾದ ಸತ್ವವುಳ್ಳವರು. ಸತ್ಯ ಧರ್ಮಗಳಿಲ್ಲದವರು, ಐಶ್ವರ್ಯ ಗಳಿಕೆಯೇ ಅವರ ಮುಖ್ಯವಾದ ಉದ್ದೇಶವಾಗಿರುತ್ತದೆ, ಅವರು ಕೆಟ್ಟಜನರನ್ನು ಪ್ರೀತಿಸುತ್ತಾರೆ. ವರ್ಣ ಧರ್ಮಗಳನ್ನು, ಆಶ್ರಮ ಧರ್ಮಗಳನ್ನೂ ವಿಶೇಷವಾಗಿ ದೂಷಿಸುತ್ತಾರೆ. ದುಷ್ಪಾತ್ರರಿಗೆ ದಾನ ಮಾಡುತ್ತಾರೆ, ಗುಣಗಳನ್ನು ಗುರುತಿಸಿದರೂ ಹೇಳುವುದಿಲ್ಲ. ಗರ್ವಿಗಳು, ಮಿಥ್ಯಾಜ್ಞಾನಿಗಳೂ ಆಗಿರುತ್ತಾರೆ ಎಂದು ಹನುಮನು ಭೀಮನಿಗೆ ತಿಳಿಸಿದನು.

ಅರ್ಥ:
ಹೀನ:ಕೀಳಾದ, ಕೆಟ್ಟ; ಸತ್ವ: ಶಕ್ತಿ, ಬಲ; ಸತ್ಯ: ದಿಟ; ಧರ್ಮ: ಧಾರಣೆ ಮಾಡಿದುದು; ವಿಹೀನ: ತೊರೆದ, ತ್ಯಜಿಸಿದ; ಅರ್ಥ: ಐಶ್ವರ್ಯ; ಪರಾಯಣ: ಪ್ರಮುಖವಾದ ಉದ್ದೇಶ, ಪರಮಗುರಿ; ಕುಜನ: ಕೆಟ್ಟಜನ, ದುಷ್ಟ; ಅನುರಕ್ತ: ಮೋಹಗೊಂಡ; ವರ್ಣ: ಬಣ, ಪಂಗಡ; ಆಶ್ರಮ: ಜೀವನದ ನಾಲ್ಕು ಘಟ್ಟಗಳು (ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸ); ವಿದೂಷಕ: ಹಾಸ್ಯದ, ತಮಾಷೆಯ, ದೂಷಣೆ ಮಾಡುವವನು; ದಾನಿ: ದಾನ ಮಾಡುವವನು; ದುಷ್ಪಾತ್ರ: ಕೆಟ್ಟಜನ; ಮೌನಿ: ಮಾತನ್ನಾಡದೆ ಇರುವವನು; ಗರ್ವ: ಸೊಕ್ಕು, ಹೆಮ್ಮೆ; ಮಿಥ್ಯ: ಸುಳ್ಳು; ಜ್ಞಾನಿ: ತಿಳಿದವನು, ವಿದ್ವಾಂಸ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ಕೇಳು: ಆಲಿಸು;

ಪದವಿಂಗಡಣೆ:
ಹೀನಸತ್ವರು +ಸತ್ಯಧರ್ಮ+ವಿ
ಹೀನರ್+ಅರ್ಥ+ಪರಾಯಣರು +ಕುಜನ
ಅನುರಕ್ತರು+ ವರ್ಣಧರ್ಮಾಶ್ರಮ+ ವಿದೂಷಕರು
ದಾನಿಗಳು +ದುಷ್ಪಾತ್ರದಲಿ +ಗುಣ
ಮೌನಿಗಳು +ಗರ್ವಿತರು+ ಮಿಥ್ಯಾ
ಜ್ಞಾನಿಗಳು +ಕಲಿಯುಗದ +ಮನುಜರು +ಭೀಮ +ಕೇಳೆಂದ

ಅಚ್ಚರಿ:
(೧) ದಾನಿಗಳು, ಮೌನಿಗಳು, ಜ್ಞಾನಿಗಳು – ಪ್ರಾಸ ಪದಗಳು
(೨) ವಿಹೀಣ, ವಿದೂಷಕ – ವಿ ಕಾರದ ಪದಗಳ ಬಳಕೆ
(೩) ಜೋಡಿ ಪದಗಳು – ದಾನಿಗಳು ದುಷ್ಪಾತ್ರದಲಿ; ಗುಣಮೌನಿಗಳು ಗರ್ವಿತರು

ಪದ್ಯ ೩೪: ಯಾವುದು ಯುಗಧರ್ಮ?

ಕೃತಯುಗದವರು ತ್ರೇತೆಯವರಿಂ
ದತಿ ಪರಾಕ್ರಮ ಯುಕ್ತರವರದು
ಭುತ ಬಲರು ತ್ರೇತೆಯವರಾ ದ್ವಾಪರ ಸ್ಥಿತಿಗೆ
ವಿತತ ಸತ್ವರು ಕಲಿಯುಗದ ದು
ರ್ಮತಿ ಮನುಷ್ಯವ್ರಾತ ಹೀನಾ
ಕೃತಿ ಕಣಾ ಯುಗ ಧರ್ಮ ಕೃತ ಮೊದಲಾಗಿ ಕಲಿಯುಗಕೆ (ಅರಣ್ಯ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹನುಮಂತ ಯುಗಧರ್ಮದ ಬಗ್ಗೆ ತಿಳಿಸುತ್ತಾ, ತ್ರೇತಾಯುಗದವರಿಗೆ ಹೋಲಿಸಿದರೆ ಕೃತಯುಗದವರು ಅದ್ಭುತ ಪರಾಕ್ರಮಶಾಲಿಗಳು, ಬಲಶಾಲಿಗಳು ಆಗಿರುತ್ತಾರೆ. ದ್ವಾಪರ ಯುಗದವರಿಗಿಂತ ತ್ರೇತಾಯುಗದವರು ಮಹಾಪರಾಕ್ರಮಶಾಲಿಗಳು. ಕಲಿಯುಗದ ಮನುಷ್ಯರು ದ್ವಾಪರಯುಗದವರಿಗೆ ಹೋಲಿಸಿದಾಗ ಹೀನ ಸತ್ವರು, ಇದು ಯುಗಧರ್ಮ ಎಂದು ತಿಳಿಸಿದನು.

ಅರ್ಥ:
ಯುಗ: ಕಾಲವನ್ನು ಅಳೆಯುವ ಪ್ರಮಾಣ; ಅತಿ: ಬಹಳ; ಪರಾಕ್ರಮ: ಶೌರ್ಯ; ಯುಕ್ತ: ಅನುಸರಣೆ, ತರ್ಕವಾದ; ಅದುಭುತ: ಆಶ್ಚರ್ಯ; ಬಲರು: ಬಲಶಾಲಿಗಳು; ಸ್ಥಿತಿ: ಇರವು, ಅಸ್ತಿತ್ವ; ವಿತತ: ವಿಸ್ತಾರವಾದ; ಸತ್ವ: ಸಾರ; ದುರ್ಮತಿ: ಕೆಟ್ಟ ಬುದ್ಧಿ; ವ್ರಾತ: ಗುಂಪು; ಮನುಷ್ಯ: ನರ; ಹೀನಾಕೃತಿ:ಕೀಳಾದ ಕೆಲಸ, ಕೆಟ್ಟ ಕೆಲಸ;

ಪದವಿಂಗಡಣೆ:
ಕೃತಯುಗದವರು+ ತ್ರೇತೆಯವರಿಂದ್
ಅತಿ +ಪರಾಕ್ರಮ+ ಯುಕ್ತರ್+ಅವರ್+ಅದು
ಭುತ+ ಬಲರು+ ತ್ರೇತೆಯವರಾ+ ದ್ವಾಪರ +ಸ್ಥಿತಿಗೆ
ವಿತತ+ ಸತ್ವರು +ಕಲಿಯುಗದ +ದು
ರ್ಮತಿ +ಮನುಷ್ಯ+ವ್ರಾತ+ ಹೀನಾ
ಕೃತಿ +ಕಣಾ +ಯುಗ +ಧರ್ಮ +ಕೃತ+ ಮೊದಲಾಗಿ +ಕಲಿಯುಗಕೆ

ಅಚ್ಚರಿ:
(೧) ಕಲಿಯುಗದ ಗುಣಧರ್ಮ – ಕಲಿಯುಗದ ದುರ್ಮತಿ ಮನುಷ್ಯವ್ರಾತ ಹೀನಾಕೃತಿ ಕಣಾ

ಪದ್ಯ ೩೩: ಹನುಮನು ಯುಗದ ಗುಣಧರ್ಮದ ಬಗ್ಗೆ ಏನು ಹೇಳಿದನು?

ಈ ಯುಗದ ಗುಣಧರ್ಮವಾ ತ್ತೇ
ತಾಯುಗದವರಿಗಿಅದದಾ ತ್ರೇ
ತಾಯುಗವು ಸರಿಯಲ್ಲ ಕೃತಯುಗದೇಕ ದೇಶದಲಿ
ಆ ಯುಗದಲಾ ಮನುಜರಾ ಸ
ತ್ವಾಯುವಾ ಸಾಮರ್ಥ್ಯವಾತರು
ವಾಯ ಯುಗದಲಿ ಸಲ್ಲದೆಂದನು ನಗುತ ಹನುಮಂತ (ಅರಣ್ಯ ಪರ್ವ, ೧೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಹನುಮಂತನು ಭೀಮನ ಕೋರಿಕೆಯನ್ನು ಕೇಳಿ, ಈ ದ್ವಾಪರ ಯುಗದ ಗುಣಧರ್ಮಗಳು ತ್ರೇತಾಯುಗದ ಗುಣಧರ್ಮಗಳಿಗೆ ಸಮನಲ್ಲ. ಕೃತಯುಗದ ಒಂದು ಪಾದದ ಗುಣ ಧರ್ಮಗಳು ತ್ರೇತಾಯುಗದವರಲ್ಲಿ ಕಡಿಮೆ, ಆಯಾ ಯುಗದ ಮನುಷ್ಯರ ಸತ್ವ, ಆಯಸ್ಸು, ಸಾಮರ್ಥ್ಯಗಳು ಮುಂದಿನ ಯುಗದವರಲ್ಲಿರುವುದಿಲ್ಲ ಎಂದು ಯುಗಗಳ ಗುಣಧರ್ಮದ ಬಗ್ಗೆ ತಿಳಿಸಿದನು.

ಅರ್ಥ:
ಯುಗ: ಕಾಲವನ್ನು ಅಳೆಯುವ ಪ್ರಮಾಣ; ಗುಣ: ನಡತೆ, ಸ್ವಭಾವ; ಧರ್ಮ: ಧಾರಣೆ ಮಾಡಿದುದು; ಐದೆ: ವಿಶೇಷವಾಗಿ; ದೇಶ: ರಾಷ್ಟ್ರ; ಮನುಜ: ಮನುಷ್ಯ; ಸತ್ವ: ಶಕ್ತಿ, ಬಲ; ಸಾಮರ್ಥ್ಯ: ದಕ್ಷತೆ, ಯೋಗ್ಯತೆ; ತರುವಾಯ: ರೀತಿ, ಕ್ರಮ; ಸಲ್ಲು: ನೆರವೇರು; ನಗುತ: ಸಂತಸ;

ಪದವಿಂಗಡಣೆ:
ಈ +ಯುಗದ +ಗುಣಧರ್ಮವಾ+ ತ್ರೇ
ತಾ+ಯುಗದವರಿಗ್+ಐದದ್+ಆ+ ತ್ರೇ
ತಾ+ಯುಗವು+ ಸರಿಯಲ್ಲ+ ಕೃತ+ಯುಗದೇಕ+ ದೇಶದಲಿ
ಆ +ಯುಗದಲಾ +ಮನುಜರಾ +ಸತ್ವ
ಆಯುವ್+ಆ+ ಸಾಮರ್ಥ್ಯವ್+ಆ+ತರು
ವಾಯ +ಯುಗದಲಿ+ ಸಲ್ಲದೆಂದನು +ನಗುತ +ಹನುಮಂತ

ಅಚ್ಚರಿ:
(೧) ಯುಗ – ೧-೪ ಸಾಲಿನ ೨ ಪದವಾಗಿ ಬಳಕೆ
(೨) ೧-೨ ಸಾಲಿನ ಕೊನೆ ಪದ ತ್ರೇ ಆಗಿರುವುದು