ಪದ್ಯ ೪೩: ಊರ್ವಶಿಯು ಅರ್ಜುನನ್ನು ಏನಾಗೆಂದು ಶಪಿಸಿದಳು?

ನರಮೃಗಾಧಮ ನಿಮ್ಮ ಭಾರತ
ವರುಷ ಭೂಮಿಯೊಳೊಂದು ವರುಷಾಂ
ತರ ನಪುಂಸಕನಾಗಿ ಚರಿಸು ನಿರಂತರಾಯದಲಿ
ಹರಿಯ ಮರೆಹೊಗು ಹರನ ನೀನನು
ಸರಿಸು ನಿಮ್ಮಯ್ಯಂಗೆ ಹೇಳಿದು
ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ (ಅರಣ್ಯ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಎಲವೋ ನರರೂಪಿನಿಂದಿರುವ ಅಧಮ ಮೃಗವೇ, ಭಾರತ ವರ್ಷದಲ್ಲಿ ಒಂದು ವರ್ಷ ಕಾಲ ನಪುಂಸಕನಾಗಿರು, ವಿಷ್ಣುವಿನ ಮೊರೆಹೋಗು, ಶಿವನನ್ನು ಹಿಂಬಾಲಿಸು, ನಿಮ್ಮ ತಂದೆಗೆ ಹೇಳು, ನನ್ನ ಶಾಪವು ತಪ್ಪುವುದಿಲ್ಲ ಹೋಗು ಎಂದು ಊರ್ವಶಿಯು ಶಾಪವನ್ನು ಕೊಟ್ಟು ಅಲ್ಲಿಂದ ನಿರ್ಗಮಿಸಿದಳು.

ಅರ್ಥ:
ನರ: ಮನುಷ್ಯ; ಮೃಗ: ಪ್ರಾಣಿ; ಅಧಮ: ಕೀಳು, ನೀಚ; ವರ್ಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಭೂಮಿ: ಇಳೆ; ವರುಷ: ಸಂವತ್ಸರ; ಅಂತರ: ವರೆಗೂ; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಚರಿಸು: ಓಡಾಡು; ನಿರಂತರ: ಎಡೆಬಿಡದ, ಸತತವಾಗಿ; ಆಯ: ಪರಿಮಿತಿ; ಹರಿ: ವಿಷ್ಣು; ಮರೆಹೋಗು: ಶರಣಿಗೆ ತೆರಳು, ಸಹಾಯ ಬೇಡು; ಹರ: ಶಿವ; ಅನುಸರಿಸು: ಹಿಂಬಾಲಿಸು; ಅಯ್ಯ: ತಂದೆ; ಹೇಳು: ತಿಳಿಸು; ನಿರುತ: ದಿಟ, ಸತ್ಯ, ನಿಶ್ಚಯ; ತಪ್ಪು: ಸರಿಯಿಲ್ಲದ; ಹೋಗು: ತೆರಳು; ಮೊಗ: ಮುಖ; ಚಪಲೆ: ಚಂಚಲೆ;

ಪದವಿಂಗಡಣೆ:
ನರ+ಮೃಗ+ಅಧಮ +ನಿಮ್ಮ +ಭಾರತ
ವರುಷ +ಭೂಮಿಯೊಳ್+ಒಂದು+ ವರುಷಾಂ
ತರ+ ನಪುಂಸಕನಾಗಿ+ ಚರಿಸು +ನಿರಂತರ್+ಆಯದಲಿ
ಹರಿಯ +ಮರೆಹೊಗು +ಹರನ +ನೀನ್+ಅನು
ಸರಿಸು +ನಿಮ್ಮಯ್ಯಂಗೆ +ಹೇಳಿದು
ನಿರುತ +ತಪ್ಪದು +ಹೋಗೆನುತ +ಮೊಗದಿರುಹಿದಳು +ಚಪಲೆ

ಅಚ್ಚರಿ:
(೧) ಊರ್ವಶಿಯ ಶಾಪ – ನಿಮ್ಮ ಭಾರತವರುಷ ಭೂಮಿಯೊಳೊಂದು ವರುಷಾಂತರ ನಪುಂಸಕನಾಗಿ ಚರಿಸು ನಿರಂತರಾಯದಲಿ
(೨) ಊರ್ವಶಿಯು ಬಯ್ಯುವ ಪರಿ – ನರಮೃಗಾಧಮ
(೩) ವರುಷ – ೨ ಸಾಲಿನ ಮೊದಲ ಹಾಗು ಕೊನೆ ಪದ

ನಿಮ್ಮ ಟಿಪ್ಪಣಿ ಬರೆಯಿರಿ