ಪದ್ಯ ೨೨: ಬಿರುಗಾಳಿಯ ಚಿತ್ರಣ ಹೇಗಿತ್ತು?

ಮರಮರನ ತಕ್ಕೈಸಿದವು ಕುಲ
ಗಿರಿಯ ಗಿರಿ ಮುಂಡಾಡಿದವು ತೆರೆ
ತೆರೆಗಳಲಿ ತೆರೆ ತಿವಿದಾಡಿದವು ಸಾಗರದ ಸಾಗರದ
ಧರಣಿ ಕದಡಲು ಸವಡಿಯಡಕಿಲು
ಜರಿಯದಿಹುದೇ ಜಗದ ಬೋನಕೆ
ಹರಿಗೆ ಹೇಳೆನೆ ಬೀಸಿದುದು ಬಿರುಗಾಳಿ ಬಿರುಸಿನಲಿ (ಅರಣ್ಯ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮರಗಳು ಒಂದನ್ನೊಂದು ಅಪ್ಪಿದವು. ಕುಲಗಿರಿಗಳನ್ನು ಗಿರಿಗಳು ಮುಂಡಾಡಿದವು ಸಾಗರಗಳ ತೆರೆಗಳು ಇನ್ನೊಂದು ಸಾಗರದ ತೆರೆಗಳಿಗೆ ಅಪ್ಪಳಿಸಿದವು. ಭೂಮಿ ಕದಡಿತು. ಜೋಡಿಸಿದ ಲೋಕಗಳ ಅಡಕಿಲು ಜಾರಿ ಬೀಳದಿದ್ದೀತೆ. ಲೋಕವನ್ನು ನುಂಗಲು ವಾಯುವಿಗೆ ಆಹ್ವಾನ ಕೊಡಿರೆಂದು ಹೇಳುವಂತೆ ಬಿರುಗಾಳಿ ಬಿರುಸಿನಿಂದ ಬೀಸಿತು.

ಅರ್ಥ:
ಮರ: ತರು, ವೃಕ್ಷ; ತಕ್ಕೈಸು: ಅಪ್ಪು; ಗಿರಿ: ಬೆಟ್ಟ; ಮುಂಡಾಡು: ಮುದ್ದಾಡು, ಪ್ರೀತಿಸು; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ತಿವಿ: ಹೊಡೆತ, ಗುದ್ದು; ಸಾಗರ: ಸಮುದ್ರ; ಧರಣಿ: ಭೂಮಿ; ಕದಡು: ಕಲಕು; ಸವಡು: ಪುರಸತ್ತು; ಜರಿ: ನಿಂದಿಸು, ತಿರಸ್ಕರಿಸು; ಜಗ: ಜಗತ್ತು; ಬೋನ:ಅನ್ನ, ಆಹಾರ; ಹರಿ: ಕಡಿ, ಕತ್ತರಿಸು; ಬೀಸು: ಒಗೆ, ಎಸೆ, ಬಿಸಾಡು; ಬಿರುಗಾಳಿ: ಬಿರುಸಿನಿಂದ ಬೀಸುವ ಗಾಳಿ; ಬಿರುಸು: ಒರಟು, ಕಠಿಣ;

ಪದವಿಂಗಡಣೆ:
ಮರಮರನ +ತಕ್ಕೈಸಿದವು +ಕುಲ
ಗಿರಿಯ +ಗಿರಿ+ ಮುಂಡಾಡಿದವು +ತೆರೆ
ತೆರೆಗಳಲಿ +ತೆರೆ+ ತಿವಿದಾಡಿದವು +ಸಾಗರದ +ಸಾಗರದ
ಧರಣಿ+ ಕದಡಲು +ಸವಡಿ+ಅಡಕಿಲು
ಜರಿಯದಿಹುದೇ +ಜಗದ +ಬೋನಕೆ
ಹರಿಗೆ +ಹೇಳೆನೆ +ಬೀಸಿದುದು +ಬಿರುಗಾಳಿ +ಬಿರುಸಿನಲಿ

ಅಚ್ಚರಿ:
(೧) ಬಿ ಕಾರದ ತ್ರಿವಳಿ ಪದ – ಬೀಸಿದುದು ಬಿರುಗಾಳಿ ಬಿರುಸಿನಲಿ
(೨) ಜೋಡಿ ಪದಗಳ ಬಳಕೆ – ಮರಮರ, ಗಿರಿಯ ಗಿರಿ, ತೆರೆ ತೆರೆ, ಸಾಗರದ ಸಾಗರದ

ಪದ್ಯ ೨೧: ಆಗಸದಲ್ಲಿ ಯಾವ ಧ್ವಜಗಳು ತೋರಿದವು?

ಮರುದಿವಸವಲ್ಲಿಂದ ಬೆಟ್ಟದ
ಹೊರಗೆ ನಡೆತರಲಭ್ರದಲಿ ಗುಡಿ
ಯಿರಿದು ಮೆರೆದುದು ಮೇಘಮಿಂಚಿದುದಖಿಳದೆಸೆದೆಸೆಗೆ
ಬರಸಿಡಿಲ ಬೊಬ್ಬೆಯಲಿ ಪರ್ವತ
ಬಿರಿಯೆ ಬಲುಗತ್ತಲೆಯ ಬಿಂಕಕೆ
ನರರ ಕಣ್ಮನ ಹೂಳೆ ತೂಳಿತು ಮಳೆ ಮಹೀತಳವ (ಅರಣ್ಯ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಮರುದಿನ ಧರ್ಮಜನ ಸಂಗಡದಲ್ಲಿದ್ದವರೆಲ್ಲರೂ ಆ ಸ್ಥಳವನ್ನು ಬಿಟ್ಟು ಬರುತ್ತಿದ್ದರು. ಆಗ ಆಗಸದಲ್ಲಿ ಮೇಘಗಳ ಧ್ವಜ ಹಾರಿಗು, ದಿಕ್ಕು ದಿಕ್ಕುಗಳಲ್ಲೂ ಮಿಂಚು ಕಾಣಿಸಿತು. ಸಿಡಿಲಬೊಬ್ಬೆಗೆ ಪರ್ವತ ಶಿಖರಗಳು ಬಿರಿದವು. ಸುತ್ತಲೂ ಕತ್ತಲು ಕವಿಯಿತು. ಮಳೆಯು ಭೂಮಿಯನ್ನಪ್ಪಳಿಸಿತು.

ಅರ್ಥ:
ಮರುದಿವಸ: ನಾಳೆ, ಮುಂದಿನ ದಿನ; ಬೆಟ್ಟ: ಗಿರಿ; ಹೊರಗೆ: ಆಚೆ; ನಡೆ: ಚಲಿಸು; ಅಭ್ರ: ಆಗಸ; ಗುಡಿ: ಧ್ವಜ, ಬಾವುಟ; ಇರಿ: ತಿವಿ, ಚುಚ್ಚು; ಮೆರೆ: ಹೊಳೆ, ಪ್ರಕಾಶಿಸು; ಮೇಘ: ಮೋಡ; ಮಿಂಚು: ಹೊಳಪು, ಕಾಂತಿ; ಅಖಿಳ: ಎಲ್ಲಾ; ದೆಸೆ: ದಿಕ್ಕು; ಬರಸಿಡಿಲು: ಅಕಾಲದಲ್ಲಿ ಬೀಳುವ ಸಿಡಿಲು; ಬೊಬ್ಬೆ: ಆರ್ಭಟ; ಪರ್ವತ: ಗಿರಿ; ಬಿರಿ: ಸೀಳು; ಕತ್ತಲೆ: ಅಂಧಕಾರ; ಬಿಂಕ: ಗರ್ವ, ಜಂಬ; ನರ: ಮನುಷ್ಯ; ಕಣ್ಮನ: ನಯನ ಮತ್ತು ಮನಸ್ಸು; ಹೊಳೆ: ಪ್ರಕಾಶಿಸು; ತೂಳು: ಹರಡು; ಮಳೆ: ವರ್ಷ; ಮಹೀತಳ; ಭೂಮಿ;

ಪದವಿಂಗಡಣೆ:
ಮರುದಿವಸವ್+ಅಲ್ಲಿಂದ +ಬೆಟ್ಟದ
ಹೊರಗೆ +ನಡೆತರಲ್+ಅಭ್ರದಲಿ +ಗುಡಿ
ಯಿರಿದು +ಮೆರೆದುದು +ಮೇಘ+ಮಿಂಚಿದುದ್+ಅಖಿಳ+ದೆಸೆದೆಸೆಗೆ
ಬರಸಿಡಿಲ+ ಬೊಬ್ಬೆಯಲಿ +ಪರ್ವತ
ಬಿರಿಯೆ +ಬಲು+ಕತ್ತಲೆಯ +ಬಿಂಕಕೆ
ನರರ+ ಕಣ್ಮನ +ಹೂಳೆ +ತೂಳಿತು+ ಮಳೆ +ಮಹೀತಳವ

ಅಚ್ಚರಿ:
(೧) ಆಗಸದ ಚಿತ್ರಣವನ್ನು ಹೇಳುವ ಪರಿ – ಅಭ್ರದಲಿ ಗುಡಿಯಿರಿದು ಮೆರೆದುದು ಮೇಘಮಿಂಚಿದುದಖಿಳದೆಸೆದೆಸೆಗೆ ಬರಸಿಡಿಲ ಬೊಬ್ಬೆಯಲಿ ಪರ್ವತ ಬಿರಿಯೆ

ಪದ್ಯ ೨೦: ಯುಧಿಷ್ಠಿರನು ಯಾವ ಅರಣ್ಯಪ್ರದೇಶಕ್ಕೆ ಬಂದನು?

ಅರಸಬಂದನು ಗಂಧಮಾದನ
ಗಿರಿಯತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿ ಜನಸಹಿತ
ಸರಸಿನೆರೆಯವು ಸ್ನಾನಪಾನಕೆ
ತರುಲತಾವಳಿಗಳು ಯುಧಿಷ್ಠಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳೆಂದ (ಅರಣ್ಯ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಯುಧಿಷ್ಠಿರನು ಗಂಧಮಾದನ ಗಿರಿಯ ತಪ್ಪಲಿಗೆ ಅಗ್ನಿಹೋತ್ರಿಗಳಾದ ಬ್ರಾಹ್ಮಣರು, ದ್ರೌಪದಿ ಮತ್ತು ನಿಯೋಗಿಗಳೊಡನೆ ಬಂದನು. ಅಲ್ಲಿನ ಸರೋವರಗಳು ಆ ಸಮೂಹಕ್ಕೆ ಸ್ನಾನಪಾನಗಳಿಗೆ ಸಾಕಾಗಲಿಲ್ಲ. ಅಲ್ಲಿನ ಮಗರಿಡಗಳು ಧರ್ಮರಾಯನ ಪರಿವಾರದವರಿಗೆ ಸಾಕಾಗಲಿಲ್ಲ.

ಅರ್ಥ:
ಅರಸ: ರಾಜ; ಬಂದನು: ಆಗಮಿಸು; ಗಿರಿ: ಬೆಟ್ಟ; ತಪ್ಪಲು: ಬೆಟ್ಟದ ಪಕ್ಕದ ಪ್ರದೇಶ; ಅಗ್ನಿಹೋತ್ರ: ಅಗ್ನಿಯನ್ನು ಉದ್ದೇಶಿಸಿ ಮಾಡುವ ಹೋಮ; ಪರಮ: ಶ್ರೇಷ್ಠ; ಋಷಿ: ಮುನಿ; ಮಡದಿ: ಹೆಂದತಿ; ಸಕಲ: ಎಲ್ಲಾ; ನಿಯೋಗ: ಸೇರು, ಕೆಲಸ; ಸಹಿತ: ಜೊತೆ; ಸರಸಿ: ನೀರು; ಸ್ನಾನ: ಅಭ್ಯಂಜನ; ಪಾನ: ಕುಡಿ; ತರು: ಮರ; ಲತೆ: ಬಳ್ಳಿ; ಆವಳಿ: ಸಾಲು; ಅರಮನೆ: ಆಲಯ; ಸೀವಟ: ಹಿಂಡು, ಹಣ್ಣಿನ ರಸ; ಸಾಲವು: ಕಡಿಮೆಯಾಗು; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸ+ಬಂದನು +ಗಂಧಮಾದನ
ಗಿರಿಯ+ತಪ್ಪಲಿಗ್+ಅಗ್ನಿಹೋತ್ರದ
ಪರಮ+ಋಷಿಗಳು +ಮಡದಿ +ಸಕಲ +ನಿಯೋಗಿ +ಜನಸಹಿತ
ಸರಸಿನೆರೆಯವು +ಸ್ನಾನ+ಪಾನಕೆ
ತರು+ಲತಾವಳಿಗಳು +ಯುಧಿಷ್ಠಿರನ್
ಅರಮನೆಯ+ ಸೀವಟಕೆ +ಸಾಲವು +ನೃಪತಿ +ಕೇಳೆಂದ

ಅಚ್ಚರಿ:
(೧) ಅರಸ, ನೃಪತಿ – ಸಮನಾರ್ಥಕ ಪದ

ಪದ್ಯ ೧೯: ಧರ್ಮಜನು ಯಾವ ವನಕ್ಕೆ ಹೊರಟನು?

ಕೇಳಲಷ್ಟಾವಕ್ರ ಚರಿತವ
ಹೇಳಿದನು ಲೋಮಶ ಮುನೀಂದ್ರ ನೃ
ಪಾಲಕಂಗರುಹಿದನು ಪೂರ್ವಾಪರದ ಸಂಗತಿಯ
ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು ಗಂಧಮಾದನ
ಶೈಲವನದಲಿ ವಾಸವೆಂದವನೀಶ ಹೊರವಂಟ (ಅರಣ್ಯ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಷ್ಟಾವಕ್ರನ ಚರಿತ್ರೆಯನ್ನು ಹೇಳೆಂದು ಕೇಳಲು ಲೋಮಶನು ಆ ಕಥೆಯನ್ನೆಲ್ಲವನ್ನೂ ಹೇಳಿದನು. ಪಾಂಡವರಿದ್ದ ಅಡವಿಯಲ್ಲಿ ಹಣ್ಣು ಹೂವುಗಳು ಪಕ್ಷಿ ಮೃಗಗಳು ಸವೆದು ಹೋಗಲು, ಗಂಧಮಾದನಗಿರಿಯ ವನಕ್ಕೆ ಹೋಗೋಣವೆಂದು ಧರ್ಮಜನು ಹೊರಟನು.

ಅರ್ಥ:
ಕೇಳು: ಆಲಿಸು; ಚರಿತ: ಕಥೆ; ಮುನಿ: ಋಷಿ; ನೃಪಾಲ: ರಾಜ; ಅರುಹು: ತಿಳಿಸು, ಹೇಳು; ಪೂರ್ವಾಪರ: ಹಿಂದು ಮುಂದು; ಸಂಗತಿ: ವಿಷಯ; ಭಾಳಡವಿ: ದೊಡ್ಡ ಕಾಡು; ಬಯಲು: ಬರಿದಾದ ಜಾಗ; ಖಗ: ಪಕ್ಷಿ; ಮೃಗ: ಪ್ರಾಣಿ; ಜಾಲ: ಗುಂಪು; ಸವೆ: ಉಂಟಾಗು; ಶೈಲ: ಬೆಟ್ಟ; ವಾಸ: ಜೀವಿಸು; ಅವನೀಶ: ರಾಜ; ಹೊರವಂಟ: ತೆರಳು;

ಪದವಿಂಗಡಣೆ:
ಕೇಳಲ್+ಅಷ್ಟಾವಕ್ರ +ಚರಿತವ
ಹೇಳಿದನು +ಲೋಮಶ +ಮುನೀಂದ್ರ +ನೃ
ಪಾಲಕಂಗ್+ಅರುಹಿದನು +ಪೂರ್ವಾಪರದ+ ಸಂಗತಿಯ
ಭಾಳಡವಿ+ ಬಯಲಾಯ್ತು +ಖಗ+ಮೃಗ
ಜಾಲ +ಸವೆದುದು +ಗಂಧಮಾದನ
ಶೈಲವನದಲಿ +ವಾಸವೆಂದ್+ಅವನೀಶ +ಹೊರವಂಟ

ಅಚ್ಚರಿ:
(೧) ಅಡವಿಯು ಬರಡಾಯಿತು ಎಂದು ಹೇಳಲು – ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು

ಪದ್ಯ ೧೮: ಲೋಮಶನು ಧರ್ಮಜನಿಗೆ ಯಾವ ಕಥೆಗಳನ್ನು ಹೇಳಿದನು?

ಸೋಮಕನ ಚರಿತವ ಮರುತ್ತಮ
ಹಾಮಹಿಮಾನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಥಾಂತರವ
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾಂಸವ
ನಾ ಮಹೇಂದ್ರಾದಿಗಳಿಗಿತ್ತ ವಿಚಿತ್ರ ವಿಸ್ತರವ (ಅರಣ್ಯ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸೋಮಕನ ಚರಿತ್ರೆ, ಮರುತ್ತನ ಆಚಾರ, ಧರ್ಮದ ಆಚರಣೆ, ಯಯಾತಿಯ ಸತ್ಕಥೆ, ಶಿಖಿಯು ದೇವೆಂದ್ರನಿಗೆ ಮಾಂಸವನ್ನೇ ದಾನ ಮಾಡಿದ್ದು, ಮೊದಲಾದ ಅನೇಕ ವಿಚಿತ್ರ ಕಥೆಗಳ ಪ್ರಸಂಗವನ್ನು ಲೋಮಶನು ಧರ್ಮಜನಿಗೆ ಹೇಳಿದನು.

ಅರ್ಥ:
ಚರಿತ: ಕಥೆ; ಮಹಿಮ: ಹಿರಿಮೆ ಯುಳ್ಳವನು, ಮಹಾತ್ಮ; ಆಚಾರ: ಕಟ್ಟುಪಾಡು, ಸಂಪ್ರದಾಯ; ಸ್ತೋಮ: ಗುಂಪು, ಸಮೂಹ; ವಿರಚಿಸು: ನಿರ್ಮಿಸು; ಭೂಮಿಪತಿ: ರಾಜ; ಭೂಮಿ: ಇಳೆ; ಉದ್ಧಾಮ: ಶ್ರೇಷ್ಠ; ಮಾಂಸ: ಅಡಗು; ಮಹೇಂದ್ರ: ಇಂದ್ರ; ವಿಚಿತ್ರ: ಆಶ್ಚರ್ಯಕರವಾದ; ವಿಸ್ತರ:ಹಬ್ಬುಗೆ, ವಿಸ್ತಾರ;

ಪದವಿಂಗಡಣೆ:
ಸೋಮಕನ+ ಚರಿತವ +ಮರುತ್ತ+ಮ
ಹಾಮಹಿಮನ್+ಆಚಾರ +ಧರ್ಮ
ಸ್ತೋಮವನು +ವಿರಚಿಸಿ +ಯಯಾತಿಯ +ಸತ್ಕಥಾಂತರವ
ಭೂಮಿಪತಿ +ಕೇಳಿದನು +ಶಿಬಿ
ಉದ್ದಾಮ+ತನವನು +ತನ್ನ +ಮಾಂಸವನ್
ಆ+ಮಹೇಂದ್ರಾದಿಗಳಿಗಿತ್ತ+ ವಿಚಿತ್ರ +ವಿಸ್ತರವ

ಅಚ್ಚರಿ:
(೧) ಸೋಮಕ, ಮರುತ್ತ, ಯಯಾತಿ, ಶಿಬಿ – ಕಥಾನಾಯಕರ ಹೆಸರುಗಳು

ಪದ್ಯ ೧೭: ಲೋಮಶನು ಯಾರ ಚರಿತ್ರೆಯನ್ನು ಧರ್ಮಜನಿಗೆ ತಿಳಿಸಿದನು?

ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿಮಖ ಹವಿರ್ಭಾಗ ಪ್ರಸಂಗತಿಯ
ಅವರಿಗಿಂದ್ರನ ಮತ್ಸರವ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾಂಧಾತ ಚರಿತವನೊರೆದನಾ ಮುನಿಪ (ಅರಣ್ಯ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಚ್ಯವನನ ವಿವಾಹ ಅಶ್ವಿನೀದೇವತೆತಳು ಅವನಿಗೆ ರೂಪವನ್ನು ಕೊಟ್ಟದ್ದು, ಅವರಿಗೆ ಯಾಗದ ಹವಿರ್ಭಾಗವನ್ನು ಕೊಟ್ಟಿದ್ದು ಅದರಿಂದ ಇಂದ್ರನಿಗೆ ಬಂದ ಹೊಟ್ಟೆಕಿಚ್ಚು, ರಾಕ್ಷಸನ ನಿರ್ಮಾಣ ಮೊದಲಾದವುಗಳನ್ನು ಹೇಳಿ ಲೋಮಶನು ಮಾಂಧಾತ ಚರಿತ್ರೆಯನ್ನು ಧರ್ಮಜನಿಗೆ ತಿಳಿಸಿದನು.

ಅರ್ಥ:
ಮುನಿ: ಋಷಿ; ವಿವಾಹ: ಮದುವೆ; ರೂಪ: ಆಕಾರ; ಮಖ: ಯಜ್ಞ; ಹವಿಸ್ಸು: ಹವಿ, ಚರು; ಹವಿ: ಯಜ್ಞದಲ್ಲಿ ಆಹುತಿ ಕೊಡುವ ತುಪ್ಪ; ಭಾಗ: ಅಂಶ, ಪಾಲು; ಪ್ರಸಂಗ: ಸೇರಿಕೆ, ಕೂಟ; ಮತ್ಸರ: ಹೊಟ್ಟೆಕಿಚ್ಚು; ದಾನವ: ರಾಕ್ಷಸ; ನಿರ್ಮಾಣ: ರಚಿಸು; ಬಳಿಕ: ನಂತರ; ಅವನಿಪ: ರಾಜ; ಚರಿತ: ಕಥೆ; ಉರೆ: ಅತಿಶಯವಾಗಿ;

ಪದವಿಂಗಡಣೆ:
ಚ್ಯವನ +ಮುನಿಯ +ವಿವಾಹವನು +ರೂ
ಪವನು +ಮುನಿಗ್+ಅಶ್ವಿನಿಗಳ್+ಇತ್ತುದನ್
ಅವರಿಗ್+ಆ+ ಮುನಿ+ಮಖ +ಹವಿರ್ಭಾಗ +ಪ್ರಸಂಗತಿಯ
ಅವರಿಗ್+ಇಂದ್ರನ +ಮತ್ಸರವ +ದಾ
ನವನ +ನಿರ್ಮಾಣವನು +ಬಳಿಕಿನೊಳ್
ಅವನಿಪಗೆ +ಮಾಂಧಾತ +ಚರಿತವನೊರೆದನಾ +ಮುನಿಪ

ಅಚ್ಚರಿ:
(೧) ಮುನಿ – ೧-೩ ಸಾಲಿನ ಎರಡನೇ ಪದ