ಪದ್ಯ ೫೧: ಇಂದ್ರನು ಅರ್ಜುನನನ್ನು ಹೇಗೆ ಸಂತೈಸಿದನು?

ನುಡಿಸೆ ತಲೆವಾಗಿದನು ಲಜ್ಜೆಯ
ಝಡಿತೆಯಲಿ ಝೊಂಮೇರಿದಂತೆವೆ
ಮಿಡುಕದಿರೆ ಮಗುಳಪ್ಪಿ ಹರಿ ಮೊಗ ನೆಗಹಿ ಮುಂಡಾಡಿ
ಬಿಡು ಮನೋಗ್ಲಾನಿಯನು ಸತಿಕೆಡೆ
ನುಡಿದುದೆಲ್ಲವನೆನಗೆ ಸೈರಿಸು
ಮಡದಿಯರಲೇನುಂಟು ಗುಣವೆನ್ನಾಣೆ ಹೇಳೆಂದ (ಅರಣ್ಯ ಪರ್ವ, ೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ಇಂದ್ರನು ಅರ್ಜುನನನ್ನು ಮಾತನಾಡಿಸಿದೊಡನೆಯೇ ಅರ್ಜುನನು ನಾಚಿಕೆಯಿಂದ ತಲೆತಗ್ಗಿಸಿದನು, ನಾಚಿಕೆಗೆ ಜೋಮುಗಟ್ಟಿದಂತಾಗಿ ರೆಪ್ಪೆಯನ್ನು ಅಲುಗಿಸಲಾರದವನಾದನು. ಇಂದ್ರನು ಮತ್ತೆ ಅರ್ಜುನನನ್ನು ಅಪ್ಪಿಕೊಂಡು ಮುಖವನ್ನು ಮೇಲಕ್ಕೆತ್ತಿ, ತಲೆಯ ಮೇಲೆ ಕೈಯಾಡಿಸಿ, ಊರ್ವಶಿಯು ನಿನ್ನನ್ನು ನಿಂದಿಸಿದುದರಿಂದ ನಿನ್ನ ಮನಸ್ಸಿಗಾದ ವೇದನೆಯನ್ನು ನನ್ನ ಮುಖವನ್ನು ನೋಡಿಕೊಂಡು ಮರೆತುಬಿಡು. ಅಪ್ಸರೆಯರಲ್ಲಿ ಏನಾದರು ಗುಣವಿರಲು ಸಾಧ್ಯವೇ? ನನ್ನಾಣೆ ಹೇಳು ಎಂದು ಇಂದ್ರನು ಅರ್ಜುನನನ್ನು ಸಂತೈಸಿದನು.

ಅರ್ಥ:
ನುಡಿ: ಮಾತಾಡು; ತಲೆ: ಶಿರ; ವಾಗು: ಬಾಗು; ಲಜ್ಜೆ: ನಾಚಿಕೆ; ಝಡಿತ: ವೇಗ; ಝೊಂಮು: ಪುಳುಕಿತ; ಏರು: ಹೆಚ್ಚಾಗು; ಮಿಡುಕು: ಅಲುಗಾಟ, ಚಲನೆ; ಮಗುಳು: ಹಿಂತಿರುಗು, ಪುನಃ; ಅಪ್ಪು: ತಬ್ಬಿಕೊ; ಹರಿ: ಇಂದ್ರ; ಮೊಗ: ಮುಖ; ನೆಗಹು: ಮೇಲೆತ್ತು; ಮುಂಡಾಡು: ಮುದ್ದಾಡು, ಪ್ರೀತಿಸು; ಬಿಡು: ತೊರೆ; ಮನ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಸತಿ: ಹೆಣ್ಣು; ಕೆಡೆ:ಹರಟು, ಬಾಯಿಗೆ ಬಂದಂತೆ ಮಾತನಾಡು; ನುಡಿ: ಮಾತು; ಸೈರಿಸು: ಸಹಿಸು; ಮಡದಿ: ಹೆಂಡತಿ; ಗುಣ: ಸ್ವಭಾವ; ಆಣೆ: ಪ್ರಮಾಣ; ಹೇಳು: ತಿಳಿಸು; ಎವೆ: ಕಣ್ಣಿನ ರೆಪ್ಪೆ;

ಪದವಿಂಗಡಣೆ:
ನುಡಿಸೆ +ತಲೆವಾಗಿದನು +ಲಜ್ಜೆಯ
ಝಡಿತೆಯಲಿ +ಝೊಂಮ್+ಏರಿದಂತ್+ಎವೆ
ಮಿಡುಕದಿರೆ+ ಮಗುಳಪ್ಪಿ +ಹರಿ +ಮೊಗ +ನೆಗಹಿ+ ಮುಂಡಾಡಿ
ಬಿಡು +ಮನೋಗ್ಲಾನಿಯನು +ಸತಿ+ಕೆಡೆ
ನುಡಿದುದ್+ಎಲ್ಲವನ್+ಎನಗೆ+ ಸೈರಿಸು
ಮಡದಿಯರಲ್+ಏನುಂಟು +ಗುಣವ್+ಎನ್ನಾಣೆ +ಹೇಳೆಂದ

ಅಚ್ಚರಿ:
(೧) ಅರ್ಜುನನ ಮುಖಭಾವವನ್ನು ವಿವರಿಸುವ ಪರಿ – ನುಡಿಸೆ ತಲೆವಾಗಿದನು ಲಜ್ಜೆಯ
ಝಡಿತೆಯಲಿ ಝೊಂಮೇರಿದಂತೆವೆಮಿಡುಕದಿರೆ
(೨) ಸತಿ, ಮಡದಿ – ಅಪ್ಸರೆ (ಊರ್ವಶಿ)ಯನ್ನು ಕರೆದ ಪರಿ

ಪದ್ಯ ೫೦: ಇಂದ್ರನು ಅರ್ಜುನನನ್ನು ಹೇಗೆ ಸಂತೈಸಿದನು?

ಮಗನನಪ್ಪಿದನೆನ್ನ ತಂದೆಗೆ
ದುಗುಡವೇಕೆನ್ನಾನೆಗೆತ್ತಣ
ಬೆಡಗಿದೆನ್ನರಸಂಗಿದೆತ್ತಣದೆಸೆಯ ದುಮ್ಮಾನ
ಮೊಗದ ತನಿ ಹಳಹಳಿಕೆ ನೇತ್ರಾಂ
ಬುಗಳಲದ್ದುದು ನಿಜಮನೋವೃ
ತ್ತಿಗಳೊಳಗೆ ನುಡಿ ಮುಳುಗಿತೇನಿದು ಚಿತ್ರವಾಯ್ತೆಂದ (ಅರಣ್ಯ ಪರ್ವ, ೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಇಂದ್ರನು ಅರ್ಜುನನನ್ನು ಅಪ್ಪಿಕೊಂಡು, ನನ್ನಪ್ಪನಿಗೇನು ದುಃಖ, ನನ್ನಾನೆಗೆ ಏತರದ ಭಯ, ನನ್ನ ರಾಜನಿಗೆ ಏಕೆ ಬೇಸರ, ನಿನ್ನ ಕಳವಳವು ಕಣ್ಣೀರಾಗಿ ಬರುತ್ತಿದೆ, ನಿನ್ನ ಮನಸ್ಸಿನ ಕಳವಳದಲ್ಲಿ ಮಾತೇ ನಿಂತು ಹೋಗಿದೆ, ಇದೇನು ವಿಚಿತ್ರ ಎಂದು ಕೇಳಿದನು.

ಅರ್ಥ:
ಮಗ: ಸುತ; ಅಪ್ಪು: ಆಲಿಂಗಿಸು, ತಬ್ಬಿಕೊ; ತಂದೆ: ಪಿತ; ದುಗುಡ: ದುಃಖ, ಉಮ್ಮಳ; ಬೆಡಗು: ಅಂದ, ಸೊಬಗು; ಅರಸ: ರಾಜ; ದೆಸೆ: ಗತಿ, ದಿಕ್ಕು; ದುಮ್ಮಾನ: ದುಃಖ; ಮೊಗ: ಮುಖ; ತನಿ: ಹೆಚ್ಚಾಗು; ಹಳಹಳಿಕೆ: ಕಾಂತಿ, ತೇಜಸ್ಸು; ನೇತ್ರ: ಕಣ್ಣು; ಅಂಬು: ನೀರು; ಅದ್ದು: ತೋಯು, ಒದ್ದೆಯಾಗು; ಮನ: ಮನಸ್ಸು; ವೃತ್ತಿ: ಸ್ಥಿತಿ, ನಡತೆ; ನುಡಿ: ಮಾತಾಡು; ಮುಳುಗು: ನೀರಿನಲ್ಲಿ ಮೀಯು; ಚಿತ್ರ: ಆಶ್ಚರ್ಯ, ಚಮತ್ಕಾರ;

ಪದವಿಂಗಡಣೆ:
ಮಗನನ್+ಅಪ್ಪಿದನ್+ಎನ್ನ+ ತಂದೆಗೆ
ದುಗುಡವೇಕ್+ಎನ್+ಆನೆಗ್+ಎತ್ತಣ
ಬೆಡಗಿದ್+ಎನ್+ಅರಸಂಗ್+ಇದೆತ್ತಣ+ದೆಸೆಯ+ ದುಮ್ಮಾನ
ಮೊಗದ +ತನಿ +ಹಳಹಳಿಕೆ +ನೇತ್ರಾಂ
ಬುಗಳಲ್+ಅದ್ದುದು +ನಿಜ+ಮನೋವೃ
ತ್ತಿಗಳೊಳಗೆ+ ನುಡಿ+ ಮುಳುಗಿತೇನಿದು+ ಚಿತ್ರವಾಯ್ತೆಂದ

ಅಚ್ಚರಿ:
(೧) ಎನ್ನ ತಂದೆ, ಎನ್ನಾನೆ, ಎನ್ನರಸ – ಮಗನನ್ನು ಪ್ರೀತಿಯಿಂದ ಕರೆದ ಪರಿ
(೨) ಕಣ್ಣೀರನ್ನು ವಿವರಿಸುವ ಪದ – ನೇತ್ರಾಂಬು
(೩) ದುಗುಡ, ದುಮ್ಮಾನ – ಸಮನಾರ್ಥಕ ಪದ

ಪದ್ಯ ೪೯: ಘಟನೆಯ ಬಗ್ಗೆ ಇಂದ್ರನಿಗೆ ಯಾರು ವಿಷಯ ತಲುಪಿಸಿದರು?

ಅರಸ ಕೇಳೈ ಚಿತ್ರ ಸೇನನ
ಕರೆಸಿಯೂರ್ವಶಿ ಪಾರ್ಥ ಮಾಡಿದ
ದುರುಳತನವನು ದೂರಿದೊಡೆ ಸುರಸತಿಯ ಸಂತೈಸಿ
ಸುರಪತಿಗೆ ಗಂಧರ್ವನಿವರಿ
ಬ್ಬರ ನಿರೋಧ ನಿಬಂಧನವನೆ
ಚ್ಚರಿಸಲರ್ಜುನನರಮನೆಗೆ ಬಂದನು ಬಲಧ್ವಂಸಿ (ಅರಣ್ಯ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೋಪಗೊಂಡ ಊರ್ವಶಿಯು ಚಿತ್ರಸೇನನನ್ನು ಕರೆಸಿ ಅರ್ಜುನನು ಇಂತಹ ದುರುಳತನವನ್ನು ಮಾಡಿದನೆಂದು ತಿಳಿಸಿದಳು. ಚಿತ್ರಸೇನನು ಊರ್ವಶಿಯನ್ನು ಸಮಾಧಾನ ಪಡಿಸಿ ಇಂದ್ರನಿಗೆ ಈ ವಿಷಯವನ್ನು ತಲುಪಿಸಿದನು. ಇದನ್ನು ಕೇಳಿದ ಇಂದ್ರನು ಅರ್ಜುನನ ಅರಮನೆಗೆ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕರೆಸು: ಬರೆಮಾಡು; ದುರುಳತನ: ದುಷ್ಟವಾದ, ನೀಚ; ದೂರು: ಮೊರೆ, ಅಹವಾಲು; ಸುರಸತಿ: ಅಪ್ಸರೆ; ಸಂತೈಸು: ಸಮಾಧಾನ ಪಡಿಸು; ಸುರಪತಿ: ಇಂದ್ರ; ಗಂಧರ್ವ: ದೇವತೆಗಳ ಗುಂಪು; ನಿರೋಧ: ಪ್ರತಿಬಂಧ, ನೋವು; ನಿಬಂಧ: ಕರಾರು, ಕಟ್ಟಳೆ; ಎಚ್ಚರ: ಜೋಪಾನ, ಹುಷಾರು; ಅರಮನೆ: ರಾಜರ ಆಲಯ; ಬಲಧ್ವಂಸಿ: ಇಂದ್ರ; ಧ್ವಂಸಿ: ನಾಶಮಾಡಿದ;

ಪದವಿಂಗಡಣೆ:
ಅರಸ+ ಕೇಳೈ +ಚಿತ್ರಸೇನನ
ಕರೆಸಿ+ಊರ್ವಶಿ +ಪಾರ್ಥ +ಮಾಡಿದ
ದುರುಳತನವನು +ದೂರಿದೊಡೆ +ಸುರಸತಿಯ +ಸಂತೈಸಿ
ಸುರಪತಿಗೆ+ ಗಂಧರ್ವನ್+ಇವರಿ
ಬ್ಬರ +ನಿರೋಧ +ನಿಬಂಧನವನ್
ಎಚ್ಚರಿಸಲ್+ಅರ್ಜುನನ್+ಅರಮನೆಗೆ +ಬಂದನು +ಬಲಧ್ವಂಸಿ

ಅಚ್ಚರಿ:
(೧) ಸುರಪತಿ, ಬಲಧ್ವಂಸಿ – ಇಂದ್ರನನ್ನು ಕರೆದ ಪರಿ
(೨) ಸ ಕಾರದ ತ್ರಿವಳಿ ಪದ – ಸುರಸತಿಯ ಸಂತೈಸಿ ಸುರಪತಿಗೆ

ಪದ್ಯ ೪೮: ಅರ್ಜುನನು ದ್ರೌಪದಿಗೆ ಯಾವ ಶುಭವಾರ್ತೆಯನ್ನು ಹೇಳಬೇಕೆಂದುಕೊಂಡನು?

ಶಿವನ ಶರವೆನಗಾಯ್ತು ರಿಪುಕೌ
ರವರ ರಕುತದ ರಾಟಳವನೆ
ತ್ತುವೆನು ಕಟ್ಟಾಮುಡಿಯನೆಂಬೆನು ದ್ರೌಪದೀ ಸತಿಗೆ
ಇವಳು ಭಂಗಿಸಿ ಬೂತುಗೆಡಹಿದ
ಹವಣನಾರಿಗೆ ಹೇಳುವೆನು ವರ
ಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸುಸುಯ್ದ (ಅರಣ್ಯ ಪರ್ವ, ೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ದ್ರೌಪದಿಯ ಬಳಿ ಹೋಗಿ, ನನಗೆ ಪಾಶುಪಾಸ್ತ್ರ ಸಿಕ್ಕಿದೆ. ಶತ್ರುಗಳ ರಕ್ತವನ್ನು ರಾಟೆಯಲ್ಲೆತ್ತುತ್ತೇನೆ, ಮುಡಿಯನ್ನು ಕಟ್ಟು ಎನ್ನುತ್ತೇನೆ. ಊರ್ವಶಿಯು ನನ್ನನ್ನು ಭಂಗಿಸಿ ನಾಚಿಕೆಗೇಡು ಮಾಡಿದ ವಿಷಯವನ್ನು ನಾನು ಯಾರಿಗೆ ಹೇಳಲಿ? ದ್ರೌಪದಿಗೆ ಇದೊಂದು ಶುಭವಾರ್ತೆ ಅಯ್ಯೋ ಎನ್ನುತ್ತಾ ಅರ್ಜುನನು ನಿಟ್ಟುಸಿರುಬಿಟ್ಟನು.

ಅರ್ಥ:
ಶಿವ: ಶಂಕರ; ಶರ: ಬಾಣ; ರಿಪು: ವೈರಿ; ರಕುತ: ನೆತ್ತರು; ರಾಟಳ: ರಾಟೆ, ಗಾಲಿ; ಎತ್ತು: ಮೇಲಕ್ಕೆ ತರು; ಕಟ್ಟು: ಬಂಧಿಸು, ಹೂಡು; ಮುಡಿ: ಶಿರ; ಸತಿ: ಹೆಂಡತಿ; ಭಂಗಿಸು: ಅಪಮಾನ ಮಾಡು; ಬೂತು: ಕುಚೋದ್ಯ, ಕುಚೇಷ್ಟೆ; ಕೆಡಹು: ತಳ್ಳು, ಬೀಳಿಸು; ಹವಣ: ಉಪಾಯ, ಸಿದ್ಧತೆ; ಹೇಳು: ತಿಳಿಸು; ವರ: ಶ್ರೇಷ್ಠ; ಯುವತಿ: ಹೆಣ್ಣು; ನುಡಿ: ಮಾತು; ಒಸಗೆ: ಶುಭ; ಬಿಸುಸುಯ್: ನಿಟ್ಟುಸಿರುಬಿಡು;

ಪದವಿಂಗಡಣೆ:
ಶಿವನ +ಶರವೆನಗಾಯ್ತು +ರಿಪು+ಕೌ
ರವರ +ರಕುತದ +ರಾಟಳವನ್
ಎತ್ತುವೆನು +ಕಟ್ಟ್+ಆ+ಮುಡಿಯನ್+ಎಂಬೆನು +ದ್ರೌಪದೀ +ಸತಿಗೆ
ಇವಳು +ಭಂಗಿಸಿ +ಬೂತು+ಕೆಡಹಿದ
ಹವಣನಾರಿಗೆ+ ಹೇಳುವೆನು +ವರ
ಯುವತಿಗ್+ಈ +ನುಡಿ+ಒಸಗೆಯೇ +ಹಾಯೆನುತ +ಬಿಸುಸುಯ್ದ

ಅಚ್ಚರಿ:
(೧) ಅರ್ಜುನನ ಗೊಂದಲ – ಇವಳು ಭಂಗಿಸಿ ಬೂತುಗೆಡಹಿದ ಹವಣನಾರಿಗೆ ಹೇಳುವೆನು
(೨) ದ್ರೌಪದಿಗೆ ನೀಡುವ ವಾರ್ತೆ – ವರಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸುಸುಯ್ದ

ಪದ್ಯ ೪೭: ಅರ್ಜುನನು ಏನೆಂದು ಚಿಂತಿಸಿದನು?

ತಪವನಾಚರಿಸಿದೊಡೆ ವರ ಪಾ
ಶುಪತ ಶರವೆನಗಾಯ್ತು ಧರ್ಮವೆ
ತಪವಲಾಯೆಂದರಿದು ನಡೆದರೆ ಷಂಡತನವಾಯ್ತು
ತಪವೆರಡು ಸರಿಫಲದೊಳಾದುದು
ವಿಪರಿಯಾಸದಗತಿ ಗಹನವೇ
ವಿಪುಳ ಕರ್ಮಸ್ಥಿತಿಯೆನುತ ತೂಗಿದನು ನಿಜಶಿರವ (ಅರಣ್ಯ ಪರ್ವ, ೯ ಸಂಧಿ, ೪೭ ಪದ್ಯ)

ತಾತ್ಪರ್ಯ:
ನಾನು ತಪಸ್ಸನ್ನು ಮಾಡಿ ಪಾಶುಪತವನ್ನು ಶಂಕರನಿಂದ ಪಡೆದೆ, ಧರ್ಮ ರಕ್ಷಣೆಯೇ ತಪಸ್ಸು ಎಂದು ನಡೆದರೆ, ನಪುಂಸಕತನ ಬಂದಿತು. ಒಂದಕ್ಕೆ ಸರಿಯಾದ ಫಲ, ಇನ್ನೊಂದಕ್ಕೆ ವಿರೋಧ ಫಲ ದೊರೆಯಿತು, ಕರ್ಮ ಮಾರ್ಗವೆನ್ನುವುದು ಅತಿ ರಹಸ್ಯವಾದುದು ಎಂದು ಅರ್ಜುನನು ತಲೆದೂಗಿದನು.

ಅರ್ಥ:
ತಪ: ತಪಸ್ಸು; ಆಚರಿಸು: ನೆರವೇರಿಸು, ಮಾಡು; ವರ: ಶ್ರೇಷ್ಠ; ಶರ: ಬಾಣ; ಧರ್ಮ: ಧಾರಣೆ ಮಾಡಿದುದು; ಅರಿ: ತಿಳಿ; ನಡೆ: ಚಲಿಸು; ಷಂಡ: ನಪುಂಸಕ; ಫಲ: ಪರಿಣಾಮ, ಫಲಿತಾಂಶ; ವಿಪರಿಯಾಸ: ಅದಲುಬದಲು, ವಿರೋಧ; ಗತಿ: ವೇಗ; ಗಹನ: ಸುಲಭವಲ್ಲದುದು; ವಿಪುಳ: ಹೆಚ್ಚು, ಜಾಸ್ತಿ; ಕರ್ಮ: ಕಾರ್ಯದ ಫಲ; ಸ್ಥಿತಿ: ಅವಸ್ಥೆ; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ತಪವನ್+ಆಚರಿಸಿದೊಡೆ +ವರ +ಪಾ
ಶುಪತ +ಶರವೆನಗಾಯ್ತು +ಧರ್ಮವೆ
ತಪವಲಾಯೆಂದ್+ಅರಿದು+ ನಡೆದರೆ+ ಷಂಡತನವಾಯ್ತು
ತಪವೆರಡು +ಸರಿಫಲದೊಳ್+ಆದುದು
ವಿಪರಿಯಾಸದಗತಿ+ ಗಹನವೇ
ವಿಪುಳ+ ಕರ್ಮಸ್ಥಿತಿ+ಎನುತ +ತೂಗಿದನು +ನಿಜಶಿರವ

ಅಚ್ಚರಿ:
(೧) ಕರ್ಮದ ಫಲದ ಬಗ್ಗೆ ಅರ್ಜುನನು ಹೇಳುವ ಪರಿ – ಗಹನವೇ ವಿಪುಳ ಕರ್ಮಸ್ಥಿತಿ