ಪದ್ಯ ೨೬: ಭೀಮನು ಹನುಮನಿಗೇಕೆ ನಮಸ್ಕರಿಸಿದ?

ಬಳಿಕ ಸೌಗಂಧಿಕದ ಪವನನ
ಬಳಿವಿಡಿದು ನಾ ಬಂದೆನೆಮ್ಮಯ
ಲಲನೆ ಕಾಮಿಸಿದಳು ಸಹಸ್ರದಳಾಬ್ಜದರ್ಶನವ
ತಿಳಿಯಲಿದು ವೃತ್ತಾಂತ ನೀನ
ಸ್ಖಲಿತ ಬಲ ನೀನಾರು ನಿನ್ನನು
ತಿಳುಹಬೇಕು ಮಹಾತ್ಮ ಕಪಿ ನೀನೆನುತ ಕೈಮುಗಿದ (ಅರಣ್ಯ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಮನು ತನ್ನ ಪರಿಚಯವನ್ನು ಮುಂದುವರಿಸುತ್ತಾ, ಈ ಸಹಸ್ರದಳ ಪದ್ಮದ ಸುಗಂಧವು ಗಾಳಿಯೊಡನೆ ಕೂಡಿ ನಮ್ಮಬಳಿ ಬರಲು, ನಮ್ಮ ಪತ್ನಿ ದ್ರೌಪದಿ ಇದನ್ನು ಆಘ್ರಣಿಸಿ ಮೋಹಿತಳಾಗಿ ಇದನ್ನು ನೋಡಲು ಬಯಸಿದಳು. ಆ ಸುಗಂಧದ ಗಾಳಿಯ ಜಾಡಿನಲ್ಲಿ ನಾನು ಬಂದಿದ್ದೇನೆ. ಇದು ನನ್ನ ವಿಚಾರ. ಎಲೈ ಮಹಾ ಪರಾಕ್ರಮಶಾಲಿಯಾದ ಮಹಾತ್ಮನಾದ ಕಪಿಯೇ, ನೀವು ಯಾರೆಂದು ತಿಳಿಸಿ ಎಂದು ಭೀಮನು ನಮಸ್ಕರಿಸುತ್ತಾ ಹನುಮನನ್ನು ಕೇಳಿದನು.

ಅರ್ಥ:
ಬಳಿಕ: ನಂತರ; ಸೌಗಂಧಿಕ: ಪರಿಮಳದಿಂದ ಕೂಡಿದುದು; ಪವನ: ಗಾಳಿ, ವಾಯು; ಬಳಿ: ಹತ್ತಿರ; ಹಿಡಿ: ಗ್ರಹಿಸು; ಬಂದೆ: ಆಗಮಿಸು; ಲಲನೆ: ಹೆಣ್ಣು, ಸ್ತ್ರೀ; ಕಾಮಿಸು: ಇಚ್ಛಿಸು; ಸಹಸ್ರ: ಸಾವಿರ; ದಳ: ಎಸಳು; ಅಬ್ಜ: ತಾವರೆ; ದರ್ಶನ: ನೋಟ; ತಿಳಿ: ಅರಿ; ವೃತ್ತಾಂತ: ವಾರ್ತೆ; ಅಸ್ಖಲಿತ: ಚಲನೆಯಿಲ್ಲದ; ಬಲ: ಶಕ್ತಿ; ತಿಳುಹ: ಅರಿತುಕೊಳ್ಳು; ಮಹಾತ್ಮ: ಶ್ರೇಷ್ಠ; ಕಪಿ: ಮಂಗ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಬಳಿಕ +ಸೌಗಂಧಿಕದ +ಪವನನ
ಬಳಿವಿಡಿದು +ನಾ +ಬಂದೆನ್+ಎಮ್ಮಯ
ಲಲನೆ +ಕಾಮಿಸಿದಳು +ಸಹಸ್ರ+ದಳ+ಅಬ್ಜ+ದರ್ಶನವ
ತಿಳಿಯಲಿದು +ವೃತ್ತಾಂತ +ನೀನ್
ಅಸ್ಖಲಿತ +ಬಲ+ ನೀನಾರು+ ನಿನ್ನನು
ತಿಳುಹಬೇಕು +ಮಹಾತ್ಮ +ಕಪಿ+ ನೀನ್+ಎನುತ +ಕೈಮುಗಿದ

ಅಚ್ಚರಿ:
(೧) ಭೀಮನು ನಡೆದು ಬಂದ ಪರಿ – ಸೌಗಂಧಿಕದ ಪವನನ ಬಳಿವಿಡಿದು ನಾ ಬಂದೆನ್

ನಿಮ್ಮ ಟಿಪ್ಪಣಿ ಬರೆಯಿರಿ