ಪದ್ಯ ೪: ದ್ರೌಪದಿಯು ಆಶ್ಚರ್ಯಪಟ್ಟಿದುದೇಕೆ?

ಮೇಲು ತರದತಿ ಪರಿಮಳದ ವೈ
ಹಾಳಿಯಲಿ ಸಲೆ ಬೀದಿವರಿದು ಚ
ಡಾಳಿಸುವ ಸೊಗಸಿನಲಿ ಸೊಂಪಾದಳು ಸರೋಜಮುಖಿ
ಸೋಲಿಸಿತಲಾ ಚೂಣಿಯಲಿ ಸಂ
ಪಾಳಿಸಿದ ಸೌಗಂಧವಿನ್ನು ವಿ
ಶಾಲ ಪದುಮವದೆಂತುಟೆನುತವೆ ತೂಗಿದಳು ಶಿರವ (ಅರಣ್ಯ ಪರ್ವ, ೧೧ ಸಂಧಿ, ೪ ಪದ್ಯ)

ತಾತ್ಪರ್ಯ:
ಅತ್ಯಂತ ಶ್ರೇಷ್ಠವಾದ ಪರಿಮಳವು ಗಾಳಿಯನ್ನು ತುಂಬಿ ಬರುತಿರಲು, ಅದನ್ನು ಆಘ್ರಾಣಿಸಿದ ದ್ರೌಪದಿಯು ಅತ್ಯಂತ ಸಂತೋಷಗೊಂಡಳು. ಗಾಳಿಯಲ್ಲಿ ಬರುವ ಈ ಪರಿಮಳವೇ ನನ್ನ ಮನಸ್ಸನ್ನು ಗೆದ್ದು ಬಿಟ್ಟಿತು, ಇನ್ನು ಈ ಕಮಲ ಪುಷ್ಪ ಹೇಗಿರಬಹುದೆಂದುಕೊಂಡು ಆಶ್ಚರ್ಯಪಟ್ಟು ತಲೆತೂಗಿದಳು.

ಅರ್ಥ:
ಮೇಲು: ಎತ್ತರ, ಶ್ರೇಷ್ಠ; ತರ: ರೀತಿ; ಅತಿ: ಬಹಳ; ಪರಿಮಳ: ಸುಗಂಧ; ವೈಹಾಳಿ: ಸಂಚಾರ, ವಿಹಾರ; ಸಲೆ: ಒಂದೇ ಸಮನೆ; ಬೀದಿ: ದಾರಿ, ಮಾರ್ಗ; ಚಡಾಳಿಸು: ಜೋಡಿಸು, ಅಧಿಕವಾಗು; ಸೊಗಸು: ಅಂದ; ಸೊಂಪು: ಸೊಗಸು; ಸರೋಜಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ಸೋಲಿಸು: ಪರಾಭವಗೊಳ್ಳು; ಚೂಣಿ: ಮುಂದಿನ ಸಾಲು, ಮುಂಭಾಗ; ಸಂಪು: ಸೊಂಪು, ಸೊಗಸು; ಸಂಪಾಳಿಸು: ಸಂತಸವನ್ನು ನೀಡು; ಸೌಗಂಧ: ಸುಗಂಧ, ಪರಿಮಳ; ವಿಶಾಲ: ವಿಸ್ತಾರ, ಹರಹು; ಪದುಮ: ಪದ್ಮ, ಕಮಲ; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ಮೇಲುತರದ್+ಅತಿ+ ಪರಿಮಳದ+ ವೈ
ಹಾಳಿಯಲಿ +ಸಲೆ +ಬೀದಿವರಿದು +ಚ
ಡಾಳಿಸುವ +ಸೊಗಸಿನಲಿ+ ಸೊಂಪಾದಳು +ಸರೋಜಮುಖಿ
ಸೋಲಿಸಿತಲಾ +ಚೂಣಿಯಲಿ +ಸಂ
ಪಾಳಿಸಿದ+ ಸೌಗಂಧವಿನ್ನು +ವಿ
ಶಾಲ +ಪದುಮವ್+ಅದೆಂತುಟ್+ಎನುತವೆ+ ತೂಗಿದಳು+ ಶಿರವ

ಅಚ್ಚರಿ:
(೧) ವೈಹಾಳಿ, ಚಡಾಳಿ, ಸಂಪಾಳಿ – ಪ್ರಾಸ ಪದಗಳು
(೨) ಸ ಕಾರದ ತ್ರಿವಳಿ ಪದ – ಸೊಗಸಿನಲಿ ಸೊಂಪಾದಳು ಸರೋಜಮುಖಿ

ನಿಮ್ಮ ಟಿಪ್ಪಣಿ ಬರೆಯಿರಿ