ಪದ್ಯ ೬: ಊರ್ವಶಿಯನ್ನು ಯಾರು ಸುತ್ತುವರೆದರು?

ನೆರೆದರಬಲೆಯರಂಗವಟ್ಟದ
ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
ಪರಿಪರಿಯ ಹೊಂದೊಡಿಗೆಗಳ ಪರಿ
ಪರಿಗಳುಡಿಗೆಯ ದೇಶಿಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ (ಅರಣ್ಯ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ತಮ್ಮ ಅಂಗದ ಪರಿಮಳಕ್ಕೆ ದುಂಬಿಗಳು ಹೂವೆಂದು ಭ್ರಮಿಸಿ ಮುತ್ತುತ್ತಿರಲು, ಕಣ್ಣ ಬೆಳಕು ಕತ್ತಲೆಯನ್ನು ಓಡಿಸುತ್ತಿರಲು, ವಿಧವಿಧವಾದ ಬಂಗಾರದ ಆಭರಣಗಳು, ವಿವಿಧ ವಸ್ತ್ರಗಳ ವಿನ್ಯಾಸ, ವಿವಿಧ ರೀತಿಯ ಮುಡಿಗಳನ್ನು ಧರಿಸಿದ ಅಪ್ಸರೆಯರು ಊರ್ವಶಿಯನ್ನು ಸುತ್ತುವರೆದರು.

ಅರ್ಥ:
ನೆರೆ: ಪಕ್ಕ, ಸಮೀಪ; ಅಬಲೆ: ಹೆಂಗಸು; ಅಂಗ: ದೇಹ, ಶರೀರ; ಅಟ್ಟು: ಅಂಟಿಕೊಳ್ಳು; ಪರಿಮಳ: ಸುಗಂಧ; ಮುತ್ತಿಗೆ: ಆವರಿಸು; ತುಂಬಿ: ದುಂಬಿ, ಜೇನು; ತೆರಳು: ಹೋಗು, ಹೋಗಲಾಡಿಸು; ಕತ್ತಲೆ: ಅಂಧಕಾರ; ಕೆದರು: ಚದುರಿಸು; ಕಣ್ಣು: ನಯನ; ಬೆಳಕು: ಪ್ರಕಾಶ; ಪರಿಪರಿ: ಹಲವಾರು ರೀತಿ; ಹೊಂದು: ಸರಿಯಾಗು; ಒಡಿಗೆ; ಒಡವೆ; ಉಡಿಗೆ: ವಸ್ತ್ರ, ಬಟ್ಟೆ; ದೇಶಿ: ಅಲಂಕಾರ; ಮಿಗೆ: ಅಧಿಕ; ಮುಡಿ: ಶಿರ; ಮುಗುದೆ: ಸುಂದರ ಯುವತಿ; ಬಳಸು: ಆವರಿಸು; ಬಾಲಕಿ: ಹೆಣ್ಣು;

ಪದವಿಂಗಡಣೆ:
ನೆರೆದರ್+ಅಬಲೆಯರ್+ಅಂಗವಟ್ಟದ
ಪರಿಮಳದ+ ಮುತ್ತಿಗೆಯ+ ತುಂಬಿಯ
ತೆರಳಿಕೆಯ+ ಕತ್ತಲೆಯ+ ಕೆದರುವ +ಕಣ್ಣಬೆಳಗುಗಳ
ಪರಿಪರಿಯ+ ಹೊಂದ್+ಒಡಿಗೆಗಳ +ಪರಿ
ಪರಿಗಳ್+ಉಡಿಗೆಯ +ದೇಶಿ+ಮಿಗೆ +ಪರಿ
ಪರಿಯ +ಮುಡಿಗಳ +ಮುಗುದೆಯರು +ಬಳಸಿದರು +ಬಾಲಕಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೆರೆದರಬಲೆಯರಂಗವಟ್ಟದ ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೨) ಕ ಕಾರದ ತ್ರಿವಳಿ ಪದ – ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೩) ೪-೬ ಸಾಲಿನ ಮೊದಲ ಪದ ಪರಿಪರಿ

ನಿಮ್ಮ ಟಿಪ್ಪಣಿ ಬರೆಯಿರಿ