ಪದ್ಯ ೯: ಭೀಮನು ಅಡವಿಯಲ್ಲಿ ಹೇಗೆ ನಡೆದನು?

ಮುಡುಹು ಸೋಂಕಿದೊಡಾ ಮಹಾದ್ರಿಗ
ಳೊಡನೆ ತೋರಹ ತರು ಕೆಡೆದುವಡಿ
ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು
ಒಡೆದುದಿಳೆ ಬೊಬ್ಬಿರಿತಕೀತನ
ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು ಮೀರಿ ನಡೆದನು ಭೀಮನಡವಿಯಲಿ (ಅರಣ್ಯ ಪರ್ವ, ೧೧ ಸಂಧಿ, ೯ ಪದ್ಯ)

ತಾತ್ಪರ್ಯ:
ಭುಜದ ತುದಿಯು ಸೋಂಕಿದ ಮಾತ್ರಕ್ಕೆ ಮಹಾ ಪರ್ವತಗಳು, ವೃಕ್ಷಗಳು ಕೆಳಕ್ಕೆ ಬಿದ್ದವು. ಹೆಜ್ಜೆಯನ್ನಿಟ್ಟ ಮಾತ್ರಕ್ಕೆ ಚಿಕ್ಕ ಪುಟ್ಟ ದಿನ್ನೆಗಳು ಭೂಮಿಯೂ ತಗ್ಗಿ ಹೋದವು. ಇವನು ಹಾಕಿದ ಕೇಕೆಗೆ ಭೂಮಿ ಬಿರುಕು ಬಿಟ್ಟಿತು. ಇವನ ತೊಡೆಯ ಗಾಳಿಗೆ ಚಿಕ್ಕ ಮರಗಳು, ಗಿಡಗಳು, ಹಾರಿಹೋದವು. ಈ ರೀತಿ ಭೀಮನು ಅಡವಿಯಲ್ಲಿ ದಾಟುತ್ತಾ ನಡೆದನು.

ಅರ್ಥ:
ಮುಡುಹು: ಹೆಗಲು, ಭುಜಾಗ್ರ; ಸೋಂಕು: ಮುಟ್ಟು, ಸ್ಪರ್ಶ; ಮಹಾದ್ರಿ: ದೊಡ್ಡ ಬೆಟ್ಟ; ತೋರು: ಗೋಚರಿಸು; ತರು: ಮರ; ಕೆಡೆ: ಬೀಳು, ಕುಸಿ; ಅಡಿಯಿಡು: ಹೆಜ್ಜೆಯಿಡು; ಹೆಜ್ಜೆ: ಪಾದ; ತಗ್ಗು: ಹಳ್ಳ, ಗುಣಿ; ನೆಲ: ಭೂಮಿ; ಸಹಿತ: ಜೊತೆ; ಹೆದ್ದೆವರು: ದೊಡ್ಡ ದಿಣ್ಣೆ; ಒಡೆದು: ಸೀಳು; ಇಳೆ: ಭೂಮಿ; ಬೊಬ್ಬಿರಿತ: ಜೋರಾದ ಕೂಗು, ಗರ್ಜನೆ; ತೊಡೆ: ಊರು; ಗಾಳಿ: ವಾಯು; ಹಾರು: ಲಂಘಿಸು; ಕಿರುಗಿಡ: ಚಿಕ್ಕ ಗಿಡ; ಮರ: ತರು; ಮೀರು: ದಾಟು, ಹಾದುಹೋಗು; ನಡೆ: ಚಲಿಸು; ಅಡವಿ: ಕಾಡು;

ಪದವಿಂಗಡಣೆ:
ಮುಡುಹು +ಸೋಂಕಿದೊಡ್+ಆ+ ಮಹಾದ್ರಿಗಳ್
ಒಡನೆ +ತೋರಹ +ತರು +ಕೆಡೆದುವ್+ಅಡಿ
ಯಿಡಲು +ಹೆಜ್ಜೆಗೆ +ತಗ್ಗಿದುದು +ನೆಲ +ಸಹಿತ+ ಹೆದ್ದೆವರು
ಒಡೆದುದ್+ಇಳೆ +ಬೊಬ್ಬಿರಿತಕ್+ಈತನ
ತೊಡೆಯ +ಗಾಳಿಗೆ +ಹಾರಿದವು +ಕಿರು
ಗಿಡ +ಮರಂಗಳು +ಮೀರಿ +ನಡೆದನು +ಭೀಮನ್+ಅಡವಿಯಲಿ

ಅಚ್ಚರಿ:
(೧) ಭೀಮನ ನಡೆತದ ರಭಸ – ಒಡೆದುದಿಳೆ ಬೊಬ್ಬಿರಿತಕೀತನ ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರಂಗಳು

ಪದ್ಯ ೮: ಭೀಮನ ಓಡಾಟವು ಅಡವಿಯನ್ನು ಹೇಗೆ ನಡುಗಿಸಿತು?

ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿ
ದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು
ಗದೆಯ ಹೊಯ್ಲಿನ ಗಂಡಶೈಲವೊ
ಕದಳಿಗಳೊ ತಾವರಿಯೆವುಬ್ಬಿದ
ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ (ಅರಣ್ಯ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮನು ಅಬ್ಬರಿಸಿದರೆ ಪರ್ವತ ಶಿಖರಗಳಲ್ಲಿದ್ದ ದೊಡ್ಡ ಗುಂಡುಗಳು ಉದುರಿದವು. ಕಾಲು ಝಾಡಿಸಿದರೆ ಮಹಾವೃಕ್ಷಗಳು ಬೇರು ಸಹಿತ ಉರುಳಿದವು. ಗದೆಯ ಹೊಡೆತಕ್ಕೆ ಬೆಟ್ಟದ ಕಲ್ಲುಗಳು ಬಾಳೆಯ ಗಿಡಗಳಂತೆ ಮುರಿದುಬಿದ್ದವು. ಮದೊನ್ಮತ್ತನಾದ ಭೀಮನ ಚಲನವು ಬೆಟ್ಟ, ಅಡವಿಗಳನ್ನು ನಡುಗಿಸಿತು.

ಅರ್ಥ:
ಒದರು: ಕೊಡಹು, ಜಾಡಿಸು, ಕೂಗು; ಪರ್ವತ: ಬೆಟ್ಟ; ಶಿಖರ: ತುದಿ; ಉದುರು: ಕೆಳಕ್ಕೆ ಬೀಳು; ಹೆಗ್ಗುಂಡು: ದೊಡ್ಡ ಬಂಡೆ; ಮುರಿ: ಸೀಳು; ಒದೆ: ಕಾಲಿನಿಂದ ತಳ್ಳು; ಬಿದ್ದು: ಕೆಳಗೆ ಜಾರು; ಬೇರು: ಮೂಲ; ಸಹಿತ: ಜೊತೆ; ದ್ರುಮ: ಮರ,ವೃಕ್ಷ; ಆಳಿ: ಸಾಲು, ಗುಂಪು; ಗದೆ: ಮುದ್ಗರ; ಹೊಯ್ಲು: ಹೊಡೆತ; ಗಂಡಶೈಲ: ಬೆಟ್ಟದಿಂದ ಉರುಳಿಬಿದ್ದ ದೊಡ್ಡಬಂಡೆ; ಕದಳಿ: ಬಾಳೆ; ಉಬ್ಬು: ಹೆಚ್ಚು; ಮದ: ಮತ್ತು, ಅಮಲು; ಮುಖ: ಆನನ; ಮಸಕ: ಆಧಿಕ್ಯ, ಹೆಚ್ಚಳ, ವೇಗ; ಗಿರಿ: ಬೆಟ್ಟ; ತರು: ಮರ; ವ್ರಜ: ಗುಂಪು;

ಪದವಿಂಗಡಣೆ:
ಒದರಿದರೆ +ಪರ್ವತದ +ಶಿಖರದಲ್
ಉದುರಿದವು +ಹೆಗ್ಗುಂಡುಗಳು +ಮುರಿದ್
ಒದೆಯೆ +ಬಿದ್ದವು +ಬೇರು +ಸಹಿತ +ಮಹಾದ್ರುಮಾಳಿಗಳು
ಗದೆಯ +ಹೊಯ್ಲಿನ +ಗಂಡಶೈಲವೊ
ಕದಳಿಗಳೊ +ತಾವರಿಯೆ+ಉಬ್ಬಿದ
ಮದಮುಖನ +ಪರಿಮಸಕ +ಮುರಿದುದು +ಗಿರಿ+ತರು+ವ್ರಜವ

ಅಚ್ಚರಿ:
(೧) ಭೀಮನ ಶಕ್ತಿಯನ್ನು ವಿವರಿಸುವ ಪರಿ – ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಗ್ಗುಂಡುಗಳು ಮುರಿದೊದೆಯೆ ಬಿದ್ದವು ಬೇರು ಸಹಿತ ಮಹಾದ್ರುಮಾಳಿಗಳು

ಪದ್ಯ ೭: ಭೀಮನು ಕಾಡನ್ನು ಹೇಗೆ ಹೊಕ್ಕನು?

ಬಿಗಿದು ಬತ್ತಳಿಕೆಯನು ಹೊನ್ನಾ
ಯುಗದ ಖಡ್ಗ ಶರಾಸನವ ಕೊಂ
ಡಗಧರನ ನೆನೆದನಿಲಸುತ ಹೊರವಂಟನಾಶ್ರಮವ
ಬಿಗಿದು ಹೊಕ್ಕನರಣ್ಯವನು ಬೊ
ಬ್ಬೆಗಳ ಬಿರುದಿನ ಬಾಹು ಸತ್ವದ
ವಿಗಡ ಭೀಮನ ಕಾಲ್ದುಳಿಗೆ ಕಂಪಿಸಿತು ವನನಿವಹ (ಅರಣ್ಯ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಮನು ತನ್ನ ಬತ್ತಳಿಕೆಯನ್ನು ಕಟ್ಟಿಕೊಂಡು, ಚಿನ್ನದ ಹಿಡಿಕೆಯ ಖಡ್ಗವನ್ನು ತೆಗೆದು, ಬಿಲ್ಲನ್ನು ಹೆದೆಯೇರಿಸಿಕೊಂಡು ಶ್ರೀಕೃಷ್ಣನನ್ನು ಮನಸ್ಸಿನಲ್ಲಿ ನೆನೆದು ಆಶ್ರಮದಿಂದ ಹೊರಹೊಂಟನು. ಜೋರಾಗಿ ಗರ್ಜಿಸುತ್ತಾ, ಕಾಡನ್ನು ಹೊಕ್ಕನು. ಆತನ ಕಾಲ್ತುಳಿತಕ್ಕೆ ಕಾಡು ನಡುಗಿತು.

ಅರ್ಥ:
ಬಿಗಿ: ಕಟ್ಟು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಹೊನ್ನು: ಚಿನ್ನ; ಖಡ್ಗ: ಕತ್ತಿ; ಶರಾಸನ: ಬಿಲ್ಲು; ಕೊಂಡು: ತೆಗೆದು; ಅಗಧರ: ಕೃಷ್ಣ; ಅಗ: ಬೆಟ್ಟ; ಧರ: ಹಿಡಿದಿರುವ; ನೆನೆದು: ಜ್ಞಾಪಿಸಿಕೊಂಡು; ಅನಿಲಸುತ: ವಾಯುಪುತ್ರ; ಹೊರವಂಟ: ತೆರಳಿದ; ಆಶ್ರಮ: ಕುಟೀರ; ಹೊಕ್ಕು: ಸೇರು; ಅರಣ್ಯ: ಕಾಡು; ಬೊಬ್ಬೆ: ಜೋರಾಗಿ ಕೂಗು; ಬಿರುಸು: ಜೋರು, ರಭಸ; ಬಾಹು: ಭುಜ; ಸತ್ವ: ಶಕ್ತಿ; ವಿಗಡ: ಶೌರ್ಯ, ಪರಾಕ್ರಮ; ತುಳಿತ: ಮೆಟ್ಟು; ಕಾಲು: ಪಾದ; ಕಂಪಿಸು: ಅಲುಗಾಡು; ವನ: ಕಾಡು; ನಿವಹ: ಗುಂಪು;

ಪದವಿಂಗಡಣೆ:
ಬಿಗಿದು +ಬತ್ತಳಿಕೆಯನು +ಹೊನ್ನಾ
ಯುಗದ +ಖಡ್ಗ +ಶರಾಸನವ +ಕೊಂಡ್
ಅಗಧರನ +ನೆನೆದ್+ಅನಿಲಸುತ +ಹೊರವಂಟನ್+ಆಶ್ರಮವ
ಬಿಗಿದು +ಹೊಕ್ಕನ್+ಅರಣ್ಯವನು +ಬೊ
ಬ್ಬೆಗಳ +ಬಿರುದಿನ +ಬಾಹು +ಸತ್ವದ
ವಿಗಡ+ ಭೀಮನ +ಕಾಲ್ದುಳಿಗೆ +ಕಂಪಿಸಿತು +ವನ+ನಿವಹ

ಅಚ್ಚರಿ:
(೧) ಕೃಷ್ಣನನ್ನು ಅಗಧರ, ಭೀಮನನ್ನು ಅನಿಲಸುತ ಎಂದು ಹೇಳಿರುವುದು
(೨) ಭೀಮನ ಬಲವನ್ನು ತಿಳಿಸುವ ಪರಿ – ಬೊಬ್ಬೆಗಳ ಬಿರುದಿನ ಬಾಹು ಸತ್ವದ ವಿಗಡ ಭೀಮನ ಕಾಲ್ದುಳಿಗೆ ಕಂಪಿಸಿತು ವನನಿವಹ

ಪದ್ಯ ೬: ಭೀಮನು ದ್ರೌಪದಿಗೆ ಏನು ಹೇಳಿದನು?

ಹಿರಿದು ಸೊಗಸಾಯ್ತೆನಗಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತಂದಿತ್ತು ತನ್ನ ಮನೋಗತ ವ್ಯಥೆಯ
ಪರಿಹರಿಪುದೆನಲಬುಜವದನೆಯ
ಕುರುಳನಗುರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಂಡನು ನಿಜ ಗದಾಯುಧವ (ಅರಣ್ಯ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ದ್ರೌಪದಿಯು ಭೀಮನ ಬಳಿ ಬಂದು, ಈ ಪುಷ್ಪದ ಅಪೂರ್ವ ಪರಿಮಳವು ನನಗೆ ಬಹಳ ಇಷ್ಟವಾಗಿದೆ. ಅದನ್ನು ತಂದು ಕೊಟ್ಟು ನನ್ನ ಮನಸ್ಸಿನ ಇಚ್ಛೆಯನ್ನು ಪೂರೈಸಲೆಂದು ಕೇಳಲು, ಭೀಮನು ಪ್ರೀತಿಯಿಂದ ತನ್ನು ಉಗುರಿನಿಂದ ಆಕೆಯ ಮುಂಗುರುಳನ್ನು ಸರಿಪಡಿಸಿ, ಆ ಪದ್ಮವನ್ನು ತರುವೆನೆಂದು ಹೇಳಿ ತನ್ನ ಗದೆಯನ್ನು ತೆಗೆದುಕೊಂಡು ಹೊರಟನು.

ಅರ್ಥ:
ಹಿರಿದು: ದೊಡ್ಡದು, ಶ್ರೇಷ್ಠ; ಸೊಗಸು: ಚೆಲುವು; ಪೂರ್ವ: ಮೂಡಣ; ಪರಿಮಳ: ಸುಗಂಧ; ಕೇಳಿ:ವಿನೋದ; ಸರಸಿಜ: ಕಮಲ; ತಂದು: ಪಡೆದು; ಮನೋಗತ: ಮನಸ್ಸಿನಲ್ಲಿರುವ, ಅಭಿಪ್ರಾಯ; ವ್ಯಥೆ: ಯಾತನೆ; ಪರಿಹರಿಸು: ನಿವಾರಿಸು; ಅಬುಜ: ಕಮಲ; ವದನ: ಮುಖ; ಕುರುಳ: ಮುಂಗುರುಳು; ಉಗುರು: ನಖ; ತಿದ್ದು: ಸರಿಪಡಿಸು; ಸರಸಿಜ: ಕಮಲ; ತಹೆ: ತರುವೆ; ಕೊಂಡು: ತೆಗೆದುಕೊ; ಗಧೆ: ಮುದ್ಗರ;

ಪದವಿಂಗಡಣೆ:
ಹಿರಿದು +ಸೊಗಸಾಯ್ತ್+ಎನಗ್+ಪೂರ್ವದ
ಪರಿಮಳದ+ ಕೇಳಿಯಲಿ +ನೀನ್ +ಆ
ಸರಸಿಜವ +ತಂದಿತ್ತು +ತನ್ನ +ಮನೋಗತ+ ವ್ಯಥೆಯ
ಪರಿಹರಿಪುದ್+ಎನಲ್+ಅಬುಜವದನೆಯ
ಕುರುಳನ್+ಉಗುರಲಿ +ತಿದ್ದಿದನು +ತತ್
ಸರಸಿಜವ +ತಹೆನೆನುತ +ಕೊಂಡನು +ನಿಜ +ಗದಾಯುಧವ

ಅಚ್ಚರಿ:
(೧) ಭೀಮನ ಪ್ರೀತಿಯನ್ನು ತೋರುವ ಪರಿ – ಅಬುಜವದನೆಯ ಕುರುಳನಗುರಲಿ ತಿದ್ದಿದನು
(೨) ಸರಸಿಜ, ಅಬುಜ – ಸಮನಾರ್ಥಕ ಪದ

ಪದ್ಯ ೫: ದ್ರೌಪದಿ ಯಾರ ಬಳಿ ಬಂದು ತನ್ನ ಮನೋರಥವನ್ನು ಹೇಳಿದಳು?

ಅರಸನಲಿ ಮೇಣ್ ನಕುಲ ಸಹದೇ
ವರಲಿ ತನ್ನ ಮನೋರಥಕೆ ವಿ
ಸ್ತರಣವಾಗದು ನುಡಿವಡಿಲ್ಲರ್ಜುನ ಸಮೀಪದಲಿ
ಅರಿಭಯಂಕರ ಭೀಮನೇ ಗೋ
ಚರಿಸುವನಲಾಯೆನುತಲಾತನ
ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ (ಅರಣ್ಯ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಆ ಸುಗಂಧ ಹೂವಿನ ಪರಿಮಳ ಆಕರ್ಷಿಸಿತು. ಅದನ್ನು ನೋಡಲು ಬಯಸಿದ ಆಕೆ, ಧರ್ಮಜ, ನಕುಲ ಅಥವ ಸಹದೇವರಿಂದ ನನ್ನ ಆಶೆಯು ಪೂರೈಸಲಾಗುವುದಿಲ್ಲ ಎಂದು ಅರಿತು, ಅರ್ಜುನನು ಸಮೀಪದಲ್ಲಿರದ ಕಾರಣ, ವೈರಿಗಳಲ್ಲಿ ಭಯವನ್ನುಂಟುಮಾಡುವ ಭೀಮನೇ ಈ ಕಾರ್ಯಕ್ಕೆ ಸರಿಯೆಂದು ತಿಳಿದು ದ್ರೌಪದಿಯು ಆತನ ಬಳಿಗೆ ಹೋಗಿ ಮಧುರ ವಚನದಿಂದ ಹೀಗೆ ಹೇಳಿದಳು.

ಅರ್ಥ:
ಅರಸ: ರಾಜ; ಮೇಣ್: ಅಥವ; ಮನೋರಥ: ಕಾಮನೆ, ಆಸೆ; ವಿಸ್ತರಣ: ಹರಡು, ವಿಸ್ತಾರ; ನುಡಿ: ಮಾತು; ಸಮೀಪ: ಹತ್ತಿರ; ಅರಿ: ವೈರಿ; ಭಯಂಕರ: ಸಾಹಸಿ, ಗಟ್ಟಿಗ; ಗೋಚರಿಸು: ತೋರು; ಹೊರೆ: ಆಶ್ರಯ,ರಕ್ಷಣೆ; ಬಂದು: ಆಗಮಿಸು; ನಗು: ಸಂತಸ; ನುಡಿ: ಮಾತಾಡು; ಮಧುರ: ಸಿಹಿ; ವಚನ: ನುಡಿ, ಮಾತು;

ಪದವಿಂಗಡಣೆ:
ಅರಸನಲಿ +ಮೇಣ್ +ನಕುಲ +ಸಹದೇ
ವರಲಿ +ತನ್ನ +ಮನೋರಥಕೆ +ವಿ
ಸ್ತರಣವಾಗದು +ನುಡಿವಡಿಲ್ಲ್+ಅರ್ಜುನ +ಸಮೀಪದಲಿ
ಅರಿ+ಭಯಂಕರ+ ಭೀಮನೇ +ಗೋ
ಚರಿಸುವನಲಾ+ಎನುತಲ್+ಆತನ
ಹೊರೆಗೆ +ಬಂದಳು +ನಗುತ +ನುಡಿದಲು +ಮಧುರ +ವಚನದಲಿ

ಅಚ್ಚರಿ:
(೧) ಭೀಮನನ್ನು ಪರಿಚಯಿಸುವ ಪರಿ – ಅರಿಭಯಂಕರ
(೨) ಕೋರಿಕೆಯನ್ನು ತಿಳಿಸುವ ಮುನ್ನ – ಆತನ ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ