ಪದ್ಯ ೩೨: ಭೀಮನು ಯಾವ ರೂಪವನ್ನು ನೋಡಲು ಇಚ್ಛಿಸಿದನು?

ಅಂಜುವೆನು ಬಿನ್ನಹಕೆ ಬಾಂಧವ
ವಂಜಿಕೆಯ ನಭಕೊತ್ತುತಿದೆ ಕೇ
ಳಂಜನಾಸುತ ತನ್ನ ಸಲಿಗೆಯ ಮಾತ ಸಲಿಸುವೊಡೆ
ಅಂಜದೆಂಬೆನು ದನುಜಪುರಕೆ ಧ
ನಂಜಯನ ಹೊತ್ತಿಸಿದ ಖಳರನು
ಭಂಜಿಸಿದ ಸಾಗರವ ದಾಂಟಿದ ರೂಪ ತೋರೆಂದ (ಅರಣ್ಯ ಪರ್ವ, ೧೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಆಂಜನೇಯನ ಮಾತನ್ನು ಕೇಳಿ ಭೀಮನು, ಹೇ ಅಂಜನಾಸುತ ನಿನ್ನಲ್ಲಿ ನನ್ನದೊಂದು ಕೋರಿಕೆ, ಅದನ್ನು ಹೇಳಲು ನನಗೆ ಭಯವಾಗುತ್ತಿದ್ದರೂ ಸೊದರನ ಸಲಗೆಯನ್ನು ಬಳಸಿ ನನ್ನ ಅಂಜಿಕೆಯನ್ನು ಆಗಸಕ್ಕೆ ತೂರಿ, ನನ್ನ ಸಲಿಗೆಯ ಮಾತನ್ನು ನೀನು ನಡೆಸಿಕೊಡುವುದಾದರೆ, ಧೈರ್ಯವಾಗಿ ಹೇಳುತ್ತೇನೆ ಎಂದು ಬಿನ್ನವಿಸಿ, ಎಲೈ ಹನುಮ ನೀನು ಲಂಕೆಗೆ ಬೆಂಕಿಯನ್ನು ಹೊತ್ತಿಸಿದ, ರಾಕ್ಷಸರನ್ನು ಸಂಹರಿಸಿದ, ಸಮುದ್ರ ಲಂಘನ ಮಾಡಿದ ನಿನ್ನ ರೂಪವನ್ನು ತೋರಿಸು ಎಂದು ಕೇಳಿದನು.

ಅರ್ಥ:
ಅಂಜು: ಹೆದರು; ಬಿನ್ನಹ: ಕೋರಿಕೆ; ಬಾಂಧವ: ಅಣ್ಣ ತಮ್ಮಂದಿರು; ನಭ: ಆಗಸ; ಒತ್ತು: ತಳ್ಳು; ಸುತ: ಮಗ; ಸಲಿಗೆ: ನಿಕಟ ಸಂಪರ್ಕ, ಸದರ; ಸಲಿಸು: ಪೂರೈಸು; ಒಪ್ಪಿಸು; ದನುಜಪುರ: ರಾಕ್ಷಸರ ಊರು; ಧನಂಜಯ: ಅಗ್ನಿ; ಹೊತ್ತಿಸು: ಉರಿಸು, ಪ್ರಜ್ವಲಿಸು; ಖಳ: ದುಷ್ಟ; ಭಂಜಿಸು: ನಿವಾರಿಸು; ಸೋಲಿಸು; ಸಾಗರ: ಸಮುದ್ರ; ದಾಂಟು: ಹಾರು; ರೂಪ: ಆಕಾರ; ತೋರು: ಗೋಚರಿಸು;

ಪದವಿಂಗಡಣೆ:
ಅಂಜುವೆನು+ ಬಿನ್ನಹಕೆ+ ಬಾಂಧವವ್
ಅಂಜಿಕೆಯ +ನಭಕ್+ಒತ್ತುತಿದೆ+ ಕೇಳ್
ಅಂಜನಾಸುತ +ತನ್ನ +ಸಲಿಗೆಯ+ ಮಾತ +ಸಲಿಸುವೊಡೆ
ಅಂಜದೆಂಬೆನು +ದನುಜಪುರಕೆ+ ಧ
ನಂಜಯನ +ಹೊತ್ತಿಸಿದ+ ಖಳರನು
ಭಂಜಿಸಿದ +ಸಾಗರವ+ ದಾಂಟಿದ +ರೂಪ +ತೋರೆಂದ

ಅಚ್ಚರಿ:
(೧) ಅಂಜು ಪದದ ಬಳಕೆ, ಅಂಜು, ಅಂಜಿಕೆ, ಅಂಜನಾಸುತ
(೨) ಲಂಕೆಯನ್ನು ದನುಜಪುರ ಎಂದು ಕರೆದಿರುವುದು

ಪದ್ಯ ೩೧: ಆಂಜನೇಯನು ಏನು ಹೇಳಿದನು?

ಲಲಿತ ವಚನಕೆ ನಿನ್ನ ಭುಜದ
ಗ್ಗಳಿಕೆಗಾ ಮೆಚ್ಚಿದೆನು ಹಿಮಕರ
ಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ
ಗೆಲವು ನಿಮಗಹಿತರಲಿ ಪಾರ್ಥನ
ಕೆಲವು ದಿವಸಕೆ ಕಾಂಬಿರೆಮಗೆಯು
ಫಲಿಸಿತೀದಿನವೆಂದು ಕೊಂಡಾಡಿದನು ಹನುಮಂತ (ಅರಣ್ಯ ಪರ್ವ, ೧೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಿನ್ನ ಸುಂದರವಾದ ವಿನಯ ವಚನಗಳಿಗೆ, ಬಾಹುಬಲಕ್ಕೂ ನಾನು ಪ್ರಸನ್ನನಾಗಿದ್ದೇನೆ. ವಿಮಲವಾದ ಚಂದ್ರವಂಶದಲ್ಲಿ ಪಾಂಡುರಾಜನ ಮಕ್ಕಳಾಗಿ ಹುಟ್ಟಿದ ನೀವೈವರು ಚಂದ್ರವಂಶವನ್ನು ಪಾವನಗೊಳಿಸಿರುವಿರಿ, ನೀವು ಶತ್ರುಗಳನ್ನು ಜಯಿಸುವಿರಿ, ಕೆಲವೇ ದಿನಗಳಲ್ಲಿ ಅರ್ಜುನನನ್ನೂ ನೋಡುವಿರಿ, ನಮಗೂ ಇದು ಸುದಿನ ಸತ್ಫಲವನ್ನು ಕೊಟ್ಟಿದೆ ಎಂದು ಹನುಮಂತನು ಕೊಂಡಾಡಿದನು.

ಅರ್ಥ:
ಲಲಿತ: ಸುಂದರ; ವಚನ: ಮಾತು, ನುಡಿ; ಭುಜ: ಬಾಹು, ಬಲ; ಅಗ್ಗಳಿಕೆ: ಶ್ರೇಷ್ಠ; ಮೆಚ್ಚು: ಪ್ರಶಂಶಿಸು; ಹಿಮಕರ: ಚಂದ್ರ; ಕುಲ: ವಂಶ; ಪವಿತ್ರ: ಶುದ್ಧ; ಜನಿಸು: ಹುಟ್ಟು; ಜಠರ: ಹೊಟ್ಟೆ; ಗೆಲುವು: ಜಯ; ಅಹಿತ: ವೈರಿ; ಕೆಲವು: ಸ್ವಲ್ಪ; ದಿವಸ: ದಿನ; ಕಾಂಬಿರಿ: ಕಾಣುವಿರಿ; ಫಲಿಸು: ದೊರೆತುದು; ಕೊಂಡಾಡು: ಪ್ರಶಂಶಿಸು;

ಪದವಿಂಗಡನೆ:
ಲಲಿತ +ವಚನಕೆ +ನಿನ್ನ +ಭುಜದ್
ಅಗ್ಗಳಿಕೆಗಾ+ ಮೆಚ್ಚಿದೆನು+ ಹಿಮಕರ
ಕುಲ +ಪವಿತ್ರರು +ಜನಿಸಿದಿರಲಾ+ ಪಾಂಡು +ಜಠರದಲಿ
ಗೆಲವು +ನಿಮಗ್+ಅಹಿತರಲಿ +ಪಾರ್ಥನ
ಕೆಲವು +ದಿವಸಕೆ+ ಕಾಂಬಿರ್+ಎಮಗೆಯು
ಫಲಿಸಿತ್+ಈದಿನವ್+ಎಂದು +ಕೊಂಡಾಡಿದನು +ಹನುಮಂತ

ಅಚ್ಚರಿ:
(೧) ಭೀಮನನ್ನು ಹೊಗಳಿದ ಪರಿ – ಲಲಿತ ವಚನಕೆ ನಿನ್ನ ಭುಜದಗ್ಗಳಿಕೆಗಾ ಮೆಚ್ಚಿದೆನು ಹಿಮಕರ
ಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ

ಪದ್ಯ ೩೦: ಭೀಮನು ತನ್ನ ಸಂತಸವನ್ನು ಹೇಗೆ ವ್ಯಕ್ತಪಡಿಸಿದನು?

ತೀದುದೆಮಗೆ ವನಪ್ರವಾಸದ
ಖೇದವರ್ಜುನನಗಲಿಕೆಯ ದು
ರ್ಭೇದ ವಿಷವಿಂದಿಳಿದು ಹೋದುದು ಹರಮಹಾದೇವ
ಹೋದ ರಾಜ್ಯಭ್ರಂಶ ಬಹಳ ವಿ
ಷಾದ ಬೀತುದು ನಿಮ್ಮ ಕಾರು
ಣ್ಯೋದಯವು ನಮಗಾಯ್ತಲಾ ಚರಿತಾರ್ಥರಾವೆಂದ (ಅರಣ್ಯ ಪರ್ವ, ೧೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಮಗೆ ವನವಾಸದ ದುಃಖವು ತೀರಿತು, ಸಹಿಸಲಾಗದ ಅರ್ಜುನನ ಅಗಲಿಕೆಯ ವಿಷವೂ ಕಡಿಮೆಯಾಯಿತು, ರಾಜ್ಯವನ್ನು ಕಳೆದುಕೊಂಡ ಖೇದವು ಇಲ್ಲವಾಯಿತು, ನಿಮ್ಮ ದರ್ಶನದಿಂದ ನಾವು ಪಡೆಯಬೇಕಾದುದೆಲ್ಲವನ್ನೂ ಪಡೆದಂತಾಯಿತು ಎಂದು ಭೀಮನು ಹೇಳಿದನು.

ಅರ್ಥ:
ತೀದು: ತೀರಿತು; ವನ: ಕಾಡು; ಪ್ರವಾಸ: ಸಂಚಾರ; ಖೇದ; ದುಃಖ; ಅಗಲಿಕೆ: ಬೇರೆ ಹೋಗು, ತೊರೆ; ದುರ್ಭೇದ: ಒಡೆಯಲು ಕಷ್ಟವಾದ; ವಿಷ: ಗರಲ; ಇಳಿ: ಕಡಿಮೆಯಾಗು; ಹರ: ಶಿವ; ಮಹಾದೇವ: ಶಂಕರ; ರಾಜ್ಯಭ್ರಂಶ: ರಾಜ್ಯದ ಅಗಲಿಕೆ; ವಿಷಾದ: ದುಃಖ; ಬೀತು: ಕಳೆದುಹೋಯಿತು; ಕಾರುಣ್ಯ: ದಯೆ; ಚರಿತಾರ್ಥ: ಕೃತಾರ್ಥ, ಧನ್ಯ;

ಪದವಿಂಗಡಣೆ:
ತೀದುದ್+ಎಮಗೆ +ವನ+ಪ್ರವಾಸದ
ಖೇದವ್+ಅರ್ಜುನನ್+ಅಗಲಿಕೆಯ +ದು
ರ್ಭೇದ +ವಿಷವಿಂದ್+ಇಳಿದು +ಹೋದುದು +ಹರ+ಮಹಾದೇವ
ಹೋದ +ರಾಜ್ಯಭ್ರಂಶ +ಬಹಳ +ವಿ
ಷಾದ +ಬೀತುದು +ನಿಮ್ಮ +ಕಾರು
ಣ್ಯೋದಯವು +ನಮಗಾಯ್ತಲಾ +ಚರಿತಾರ್ಥರಾವೆಂದ

ಅಚ್ಚರಿ:
(೧) ಖೇದ, ವಿಷಾದ – ಸಾಮಾರ್ಥ ಪದ

ಪದ್ಯ ೨೯: ಭೀಮನು ಆಂಜನೇಯನನ್ನು ಹೇಗೆ ಉಪಚರಿಸಿದನು?

ಹಿರಿಯರೆನಗಿಬ್ಬರು ಯುಧಿಷ್ಠಿರ
ಧರಣಿಪತಿ ನೀನೊಬ್ಬರೈಯ್ಯಂ
ದಿರುಗಳಿಬ್ಬರು ಮಾರುತನು ನೀನೊಬ್ಬನಿಂದೆನಗೆ
ಗುರುಗಳಿಬ್ಬರು ಬಾದರಾಯಣ
ಪರಮಋಷಿ ನೀನೊಬ್ಬನೆಂದುಪ
ಚರಿಸಿದನು ಪವಮಾನನಂದನನಂಜನಾಸುತನ (ಅರಣ್ಯ ಪರ್ವ, ೧೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ಹನುಮಂತನಿಗೆ, ನನಗಿಬ್ಬರು ಅಣ್ಣಂದಿರು, ಧರ್ಮಜ ಮತ್ತು ನೀನು, ನನಗಿಬ್ಬರು ತಂದೆಯರು, ವಾಯುದೇವ ಮತ್ತು ನೀನು, ನನಗಿಬ್ಬರು ಗುರುಗಳು, ವ್ಯಾಸ ಮಹರ್ಷಿಗಳು ಮತ್ತು ನೀನು ಎಂದು ಉಪಚಾರದ ಮಾತುಗಳನ್ನು ಭೀಮನು ನುಡಿದನು.

ಅರ್ಥ:
ಹಿರಿಯ: ದೊಡ್ಡವ; ಧರಣಿಪತಿ: ರಾಜ; ಅಯ್ಯ: ತಂದೆ; ಮಾರುತ: ವಾಯು; ಗುರು: ಆಚಾರ್ಯ; ಬಾದರಾಯಣ: ವ್ಯಾಸ; ಪರಮ: ಶ್ರೇಷ್ಠ; ಋಷಿ: ಮುನಿ; ಉಪಚಾರ: ಸತ್ಕಾರ; ಪವಮಾನ: ವಾಯು; ನಂದನ: ಮಗ; ಅಂಜನಾಸುತ: ಆಂಜನೇಯ;

ಪದವಿಂಗಡಣೆ:
ಹಿರಿಯರ್+ಎನಗಿಬ್ಬರು +ಯುಧಿಷ್ಠಿರ
ಧರಣಿಪತಿ +ನೀನೊಬ್ಬರ್+ಅಯ್ಯಂ
ದಿರುಗಳ್+ಇಬ್ಬರು +ಮಾರುತನು +ನೀನೊಬ್ಬನ್+ಇಂದೆನಗೆ
ಗುರುಗಳಿಬ್ಬರು +ಬಾದರಾಯಣ
ಪರಮಋಷಿ +ನೀನೊಬ್ಬನೆಂದ್+ಉಪ
ಚರಿಸಿದನು +ಪವಮಾನನಂದನನ್+ಅಂಜನಾಸುತನ

ಅಚ್ಚರಿ:
(೧) ಭೀಮ ಮತ್ತು ಆಂಜನೇಯರನ್ನು ಒಟ್ಟಿಗೆ ಕರೆದ ಪರಿ – ಪವಮಾನನಂದನನಂಜನಾಸುತನ

ಪದ್ಯ ೨೮: ಭೀಮನು ಹನುಮನನ್ನು ಹೇಗೆ ಹೊಗಳಿದನು?

ಜರುಗಿನಲಿ ಜಾಂಬೂನದದ ಸಂ
ವರಣೆಕಾರಂಗೆಡೆಯೊಳಿರ್ದುದು
ಪರಮನಿಧಿ ಮಝಪೂತು ಪುಣ್ಯೋದಯದ ಫಲವೆನಗೆ
ಸರಸಿಯೆತ್ತಲು ಗಂಧವೆತ್ತಲು
ಬರವಿದೆತ್ತಣದೆತ್ತ ಘಟಿಸಿದು
ದರರೆ ಮಾರುತಿ ತಂದೆ ನೀನೆಂದೆನುತ ಬಣ್ಣಿಸಿದ (ಅರಣ್ಯ ಪರ್ವ, ೧೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಜರುಗಿನಲ್ಲಿ ಚಿನ್ನದ ಕಣಗಳನ್ನು ಆಯ್ದುಕೊಳ್ಳುತ್ತಿದ್ದವನಿಗೆ ಹತ್ತಿರದಲ್ಲೇ ಮಹಾನಿಧಿಯು ಸಿಕ್ಕಂತಾಯಿತು. ನನ್ನ ಪುಣ್ಯದ ಫಲವು ಉದಿಸುವ ಕಾಲವಿದು. ಎಲ್ಲಿಯ ಸರೋವರ? ಎಲ್ಲಿಯ ಸುಗಂಧ? ಅದನ್ನನುಸರಿಸಿ ನಾನೇಕೆ ಈ ದಾರಿಯಲ್ಲಿ ಬಂದೆ, ಇವೆಲ್ಲಾ ಒಂದುಗೂಡಿ ತಂದೆ ಆಂಜನೇಯ ನಿನ್ನ ದರ್ಶನವಾಯಿತು ಎಂದು ಭೀಮನು ಹನುಮಂತನನ್ನು ಹೊಗಳಿದನು.

ಅರ್ಥ:
ಜರುಗು: ಚಿನ್ನದ ಸಣ್ಣ ಸಣ್ಣ ಕಣಗಳು ಬೆರೆತಿರುವ ಮಣ್ಣು; ಜಾಂಬೂನದ: ಚಿನ್ನ, ಸುವರ್ಣ; ಸಂವರಣೆ: ಸಂಗ್ರಹ, ಶೇಖರಣೆ; ಪರಮನಿಧಿ: ಶ್ರೇಷ್ಠವಾದ ಐಶ್ವರ್ಯ; ಮಝಪೂತು: ಭಲೇ; ಪುಣ್ಯ: ಸದಾಚಾರ; ಉದಯ: ಹುಟ್ಟು; ಫಲ: ಪ್ರಯೋಜನ; ಸರಸಿ: ಸರೋವರ; ಗಂಧ: ಪರಿಮಳ; ಬರವು: ಆಗಮನ; ಎತ್ತಣ: ಎಲ್ಲಿ; ಘಟಿಸು: ಸೇರು, ಕೂಡು; ಮಾರುತಿ: ಹನುಮಂತ; ತಂದೆ: ಪಿತ; ಬಣ್ಣಿಸು: ವಿವರಿಸು;

ಪದವಿಂಗಡಣೆ:
ಜರುಗಿನಲಿ +ಜಾಂಬೂನದದ+ ಸಂ
ವರಣೆಕಾರಂಗೆಡೆಯೊಳ್+ಇರ್ದುದು
ಪರಮನಿಧಿ+ ಮಝಪೂತು+ ಪುಣ್ಯೋದಯದ +ಫಲವೆನಗೆ
ಸರಸಿಯೆತ್ತಲು +ಗಂಧವೆತ್ತಲು
ಬರವಿದ್+ಎತ್ತಣದೆತ್ತ+ ಘಟಿಸಿದುದ್
ಅರರೆ +ಮಾರುತಿ +ತಂದೆ +ನೀನೆಂದೆನುತ+ ಬಣ್ಣಿಸಿದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜರುಗಿನಲಿ ಜಾಂಬೂನದದ ಸಂವರಣೆಕಾರಂಗೆಡೆಯೊಳಿರ್ದುದು
ಪರಮನಿಧಿ