ಪದ್ಯ ೪೨: ಊರ್ವಶಿಯ ಮುಖಛಾಯೆ ಹೇಗಾಯಿತು?

ರಾಹು ತುಡುಕಿದ ಶಶಿಯೊ ಮೇಣ್ರೌ
ದ್ರಾಹಿ ಮಸ್ತಕ ಮಾಣಿಕವೊ ಕಡು
ಗಾಹಿನಮೃತವೊ ಕುಪಿತಸಿಂಹದ ಗುಹೆಯ ಮೃಗಮದವೊ
ಲೋಹಧಾರೆಯ ಮಧುವೊ ಕಳಿತ ಹ
ಲಾಹಳದ ಕಜ್ಜಾಯವೆನಿಸಿತು
ರೂಹು ಸುಮನೋಹರ ಭಯಂಕರವಾಯ್ತು ಸುರಸತಿಯ (ಅರಣ್ಯ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ರಾಹುವು ಹಿಡಿದ ಚಂದ್ರನಂತೆ, ಭಯಂಕರ ಸರ್ಪದ ಹೆಡೆಯ ಮಣಿಯಂತೆ, ಅತಿಯಾಗಿ ಬಿಸಿಮಾಡಿದ ಅಮೃತದಂತೆ, ಕೋಪಗೊಂಡ ಸಿಂಹದ ಹುಗೆಯಲ್ಲಿರುವ ಕಸ್ತೂರಿಯಂತೆ, ಕತ್ತಿಯ ಅಲಗಿಗೆ ಲೇಪಿಸಿದ ಜೇನು ತುಪ್ಪದಂತೆ, ವಿಷಪೂರಿತ ಕಜ್ಜಾಯದಂತೆ, ಊರ್ವಶಿಯ ರೂಪ ಮನೋಹರವೂ ಭಯಂಕರವೂ ಆಗಿತ್ತು.

ಅರ್ಥ:
ರಾಹು: ನವಗ್ರಹಗಳಲ್ಲಿ ಒಂದು, ಬೆಂಕಿ; ತುಡುಕು: ಬೇಗನೆ ಹಿಡಿಯುವುದು; ಶಶಿ: ಚಂದ್ರ; ಮೇಣ್: ಮತ್ತು, ಅಥವಾ; ರೌದ್ರ: ಭಯಂಕರ; ಅಹಿ: ಹಾವು; ಮಸ್ತಕ: ತಲೆ; ಮಾಣಿಕ: ಬೆಲೆಬಾಳುವ ಮಣಿ; ಕಡುಗು: ತೀವ್ರವಾಗು; ಅಮೃತ: ಸುಧೆ; ಕುಪಿತ: ಕೋಪಗೊಂಡ; ಸಿಂಹ: ಕೇಸರಿ; ಗುಹೆ: ಗವಿ; ಮೃಗ: ಪ್ರಾಣಿ, ಕಸ್ತ್ರೂರಿಮೃಗ, ಜಿಂಕೆ; ಮದ: ಅಹಂಕಾರ; ಲೋಹ: ಕಬ್ಬಿಣ; ಧಾರೆ: ಕತ್ತಿಯ ಅಲಗು; ಮಧು: ಜೇನು; ಕಳಿತ: ಪೂರ್ಣ ಹಣ್ಣಾದ; ಹಲಾಹಳ: ವಿಷ; ಕಜ್ಜಾಯ: ಸಿಹಿತಿಂಡಿ, ಅತಿರಸ; ರೂಹು: ರೂಪ; ಸುಮನೋಹರ: ಚೆಲುವು; ಭಯಂಕರ: ಘೋರವಾದ; ಸುರಸತಿ: ಅಪ್ಸರೆ;

ಪದವಿಂಗಡಣೆ:
ರಾಹು+ ತುಡುಕಿದ+ ಶಶಿಯೊ +ಮೇಣ್+ರೌದ್ರ
ಅಹಿ+ ಮಸ್ತಕ+ ಮಾಣಿಕವೊ +ಕಡು
ಗಾಹಿನ್+ಅಮೃತವೊ +ಕುಪಿತ+ಸಿಂಹದ +ಗುಹೆಯ +ಮೃಗ+ಮದವೊ
ಲೋಹಧಾರೆಯ+ ಮಧುವೊ +ಕಳಿತ +ಹ
ಲಾಹಳದ+ ಕಜ್ಜಾಯವ್+ಎನಿಸಿತು
ರೂಹು +ಸುಮನೋಹರ +ಭಯಂಕರವಾಯ್ತು +ಸುರಸತಿಯ

ಅಚ್ಚರಿ:
(೧) ವೈರುಧ್ಯಗಳನ್ನು ಸೂಚಿಸುವ ಪದ್ಯ, ಉಪಮಾನಗಳ ಬಳಕೆ – ರಾಹು ತುಡುಕಿದ ಶಶಿಯೊ, ಮೇಣ್ರೌದ್ರಾಹಿ ಮಸ್ತಕ ಮಾಣಿಕವೊ, ಕಡುಗಾಹಿನಮೃತವೊ, ಕುಪಿತಸಿಂಹದ ಗುಹೆಯ ಮೃಗಮದವೊ, ಲೋಹಧಾರೆಯ ಮಧುವೊ, ಕಳಿತ ಹಲಾಹಳದ ಕಜ್ಜಾಯ

ನಿಮ್ಮ ಟಿಪ್ಪಣಿ ಬರೆಯಿರಿ