ಪದ್ಯ ೭: ಭೀಮನು ಕಾಡನ್ನು ಹೇಗೆ ಹೊಕ್ಕನು?

ಬಿಗಿದು ಬತ್ತಳಿಕೆಯನು ಹೊನ್ನಾ
ಯುಗದ ಖಡ್ಗ ಶರಾಸನವ ಕೊಂ
ಡಗಧರನ ನೆನೆದನಿಲಸುತ ಹೊರವಂಟನಾಶ್ರಮವ
ಬಿಗಿದು ಹೊಕ್ಕನರಣ್ಯವನು ಬೊ
ಬ್ಬೆಗಳ ಬಿರುದಿನ ಬಾಹು ಸತ್ವದ
ವಿಗಡ ಭೀಮನ ಕಾಲ್ದುಳಿಗೆ ಕಂಪಿಸಿತು ವನನಿವಹ (ಅರಣ್ಯ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಮನು ತನ್ನ ಬತ್ತಳಿಕೆಯನ್ನು ಕಟ್ಟಿಕೊಂಡು, ಚಿನ್ನದ ಹಿಡಿಕೆಯ ಖಡ್ಗವನ್ನು ತೆಗೆದು, ಬಿಲ್ಲನ್ನು ಹೆದೆಯೇರಿಸಿಕೊಂಡು ಶ್ರೀಕೃಷ್ಣನನ್ನು ಮನಸ್ಸಿನಲ್ಲಿ ನೆನೆದು ಆಶ್ರಮದಿಂದ ಹೊರಹೊಂಟನು. ಜೋರಾಗಿ ಗರ್ಜಿಸುತ್ತಾ, ಕಾಡನ್ನು ಹೊಕ್ಕನು. ಆತನ ಕಾಲ್ತುಳಿತಕ್ಕೆ ಕಾಡು ನಡುಗಿತು.

ಅರ್ಥ:
ಬಿಗಿ: ಕಟ್ಟು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಹೊನ್ನು: ಚಿನ್ನ; ಖಡ್ಗ: ಕತ್ತಿ; ಶರಾಸನ: ಬಿಲ್ಲು; ಕೊಂಡು: ತೆಗೆದು; ಅಗಧರ: ಕೃಷ್ಣ; ಅಗ: ಬೆಟ್ಟ; ಧರ: ಹಿಡಿದಿರುವ; ನೆನೆದು: ಜ್ಞಾಪಿಸಿಕೊಂಡು; ಅನಿಲಸುತ: ವಾಯುಪುತ್ರ; ಹೊರವಂಟ: ತೆರಳಿದ; ಆಶ್ರಮ: ಕುಟೀರ; ಹೊಕ್ಕು: ಸೇರು; ಅರಣ್ಯ: ಕಾಡು; ಬೊಬ್ಬೆ: ಜೋರಾಗಿ ಕೂಗು; ಬಿರುಸು: ಜೋರು, ರಭಸ; ಬಾಹು: ಭುಜ; ಸತ್ವ: ಶಕ್ತಿ; ವಿಗಡ: ಶೌರ್ಯ, ಪರಾಕ್ರಮ; ತುಳಿತ: ಮೆಟ್ಟು; ಕಾಲು: ಪಾದ; ಕಂಪಿಸು: ಅಲುಗಾಡು; ವನ: ಕಾಡು; ನಿವಹ: ಗುಂಪು;

ಪದವಿಂಗಡಣೆ:
ಬಿಗಿದು +ಬತ್ತಳಿಕೆಯನು +ಹೊನ್ನಾ
ಯುಗದ +ಖಡ್ಗ +ಶರಾಸನವ +ಕೊಂಡ್
ಅಗಧರನ +ನೆನೆದ್+ಅನಿಲಸುತ +ಹೊರವಂಟನ್+ಆಶ್ರಮವ
ಬಿಗಿದು +ಹೊಕ್ಕನ್+ಅರಣ್ಯವನು +ಬೊ
ಬ್ಬೆಗಳ +ಬಿರುದಿನ +ಬಾಹು +ಸತ್ವದ
ವಿಗಡ+ ಭೀಮನ +ಕಾಲ್ದುಳಿಗೆ +ಕಂಪಿಸಿತು +ವನ+ನಿವಹ

ಅಚ್ಚರಿ:
(೧) ಕೃಷ್ಣನನ್ನು ಅಗಧರ, ಭೀಮನನ್ನು ಅನಿಲಸುತ ಎಂದು ಹೇಳಿರುವುದು
(೨) ಭೀಮನ ಬಲವನ್ನು ತಿಳಿಸುವ ಪರಿ – ಬೊಬ್ಬೆಗಳ ಬಿರುದಿನ ಬಾಹು ಸತ್ವದ ವಿಗಡ ಭೀಮನ ಕಾಲ್ದುಳಿಗೆ ಕಂಪಿಸಿತು ವನನಿವಹ

ನಿಮ್ಮ ಟಿಪ್ಪಣಿ ಬರೆಯಿರಿ