ಪದ್ಯ ೨೩: ಊರ್ವಶಿಯು ಅರ್ಜುನನನ್ನು ಏನೆಂದು ಪ್ರಶ್ನಿಸಿದಳು?

ಎಲವೊ ರಾಯನ ಹೇಳಿಕೆಯಲಂ
ಡಲೆದನೆನ್ನನು ಚಿತ್ರಸೇನಕ
ನಲುಗಿ ನೆಟ್ಟವು ಕಾಮಶರವೆನ್ನಂತರಂಗದಲಿ
ಒಲಿದು ಬಂದಬಲೆಯರ ಟಕ್ಕರಿ
ಗಳೆವುದೇ ವಿಟಧರ್ಮವಕಟಾ
ತಿಳಿಯಲಾ ತಾನಾವಳೆಂಬುದನೆಂದಳಿಂದು ಮುಖಿ (ಅರಣ್ಯ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಊರ್ವಶಿಯು ಅರ್ಜುನನೊಂದಿಗೆ ಮಾತನಾಡುತ್ತಾ, ಎಲವೋ ಅರ್ಜುನ, ಇಂದ್ರನು ಹೇಳಿದುದರಿಂದ, ಚಿತ್ರಸೇನನು ನನ್ನ ಬೆನ್ನುಹತ್ತಿ ಬಿಡದೆ ಕಾಡಿದುದರಿಂದ ನಾನಿಲ್ಲಿಗೆ ಬಂದೆ, ಪ್ರೀತಿಸಿ ಬಂದ ತರುಣಿಯನ್ನು ತಿರಸ್ಕರಿಸುವದು ವಿಟರ ಧರ್ಮವೇ? ಅಯ್ಯೋ ನಾನು ಯಾರೆಂಬುದು ನಿನಗೆ ತಿಳಿಯದೇ? ಎಂದು ಅರ್ಜುನನನ್ನು ಪ್ರಶ್ನಿಸಿದಳು.

ಅರ್ಥ:
ರಾಯ: ರಾಜ; ಹೇಳಿಕೆ: ತಿಳಿಸು; ಅಂಡಲೆ: ಪೀಡೆ, ಕಾಡು; ಅಲುಗು: ಅಲ್ಲಾಡಿಸು, ಅದುರು; ನೆಟ್ಟು: ಒಳಹೊಕ್ಕು; ಕಾಮ: ಮನ್ಮಥ; ಶರ: ಬಾಣ; ಅಂತರಂಗ: ಆಂತರ್ಯ; ಒಲಿ: ಪ್ರೀತಿಸು; ಬಂದ: ಆಗಮಿಸು; ಅಬಲೆ: ಹೆಣ್ಣು; ಟಕ್ಕ: ವಂಚಕ; ವಿಟ: ಕಾಮುಕ, ವಿಷಯಾಸಕ್ತ; ಅಕಟಾ: ಅಯ್ಯೋ; ತಿಳಿ: ಅರಿವು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಚೆಲುವೆ;

ಪದವಿಂಗಡಣೆ:
ಎಲವೊ+ ರಾಯನ +ಹೇಳಿಕೆಯಲ್+
ಅಂಡಲೆದನ್+ಎನ್ನನು +ಚಿತ್ರಸೇನಕನ್
ಅಲುಗಿ+ ನೆಟ್ಟವು+ ಕಾಮಶರವ್+ಎನ್+ಅಂತರಂಗದಲಿ
ಒಲಿದು+ ಬಂದ್+ಅಬಲೆಯರ +ಟಕ್ಕರಿ
ಕಳೆವುದೇ +ವಿಟ+ಧರ್ಮವ್+ಅಕಟಾ
ತಿಳಿಯಲಾ +ತಾನ್+ಆವಳ್+ಎಂಬುದನ್+ಎಂದಳ್+ಇಂದು ಮುಖಿ

ಅಚ್ಚರಿ:
(೧) ಊರ್ವಶಿಯು ಬಂದ ಕಾರಣ – ಅಲುಗಿ ನೆಟ್ಟವು ಕಾಮಶರವೆನ್ನಂತರಂಗದಲಿ
(೨) ವಿಟ ಧರ್ಮವಾವುದು – ಒಲಿದು ಬಂದಬಲೆಯರ ಟಕ್ಕರಿಗಳೆವುದೇ ವಿಟಧರ್ಮವ್?

ನಿಮ್ಮ ಟಿಪ್ಪಣಿ ಬರೆಯಿರಿ