ಪದ್ಯ ೨೭: ಧರ್ಮಜನು ದ್ರೌಪದಿಯನ್ನು ಹೇಗೆ ರಕ್ಷಿಸಿದನು?

ಬರುತ ಕಂಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃ
ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು
ಧರಣಿಪತಿ ತೆಗೆದೀಕೆಯನು ಕು
ಳ್ಳಿರಿಸಿ ತನ್ನಯ ತೊಡೆಯ ಮೇಲಾ
ದರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ (ಅರಣ್ಯ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ದಾರಿಯಲ್ಲಿ ಮೂರ್ಛೆಯಿಂದ ಒರಗಿ ಬಿದ್ದಿದ್ದ ದ್ರೌಪದಿಯನ್ನು ಕಂಡು ಭೀಮಾದಿಗಳು ಹಾಯೆಂದು ಬಿದ್ದು ಬಿಟ್ಟರು. ಧರ್ಮಜನು ತನ್ನ ತೊಡೆಯ ಮೇಲೆ ದ್ರೌಪದಿಯನ್ನು ಕುಳ್ಳಿರಿಸಿಕೊಂಡು ಮಂತ್ರಿಸಿದ ನೀರನ್ನು ಪ್ರೋಕ್ಷಿಸಿ ರಕ್ಷೆಯನ್ನು ರಚಿಸಿದನು.

ಅರ್ಥ:
ಬರುತ: ತೆರಳುವಾಗ; ಕಂಡು: ನೋಡು; ಬಟ್ಟೆ: ವಸ್ತ್ರ; ನಿರ್ಭರ: ಬಹಳ, ಅತಿಶಯ; ಮೂರ್ಛೆ: ಜ್ಞಾನವಿಲ್ಲದ ಸ್ಥಿತಿ; ಮೊಹ: ಎಚ್ಚರ ತಪ್ಪುವಿಕೆ; ಅಂತಃಕರಣ: ಚಿತ್ತವೃತ್ತಿ; ಬಿದ್ದು: ಕೆಳಗೆ ಬೀಳು; ಪವನಜ: ಭೀಮ; ಆದಿ: ಮುಂತಾದವರು; ಧರಣಿಪತಿ: ರಾಜ; ತೆಗೆ: ಹೊರತರು; ಕುಳ್ಳಿರಿಸು: ಆಸೀನ; ತೊಡೆ: ಊರು; ಆದರ: ಪ್ರೀತಿ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ನೀರು: ಜಲ; ತಳಿ: ಚಿಮುಕಿಸು, ಸಿಂಪಡಿಸು; ರಕ್ಷೆ: ಕಾಪು, ರಕ್ಷಣೆ; ರಚಿಸು: ನಿರ್ಮಿಸು;

ಪದವಿಂಗಡಣೆ:
ಬರುತ +ಕಂಡರು +ಬಟ್ಟೆಯಲಿ +ನಿ
ರ್ಭರದ +ಮೂರ್ಛಾ +ಮೋಹಿತ+ಅಂತಃ
ಕರಣೆಯನು+ ಹಾಯೆನುತ +ಬಿದ್ದರು +ಪವನಜ+ಆದಿಗಳು
ಧರಣಿಪತಿ +ತೆಗೆದ್+ಈಕೆಯನು +ಕು
ಳ್ಳಿರಿಸಿ+ ತನ್ನಯ +ತೊಡೆಯ +ಮೇಲ್
ಆದರಿಸಿ+ ಮಂತ್ರಿಸಿ +ನೀರ +ತಳಿದನು +ರಕ್ಷೆಗಳ +ರಚಿಸಿ

ಅಚ್ಚರಿ:
(೧) ಪಾಂಡವರ ದುಗುಡವನ್ನು ಚಿತ್ರಿಸುವ ಪರಿ – ಬರುತ ಕಂಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು

ಪದ್ಯ ೨೬: ದ್ರೌಪದಿಯು ಎಲ್ಲಿ ಮೂರ್ಛೆ ಹೋದಳು?

ಗಾಳಿಗೆರಗಿದ ಕದಳಿಯಂತಿರೆ
ಲೋಲಲೋಚನೆ ಥಟ್ಟುಗೆಡೆದಳು
ಮೇಲುಸಿರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ
ಬಾಲೆಯಿರೆ ಬೆಳಗಾಯ್ತು ತೆಗೆದುದು
ಗಾಳಿ ಬಿರುವಳೆ ಭೀಮನಕುಲ ನೃ
ಪಾಲರರಸಿದರೀಕೆಯನು ಕಂಡವರ ಬೆಸಗೊಳುತ (ಅರಣ್ಯ ಪರ್ವ, ೧೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಗಾಳಿಗೆ ಮುರಿದು ಬಿದ್ದ ಬಾಳೆಯಗಿಡದಂತೆ ದ್ರೌಪದಿಯು ನೆಲಕ್ಕೊರಗಿದಳು, ಮೇಲುಸಿರು ಬಿಡುತ್ತಾ ಮೂರ್ಛೆ ಹೋದಳು. ರಾತ್ರಿಯೆಲ್ಲಾ ಅವಳು ಹಾಗೆಯೇ ಇದ್ದಳು. ಬೆಳಗಾದ ಮೇಲೆ ಭೀಮ ನಕುಲ ಧರ್ಮಜರು ಆಕೆಯನ್ನು ಹುಡುಕಿದರು.

ಅರ್ಥ:
ಗಾಳಿ: ವಾಯು; ಎರಗು: ಬಾಗು; ಕದಳಿ: ಬಾಳೆ; ಲೋಲ: ಅತ್ತಿತ್ತ ಅಲುಗಾಡುವ; ಲೋಚನ: ಕಣ್ಣು; ಥಟ್ಟು: ಪಕ್ಕ, ಕಡೆ; ಕೆಡೆ: ಬೀಳು, ಕುಸಿ; ಮೇಲುಸಿರು: ಏದುಸಿರು, ಜೋರಾದ ಉಸಿರಾಟ; ಬಲು: ಬಹಳ; ಮೂರ್ಛೆ: ಜ್ಞಾನವಿಲ್ಲದ ಸ್ಥಿತಿ; ಮುದ್ರಿಸು: ಗುರುತುಮಾಡು; ಚೇತನ: ಚೈತನ್ಯ, ಪ್ರಜ್ಞೆ; ಬಾಲೆ: ಹುಡುಗಿ; ಬೆಳಗು: ಮುಂಜಾವ; ತೆಗೆ: ಹೊರತರು; ಗಾಳಿ: ವಾಯು; ಬಿರುವಳೆ: ಬಿರುಸಾದ ಮಳೆ; ಅರಸು:ಹುಡುಕು; ಕಂಡು: ನೋಡು; ಬೆಸ: ಕೆಲಸ;

ಪದವಿಂಗಡಣೆ:
ಗಾಳಿಗ್+ಎರಗಿದ +ಕದಳಿ+ಯಂತಿರೆ
ಲೋಲಲೋಚನೆ +ಥಟ್ಟು+ಕೆಡೆದಳು
ಮೇಲ್+ಉಸಿರ+ ಬಲು+ ಮೂರ್ಛೆಯಲಿ+ ಮುದ್ರಿಸಿದ+ ಚೇತನದ
ಬಾಲೆಯಿರೆ +ಬೆಳಗಾಯ್ತು +ತೆಗೆದುದು
ಗಾಳಿ +ಬಿರುವಳೆ+ ಭೀಮ+ನಕುಲ+ ನೃ
ಪಾಲರ್+ಅರಸಿದರ್+ಈಕೆಯನು +ಕಂಡವರ +ಬೆಸಗೊಳುತ

ಅಚ್ಚರಿ:
(೧) ಮೂರ್ಛಿತಳಾದಳು ಎಂದು ಹೇಳಲು – ಮೇಲುಸಿರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ
(೨) ಉಪಮಾನದ ಪ್ರಯೋಗ – ಗಾಳಿಗೆರಗಿದ ಕದಳಿಯಂತಿರೆ ಲೋಲಲೋಚನೆ ಥಟ್ಟುಗೆಡೆದಳು

ಪದ್ಯ ೨೫: ದ್ರೌಪದಿಯು ಕಾಡಿನಲ್ಲಿ ಹೇಗೆ ನಡೆದು ಬರುತ್ತಿದ್ದಳು?

ಎಡಹು ಬೆರಳಿನ ಕಾಲ ಮುಳುಗಳ
ಕಡುವಳೆಯ ಘಾಟಳಿಪ ಗಾಳಿಯ
ಸಿಡಿಲು ಮಿಂಚಿನ ಘಲ್ಲಣೆಯ ಘೋರಾಂಧಕಾರದಲಿ
ಒಡನೆ ಮಾನಿಸರಿಲ್ಲ ಕರೆದಡೆ
ನುಡಿವರಿಲ್ಲ ಕರದ್ವಯದಿ ತಡ
ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ (ಅರಣ್ಯ ಪರ್ವ, ೧೦ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕಾಲ್ಬೆರಳುಗಳು ಎಡವಿ ನೊಮ್ದವು. ಅಂಗಾಲಿಗೆ ಮುಳ್ಳುಗಳು ನೆಟ್ಟವು. ಬಿರುಗಾಳಿಯೇ ಬಿರುಮಳೆಯನ್ನು ತಂದು ಮುಖಕ್ಕೆ ಅಪ್ಪಳಿಸುತ್ತಿತ್ತು. ಸಿಡಿಲು ಮಿಂಚುಗಳು ಘೋರವಾದ ಕತ್ತಲಿನಲ್ಲಿ ಬೆದರಿಸುತ್ತಿದ್ದವು. ದ್ರೌಪದಿಯ ಜೊತೆಗೆ ಯಾರೂ ಇರಲಿಲ್ಲ, ಕೂಗಿದರೆ ಉತ್ತರಿಸುವವರಿಲ್ಲ, ಕೈಗಳನ್ನೆತ್ತಿ ದೇಹವನ್ನು ಸಂಬಾಳಿಸುತ್ತಾ ಬರುದ್ದವಳು ಜಾರಿದಳು.

ಅರ್ಥ:
ಎಡಹು: ಎಡವು; ಬೆರಳು: ಅಂಗುಲಿ; ಕಾಲು: ಪಾದ; ಮುಳು: ಮುಳ್ಳು; ಕಡುವಳೆ: ಜೋರಾದ ಮಳೆ; ಅಳಿಪು: ಹಾಳು ಮಾಡು; ಗಾಳಿ: ವಾಯು; ಸಿಡಿಲು: ಚಿಮ್ಮು, ಸಿಡಿ; ಮಿಂಚು: ಹೊಳಪು, ಕಾಂತಿ; ಘಲ್ಲಣೆ: ಘಲ್ ಎನ್ನುವ ಶಬ್ದ; ಘೋರ: ಉಗ್ರ, ಭಯಂಕರ; ಅಂಧಕಾರ: ಕತ್ತಲೆ; ಒಡನೆ: ಕೂಡಲೆ; ಮಾನಿಸ: ಮನುಷ್ಯ; ಕರೆ: ಕೂಗು; ನುಡಿ: ಮಾತಾಡು; ಕರ: ಹಸ್ತ; ಧ್ವಯ: ಎರಡು; ತಡವು: ನೇವರಿಸು, ವಿಳಂಬ; ಪೈಸರ: ಇಳಿಜಾರಾದ ಪ್ರದೇಶ; ಸೂಸು: ಎಸೆ, ಬಿಸುಡು; ಮೈ: ತನು; ಮಹಾಸತಿ: ಶ್ರೇಷ್ಠವಾದ ಗರತಿ (ದ್ರೌಪದಿ);

ಪದವಿಂಗಡಣೆ:
ಎಡಹು +ಬೆರಳಿನ +ಕಾಲ +ಮುಳುಗಳ
ಕಡುವಳೆಯ +ಘಾಟಳಿಪ +ಗಾಳಿಯ
ಸಿಡಿಲು +ಮಿಂಚಿನ +ಘಲ್ಲಣೆಯ +ಘೋರ+ಅಂಧಕಾರದಲಿ
ಒಡನೆ+ ಮಾನಿಸರಿಲ್ಲ+ ಕರೆದಡೆ
ನುಡಿವರಿಲ್ಲ+ ಕರ+ದ್ವಯದಿ +ತಡ
ವಿಡುತ +ಪೈಸರದೊಳಗೆ+ ಸೂಸಿತು +ಮೈ +ಮಹಾಸತಿಯ

ಅಚ್ಚರಿ:
(೧) ಜಾರಿಬಿದ್ದಳು ಎಂದು ಹೇಳಲು – ಪೈಸರದೊಳಗೆ ಸೂಸಿತು ಮೈ ಮಹಾಸತಿಯ

ಪದ್ಯ ೨೪: ದ್ರೌಪದಿಯು ಬಳಲಿದುದೇಕೆ?

ಹೊಳೆವ ಕಂಗಳ ಕಾಂತಿ ಬಲುಗ
ತ್ತಲೆಯ ಝಳುಪಿಸೆ ಘೋರವಿಪಿನದೊ
ಳಲಿಕುಲಾಳಕಿ ಬಂದಳೊಬ್ಬಳೆ ಮಳೆಗೆ ಕೈ ಯೊಡ್ಡಿ
ಬಲಿದು ಮೈನಡನಡುಗಿ ಹಲುಹಲು
ಹಳಚಿ ನೆನೆದಳು ವಾರಿಯಲಿ ತನು
ಹಳಹಳಿಸೆ ಬಲಲಿದಳು ಚರಣದ ಹೊನಲ ಹೋರಟೆಗೆ (ಅರಣ್ಯ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕಣ್ಣಿನ ಕಾಂತಿಯ ಕವಿದ ಕತ್ತಲನ್ನು ಬೆಳಗು ಮಾಡುತ್ತಿರಲು ಭಯಂಕರವಾದ ಕಾಡಿನಲ್ಲಿ ದ್ರೌಪದಿಯೊಬ್ಬಳೇ ಮಳೆಗೆ ಮರೆಯಾಗಿ ಕೈಯೊಡ್ಡಿ ಬಂದಳು. ಶೀತಕ್ಕೆ ಅವಳ ಮೈ ನಡುಗಿತು, ಹಲ್ಲುಗಳು ಕಟಕಟ ಸದ್ದು ಮಾಡಿದವು. ದೇಹವು ಪ್ರಕಾಶಿಸಿತು, ನೀರಿನ ಪ್ರವಾಹದಲ್ಲಿ ಕಾಲನ್ನೇಳೆಯುತ್ತಾ ಒಬ್ಬಳೇ ಆಯಾಸಗೊಂಡು ಬಂದಳು.

ಅರ್ಥ:
ಹೊಳೆ: ಪ್ರಕಾಶಿಸು, ಕಾಂತಿ; ಕಂಗಳು: ಕಣ್ಣು, ನಯನ; ಕತ್ತಲೆ: ಅಂಧಕಾರ; ಝಳು: ತಾಪ; ಘೋರ: ಉಗ್ರ, ಭಯಂಕರ; ವಿಪಿನ: ಕಾಡು; ಅಲಿಕುಳಾಲಕ: ದುಂಬಿಯಂತೆ ಮುಂಗುರುಗಳುಳ್ಳ; ಬಂದು: ಆಗಮಿಸು; ಮಳೆ: ವರ್ಷ; ಕೈ: ಹಸ್ತ; ಒಡ್ಡು: ನೀಡು; ಬಲಿ: ಹೆಚ್ಚಾಗು; ಮೈ: ತನು; ನಡುಗು: ಅದುರು, ಕಂಪನ; ಹಲು: ಹಲ್ಲು; ಹಳಚು; ಸೇರು, ಪ್ರಕಾಶಿಸು; ನೆನೆ: ಒದ್ದೆಯಾಗು; ವಾರಿ: ಜಲ; ತನು: ದೇಹ; ಹಳಹಳಿಸು: ಪ್ರಕಾಶಿಸು; ಬಳಲು: ಆಯಾಸ; ಚರಣ: ಪಾದ; ಹೊನಲು: ಪ್ರವಾಹ, ನೀರೋಟ; ಹೋರಟೆ: ರಭಸ, ವೇಗ;

ಪದವಿಂಗಡಣೆ:
ಹೊಳೆವ +ಕಂಗಳ +ಕಾಂತಿ +ಬಲು
ಕತ್ತಲೆಯ +ಝಳುಪಿಸೆ +ಘೋರ+ವಿಪಿನದೊಳ್
ಅಲಿಕುಲಾಳಕಿ +ಬಂದಳ್+ಒಬ್ಬಳೆ +ಮಳೆಗೆ +ಕೈ +ಯೊಡ್ಡಿ
ಬಲಿದು +ಮೈ+ನಡನಡುಗಿ+ ಹಲುಹಲು
ಹಳಚಿ +ನೆನೆದಳು +ವಾರಿಯಲಿ +ತನು
ಹಳಹಳಿಸೆ+ ಬಳಲಿದಳು +ಚರಣದ +ಹೊನಲ +ಹೋರಟೆಗೆ

ಅಚ್ಚರಿ:
(೧) ದ್ರೌಪದಿಯನ್ನು ಅಲಿಕುಲಾಳಕಿ ಎಂದು ಕರೆದಿರುವುದು
(೨) ದ್ರೌಪದಿಯನ್ನು ಚಿತ್ರಿಸುವ ಪರಿ – ಬಲಿದು ಮೈನಡನಡುಗಿ ಹಲುಹಲು ಹಳಚಿ ನೆನೆದಳು ವಾರಿಯಲಿ ತನು ಹಳಹಳಿಸೆ ಬಲಲಿದಳು ಚರಣದ ಹೊನಲ ಹೋರಟೆಗೆ
(೩) ಜೋಡಿ ಪದಗಳು – ನಡನಡುಗಿ, ಹಲುಹಲು, ಹಳಹಳಿಸೆ

ಪದ್ಯ ೨೩: ಪಾಂಡವರ ಸಂತೋಷವು ಏಕೆ ಮುದುಡಿತು?

ಕೆದರಿತಲ್ಲಿಯದಲ್ಲಿ ಮಳೆಯಲಿ
ಹುದುಗಿತಲ್ಲಿಯದಲ್ಲಿ ಕಣಿಗಿಲು
ಕದಳಿಗಳ ಮರೆಗೊಂಡುಲ್ಲಿಯದಲ್ಲಿ ಹರಿಹರಿದು
ಬೆದರಿತಲ್ಲಿಯದಲ್ಲಿ ಕರಕರ
ದೊದರಿತಲ್ಲಿಯದಲ್ಲಿ ಬಲು ಮಳೆ
ಸದೆದುದಿವರನು ಸೇಡುಗೊಂಡುದು ಜನದ ಸುಮ್ಮಾನ (ಅರಣ್ಯ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಪಾಂಡವರ ಪರಿವಾರದವರು ಅಲ್ಲಲ್ಲೇ ಬೇರೆ ಬೇರೆಯಾಗಿ ಮಳೆಯ ಹೊಡೆತವನ್ನು ತಪ್ಪಿಸಿಕೊಳ್ಳಲು ಕಣಗಿಲು ಬಾಳೆ ಮೊದಲಾದ ಯಾವ ಗಿಡಸಿಕ್ಕರೂ ಅದರ ಮರೆಯಲ್ಲಿ ನಿಂತರು. ನಿಂತವರು ಮಳೆಗಾಳಿಗಳ ಅಬ್ಬರಕ್ಕೆ ಹೆದರಿ ಒಬ್ಬರನ್ನೊಬ್ಬರು ಕೂಗಿ ಕರೆದರು. ಬಿರುಮಳೆಯು ಅವರನ್ನು ಅಪ್ಪಳಿಸಿತು, ಅವರ ಮನಸ್ಸಂತೋಷವು ಮುದುಡಿತು.

ಅರ್ಥ:
ಕೆದರು: ಹರಡು; ಮಳೆ: ವರ್ಷ; ಹುದುಗು: ಸಂಬಂಧ, ಸೇರು; ಕದಳಿ: ಬಾಳೆ; ಮರೆ: ಮೊರೆ,ಶರಣು; ಹರಿ: ಓಡು, ಧಾವಿಸು; ಬೆದರು: ಹೆದರು; ಅದರು: ನಡುಗು; ಬಲು: ಬಹಳ; ಸದೆದು: ಬಡಿ, ಕೊಲ್ಲು; ಸೇಡು: ಸೆಡೆಯುವಿಕೆ, ವೈರಿ; ಜನ: ಮನುಷ್ಯ; ಸುಮ್ಮಾನ: ಸಂತೋಷ;

ಪದವಿಂಗಡಣೆ:
ಕೆದರಿತ್+ಅಲ್ಲಿಯದಲ್ಲಿ+ ಮಳೆಯಲಿ
ಹುದುಗಿತ್+ಅಲ್ಲಿಯದಲ್ಲಿ+ ಕಣಿಗಿಲು
ಕದಳಿಗಳ +ಮರೆಗೊಂಡ್+ಉಲ್ಲಿಯದಲ್ಲಿ +ಹರಿಹರಿದು
ಬೆದರಿತ್+ಅಲ್ಲಿಯದಲ್ಲಿ +ಕರಕರದ್
ಒದರಿತ್+ಅಲ್ಲಿಯದಲ್ಲಿ +ಬಲು +ಮಳೆ
ಸದೆದುದ್+ಇವರನು+ ಸೇಡುಗೊಂಡುದು +ಜನದ +ಸುಮ್ಮಾನ

ಅಚ್ಚರಿ:
(೧) ಅಲ್ಲಿಯದಲ್ಲಿ – ಪದದ ಬಳಕೆ