ಪದ್ಯ ೧೧: ಇಂದ್ರನು ವೃತನನ್ನು ಹೇಗೆ ಕೊಂದನು?

ಆ ಮುನಿಯ ಕಂಕಾಳದಲಿ ಸು
ತ್ರಾಮಕೊಂದನು ವೃತ್ರನನು ಬಳಿ
ಕಾ ಮಹಾದಾನವರು ರಕ್ಕಸಕೋಟಿಜಲಧಿಯಲಿ
ಭೀಮಬಲರಡಗಿದರು ಬಂದೀ
ಭೂಮಿಯಲ್ಲಿ ವಸಿಷ್ಠನಾಶ್ರಮ
ದಾ ಮುನೀಂದ್ರರ ತಿಂದರಂದು ಸಹಸ್ರ ಸಂಖ್ಯೆಯಲಿ (ಅರಣ್ಯ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ದಧೀಚಿಯ ಎಲುಬಿನಿಂದ ವಜ್ರಾಯುಧವನ್ನು ರೈಸಿ ಇಂದ್ರನು ವೃತನನ್ನು ಸಂಹರಿಸಿದನು. ಆಗ ಅನಂತ ಸಂಖ್ಯೆಯ ರಾಕ್ಷಸರು ಸಮುದ್ರದಲ್ಲಿ ಅಡಗಿಕೊಂಡು ಹೊರಕ್ಕೆ ಬಂದ ಮೇಲೆ ಅವರು ಭೂಮಿಯಲ್ಲಿ ವಸಿಷ್ಠರ ಆಶ್ರಮದ ಸಾವಿರಾರು ಮುನಿಗಳನ್ನು ತಿಂದರು.

ಅರ್ಥ:
ಮುನಿ: ಋಷಿ; ಕಂಕಾಳ: ಅಸ್ತಿಪಂಜರ; ಸುತ್ರಾಮ: ಇಂದ್ರ; ಕೊಲ್ಲು: ಸಾಯಿಸು; ಬಳಿಕ: ನಂತರ; ದಾನವ: ರಾಕ್ಷಸ; ರಕ್ಕಸ: ನೆತ್ತರು; ಜಲಧಿ: ಸಾಗರ; ಭೀಮ: ಭಯಂಕರವಾದ; ಬಲ: ಶಕ್ತಿ; ಅಡಗು: ಅವಿತುಕೊಳ್ಳು; ಭೂಮಿ: ಧರಣಿ; ಆಶ್ರಮ: ಕುಟೀರ; ಮುನೀಂದ್ರ: ಋಷಿವರ್ಯ; ತಿಂದು: ಭಕ್ಷಿಸು; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಆ+ ಮುನಿಯ +ಕಂಕಾಳದಲಿ +ಸು
ತ್ರಾಮ+ಕೊಂದನು +ವೃತ್ರನನು +ಬಳಿ
ಕಾ +ಮಹಾ+ದಾನವರು+ ರಕ್ಕಸ+ಕೋಟಿ+ಜಲಧಿಯಲಿ
ಭೀಮ+ಬಲರ್+ಅಡಗಿದರು+ ಬಂದೀ
ಭೂಮಿಯಲ್ಲಿ +ವಸಿಷ್ಠನ್+ಆಶ್ರಮದ್
ಆ+ ಮುನೀಂದ್ರರ +ತಿಂದರ್+ಅಂದು +ಸಹಸ್ರ+ ಸಂಖ್ಯೆಯಲಿ

ಅಚ್ಚರಿ:
(೧) ರಾಕ್ಷಸರು ಅಡಗಿಕೊಂಡ ಪರಿ – ಮಹಾದಾನವರು ರಕ್ಕಸಕೋಟಿಜಲಧಿಯಲಿ
ಭೀಮಬಲರಡಗಿದರು

ಪದ್ಯ ೧೦: ಲೋಮಶ ಮುನಿಯು ಯಾವ ಕಥೆಯನ್ನು ಧರ್ಮಜನಿಗೆ ಹೇಳಿದರು?

ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬಂದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳೆಯವನಾ ಮುನಿಯಚರಿತವನು
ತಿಳುಹಿದನು ಲೋಮಶನು ವೃತ್ರನ
ಕಲಹಕೆಂದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದನರುಹಿದನು ಜನಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಂತರ ಲೋಮಶ ಮುನಿಯ ಜೊತೆ ಧರ್ಮರಾಯನು ಅಗಸ್ತ್ಯರ ಆಶ್ರಮಕ್ಕೆ ಬಂದು ಅಲ್ಲಿ ಬೀಡು ಬಿಟ್ಟನು. ಲೋಮಶನು ಅಗಸ್ತ್ಯನ ಚರಿತ್ರೆಯನ್ನು ಹೇಳಿದ ಬಳಿಕ ದಧೀಚಿಯ ಎಲುಬನ್ನು ದೇವತೆಗಳು ಬೇಡಿದ ಕಥೆಯನ್ನು ಹೇಳಿದನು.

ಅರ್ಥ:
ಬಳಿಕ: ನಂತರ; ಸಹಿತ: ಜೊತೆ; ನೃಪ: ರಾಜ; ಕುಲ: ವಂಶ; ತಿಲಕ: ಶ್ರೇಷ್ಠ; ನೃಪಕುಲತಿಲಕ: ಶ್ರೇಷ್ಠನಾದ ರಾಜ; ಆಶ್ರಮ: ಕುಟೀರ; ಪಾಳೆಯ: ಬೀಡು, ಶಿಬಿರ; ಮುನಿ: ಋಷಿ; ಚರಿತ: ವಿಚಾರ, ಕಥೆ; ತಿಳುಹು: ತಿಳಿಸು; ಕಲಹ: ಜಗಳ; ಮುನಿಪತಿ: ಋಷಿ; ಯೆಲುಬು: ಮೂಳೆ; ಅಮರ: ದೇವತೆ; ಬೇಡು: ಕೇಳು; ಅಉಹು: ತಿಳಿಸು; ಜನಪತಿ: ರಾಜ;

ಪದವಿಂಗಡಣೆ:
ಬಳಿಕ +ಲೋಮಶ +ಸಹಿತ +ನೃಪಕುಲ
ತಿಲಕ +ಬಂದನ್+ಅಗಸ್ತ್ಯನ್+ಆಶ್ರಮ
ದೊಳಗೆ +ಬಿಟ್ಟನು +ಪಾಳೆಯವನಾ+ ಮುನಿಯ+ಚರಿತವನು
ತಿಳುಹಿದನು +ಲೋಮಶನು +ವೃತ್ರನ
ಕಲಹಕೆಂದು +ದಧೀಚಿ +ಮುನಿಪತಿ
ಯೆಲುವನ್+ಅಮರರು +ಬೇಡಿದುದನ್+ಅರುಹಿದನು +ಜನಪತಿಗೆ

ಅಚ್ಚರಿ:
(೧) ಯುಧಿಷ್ಠಿರನನ್ನು ನೃಪಕುಲತಿಲಕ ಎಂದು ಕರೆದಿರುವುದು

ಪದ್ಯ ೯: ಧರ್ಮಜನಿಗೆ ಯಾವ ವಿದ್ಯೆಯನ್ನು ಬೋಧಿಸಲಾಯಿತು?

ನಳ ಮಹೀಪತಿ ಯಕ್ಷ ಹೃದಯವ
ತಿಳಿದು ಋತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕರನ ವಿದ್ಯಾತಿ ಮಹಿಮೆಯಲಿ
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯಕೊಂಡರು ಮರಳಿ ಜೂಜಿಂ
ಗಳುಕಬೇಡೆಂದಕ್ಷಹೃದಯವ ಮುನಿಪ ಕರುಣಿಸಿದ (ಅರಣ್ಯ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ನಳನು ಋತುಪರ್ಣನಿಂದ ಅಕ್ಷಹೃದಯವನ್ನು ಕಲಿತನು, ಕಾಲವು ಕಳೆದ ಮೇಲೆ ಪುಷ್ಕರನನ್ನು ಅಕ್ಷಹೃದಯದ ಮಹಿಮೆಯಿಂದ ಗೆದ್ದನು. ಶಕುನಿ ಕೌರವರು ನಿನ್ನನ್ನು ಪಗಡೆಯಲ್ಲಿ ಸೋಲಿಸಿ ನಿನ್ನ ರಾಜ್ಯವನ್ನು ಗೆದ್ದುಕೊಂಡರು. ಮತ್ತೊಮ್ಮೆ ನಿನ್ನನ್ನು ಜೂಜಿಗೆ ಕರೆದರೂ ನೀನು ಹೆದರಬೇಡ ಎಂದು ಧರ್ಮಜನಿಗೆ ಅಕ್ಷಹೃದಯವನ್ನು ಬೋಧಿಸಿದನು.

ಅರ್ಥ:
ಮಹೀಪತಿ: ರಾಜ; ಹೃದಯ: ವಕ್ಷಸ್ಥಳ; ಅಕ್ಷ: ಪಗಡೆಯ ಜೂಜು; ಅಕ್ಷಹೃದಯ: ಪಗಡೆಯ ಆಟದ ಗುಟ್ಟು; ತಿಳಿ: ಅರ್ಥೈಸು; ಕಾಲ: ಸಮಯ; ಕಳೆ: ತೊರೆ, ಹೋಗಲಾಡಿಸು; ಗೆಲಿ: ಜಯಗಳಿಸು; ವಿದ್ಯ: ಜ್ಞಾನ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಇಳೆ: ಭೂಮಿ; ಮರಳಿ: ಮತ್ತೆ; ಜೂಜು: ದ್ಯೂತ; ಅಳುಕು: ಹೆದರು; ಮುನಿಪ: ಋಷಿ; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ನಳ +ಮಹೀಪತಿ+ ಅಕ್ಷಹೃದಯವ
ತಿಳಿದು +ಋತುಪರ್ಣನಲಿ +ಕಾಲವ
ಕಳೆದು +ಗೆಲಿದನು +ಪುಷ್ಕರನ +ವಿದ್ಯಾತಿ +ಮಹಿಮೆಯಲಿ
ಗೆಲಿದು+ ಕೌರವ+ ಶಕುನಿಗಳು+ ನಿನ್
ಇಳೆಯ+ಕೊಂಡರು +ಮರಳಿ +ಜೂಜಿಂಗ್
ಅಳುಕ+ಬೇಡೆಂದ್+ಅಕ್ಷಹೃದಯವ +ಮುನಿಪ +ಕರುಣಿಸಿದ

ಅಚ್ಚರಿ:
(೧) ಅಕ್ಷಹೃದಯ ವಿದ್ಯೆಯ ಮಹಿಮೆ ಬಗ್ಗೆ ತಿಳಿಸುವ ಪದ್ಯ

ಪದ್ಯ ೮: ಯುಧಿಷ್ಠಿರನನ್ನು ಯಾರು ಸಮಾಧಾನ ಪಡಿಸಿದರು?

ಆತನಾಪತ್ತದು ಮಹೀಪತಿ
ನೀ ತಳೋದರಿ ಸಹಿತ ನಿನ್ನೀ
ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯಜನ ಸಹಿತ
ಕಾತರಿಸುತಿಹೆ ನಿನ್ನವೊಲು ವಿ
ಖ್ಯಾತರಾರೈ ಪುಣ್ಯತರರೆಂ
ದಾ ತಪೋನಿಧಿ ಸಂತವಿಟ್ಟನು ಧರ್ಮನಂದನನ (ಅರಣ್ಯ ಪರ್ವ, ೧೦ ಸಂಧಿ, ೮ ಪದ್ಯ)

ತಾತ್ಪರ್ಯ:
ನಳನಿಗೆ ಅಂತಹ ಆಪತ್ತು ಬಂತು, ಧರ್ಮನಂದನ, ನೀನಾದರೋ ನಿನ್ನ ಪತ್ನಿ ಸಹೋದರಉ ಮತ್ತು ಮಹರ್ಷಿಗಳೊಡನೆ ಇದ್ದರೂ ಕಾತರಿಸುತ್ತಿರುವೆ, ರಾಜ, ನಿನ್ನಂತಹ ಪ್ರಖ್ಯಾತರು ಯಾರಿದ್ದಾರೆ ಎಂದು ಬೃಹದಶ್ವನು ಯುಧಿಷ್ಠಿರನನ್ನು ಸಮಾಧಾನ ಪಡಿಸಿದನು.

ಅರ್ಥ:
ಆಪತ್ತು: ತೊಂದರೆ; ಮಹೀಪತಿ: ರಾಜ; ತಳೋದರಿ: ಹೆಂಡತಿ; ಸಹಿತ: ಜೊತೆ; ಭ್ರಾತೃ: ಸಹೋದರ; ಮಹಾಮುನಿ: ಶ್ರೇಷ್ಠನಾದ ಋಷಿ; ಮುಖ್ಯ: ಪ್ರಮುಖ; ಕಾತರ: ಕಳವಳ, ಉತ್ಸುಕತೆ; ವಿಖ್ಯಾತ: ಪ್ರಸಿದ್ಧ; ಪುಣ್ಯ: ಸದಾಚಾರ; ತಪೋನಿಧಿ: ಋಷಿ; ಸಂತವಿಡು: ಸಂತೋಷಿಸು; ನಂದನ: ಮಗ;

ಪದವಿಂಗಡಣೆ:
ಆತನ್+ಆಪತ್ತದು +ಮಹೀಪತಿ
ನೀ +ತಳೋದರಿ +ಸಹಿತ+ ನಿನ್ನೀ
ಭ್ರಾತೃಜನ +ಸಹಿತ್+ಈ +ಮಹಾಮುನಿ +ಮುಖ್ಯಜನ +ಸಹಿತ
ಕಾತರಿಸುತಿಹೆ +ನಿನ್ನವೊಲು +ವಿ
ಖ್ಯಾತರಾರೈ+ ಪುಣ್ಯತರರ್+ಎಂದ್
ಆ+ ತಪೋನಿಧಿ+ ಸಂತವಿಟ್ಟನು +ಧರ್ಮನಂದನನ

ಅಚ್ಚರಿ:
(೧) ಮಹಾಮುನಿ, ತಪೋನಿಧಿ – ಸಮನಾರ್ಥಕ ಪದ

ಪದ್ಯ ೭: ನಳನು ಪುನಃ ರಾಜನಾದುದು ಹೇಗೆ?

ಬಳಿಕ ಕಾರ್ಕೋಟಕನ ದೆಸೆಯಿಂ
ದಳಿಯೆ ನಿಜ ಋತುಪರ್ಣಭೂಪನ
ನಿಳಯಕೋಲೈಸಿದನು ಬಾಹುಕನೆಂಬ ನಾಮದಲಿ
ಲಲನೆ ತೊಳಲಿದು ಬರುತ ತಮ್ದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿಂದಾಯ್ತು ನಳಭೂಪತಿಗೆ ನಿಜರಾಜ್ಯ (ಅರಣ್ಯ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ನಂತರ ನಳನು ಕಾರ್ಕೋಟಕನ ದೆಸೆಯಿಂದ ರೂಪವನ್ನು ಕಳೆದುಕೊಂಡು ಬಾಹುಕನೆಂಬ ಹೆಸರಿನಿಂದ ಋತುಪರ್ಣನ ಸಾರಥಿಯಾದನು. ಬಳಿಕ ದಮಯಂತಿಯು ತನ್ನ ತಂದೆ ಮನೆಗೆ ಹೋದಳು, ಅವಳ ದೆಸೆಯಿಂದ ನಳನು ಮತ್ತೆ ತನ್ನ ರಾಜ್ಯವನ್ನು ಪಡೆದು ರಾಜನಾದನು.

ಅರ್ಥ:
ಬಳಿಕ: ನಂತರ; ದೆಸೆ: ಕಾರಣ; ಅಳಿ: ನಾಶ; ನಿಜ: ತನ್ನ, ದಿಟ; ಭೂಪ: ರಾಜ; ನಿಳಯ: ಆಲಯ; ಓಲೈಸು: ಉಪಚರಿಸು; ನಾಮ: ಹೆಸರು; ಲಲನೆ: ಹುಡುಗಿ; ತೊಳಲು: ಬವಣೆ, ಸಂಕಟ; ಬರುತ: ಆಗಮನ; ತಂದೆ: ಪಿತ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ನಳಿನಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು; ಭೂಪತಿ: ರಾಜ; ರಾಜ್ಯ: ದೇಶ;

ಪದವಿಂಗಡಣೆ:
ಬಳಿಕ +ಕಾರ್ಕೋಟಕನ +ದೆಸೆಯಿಂದ್
ಅಳಿಯೆ +ನಿಜ+ ಋತುಪರ್ಣ+ಭೂಪನ
ನಿಳಯಕ್+ಓಲೈಸಿದನು +ಬಾಹುಕನೆಂಬ +ನಾಮದಲಿ
ಲಲನೆ +ತೊಳಲಿದು +ಬರುತ+ ತಂದೆಯ
ನಿಳಯವನು +ಸಾರಿದಳು +ಬಳಿಕಾ
ನಳಿನಮುಖಿಯಿಂದ್+ಆಯ್ತು +ನಳ+ಭೂಪತಿಗೆ+ ನಿಜ+ರಾಜ್ಯ

ಅಚ್ಚರಿ:
(೧) ಕಾರ್ಕೋಟಕ, ಋತುಪರ್ಣ, ಬಾಹುಕ, ನಳ, ನಳಿನಮುಖಿ (ದಮಯಂತಿ), ತಂದೆ (ಭೀಮರಾಜ)
(೨) ಲಲನೆ, ನಳಿನಮುಖಿ; ಭೂಪ, ಭೂಪತಿ – ಸಮನಾರ್ಥಕ ಪದಗಳು