ಪದ್ಯ ೩೭: ಊರ್ವಶಿಯಲ್ಲಿ ಕೋಪವು ಹೇಗೆ ಸೇರಿಕೊಂಡಿತು?

ಸೊಂಪಡಗಿತು ಮುಖೇಂದು ತನುಲತೆ
ಕಂಪಿಸಿದುದಡಿಗಡಿಗೆ ಮೈ ತನಿ
ಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ
ತಂಪಿನಲಿ ಶಿಖಿ ಮಧುರದಲಿ ಕಟು
ನುಂಪಿನಲಿ ಬಿರಿಸಮೃತದಲಿ ವಿಷ
ಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನ ರೋಷ (ಅರಣ್ಯ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಊರ್ವಶಿಯ ಮುಖಚಂದ್ರವು ಕಳೆಗುಂದಿತು, ಅವಳ ದೇಹಲತೆಯು ಮತ್ತೆ ಮತ್ತೆ ನಡುಗಿತು, ಮೈಯಲ್ಲಿ ಬೆವರುಸುರಿದು ದೇಹ ಪರಿಮಳದಿಂದ ಘಮಘಮಿಸಿತು, ಹಿಮದಲ್ಲಿ ಬೆಂಕಿ, ಸಿಹಿಯಲ್ಲಿ ಖಾರ, ನಯದಲ್ಲಿ ಬಿರಿಸು, ಅಮೃತದಲ್ಲಿ ವಿಷವು ಬೆರೆತಂತೆ, ಅವಳಿಗೆ ಮಹಾ ಕೋಪವುಂಟಾಯಿತು.

ಅರ್ಥ:
ಸೊಂಪು: ಕಾಂತಿ, ಹೊಳಪು; ಮುಖ: ಆನನ; ಇಂದು; ಚಂದ್ರ; ತನು: ದೇಹ; ಲತೆ: ಬಳ್ಳಿ; ಕಂಪು: ಸುಗಂಧ; ಅಡಿಗಡಿ: ಹೆಜ್ಜೆ ಹೆಜ್ಜೆ; ಮೈ: ತನು; ತನಿ: ಹೆಚ್ಚಾಗು; ಮಘಮಘಿಸು: ಸುವಾಸನೆಯನ್ನು ಬೀರು; ಅಮಲ:ನಿರ್ಮಲ; ಸ್ವೇದ: ಬೆವರು; ಸಲಿಲ: ನೀರು; ತಂಪು: ತಣಿವು, ಶೈತ್ಯ; ಶಿಖಿ: ಬೆಂಕಿ; ಮಧುರ: ಸವಿ, ಇಂಪು; ಕಟು: ತೀಕ್ಷ್ಣವಾದ; ನುಂಪು: ನುಣ್ಪು; ಬಿರಿ: ಸೀಳು , ಕಠಿಣ; ಅಮೃತ: ಸುಧೆ; ವಿಷ: ನಂಜು; ಗುಂಪು: ರಾಶಿ, ಸಮೂಹ; ನೆಲೆ: ಆಶ್ರಯ, ಆಧಾರ, ವಾಸಸ್ಥಾನ; ಸತಿ: ಹೆಣ್ಣು; ಘನ: ದೊಡ್ಡ, ಗಟ್ಟಿ; ರೋಷ: ಕೋಪ;

ಪದವಿಂಗಡಣೆ:
ಸೊಂಪ್+ಅಡಗಿತು +ಮುಖ+ಇಂದು +ತನುಲತೆ
ಕಂಪಿಸಿದುದ್+ಅಡಿಗಡಿಗೆ+ ಮೈ +ತನಿ
ಗಂಪಿನಲಿ+ ಮಘಮಘಿಸಿತ್+ಅಮಲ +ಸ್ವೇದ +ಸಲಿಲದಲಿ
ತಂಪಿನಲಿ +ಶಿಖಿ +ಮಧುರದಲಿ +ಕಟು
ನುಂಪಿನಲಿ+ ಬಿರಿಸ್+ಅಮೃತದಲಿ +ವಿಷ
ಗುಂಪಿನಲಿ +ನೆಲೆಯಾದವೋಲ್ +ಸತಿಗಾಯ್ತು +ಘನ +ರೋಷ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಂಪಿನಲಿ ಶಿಖಿ ಮಧುರದಲಿ ಕಟುನುಂಪಿನಲಿ ಬಿರಿಸಮೃತದಲಿ ವಿಷಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನ ರೋಷ
(೨) ಆಕೆಯ ಬೆವರಿನ ವಾಸನೆಯನ್ನು ಹೇಳುವ ಪರಿ – ಮೈ ತನಿಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ

ನಿಮ್ಮ ಟಿಪ್ಪಣಿ ಬರೆಯಿರಿ