ಪದ್ಯ ೨೨: ಭೀಮನು ಏನೆಂದು ಚಿಂತಿಸಿದನು?

ಈತ ಕಪಿರೂಪದ ಸುರೇಂದ್ರನೊ
ಭೂತನಾಥನೊ ಮೇಣು ವಿಮಲ
ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ
ಏತರವು ನಮ್ಮುಬ್ಬಟೆಗಳಿಂ
ದೀತ ಗೆಲಿದನು ಬಾಲದಲಿ ಸ
ತ್ವಾತಿಶಯವಿನ್ನೀತಗೆಂತುಟೊ ಶಿವ ಶಿವಾಯೆಂದ (ಅರಣ್ಯ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಹನುಮನ ಬಾಲವನ್ನು ಸ್ವಲ್ಪವೂ ಆಲ್ಲಾಡಿಸಲಾಗದೆ ಆಶ್ಚರ್ಯಗೊಂಡ ಭೀಮನು, ಇವನಾರಿರಬಹುದು? ಕಪಿರೂಪವನ್ನು ತಾಳಿದ ಇಂದ್ರನೋ, ಶಿವನೋ ಇರಬೇಕು, ಅಥವಾ ತ್ರೇತಾಯುಗದಲ್ಲಿ ರಾವಣನ ಜೊತೆ ಹಾಣಾಹಾಣಿಗಿಳಿದ ಹನುಮಂತನಿರಬಹುದೇ? ನಾವು ಮಹಾಸತ್ವಶಾಲಿಗಳೆಂದು ಮೆರೆಯುತ್ತೇವೆ, ಆದರೆ ಈತನು ನಮ್ಮನ್ನು ಬಾಲದಿಂದಲೇ ಗೆದ್ದನು. ಇವನಿಗೆ ಇನ್ನೆಷ್ಟು ಅತಿಶಯ ಸತ್ವವಿರಬೇಕು ಶಿವ ಶಿವಾ ಎಂದು ಭೀಮನು ಚಿಂತಿಸಿದನು.

ಅರ್ಥ:
ಕಪಿ: ಮಂಗ; ರೂಪ: ಆಕಾರ; ಸುರೇಂದ್ರ: ಇಂದ್ರ; ಭೂತನಾಥ: ಶಿವ; ಮೇಣು: ಅಥವ; ವಿಮಲ: ಶುದ್ಧ; ತ್ರೇತ: ಯುಗದ ಹೆಸರು; ದಶಮುಖ: ಹತ್ತು ಮುಖವುಳ್ಳ (ರಾವಣ); ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಉಬ್ಬಟೆ: ಅತಿಶಯ, ಹಿರಿಮೆ; ಗೆಲುವು: ಜಯ; ಬಾಲ: ಪುಚ್ಛ; ಸತ್ವ: ಶಕ್ತಿ, ಬಲ; ಅತಿಶಯ: ಹೆಚ್ಚು;

ಪದವಿಂಗಡಣೆ:
ಈತ +ಕಪಿ+ರೂಪದ+ ಸುರೇಂದ್ರನೊ
ಭೂತನಾಥನೊ +ಮೇಣು +ವಿಮಲ
ತ್ರೇತೆಯಲಿ +ದಶಮುಖನ+ ಹಾಣಾಹಾಣಿಗಳ+ ಕಪಿಯೊ
ಏತರವು +ನಮ್ಮ್+ಉಬ್ಬಟೆಗಳಿಂದ್
ಈತ +ಗೆಲಿದನು +ಬಾಲದಲಿ +ಸತ್ವ
ಅತಿಶಯವಿನ್+ಈತಗ್+ಎಂತುಟೊ +ಶಿವ+ ಶಿವಾಯೆಂದ

ಅಚ್ಚರಿ:
(೧) ಇಂದ್ರ, ಶಿವನಿಗೆ ಹೋಲಿಸುವ ಪರಿ – ಈತ ಕಪಿರೂಪದ ಸುರೇಂದ್ರನೊ ಭೂತನಾಥನೊ
(೨) ಹನುಮನನ್ನು ಹೋಲಿಸುವ ಪರಿ – ವಿಮಲ ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ

ನಿಮ್ಮ ಟಿಪ್ಪಣಿ ಬರೆಯಿರಿ