ಪದ್ಯ ೪೧: ಊರ್ವಶಿಯ ಎತ್ತಿದ ಕೈ ಹೇಗೆ ಹೊಳೆಯುತ್ತಿತ್ತು?

ತುಳುಕಿತದ್ಭುತ ರೋಷ ಸುಯ್ಲಿನ
ಝಳಹೊಡೆದು ಮೂಗುತಿಯ ಮುತ್ತಿನ
ಬೆಳಕು ಕಂದಿತು ಕುಂದಿತಮಲಚ್ಛವಿ ಮುಖಾಂಬುಜದ
ಹೊಳೆ ಹೊಳೆವ ಕೆಂದಳದ ಸೆಳ್ಳುಗು
ರೊಳ ಮಯೂಖದ ಮಣಿಯ ಮುದ್ರಿಕೆ
ದಳ ಮರೀಚಿಯಲೆಸೆದುದೆತ್ತಿದ ಹಸ್ತವೂರ್ವಶಿಯ (ಅರಣ್ಯ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಊರ್ವಶಿಗೆ ಬಹಳ ಕೋಪವು ಆವರಿಸಿತು, ಉಕ್ಕಿದ ಕೋಪಕ್ಕೆ ಆಕೆಯು ನಿಟ್ಟುಸಿರು ಬಿಟ್ಟಳು, ಆ ಕೋಪದ ಉಸಿರಿನ ಶಾಖಕ್ಕೆ ಮೂಗಿತಿಯ ಮುತ್ತಿನ ಬೆಳಕು ಕಂದಿತು, ಮುಖ ಕಮಲದ ಕಾಮ್ತಿಯು ಕುಂದಿತು, ಊರ್ವಹ್ಸಿಯು ಕೈಯೆತ್ತಲು, ಅವಳ ಹಸ್ತದ ಕೆಂಪು, ಬೆರಳುಗಳ ಉಗುರುಗಳ ಬೆಡಗು ಮಣಿ ಮುದ್ರಿಕೆಯ ಕಿರಣಗಳಿಂದ ಅವಳ ಹಸ್ತವು ಶೋಭಿಸಿತು.

ಅರ್ಥ:
ತುಳುಕು: ಹೊರಸೂಸುವಿಕೆ, ಉಕ್ಕುವಿಕೆ; ಅದ್ಭುತ: ಅತ್ಯಾಶ್ಚರ್ಯಕರವಾದ, ವಿಸ್ಮಯ; ರೋಷ: ಕೋಪ; ಸುಯ್ಲು: ನಿಟ್ಟುಸಿರು; ಝಳ: ಕಾಂತಿ, ಶಾಖ; ಹೊಡೆ: ತಾಗು; ಮೂಗುತಿ: ಮೂಗಿನ ಆಭರಣ; ಮುಖ: ಆನನ; ಅಂಬುಜ: ಕಮಲ; ಮುತ್ತು: ಬೆಲೆಬಾಳುವ ರತ್ನ; ಬೆಳಕು: ಕಾಂತಿ; ಕಂದು: ಕಡಿಮೆಯಾಗು, ಮಾಸು; ಕುಂದು: ಕೊರತೆ; ಅಮಲ: ನಿರ್ಮಲ; ಚ್ಛವಿ: ಕಾಂತಿ; ಹೊಳೆ: ಪ್ರಕಾಶಿಸು; ಕೆಂದಳದ: ಕೆಂಪಾದ; ಸೆಳ್ಳು: ಚೂಪಾದ; ಉಗುರು: ನಖ; ಮಯೂಖ: ಕಿರಣ, ರಶ್ಮಿ; ಮುದ್ರಿಕೆ: ಮುದ್ರೆಯುಳ್ಳ ಉಂಗುರ; ದಳ: ಗುಂಪು, ಸಾಲು; ಮರೀಚಿ: ಕಿರಣ, ರಶ್ಮಿ, ಕಾಂತಿ; ಹಸ್ತ: ಕೈ;

ಪದವಿಂಗಡಣೆ:
ತುಳುಕಿತ್+ಅದ್ಭುತ +ರೋಷ +ಸುಯ್ಲಿನ
ಝಳ+ಹೊಡೆದು +ಮೂಗುತಿಯ +ಮುತ್ತಿನ
ಬೆಳಕು +ಕಂದಿತು +ಕುಂದಿತ್+ಅಮಲ+ಚ್ಛವಿ +ಮುಖಾಂಬುಜದ
ಹೊಳೆ +ಹೊಳೆವ +ಕೆಂದಳದ +ಸೆಳ್ಳ್+ಉಗು
ರೊಳ+ ಮಯೂಖದ+ ಮಣಿಯ+ ಮುದ್ರಿಕೆ
ದಳ +ಮರೀಚಿಯಲ್+ಎಸೆದುದ್+ಎತ್ತಿದ +ಹಸ್ತ+ಊರ್ವಶಿಯ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮಯೂಖದ ಮಣಿಯ ಮುದ್ರಿಕೆದಳ ಮರೀಚಿಯಲೆಸೆದುದೆತ್ತಿದ
(೨) ಬೆಳಕು, ಹೊಳೆ, ಮರೀಚಿ, ಝಳ, ಚ್ಛವಿ, ಮಯೂಖ – ಸಮನಾರ್ಥಕ ಪದಗಳು

ಪದ್ಯ ೪೦: ಊರ್ವಶಿಯು ಅರ್ಜುನನ್ನು ಏಕೆ ಶಪಿಸಿದಳು?

ಒಲಿದು ಬಂದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿಂಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇಂದ್ರ ಕಟಕದಲಿ
ಎಲೆ ನಪುಂಸಕ ಗಂಡು ವೇಷದ
ಸುಳಿವು ನಿನಗೇಕೆನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ (ಅರಣ್ಯ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಾವು ನಿನಗೆ ಒಲಿದು ಬಂದಿರುವವಳು, ಸೌಂದರ್ಯದಿಂದ ಆಕರ್ಷಿಸಿ ನಮ್ಮನ್ನು ಮರುಗಿಸುವ ಶೂರ ನೀನು, ಇಂದ್ರನ ಪರಿವಾರದಲ್ಲಿ ಬಹಳ ಶ್ರೇಷ್ಠಳಾದವಳು ನಾನು ಸುಲಭದಲ್ಲಿ ಸಿಗುವವಳೇ? ನೀನು ದುರ್ಲಭನಲ್ಲವೇ? ಎಲೈ ನಪುಂಸಕ, ಈ ಗಂಡು ವೇಷ ನಿನಗೇಕೆ? ಇದೋ ನಿನಗೆ ಶಾಪಕೊಡುತ್ತೇನೆ ಹಿಡಿ ಎಂದು ಊರ್ವಶಿಯು ತನ್ನ ಹಸ್ತವನ್ನೆತ್ತಿದಳು.

ಅರ್ಥ:
ಒಲಿದು: ಪ್ರೀತಿಸಿ; ಬಂದು: ಆಗಮಿಸು; ಸೊಬಗು: ಅಂದ; ಮರುಗು: ಕರುಣೆತೋರು; ಮಿಂಡ: ವೀರ, ಶೂರ; ಸುಲಭ: ನಿರಾಯಾಸ; ದುರ್ಲಭ: ಪಡೆಯಲಸಾಧ್ಯ; ದೇವೇಂದ್ರ: ಇಂದ್ರ; ಕಟಕ: ಗುಂಪು; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಗಂಡು: ಪುರುಷ; ವೇಷ: ತೋರಿಕೆಯ ರೂಪ, ಸೋಗು; ಸುಳಿವು: ಗುರುತು, ಕುರುಹು; ಸತಿ: ಹೆಣ್ಣು; ಕಳವಳ: ಗೊಂದಲ, ಭ್ರಾಂತಿ; ಕರ: ಹಸ್ತ; ಎತ್ತು: ಮೇಲಕ್ಕೆ ಮಾಡು; ಹಿಡಿ: ಗ್ರಹಿಸು; ಶಾಪ: ನಿಷ್ಠುರದ ನುಡಿ;

ಪದವಿಂಗಡಣೆ:
ಒಲಿದು+ ಬಂದವರ್+ಆವು +ಸೊಬಗಿನೊಳ್
ಒಲಿಸಿ +ಮರುಗಿಪ +ಮಿಂಡ +ನೀನ್+ಅತಿ
ಸುಲಭರಾವ್+ ದುರ್ಲಭನು+ ನೀ +ದೇವೇಂದ್ರ+ ಕಟಕದಲಿ
ಎಲೆ +ನಪುಂಸಕ+ ಗಂಡು +ವೇಷದ
ಸುಳಿವು+ ನಿನಗೇಕ್+ಎನುತ +ಸತಿ +ಕಳ
ವಳಿಸಿ +ಕರವೆತ್ತಿದಳು +ಹಿಡಿ+ ಹಿಡಿ+ ಶಾಪವಿದೆ+ಎನುತ

ಅಚ್ಚರಿ:
(೧) ಸುಲಭ, ದುರ್ಲಭ – ವಿರುದ್ಧ ಪದ/ಪ್ರಾಸ ಪದ
(೨) ಅರ್ಜುನನನ್ನು ಬಯ್ಯುವ ಪರಿ – ಎಲೆ ನಪುಂಸಕ ಗಂಡು ವೇಷದ ಸುಳಿವು ನಿನಗೇಕೆ

ಪದ್ಯ ೩೯: ಊರ್ವಶಿಯು ಅರ್ಜುನನನ್ನು ಹೇಗೆ ಬಯ್ದಳು?

ಎಲವೊ ಭಂಡರ ಭಾವ ಖೂಳರ
ನಿಳಯ ಖಳರಧಿದೈವ ವಂಚಕ
ತಿಲಕ ಗಾವಿಲರೊಡೆಯ ಬಂಧುವೆ ದುಷ್ಟನಾಯಕರ
ಎಲೆ ಮರುಳೆ ತಾನಾವಳೆಂಬುದ
ತಿಳಿಯಲಾ ನೀನಾವನೆಂಬುದ
ನಿಳೆಯರಿಯದೇ ಭಂಡ ಫಡ ಹೋಗೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲವೋ ಅರ್ಜುನ, ನಾಚಿಕೆಗೆಟ್ಟವರ ಭಾವ, ದುಷ್ಟರಿಗೆ ಪೋಷಕ, ನೀಚರ ಅಧಿದೈವ, ಮೋಸಗಾರರಲ್ಲಿ ಶ್ರೇಷ್ಠನಾದವ, ದುಷ್ಟನಾಯಕರ ಬಂಧು, ಎಲೋ ಹುಚ್ಚಾ, ನಾನಾರೆಂದು ನಿನಗೆ ತಿಳಿಯಲಿಲ್ಲವಲ್ಲಾ, ನೀನು ಯಾರೆಂಬುದು ಲೋಕಕ್ಕೇ ಗೊತ್ತಿಲ್ಲವೇ? ಭಂಡ ಹೋಗು ಎಂದು ಅರ್ಜುನನನ್ನು ಊರ್ವಶಿ ಬಯ್ದಳು.

ಅರ್ಥ:
ಭಂಡ: ನಾಚಿಕೆ, ಲಜ್ಜೆ; ಭಾವ: ಅಂತರ್ಗತ ಅರ್ಥ, ಮನಸ್ಸು; ಖೂಳ: ದುಷ್ಟ; ನಿಳಯ: ಆಶ್ರಯ; ಖಳ: ದುಷ್ಟ, ದುರುಳ; ಅಧಿದೈವ: ಮುಖ್ಯವಾದ ದೇವತೆ; ವಂಚಕ: ಮೋಸಗಾರ; ತಿಲಕ: ಶ್ರೇಷ್ಠ; ಗಾವಿಲ: ದಡ್ಡ, ಹೆಡ್ಡ; ಒಡೆಯ: ಪ್ರಭು; ಬಂಧು: ಸಂಬಂಧಿಕ; ದುಷ್ಟ: ನೀಚ, ಕೆಟ್ಟವನು; ನಾಯಕ: ಒಡೆಯ; ಮರುಳ: ಮೂಢ; ತಿಳಿ: ಗ್ರಹಿಸು; ಇಳೆ: ಭೂಮಿ; ಅರಿ: ತಿಳಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ಊರ್ವಶಿ);

ಪದವಿಂಗಡಣೆ:
ಎಲವೊ +ಭಂಡರ +ಭಾವ +ಖೂಳರ
ನಿಳಯ +ಖಳರ್+ಅಧಿದೈವ +ವಂಚಕ
ತಿಲಕ+ ಗಾವಿಲರ್+ಒಡೆಯ +ಬಂಧುವೆ +ದುಷ್ಟನಾಯಕರ
ಎಲೆ+ ಮರುಳೆ +ತಾನ್+ಆವಳೆಂಬುದ
ತಿಳಿಯಲಾ +ನೀನ್+ಆವನೆಂಬುದನ್
ಇಳೆ+ಅರಿಯದೇ +ಭಂಡ +ಫಡ+ ಹೋಗೆಂದಳ್+ಇಂದುಮುಖಿ

ಅಚ್ಚರಿ:
(೧) ಅರ್ಜುನನನ್ನು ಬಯ್ಯುವ ಪರಿ – ಭಂಡರ ಭಾವ, ಖೂಳರ ನಿಲಯ, ಖಳರಧಿದೈವ, ವಂಚಕತಿಲಕ, ಗಾವಿಲರೊಡೆಯ,ಬಂಧುವೆ ದುಷ್ಟನಾಯಕರ, ಮರುಳೆ

ಪದ್ಯ ೩೮: ಊರ್ವಶಿಯು ಹೇಗೆ ಕೋಪಕ್ಕೆ ಶರಣಾದಳು?

ಕೆತ್ತಿದುವು ತುಟಿ ಕದಪಿನಲಿ ಕೈ
ಹತ್ತಿಸುತ ತೂಗಿದಳು ಶಿರವನು
ತತ್ತರೋಷಾಯುಧವ ಮಸೆದಳು ಧಾರೆಗಂಗಳಲಿ
ಎತ್ತಿದುಬ್ಬೇಗದ ವಿಕಾರದ
ಚಿತ್ತ ಬುದ್ಧಿಮನಂಗಳಾತ್ಮನ
ಜೊತ್ತಿಸಿದವದ್ಭುತದಹಂಕಾರದಲಿ ಕಾಮಿನಿಯ (ಅರಣ್ಯ ಪರ್ವ, ೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಊರ್ವಶಿಯ ತುಟಿಗಳು ನಡುಗಿತು, ಕೆನ್ನೆಯ ಮೇಲೆ ತನ್ನ ಕೈಯಿಟ್ಟು ತಲೆದೂಗಿದಳು, ಅವಳ ಕಣ್ಣುಗಳಲ್ಲಿ ರೋಷಾಯುಧವು ಮಸೆದಿತು, ಉದ್ವೇಗದ ವಿಕಾರವು ಮೇಲೆ ಮೀರಿ, ಚಿತ್ತ ಬುದ್ಧಿ ಮನಸ್ಸುಗಳು ಅಹಂಕಾರದಲ್ಲಿ ಜೋಡಾದವು, ಆಕೆಯ ಅಹಂಕಾರ, ಅಭಿಮಾನಕ್ಕೆ ಪೆಟ್ಟು ಬೀಳಲು, ಊರ್ವಶಿಯು ರೋಷಕ್ಕೆ ತುತ್ತಾದಳು.

ಅರ್ಥ:
ಕೆತ್ತು: ನಡುಕ, ಸ್ಪಂದನ; ತುಟಿ: ಅಧರ; ಕದಪು: ಕೆನ್ನೆ; ಕೈ: ಹಸ್ತ; ಹತ್ತಿಸು: ಅಂಟು, ಸೇರು; ತೂಗು: ಅಲ್ಲಾಡು; ಶಿರ: ತಲೆ; ತತ್ತು: ಅಪ್ಪು, ಆಲಂಗಿಸು; ರೋಷ: ಕೋಪ; ಆಯುಧ: ಶಸ್ತ್ರ; ಮಸೆ:ಹರಿತವಾದುದು, ಚೂಪಾದುದು, ಕಾಂತಿ; ಧಾರೆ: ಪ್ರವಾಹ; ಕಂಗಳು: ನಯನ, ಕಣ್ಣು; ಎತ್ತು: ಹೆಚ್ಚಾಗು; ಉದ್ವೇಗ: ವೇಗದಿಂದ ಹೋಗುವುದು, ಭಯ; ವಿಕಾರ: ಮನಸ್ಸಿನ ವಿಕೃತಿ, ಕುರೂಪ; ಚಿತ್ತ: ಮನಸ್ಸು; ಬುದ್ಧಿ: ತಿಳಿವು, ಅರಿವು; ಆತ್ಮ: ಜೀವ; ಜೊತ್ತು: ಆಸರೆ, ನೆಲೆ; ಅದ್ಭುತ: ಆಶ್ಚರ್ಯ, ವಿಸ್ಮಯ; ಅಹಂಕಾರ: ಗರ್ವ; ಕಾಮಿನಿ: ಹೆಣ್ಣು;

ಪದವಿಂಗಡಣೆ:
ಕೆತ್ತಿದುವು+ ತುಟಿ +ಕದಪಿನಲಿ+ ಕೈ
ಹತ್ತಿಸುತ +ತೂಗಿದಳು +ಶಿರವನು
ತತ್ತ+ರೋಷಾಯುಧವ+ ಮಸೆದಳು +ಧಾರೆ+ಕಂಗಳಲಿ
ಎತ್ತಿದ್+ಉಬ್ಬೇಗದ +ವಿಕಾರದ
ಚಿತ್ತ +ಬುದ್ಧಿ+ಮನಂಗಳ್+ಆತ್ಮನ
ಜೊತ್ತಿಸಿದವ್+ಅದ್ಭುತದ್+ಅಹಂಕಾರದಲಿ +ಕಾಮಿನಿಯ

ಅಚ್ಚರಿ:
(೧) ಊರ್ವಶಿಯ ಕೋಪವನ್ನು ಚಿತ್ರಿಸುವ ಪರಿ – ಕೆತ್ತಿದುವು ತುಟಿ ಕದಪಿನಲಿ ಕೈ ಹತ್ತಿಸುತ ತೂಗಿದಳು ಶಿರವನು ತತ್ತರೋಷಾಯುಧವ ಮಸೆದಳು ಧಾರೆಗಂಗಳಲಿ
(೨) ಕೋಪವು ಆಕೆಯನ್ನು ಆವರಿಸಿದ ಬಗೆ – ವಿಕಾರದ ಚಿತ್ತ ಬುದ್ಧಿಮನಂಗಳಾತ್ಮನ
ಜೊತ್ತಿಸಿದವದ್ಭುತದಹಂಕಾರದಲಿ ಕಾಮಿನಿಯ

ಪದ್ಯ ೩೭: ಊರ್ವಶಿಯಲ್ಲಿ ಕೋಪವು ಹೇಗೆ ಸೇರಿಕೊಂಡಿತು?

ಸೊಂಪಡಗಿತು ಮುಖೇಂದು ತನುಲತೆ
ಕಂಪಿಸಿದುದಡಿಗಡಿಗೆ ಮೈ ತನಿ
ಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ
ತಂಪಿನಲಿ ಶಿಖಿ ಮಧುರದಲಿ ಕಟು
ನುಂಪಿನಲಿ ಬಿರಿಸಮೃತದಲಿ ವಿಷ
ಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನ ರೋಷ (ಅರಣ್ಯ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಊರ್ವಶಿಯ ಮುಖಚಂದ್ರವು ಕಳೆಗುಂದಿತು, ಅವಳ ದೇಹಲತೆಯು ಮತ್ತೆ ಮತ್ತೆ ನಡುಗಿತು, ಮೈಯಲ್ಲಿ ಬೆವರುಸುರಿದು ದೇಹ ಪರಿಮಳದಿಂದ ಘಮಘಮಿಸಿತು, ಹಿಮದಲ್ಲಿ ಬೆಂಕಿ, ಸಿಹಿಯಲ್ಲಿ ಖಾರ, ನಯದಲ್ಲಿ ಬಿರಿಸು, ಅಮೃತದಲ್ಲಿ ವಿಷವು ಬೆರೆತಂತೆ, ಅವಳಿಗೆ ಮಹಾ ಕೋಪವುಂಟಾಯಿತು.

ಅರ್ಥ:
ಸೊಂಪು: ಕಾಂತಿ, ಹೊಳಪು; ಮುಖ: ಆನನ; ಇಂದು; ಚಂದ್ರ; ತನು: ದೇಹ; ಲತೆ: ಬಳ್ಳಿ; ಕಂಪು: ಸುಗಂಧ; ಅಡಿಗಡಿ: ಹೆಜ್ಜೆ ಹೆಜ್ಜೆ; ಮೈ: ತನು; ತನಿ: ಹೆಚ್ಚಾಗು; ಮಘಮಘಿಸು: ಸುವಾಸನೆಯನ್ನು ಬೀರು; ಅಮಲ:ನಿರ್ಮಲ; ಸ್ವೇದ: ಬೆವರು; ಸಲಿಲ: ನೀರು; ತಂಪು: ತಣಿವು, ಶೈತ್ಯ; ಶಿಖಿ: ಬೆಂಕಿ; ಮಧುರ: ಸವಿ, ಇಂಪು; ಕಟು: ತೀಕ್ಷ್ಣವಾದ; ನುಂಪು: ನುಣ್ಪು; ಬಿರಿ: ಸೀಳು , ಕಠಿಣ; ಅಮೃತ: ಸುಧೆ; ವಿಷ: ನಂಜು; ಗುಂಪು: ರಾಶಿ, ಸಮೂಹ; ನೆಲೆ: ಆಶ್ರಯ, ಆಧಾರ, ವಾಸಸ್ಥಾನ; ಸತಿ: ಹೆಣ್ಣು; ಘನ: ದೊಡ್ಡ, ಗಟ್ಟಿ; ರೋಷ: ಕೋಪ;

ಪದವಿಂಗಡಣೆ:
ಸೊಂಪ್+ಅಡಗಿತು +ಮುಖ+ಇಂದು +ತನುಲತೆ
ಕಂಪಿಸಿದುದ್+ಅಡಿಗಡಿಗೆ+ ಮೈ +ತನಿ
ಗಂಪಿನಲಿ+ ಮಘಮಘಿಸಿತ್+ಅಮಲ +ಸ್ವೇದ +ಸಲಿಲದಲಿ
ತಂಪಿನಲಿ +ಶಿಖಿ +ಮಧುರದಲಿ +ಕಟು
ನುಂಪಿನಲಿ+ ಬಿರಿಸ್+ಅಮೃತದಲಿ +ವಿಷ
ಗುಂಪಿನಲಿ +ನೆಲೆಯಾದವೋಲ್ +ಸತಿಗಾಯ್ತು +ಘನ +ರೋಷ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಂಪಿನಲಿ ಶಿಖಿ ಮಧುರದಲಿ ಕಟುನುಂಪಿನಲಿ ಬಿರಿಸಮೃತದಲಿ ವಿಷಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನ ರೋಷ
(೨) ಆಕೆಯ ಬೆವರಿನ ವಾಸನೆಯನ್ನು ಹೇಳುವ ಪರಿ – ಮೈ ತನಿಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ

ಪದ್ಯ ೩೬: ಊರ್ವಶಿಯು ತನ್ನ ಕೋಪವನ್ನು ಹೇಗೆ ತೋರ್ಪಡಿಸಿದಳು?

ರೋಷವೀರೆಲೆಯಾಯ್ತು ಲಜ್ಜೆಯ
ಮೀಸಲಳಿದುದು ಬಲುವಿಧದ ಬಹು
ವಾಸಿಗಳು ಪಲ್ಲವಿಸಿದವು ಕೆಲ್ಲವಿಸಿತನುತಾಪ
ಆಶೆ ಪೈಸರವೋಯ್ತು ಕಡು ಝಳ
ಸೂಸಿದುದು ಸುಯ್ಲಿನಲಿ ಕಂಗಳು
ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ (ಅರಣ್ಯ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಊರ್ವಶಿಯ ಕೋಪವು ಇಮ್ಮಡಿಸಿತು, ಲಜ್ಜೆಯನ್ನು ತೊರೆದಳು, ಹಲವು ರೀತಿಯ ಛಲಗಳು ಆಕೆಯಲ್ಲಿ ಹುಟ್ಟಿದವು, ದುಃಖವು ಕೆರಳಿತು, ಆಶೆ ಜಾರಿ ಹೋಯಿತು, ಉಸಿರು ಬಿಸಿಯಾಗಿ ಅದರ ತಾಪವೇರಿತು, ಕಣ್ಣು ಕೆಂಪಾದವು, ರೋಷವು ಅಧಿಕವಾಯಿತು.

ಅರ್ಥ:
ರೋಷ: ಕೋಪ; ಈರೆಲೆ: ಎರಡು ಎಲೆ, ಇಮ್ಮಡಿಸು; ಲಜ್ಜೆ: ನಾಚಿಕೆ; ಮೀಸಲು: ಪ್ರತ್ಯೇಕ, ತೆಗೆದಿರಿಸು; ಅಳಿ: ನಾಶವಾಗು; ಬಲು: ಹಲವಾರು; ವಿಧ: ರೀತಿ; ಬಹು: ಬಹಳ; ವಾಸಿ: ಛಲ, ಹಠ; ಪಲ್ಲವಿಸು: ಚಿಗುರು; ಕೆಲ್ಲವಿಸು: ಉದ್ರೇಕಗೊಳ್ಳು, ಕೆರಳು; ಅನುತಾಪ: ಪಶ್ಚಾತ್ತಾಪ, ದುಃಖ; ಆಶೆ: ಇಚ್ಛೆ, ಹಂಬಲ; ಪೈಸರ: ಜಾರುವುದು; ಕಡು: ಬಹಳ; ಝಳ:ಶಾಖ, ಉಷ್ಣತೆ; ಸೂಸು: ಹೊರಹೊಮ್ಮು; ಸುಯ್ಲು: ನಿಟ್ಟುಸಿರು; ಕಂಗಳು: ಕಣ್ಣು, ನಯನ; ಕೇಸುರಿ: ಕೆಂಪು; ಮುಕ್ಕುಳಿಸು: ಹೊರಹಾಕು; ಹೆಕ್ಕಳ: ಹೆಚ್ಚಳ, ಅತಿಶಯ; ಕಾಮಿನಿ: ಹೆಣ್ಣು;

ಪದವಿಂಗಡಣೆ:
ರೋಷವ್+ಈರೆಲೆಯಾಯ್ತು +ಲಜ್ಜೆಯ
ಮೀಸಲ್+ಅಳಿದುದು +ಬಲುವಿಧದ+ ಬಹು
ವಾಸಿಗಳು +ಪಲ್ಲವಿಸಿದವು +ಕೆಲ್ಲವಿಸಿತ್+ಅನುತಾಪ
ಆಶೆ +ಪೈಸರವೋಯ್ತು +ಕಡು +ಝಳ
ಸೂಸಿದುದು +ಸುಯ್ಲಿನಲಿ +ಕಂಗಳು
ಕೇಸುರಿಯ +ಮುಕ್ಕುಳಿಸಿದವು+ ಹೆಕ್ಕಳಿಸಿ+ ಕಾಮಿನಿಯ

ಅಚ್ಚರಿ:
(೧) ರೋಷವನ್ನು ಚಿತ್ರಿಸುವ ಪರಿ – ಸುಯ್ಲಿನಲಿ ಕಂಗಳು ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ
(೨) ರೋಷವು ಹೆಚ್ಚಾಯಿತು ಎಂದು ಹೇಳುವ ಪರಿ – ರೋಷವೀರೆಲೆಯಾಯ್ತು