ಪದ್ಯ ೩೧: ದ್ರೌಪದಿಯು ಧರ್ಮಜನಿಗೆ ಏನೆಂದು ಹೇಳಿದಳು?

ಇದೆ ಮುನಿವ್ರಜವಗ್ನಿಹೋತ್ರಿಗ
ಳಿದೆ ಕುಟುಂಬಿಗಳಾಪ್ತಪರಿಜನ
ವಿದೆ ವರ ಸ್ತ್ರೀ ಬಾಲವೃದ್ಧ ನಿಯೋಗಿ ಜನ ಸಹಿತ
ಇದೆ ಮಹಾಕಾಮ್ತಾರವಿನಿಬರ
ಪದಕೆ ವನಮಾರ್ಗದಲಿ ಸೇರುವ
ಹದನಕಾಣೆನು ಶಿವ ಶಿವೆಂದಳು ಕಾಂತೆ ಭೂಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೩೧ ಪದ್ಯ)

ತಾತ್ಪರ್ಯ:
ಮುನಿಗಳು, ಅಗ್ನಿಹೋತ್ರಿಗಳು, ಅವರ ಕುಟುಂಬದವರು, ನಮ್ಮ ಆಪ್ತರು, ಪರಿಜನರು, ನಿಯೋಗಿಗಳು ಇದ್ದಾರೆ. ಇವರಲ್ಲಿ ಸ್ತ್ರೀಯರು, ಬಾಲರು, ಮುದುಕರು, ಬಹಳ ಜನರಿದ್ದಾರೆ. ಇಲ್ಲಿಂದ ಮುಂದೆ ಮಹಾರಣ್ಯವಿದೆ. ಇವರೆಲ್ಲರೂ ಈ ಮಾರ್ಗದಲ್ಲಿ ನಡೆಯುವುದು ಹೇಗೆಂಬುದು ತಿಳಿಯುತ್ತಿಲ್ಲ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಮುನಿ: ಋಷಿ; ವ್ರಜ: ಗುಂಪು; ಅಗ್ನಿಹೋತ್ರಿ: ಅಗ್ನಿಹೋತ್ರವನ್ನು ನಡೆಸುವವನು; ಕುಟುಂಬ: ಸಂಸಾರ; ಆಪ್ತಪರಿಜನ: ಹತ್ತಿರದ ಸಂಬಂಧಿಕರು; ವರ: ಶ್ರೇಷ್ಠ; ಸ್ತ್ರೀ: ಹೆಣ್ಣು; ಬಾಲ: ಚಿಕ್ಕವರು; ವೃದ್ಧ: ವಯಸ್ಸಾದ; ನಿಯೋಗಿ: ಸೇವಕ,ಊಳಿಗದವನು; ಜನ: ಗುಂಪು, ಮನುಷ್ಯ; ಸಹಿತ: ಜೊತೆ; ಕಾಂತಾರ: ಅಡವಿ; ಮಹಾ: ದೊಡ್ಡ; ಇನಿಬರ್: ಇಷ್ಟುಜನ; ಪದ: ಪಾದ; ವನ: ಕಾಡು; ಮಾರ್ಗ: ದಾರಿ; ಸೇರು: ತಲುಪು, ಮುಟ್ಟು; ಹದನ: ಔಚಿತ್ಯ, ರೀತಿ; ಕಾಣೆನು: ತೋರದು;

ಪದವಿಂಗಡಣೆ:
ಇದೆ +ಮುನಿ+ವ್ರಜವ್+ಅಗ್ನಿಹೋತ್ರಿಗಳ್
ಇದೆ+ ಕುಟುಂಬಿಗಳ್+ಆಪ್ತಪರಿಜನವ್
ಇದೆ+ ವರ+ ಸ್ತ್ರೀ +ಬಾಲ+ವೃದ್ಧ +ನಿಯೋಗಿ +ಜನ +ಸಹಿತ
ಇದೆ+ ಮಹಾಕಾಂತಾರವ್+ಇನಿಬರ
ಪದಕೆ +ವನಮಾರ್ಗದಲಿ +ಸೇರುವ
ಹದನ+ಕಾಣೆನು +ಶಿವ +ಶಿವೆಂದಳು+ ಕಾಂತೆ +ಭೂಪತಿಗೆ

ಅಚ್ಚರಿ:
(೧) ಕಾಡಿಗೆ ಮಹಾಕಾಂತಾರ ವೆಂಬ ಪದಬಳಕೆ
(೨) ವನ, ಮಹಾಕಾಂತಾರ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ