ಪದ್ಯ ೩೭: ಧರ್ಮಜನ ಪರಿವಾರದವರು ಯಾರ ಆಶ್ರಮಕ್ಕೆ ಬಂದರು?

ಅಸುರ ದೇಹ ಸ್ಪರ್ಶವಸಮಂ
ಜಸವಲಾ ತನಗೆನುತ ಮುನಿರೋ
ಮಶನು ಗಗನೇಚರರ ಗತಿಯಲಿ ಬಂದನಿವರೊಡನೆ
ವಿಷಮಗಿರಿ ಕಾನನ ಕದಧ್ವ
ಪ್ರಸರವನು ಹಿಂದಿಕ್ಕಿ ಹೊದ್ದಿದ
ರೆಸೆವ ನರನಾರಾಯಣಾಶ್ರಮ ವರತಪೋವನವ (ಅರಣ್ಯ ಪರ್ವ, ೧೦ ಸಂಧಿ, ೩೭ ಪದ್ಯ)

ತಾತ್ಪರ್ಯ:
ರಾಕ್ಷಸನ ದೇಹವನ್ನು ಮುಟ್ಟುವುದು ಉಚಿತವಲ್ಲವೆಂದು ರೋಮಶ ಮುನಿಗಳು ಆಕಾಶಮಾರ್ಗದಲ್ಲಿ ಅವರೊಡನೆ ಹೋದರು. ಪರ್ವತ ವನಗಳ ದುರ್ಗಮ ಮಾರ್ಗವನ್ನು ದಾಟಿ ಅವರು ನರನಾರಾಯಣಾಶ್ರಮಕ್ಕೆ (ಬದರೀಕಾಶ್ರಮ) ಬಂದರು.

ಅರ್ಥ:
ಅಸುರ: ರಾಕ್ಷಸ; ದೇಹ: ತನು, ಶರೀರ; ಸ್ಪರ್ಶ: ಮುಟ್ಟು; ಅಸಮಂಜಸ: ಅನುಚಿತವಾದುದು; ಮುನಿ: ಋಷಿ; ಗಗನ: ಆಕಾಶ; ಗತಿ: ವೇಗ; ಬಂದನು: ಆಗಮಿಸು; ವಿಷಮ: ಕಷ್ಟಕರವಾದುದು; ಗಿರಿ: ಬೆಟ್ಟ; ಕಾನನ: ಕಾಡು; ಕದಧ್ವ: ಕೆಟ್ಟ ದಾರಿ; ಪ್ರಸರ: ಹರಡುವುದು; ಹಿಂದಿಕ್ಕು: ದಾಟು; ಹೊದ್ದು: ಹೊಂದು, ಸೇರು; ಎಸೆ: ತೋರು; ಆಶ್ರಮ: ಕುಟೀರ; ವರ: ಶ್ರೇಷ್ಠ; ತಪೋವನ: ತಪಸ್ಸು ಮಾಡುವ ಪ್ರದೇಶ; ಗಗನಚರ: ಗಂಧರ್ವ, ಆಕಾಶದಲ್ಲಿ ಚಲಿಸುವ;

ಪದವಿಂಗಡಣೆ:
ಅಸುರ +ದೇಹ +ಸ್ಪರ್ಶವ್+ಅಸಮಂ
ಜಸವಲಾ +ತನಗೆನುತ +ಮುನಿ+ರೋ
ಮಶನು +ಗಗನೇಚರರ+ ಗತಿಯಲಿ +ಬಂದನ್+ಇವರೊಡನೆ
ವಿಷಮಗಿರಿ +ಕಾನನ+ ಕದಧ್ವ
ಪ್ರಸರವನು +ಹಿಂದಿಕ್ಕಿ +ಹೊದ್ದಿದರ್
ಎಸೆವ +ನರನಾರಾಯಣಾಶ್ರಮ +ವರತಪೋವನವ

ಅಚ್ಚರಿ:
(೧) ಮುನಿಗಳು ತಲುಪಿದ ಪರಿ – ಮುನಿರೋಮಶನು ಗಗನೇಚರರ ಗತಿಯಲಿ ಬಂದನಿವರೊಡನೆ

ಪದ್ಯ ೩೬: ಘಟೋತ್ಕಚನು ಪಾಂಡವರನ್ನು ಹೇಗೆ ದಾಟಿಸಿದನು?

ಹೊತ್ತನರಸನನರಸನನುಜರ
ನೆತ್ತಿದನು ನೃಪನರಸಿಯನು ಬಳಿ
ಕೆತ್ತಿ ಕೈವೀಸಿದನು ಭಟರಿಗೆ ತೋರಿ ಪರಿಜನವ
ಹೊತ್ತರನಿಬರನಸುರ ಭಟರೊ
ತ್ತೊತ್ತೆಯಾದುದು ಬೆನ್ನಿನಲಿ ಬಿಗಿ
ದೆತ್ತಿಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ (ಅರಣ್ಯ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ಘಟೋತ್ಕಚನು ಧರ್ಮಜ, ಅವನ ತಮ್ಮಂದಿರು, ದ್ರೌಪದಿ ಇವರನ್ನು ಹೊತ್ತುಕೊಂಡು ತನ್ನ ಪರಿವಾರದವರಿಗೆ ಪಾಂಡವರ ಪರಿವಾರವನ್ನು ಕೈಬೀಸಿ ತೋರಿಸಿದನು. ಅವರು ಎಲ್ಲರನ್ನು ಹೊತ್ತು ಮೋಡಗಳ ಗುಂಪಿನಂತೆ ಆಕಾಶದಲ್ಲಿ ಗಮಿಸಿದರು.

ಅರ್ಥ:
ಹೊತ್ತು: ಹತ್ತಿಕೊಳ್ಳು; ಅರಸ: ರಾಜ; ಅನುಜ: ತಮ್ಮ; ಎತ್ತು: ಎತ್ತಿ ಹಿಡಿ; ನೃಪ: ರಾಜ; ಅರಸಿ: ರಾಣಿ; ಬಳಿಕ: ಅನಂತರ; ಕೈ: ಕರ, ಹಸ್ತ; ವೀಸು: ಒಗೆ, ಎಸೆ; ಭಟ: ಸೇವಕ, ಶೂರ; ತೋರು: ಕಾಣು, ದೃಷ್ಟಿಗೆ ಬೀಳು; ಪರಿಜನ: ಸುತ್ತಲಿನ ಜನ, ಪರಿವಾರ; ಅಸುರ: ರಾಕ್ಷಸ; ಒತ್ತು: ಮುತ್ತು; ಬೆನ್ನು: ಹಿಂಭಾಗ; ಬಿಗಿ: ಕಟ್ಟು; ಹಾಯ್ದು: ಮೇಲೆಬಿದ್ದು; ಮುಗಿಲು: ಆಗಸ; ಥಟ್ಟು: ಗುಂಪು, ಸೈನ್ಯ, ಪಡೆ; ಪರಿ: ರೀತಿ; ಜೋಡು: ಜೊತೆ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಹೊತ್ತನ್+ಅರಸನನ್+ಅರಸನ್+ಅನುಜರನ್
ಎತ್ತಿದನು +ನೃಪನ್+ಅರಸಿಯನು +ಬಳಿಕ್
ಎತ್ತಿ+ ಕೈವೀಸಿದನು +ಭಟರಿಗೆ +ತೋರಿ +ಪರಿಜನವ
ಹೊತ್ತರ್+ಅನಿಬರನ್+ಅಸುರ +ಭಟರ್
ಒತ್ತೊತ್ತೆಯಾದುದು +ಬೆನ್ನಿನಲಿ +ಬಿಗಿ
ದೆತ್ತಿಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ

ಅಚ್ಚರಿ:
(೧) ಮೊದಲನೇ ಸಾಲು ಒಂದೇ ಪದವಾಗಿರುವುದು – ಹೊತ್ತನರಸನನರಸನನುಜರ

ಪದ್ಯ ೩೫: ಧರ್ಮಜನು ಘಟೋತ್ಕಚನಿಗೆ ಯಾವ ಕಾರ್ಯವನ್ನು ನೀಡಿದನು?

ದುರ್ಗವಿದೆ ನಮ್ಮಂಘ್ರಿಶಕ್ತಿಯ
ಸುಗ್ಗಿ ಬೀತುದು ಸಾಹಸಿಗ ನೀ
ನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾ ಗಿರಿಗೆ
ಹುಗ್ಗಿಗರ ಹೆಗಲೇರಿಸೊಂದೇ
ಲಗ್ಗೆಯಲಿ ಹಾಯ್ಸೆನೆ ಹಸಾದದ
ಮೊಗ್ಗಗೈಗಳ ದನುಜತಗ್ಗಿದನರಸನಿದಿರಿನಲಿ (ಅರಣ್ಯ ಪರ್ವ, ೧೦ ಸಂಧಿ, ೩೫ ಪದ್ಯ)

ತಾತ್ಪರ್ಯ:
ಎಲೈ ಘಟೋತ್ಕಚ ಮುಂದೆ ನಮ್ಮ ಮಾರ್ಗದಲ್ಲಿ ಘೋರ ಕಾಡು ಮತ್ತು ಪರ್ವತವಿದೆ, ಪರ್ವತದ ಮಾರ್ಗದಲ್ಲಿ ಓಡಾಡಿ ನಮ್ಮ ಪಾದಗಳಲ್ಲಿ ಶಕ್ತಿ ಕ್ಷೀಣವಾಗಿ ಹೋಗಿದೆ. ನಿನ್ನ ಪರಿವಾರದವರಾದರೋ ಪರ್ವತಕ್ಕೆ ಸರಿಸಮಾನವಾದ ಪರ್ವತಗಳೋ ಎಂಬಂತಿದ್ದಾರೆ, ಈ ಬ್ರಾಹ್ಮಣರನ್ನು ಹೆಗಲ ಮೇಲೇರಿಸಿ ಎಲ್ಲರನ್ನು ದಾಟಿಸು ಎಂದು ಧರ್ಮಜನು ಹೇಳಲು, ಘಟೋತ್ಕಚನು ಮಹಾಪ್ರಸಾದ ಎಂದು ಹೇಳುತ್ತಾ ಶಿರಬಾಗಿ ನಮಿಸಿದನು.

ಅರ್ಥ:
ದುರ್ಗ: ಕಾಡು, ಅಡವಿ; ಅಂಘ್ರಿ: ಪಾದ; ಶಕ್ತಿ: ಬಲ; ಸುಗ್ಗಿ: ಹೆಚ್ಚಳ; ಬೀತು: ಕಳೆ; ಸಾಹಸಿಗ: ಬಲಶಾಲಿ; ಅಗ್ಗ: ಶ್ರೇಷ್ಠ; ಅರಿ: ತಿಳಿ; ಪಡಿ: ಪ್ರತಿಯಾದುದು, ಬದಲು, ಅಳತೆ; ಗಿರಿ: ಬೆಟ್ಟ; ಹುಗ್ಗಿಗ: ಶ್ರೇಷ್ಠ; ಲಗ್ಗೆ: ಮುತ್ತಿಗೆ, ಆಕ್ರಮಣ; ಹಾಯಿಸು: ಕೊಂಡೊಯ್ಯು; ಹೆಗಲು: ಭುಜ; ಹಸಾದ: ಪ್ರಸಾದ, ಅನುಗ್ರಹ; ಕೈ: ಹಸ್ತ; ಮೊಗ್ಗು: ಮುಡಿಸಿದ, ಅರಳದ; ದನುಜ: ರಾಕ್ಷಸ; ತಗ್ಗು: ಬಾಗು; ಅರಸ: ರಾಜ; ಇದಿರು: ಎದುರು;

ಪದವಿಂಗಡಣೆ:
ದುರ್ಗವಿದೆ+ ನಮ್ಮಂಘ್ರಿ+ಶಕ್ತಿಯ
ಸುಗ್ಗಿ +ಬೀತುದು +ಸಾಹಸಿಗ+ ನೀನ್
ಅಗ್ಗಳೆ+ಅರಿದೆ+ ನಿನ್ನವರು+ ಪಡಿಗಿರಿಗಳ್+ಆ+ ಗಿರಿಗೆ
ಹುಗ್ಗಿಗರ +ಹೆಗಲೇರಿಸ್+ಒಂದೇ
ಲಗ್ಗೆಯಲಿ +ಹಾಯ್ಸೆನೆ +ಹಸಾದದ
ಮೊಗ್ಗ+ಕೈಗಳ+ ದನುಜ+ತಗ್ಗಿದನ್+ಅರಸನ್+ಇದಿರಿನಲಿ

ಅಚ್ಚರಿ:
(೧) ದಣಿವನ್ನು ಸೂಚಿಸುವ ಪರಿ – ನಮ್ಮಂಘ್ರಿಶಕ್ತಿಯ ಸುಗ್ಗಿ ಬೀತುದು
(೨) ಘಟೋತ್ಕಚನ ಗುಂಪನ್ನು ವರ್ಣಿಸುವ ಪರಿ – ಸಾಹಸಿಗ ನೀನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾ ಗಿರಿಗೆ
(೩) ಹ ಕಾರದ ಪದಗಳ ಬಳಕೆ – ಹುಗ್ಗಿಗರ ಹೆಗಲೇರಿಸೊಂದೇಲಗ್ಗೆಯಲಿ ಹಾಯ್ಸೆನೆ ಹಸಾದದ
(೪) ನಮಸ್ಕಾರವನ್ನು ಸೂಚಿಸುವ ಪರಿ – ಮೊಗ್ಗಗೈಗಳ ದನುಜತಗ್ಗಿದನರಸನಿದಿರಿನಲಿ

ಪದ್ಯ ೩೪: ಘಟೋತ್ಕಚನು ಏನು ಕೇಳಿದ?

ದೇವ ಬೆಸಸಾ ನಮ್ಮ ಬರಿಸಿದು
ದಾವ ಹದನು ನವೀನ ಭಟರಿದೆ
ದೇವರಿಪುಗಳು ಹೇಳು ನೆನಹಿನ ರಾಜಕಾರಿಯವ
ಆವುದೆನಗುದ್ಯೋಗವೆನೆ ಸಂ
ಭಾವಿಸಿದನಸುರನನು ಜಾರುವ
ಜೀವ ಮರುತನ ಮರಳಿ ನಿಲಿಸಿತು ನಿನ್ನ ನುಡಿಯೆಂದ (ಅರಣ್ಯ ಪರ್ವ, ೧೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ತಂದೆ (ದೇವ) ನಮ್ಮನ್ನೇಕೆ ಕರೆಸಿದೆ. ರಾಕ್ಷಸ ಯುವಕರ ತಂಡವೇ ಬಂದಿದೆ. ನೀನು ಏತಕ್ಕಾಗಿ ಯಾವ ರಾಜಕಾರ್ಯಕ್ಕಾಗಿ ನೆನೆಸಿದೆ, ನಾನು ಮಾಡಬೇಕಾದ ಕೆಲಸವೇನು ಎಂದು ಘಟೋತ್ಕಚನು ಕೇಳಿದನು. ಈ ನುಡಿಗಳನ್ನು ಕೇಳಿದ ಧರ್ಮಜನು ಅವನನ್ನು ಸತ್ಕರಿಸಿ ನಿನಾಡಿದ ಮಾತು ಹಾರಿಹೊಗುತ್ತಿದ್ದ ಪ್ರಾಣಪಕ್ಷಿಯನ್ನು ನಿಲ್ಲಿಸಿದಂತಾಯಿತು ಎಂದು ಉದ್ಗರಿಸಿದನು.

ಅರ್ಥ:
ದೇವ: ಒಡೆಯ; ಬೆಸ: ಅಪ್ಪಣೆ, ಆದೇಶ; ಬರಿಸು: ಆಗಮನ, ಬಂದುದು; ಹದ: ರೀತಿ, ಕ್ರಮ; ನವೀನ: ಹೊಸ, ಯುವ; ಭಟರು: ಸೈನಿಕ; ದೇವರಿಪು: ಅಸುರರು; ರಿಪು: ವೈರಿ; ದೇವ: ದೇವತೆ, ಸುರ; ಹೇಳು: ತಿಳಿಸು; ನೆನಹು: ಸ್ಮರಿಸು; ರಾಜಕಾರಿಯ: ರಾಜಕಾರಣ; ಉದ್ಯೋಗ: ಕೆಲಸ; ಸಂಭಾವಿಸು: ಗೌರವಿಸು; ಅಸುರ: ರಾಕ್ಷಸ; ಜಾರು: ಬೀಳು; ಜೀವ: ಪ್ರಾಣ; ಮರುತ: ವಾಯು; ಮರಳಿ: ಮತ್ತೆ; ನಿಲಿಸು: ತಡೆ; ನುಡಿ: ಮಾತು;

ಪದವಿಂಗಡಣೆ:
ದೇವ +ಬೆಸಸಾ +ನಮ್ಮ +ಬರಿಸಿದುದ್
ಆವ+ ಹದನು +ನವೀನ +ಭಟರಿದೆ
ದೇವರಿಪುಗಳು+ ಹೇಳು +ನೆನಹಿನ +ರಾಜಕಾರಿಯವ
ಆವುದೆನಗ್+ಉದ್ಯೋಗವ್+ಎನೆ +ಸಂ
ಭಾವಿಸಿದನ್+ಅಸುರನನು +ಜಾರುವ
ಜೀವ +ಮರುತನ+ ಮರಳಿ +ನಿಲಿಸಿತು +ನಿನ್ನ +ನುಡಿಯೆಂದ

ಅಚ್ಚರಿ:
(೧) ಘಟೋತ್ಕಚನ ನುಡಿಯನ್ನು ಪ್ರಶಂಶಿಸುವ ಪರಿ – ಜಾರುವ ಜೀವ ಮರುತನ ಮರಳಿ ನಿಲಿಸಿತು ನಿನ್ನ ನುಡಿಯೆಂದ
(೨) ಅಸುರ, ದೇವರಿಪು – ಸಮನಾರ್ಥಕ ಪದ

ಪದ್ಯ ೩೩: ಘಟೋತ್ಕಚನ ಹಿಂದೆ ಯಾರು ಬಂದರು?

ವೀರದೈತ್ಯನ ಬಹಳ ದುಷ್ಪರಿ
ವಾರವದನಾರೆಣಿಸುವರು ಮುಂ
ಗಾರಿರುಳ ತನಿಯೆರಕ ನೀಲಾಚಲದ ಖಂಡರಣೆ
ಘೋರ ರಾಹುವ್ಯೂಹವೆನೆ ಸುರ
ವೈರಿಗಳ ಮೈಗಾಂತಿ ಲಹರಿಯ
ಪೂರದಲಿ ಜಗಮುಳುಗೆ ಬಂದುದು ಲಕ್ಷಸಂಖ್ಯೆಯಲಿ (ಅರಣ್ಯ ಪರ್ವ, ೧೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ಘತೋತ್ಕಚನ ರಾಕ್ಷಸ ಪರಿವಾರವು ಅಸಂಖ್ಯವಾಗಿತ್ತು, ಅವರ ಮೈಕಾಂತಿಯು ಮೋಡ ಮುಚ್ಚಿದ ಮುಂಗಾರಿನ ರಾತ್ರಿಯ ಕತ್ತಲನ್ನು ತುಂಬುವಂತೆ ಮಾಡಿರುವಂತಿತ್ತು, ನೀಲಾಚಲವನ್ನು ಕತ್ತರಿಸಿ ಮಾಡಿದೆಯೋ, ರಾಹುವಿನ ವ್ಯೂಹವೋ ಎನ್ನುವಂತ್ತಿತ್ತು. ಕತ್ತಲಿನ ತೆರೆಗಳು ಹರಿದು ಬಂದವೆಂಬಂತೆ ಲಕ್ಷ ಸಂಖ್ಯೆಯಲ್ಲಿ ಅವನ ಪರಿವಾರವು ಅವನ ಹಿಂದೆ ಬಂದಿತು.

ಅರ್ಥ:
ವೀರ: ಶೂರ, ಪರಾಕ್ರಮ; ದೈತ್ಯ: ರಾಕ್ಷಸ; ಬಹಳ: ತುಂಬ; ಪರಿವಾರ: ಸುತ್ತಲಿನವರು, ಪರಿಜನ; ಎಣಿಸು: ಲೆಕ್ಕ ಹಾಕು; ಮುಂಗಾರು: ಮೊದಲ ಮಳೆಗಾಲ; ಇರುಳು: ರಾತ್ರಿ; ತನಿ: ಚೆನ್ನಾಗಿ ಬೆಳೆದುದು; ಎರಕ: ಸುರಿ, ತುಂಬು; ಅಚಲ: ಬೆಟ್ಟ; ಖಂಡರಣೆ: ಚೂರು; ಘೋರ: ಭಯಂಕರ; ವ್ಯೂಹ: ಗುಂಪು, ಸಮೂಹ; ಸುರ: ದೇವತೆ; ವೈರಿ: ಅರಿ, ಶತ್ರು; ಮೈ: ತನು; ಕಾಂತಿ: ಪ್ರಕಾಶ; ಲಹರಿ: ರಭಸ, ಆವೇಗ; ಪೂರ:ಪೂರ್ತಿಯಾಗಿ; ಜಗ: ಪ್ರಪಂಚ; ಮುಳುಗು: ತೋಯು; ಬಂದು: ಆಗಮಿಸು; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ವೀರ+ದೈತ್ಯನ +ಬಹಳ+ ದುಷ್ಪರಿ
ವಾರವದನ್+ಆರ್+ಎಣಿಸುವರು+ ಮುಂ
ಗಾರಿರುಳ +ತನಿ+ಎರಕ+ ನೀಲಾಚಲದ+ ಖಂಡರಣೆ
ಘೋರ+ ರಾಹುವ್ಯೂಹವೆನೆ+ ಸುರ
ವೈರಿಗಳ+ ಮೈಗಾಂತಿ +ಲಹರಿಯ
ಪೂರದಲಿ +ಜಗ+ಮುಳುಗೆ +ಬಂದುದು +ಲಕ್ಷ+ಸಂಖ್ಯೆಯಲಿ

ಅಚ್ಚರಿ:
(೧) ಅಸುರರ ಮೈಕಾಂತಿಗೆ ಬಳಸಿದ ಉಪಮಾನಗಳು: ಮುಂಗಾರಿರುಳ ತನಿಯೆರಕ ನೀಲಾಚಲದ ಖಂಡರಣೆ ಘೋರ ರಾಹುವ್ಯೂಹವೆನೆ ಸುರವೈರಿಗಳ ಮೈಗಾಂತಿ