ಪದ್ಯ ೧೧: ಊರ್ವಶಿಯ ಸ್ನೇಹಿತೆಯರ ಬಳಿ ಯಾರು ಬಂದರು?

ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರ ಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ (ಅರಣ್ಯ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಊರ್ವಶಿಯ ಕೆಳದಿಯರ ಮೆಲುನುಡಿಗಳನ್ನು ಕೇಳಿ, ಗಿಣಿಗಳು ಅವರ ಬಳಿಗೆ ಬಂದವು, ಅವರ ಸಂಗೀತವನ್ನು ಕೇಳಿ ಕೋಗಿಲೆಗಳು ಹತ್ತಿರಕ್ಕೆ ಬಂದವು, ಅವರ ಅಂಗದ ಪರಿಮಳವನ್ನು ಮೂಸಿ ದುಂಬಿಗಳ ಹಿಂಡುಗಳು ಅವರ ಹತ್ತಿರಕ್ಕೆ ಬಂದವು, ಅವರ ಹೊಳೆಯುವ ಮುಖಗಳನ್ನು ನೋಡಿ ಚಂದ್ರ ಬಂದನೆಂದು ಚಕೋರ ಪಕ್ಷಿಗಳು ಹಾರಿ ಬಂದವು, ಅವರ ಕಾಲಂದುಗೆಯ ಸದ್ದಿಗೆ ಹಂಸಗಳು ಊರ್ವಶಿಯ ಸ್ನೇಹಿತೆಯರ ಬಳಿ ಬಂದವು.

ಅರ್ಥ:
ಮೆಲುನುಡಿ: ಮೃದು ವಚನ; ಗಿಣಿ: ಶುಕ; ಹೊದ್ದು: ಹೊಂದು, ಸೇರು; ಸರ: ಸ್ವರ, ದನಿ; ಉಲಿ: ಧ್ವನಿಮಾಡು, ಕೂಗು; ಔಕು: ಗುಂಪು, ಒತ್ತು; ಪರಿಮಳ: ಸುಗಂಧ; ಪಸರು: ಹರಡು; ತೂಳು: ಬೆನ್ನಟ್ಟು, ಹಿಂಬಾಲಿಸು; ತುಂಬಿ: ದುಂಬಿ, ಜೀನು; ಡೊಂಬಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಮುಖ: ಆನನ; ಚಕೋರ: ಚಾತಕ ಪಕ್ಷಿ; ಚಯ: ಕಾಂತಿ; ಇಟ್ಟಳಿಸು: ದಟ್ಟವಾಗು, ಒತ್ತಾಗು; ನೇವುರ: ಅಂದುಗೆ, ನೂಪುರ; ಬೊಬ್ಬೆ: ಜೋರಾದ ಶಬ್ದ; ಸಿಲುಕು: ಬಂಧನಕ್ಕೊಳಗಾಗು; ಹಂಸ: ಮರಾಲ; ಕಮಲಾನನೆ: ಕಮಲದಂತ ಮುಖ; ಕೆಳದಿ: ಗೆಳತಿ, ಸ್ನೇಹಿತೆ;

ಪದವಿಂಗಡಣೆ:
ಮೆಲು+ನುಡಿಗೆ+ ಗಿಣಿ +ಹೊದ್ದಿದವು +ಸರದ್
ಉಲಿಗೆ+ ಕೋಗಿಲೆ+ಔಕಿದವು+ ಪರಿ
ಮಳದ +ಪಸರಕೆ+ ತೂಳಿದವು +ತುಂಬಿಗಳು+ ಡೊಂಬಿಯಲಿ
ಹೊಳೆವ +ಮುಖಕೆ +ಚಕೋರ +ಚಯವಿ
ಟ್ಟಳಿಸಿದವು ನೇವುರದ +ಬೊಬ್ಬೆಗೆ
ಸಿಲುಕಿದವು +ಹಂಸೆಗಳು+ ಕಮಲಾನನೆಯ+ ಕೆಳದಿಯರ

ಅಚ್ಚರಿ:
(೧) ಹೊದ್ದಿದವು, ಔಕಿದವು, ತೂಳಿದವು, ವಿಟ್ಟಳಿಸಿದವು, ಸಿಲುಕಿದವು – ಪದಗಳ ಬಳಕೆ
(೨) ಗಿಣಿ, ಕೋಗಿಲೆ, ತುಂಬಿ, ಚಕೋರ , ಹಂಸೆ – ಉಪಮಾನಕ್ಕೆ ಬಳಸಿದುದು

ನಿಮ್ಮ ಟಿಪ್ಪಣಿ ಬರೆಯಿರಿ