ಪದ್ಯ ೯: ಊರ್ವಶಿಯು ಸುಲಭದಲ್ಲಿ ದೊರಕುವವಳೇ?

ಧರಣಿಪತಿ ಕೇಳವರ ತೊತ್ತಿರ
ಹೊರಗೆಲಸದವದಿರ ಪಸಾಯಿತೆ
ಯರಿಗೆ ಪಡಿಗವ ನೀಡಸಲ್ಲರು ಸೋಮಯಾಜಿಗಳು
ವರುಣಸೂನು ಜಯಂತ ನಳಕೂ
ಬರರು ಸಮಯವನೊಮ್ಮೆ ಕಾಣದೆ
ವರುಷವೋಲೈಸುವರು ಸೌಧದ ದಾರವಟ್ಟದಲಿ (ಅರಣ್ಯ ಪರ್ವ, ೯ ಸಂಧಿ, ಪದ್ಯ ೯)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಊರ್ವಶಿಯು ಎಷ್ಟು ದುರ್ಲಭಳೆಂದು, ಅವಳಿರಲಿ, ಅವಳ ಮನೆಯ ಆಳುಗಳ ಸೇವಕಿಯರಿಗಿರಲಿ, ಆ ಸೇವಕಿಯರ ಆಪ್ತ ಸ್ನೇಹಿತೆಯರಿಗೆ ತಾಂಬೂಲವನ್ನುಗುಳಲು ಪೀಕದಾನಿ ಹಿಡಿಯುವುದಕ್ಕೂ ಸೋಮಯಾಗ ಮಾದಿ ಸ್ವರ್ಗಕ್ಕೆ ಬಂದವರಿಗೆ ಸಾಧ್ಯವಿಲ್ಲ. ವರುಣನ ಮಗ, ಜಯಂತ, ನಳಕೂಬರರು ಅವಳನ್ನು ಕಾಣಲು, ಅವಳ ಮನೆಯ ಹೆಬ್ಬಾಗಿಲಲ್ಲಿ ಒಂದು ವರ್ಷ ಕಾಯಬೇಕಾಯಿತು.

ಅರ್ಥ:
ಧರಣಿಪತಿ: ರಾಜ; ಧರಣಿ: ಭೂಮಿ;ತೊತ್ತು: ದಾಸಿ, ಸೇವಕಿ; ಹೊರ: ಆಚೆ; ಕೆಲಸ: ಕಾರ್ಯ; ಪಸಾಯ: ಉಡುಗೊರೆ; ಪಡಿಗ: ತೊಳೆದ ನೀರನ್ನು ಗ್ರಹಿಸುವ ಪಾತ್ರೆ; ನೀಡು: ತೆಗೆದುಕೋ; ಸಲ್ಲ:ಸರಿಯಲ್ಲ, ಯೋಗ್ಯವಲ್ಲದು; ಯಾಜಿ:ಯಾಗವನ್ನು ಮಾಡಿಸುವವನು, ಯಜ್ಞ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ಸೂನು: ಮಗ; ಸಮಯ: ಕಾಲ; ವರುಷ: ಸಂವತ್ಸರ; ಓಲೈಸು: ಉಪಚರಿಸು; ಸೌಧ: ಮನೆ; ದಾರವಟ್ಟ: ಹೆಬ್ಬಾಗಿಲು;

ಪದವಿಂಗಡಣೆ:
ಧರಣಿಪತಿ+ ಕೇಳ್+ಅವರ +ತೊತ್ತಿರ
ಹೊರ+ಕೆಲಸದವದಿರ+ ಪಸಾಯಿತೆ
ಯರಿಗೆ +ಪಡಿಗವ +ನೀಡಸಲ್ಲರು+ ಸೋಮಯಾಜಿಗಳು
ವರುಣಸೂನು +ಜಯಂತ +ನಳಕೂ
ಬರರು+ ಸಮಯವನ್+ಒಮ್ಮೆ +ಕಾಣದೆ
ವರುಷವ್+ಓಲೈಸುವರು+ ಸೌಧದ+ ದಾರವಟ್ಟದಲಿ

ಅಚ್ಚರಿ:
(೧) ಹೆಬ್ಬಾಗಿಲೆನ್ನಲು ದಾರವಟ್ಟ ಪದದ ಬಳಕೆ

ಪದ್ಯ ೮: ಊರ್ವಶಿಯು ಯಾರ ಅರಮನೆಗೆ ಬಂದಳು?

ತುರಗಮೇಧದ ರಾಜಸೂಯದ
ವರಮಹಾಕ್ರತುಕಾರರೀಕೆಯ
ಚರಣದುಂಗುಟ ತುದಿಯ ಕಾಂಬರೆ ಪೂತು ಫಲಗುಣನ
ಪರಮ ಪೂನ್ಯವದೇನು ತಾನಿ
ದ್ಮನೆಗೆ ಸತಿ ಬಂದಳೇನ
ಚ್ಚರಿಯೆನುತ ಹೊಗಳಿದರು ಮಾಗಧರಿಂದ್ರನಂದನನ (ಅರಣ್ಯ ಪರ್ವ, ೯ ಸಂಧಿ, ೮ ಪದ್ಯ)

ತಾತ್ಪರ್ಯ:
ಅಶ್ವಮೇಧ, ರಾಜಸೂಯಾದಿ ಮಹಾಯಾಗಗಳನ್ನು ಮಾಡಿ ಸ್ವರ್ಗಕ್ಕೆ ಬಂದವರು, ಇವಳ ಪಾದದ ಬೆರಳುಗಳನ್ನೂ ಕಾಣರು, ಅರ್ಜುನನ ಪರಮಪುಣ್ಯವೇ ಸರಿ, ತಾನಿದ್ದ ಮನೆಗೇ ಊರ್ವಶಿಯು ಬಂದಳು ಏನಾಶ್ಚರ್ಯ, ಎಂದು ವಂದಿಮಾಗಧರು ಅರ್ಜುನನನ್ನು ಹೊಗಳಿದರು.

ಅರ್ಥ:
ತುರಗ: ಅಶ್ವ; ತುರಗಮೇಧ: ಅಶ್ವಮೇಧ; ವರ: ಶ್ರೇಷ್ಠ; ಮಹಾ: ದೊಡ್ಡ; ಕ್ರತು: ಯಾಗ, ಯಜ್ಞ; ಚರಣ: ಪಾದ; ಅಂಗುಟ: ಪಾದದ ಹೆಬ್ಬೆರಳು; ತುದಿ: ಅಗ್ರಭಾಗ; ಕಾಂಬರೆ: ಕಾಣು; ಪೂತು: ಭಲೇ; ಪುಣ್ಯ: ಸದಾಚಾರ; ಅರಮನೆ: ರಾಜನ ಆಲಯ; ಸತಿ: ಹೆಂಗಸು; ಅಚ್ಚರಿ: ಆಶ್ಚರ್ಯ; ಹೊಗಳು: ಸ್ತುತಿ, ಕೊಂಡಾಟ; ಮಾಗಧ: ಹೊಗಳುಭಟ್ಟ;

ಪದವಿಂಗಡಣೆ:
ತುರಗ+ಮೇಧದ +ರಾಜಸೂಯದ
ವರ+ಮಹಾಕ್ರತುಕಾರರ್+ಈಕೆಯ
ಚರಣದ್+ಉಂಗುಟ +ತುದಿಯ +ಕಾಂಬರೆ+ ಪೂತು +ಫಲಗುಣನ
ಪರಮ +ಪುಣ್ಯವದೇನು +ತಾನಿ
ದ್ದರಮನೆಗೆ +ಸತಿ+ ಬಂದಳ್+ಏನ್
ಅಚ್ಚರಿಯೆನುತ +ಹೊಗಳಿದರು +ಮಾಗಧರ್+ಇಂದ್ರನಂದನನ

ಅಚ್ಚರಿ:
(೧) ಊರ್ವಶಿಯ ನೋಡುವುದಿರಲಿ ಅವಳ ಅಂಗುಟವು ನೋಡಲು ಕಷ್ಟೆ ಎಂದು ಹೇಳುವ ಪರಿ – ತುರಗಮೇಧದ ರಾಜಸೂಯದ ವರಮಹಾಕ್ರತುಕಾರರೀಕೆಯ ಚರಣದುಂಗುಟ ತುದಿಯ ಕಾಂಬರೆ ಪೂತು ಫಲಗುಣನ
(೨) ಫಲಗುಣ, ಇಂದ್ರನಂದನ – ಅರ್ಜುನನನ್ನು ಕರೆದ ಪರಿ

ಪದ್ಯ ೭: ಊರ್ವಶಿಯ ಸುತ್ತಲೂ ಯಾರಿದ್ದರು?

ಹೆಗಲ ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬಂಧ ಕಳಸದ ತಾಳ ವೃಂತಕದ
ಮುಗುದೆಯರು ಮನಮಥನ ಮೊನೆಯಾ
ಳುಗಳು ಮುಸುಕಿತು ಮಾನಿನಿಯ ದಂ
ಡಿಗೆಯ ಮೈಕಾಂತಿಗಳ ದೂವಾಳಿಗಳ ಲಹರಿಯಲಿ (ಅರಣ್ಯ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ತಾಂಬೂಲದ ಚೀಲವನ್ನು ಹೆಗಲಿಗೆ ಹಾಕಿಕೊಂಡವರು, ಕನ್ನಡಿ ಕಲಶವನ್ನು ಹಿಡಿದವರು, ಚಾಮರವನ್ನು ಹಾಕುವವರು, ಬಂಗಾರದ ಲೇಪವುಳ್ಲ ಪಾದರಕ್ಷೆಯನ್ನು ತೊಟ್ಟವರು, ನೀಳವಾದ ಚೂಚುಕವುಳ್ಳ ಕಲಶಕುಚೆಯರು, ಊರ್ವಶಿಯ ಸುತ್ತಲೂ ಬರುತ್ತಿದ್ದರು. ಮನ್ಮಥನ ಸೈನ್ಯವೇ ಬಂತೋ ಎಂಬಂತೆ ಕಾಣುತ್ತಿತ್ತು, ಅವರೆಲ್ಲರೂ ಊರ್ವಶಿಯ ಪಲ್ಲಕ್ಕಿಯ ಸುತ್ತಲೂ ದೇಹಕಾಂತಿಯ ತೆರೆಗಳನ್ನು ಹರಿಸುತ್ತಿದ್ದರು.

ಅರ್ಥ:
ಹೆಗಲು: ಭುಜ; ಹಡಪ: ಅಡಕೆ ಎಲೆಯ ಚೀಲ; ಹಿಡಿ: ಗ್ರಹಿಸು; ಮುಕುರ: ಕನ್ನಡಿ; ಆಳಿ: ಸಾಲು; ಚಿಮ್ಮು: ಹೊರಬರುವ; ಸೀಗುರಿ: ಚಾಮರ; ಹಾವುಗೆ: ಪಾದುಕೆ; ಹೇಮ: ಚಿನ್ನ; ನಿಬಂಧ: ನಿಮಿತ್ತ; ಕಳಸ: ಕುಂಭ; ತಾಳವೃಂತ: ಬೀಸಣಿಕೆ; ಮುಗುದೆ: ಸುಂದರ ಯುವತಿ; ಮನಮಥ: ಕಾಮ; ಮೊನೆ: ಚೂಪು; ಆಳು: ಸೇವಕ; ಮುಸುಕು: ಆವರಿಸು; ಮಾನಿನಿ: ಹೆಣ್ಣು; ದಂಡಿಗೆ: ಬೆತ್ತ, ಬಡಿಗೆ; ದಂಡಿ: ಹೆಚ್ಚಳ; ಮೈಕಾಂತಿ: ತನುವಿನ ಕಾಂತಿ, ಪ್ರಕಾಶ; ದೂವಾಳಿ: ವೇಗವಾಗಿ ಓಡುವುದು; ಲಹರಿ: ಅಲೆ, ರಭಸ;

ಪದವಿಂಗಡಣೆ:
ಹೆಗಲ +ಹಡಪದ +ಹಿಡಿದ +ಮುಕುರಾ
ಳಿಗಳ +ಚಿಮ್ಮುವ +ಸೀಗುರಿಯ +ಹಾ
ವುಗೆಯ +ಹೇಮ+ನಿಬಂಧ+ ಕಳಸದ +ತಾಳ +ವೃಂತಕದ
ಮುಗುದೆಯರು +ಮನಮಥನ+ ಮೊನೆ
ಆಳುಗಳು +ಮುಸುಕಿತು +ಮಾನಿನಿಯ +ದಂ
ಡಿಗೆಯ +ಮೈಕಾಂತಿಗಳ +ದೂವಾಳಿಗಳ +ಲಹರಿಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೆಗಲ ಹಡಪದ ಹಿಡಿದ
(೨) ಮ ಕಾರದ ಸಾಲು ಪದ – ಮುಗುದೆಯರು ಮನಮಥನ ಮೊನೆಯಾಳುಗಳು ಮುಸುಕಿತು ಮಾನಿನಿಯ

ಪದ್ಯ ೬: ಊರ್ವಶಿಯನ್ನು ಯಾರು ಸುತ್ತುವರೆದರು?

ನೆರೆದರಬಲೆಯರಂಗವಟ್ಟದ
ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
ಪರಿಪರಿಯ ಹೊಂದೊಡಿಗೆಗಳ ಪರಿ
ಪರಿಗಳುಡಿಗೆಯ ದೇಶಿಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ (ಅರಣ್ಯ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ತಮ್ಮ ಅಂಗದ ಪರಿಮಳಕ್ಕೆ ದುಂಬಿಗಳು ಹೂವೆಂದು ಭ್ರಮಿಸಿ ಮುತ್ತುತ್ತಿರಲು, ಕಣ್ಣ ಬೆಳಕು ಕತ್ತಲೆಯನ್ನು ಓಡಿಸುತ್ತಿರಲು, ವಿಧವಿಧವಾದ ಬಂಗಾರದ ಆಭರಣಗಳು, ವಿವಿಧ ವಸ್ತ್ರಗಳ ವಿನ್ಯಾಸ, ವಿವಿಧ ರೀತಿಯ ಮುಡಿಗಳನ್ನು ಧರಿಸಿದ ಅಪ್ಸರೆಯರು ಊರ್ವಶಿಯನ್ನು ಸುತ್ತುವರೆದರು.

ಅರ್ಥ:
ನೆರೆ: ಪಕ್ಕ, ಸಮೀಪ; ಅಬಲೆ: ಹೆಂಗಸು; ಅಂಗ: ದೇಹ, ಶರೀರ; ಅಟ್ಟು: ಅಂಟಿಕೊಳ್ಳು; ಪರಿಮಳ: ಸುಗಂಧ; ಮುತ್ತಿಗೆ: ಆವರಿಸು; ತುಂಬಿ: ದುಂಬಿ, ಜೇನು; ತೆರಳು: ಹೋಗು, ಹೋಗಲಾಡಿಸು; ಕತ್ತಲೆ: ಅಂಧಕಾರ; ಕೆದರು: ಚದುರಿಸು; ಕಣ್ಣು: ನಯನ; ಬೆಳಕು: ಪ್ರಕಾಶ; ಪರಿಪರಿ: ಹಲವಾರು ರೀತಿ; ಹೊಂದು: ಸರಿಯಾಗು; ಒಡಿಗೆ; ಒಡವೆ; ಉಡಿಗೆ: ವಸ್ತ್ರ, ಬಟ್ಟೆ; ದೇಶಿ: ಅಲಂಕಾರ; ಮಿಗೆ: ಅಧಿಕ; ಮುಡಿ: ಶಿರ; ಮುಗುದೆ: ಸುಂದರ ಯುವತಿ; ಬಳಸು: ಆವರಿಸು; ಬಾಲಕಿ: ಹೆಣ್ಣು;

ಪದವಿಂಗಡಣೆ:
ನೆರೆದರ್+ಅಬಲೆಯರ್+ಅಂಗವಟ್ಟದ
ಪರಿಮಳದ+ ಮುತ್ತಿಗೆಯ+ ತುಂಬಿಯ
ತೆರಳಿಕೆಯ+ ಕತ್ತಲೆಯ+ ಕೆದರುವ +ಕಣ್ಣಬೆಳಗುಗಳ
ಪರಿಪರಿಯ+ ಹೊಂದ್+ಒಡಿಗೆಗಳ +ಪರಿ
ಪರಿಗಳ್+ಉಡಿಗೆಯ +ದೇಶಿ+ಮಿಗೆ +ಪರಿ
ಪರಿಯ +ಮುಡಿಗಳ +ಮುಗುದೆಯರು +ಬಳಸಿದರು +ಬಾಲಕಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೆರೆದರಬಲೆಯರಂಗವಟ್ಟದ ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೨) ಕ ಕಾರದ ತ್ರಿವಳಿ ಪದ – ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೩) ೪-೬ ಸಾಲಿನ ಮೊದಲ ಪದ ಪರಿಪರಿ

ಪದ್ಯ ೫: ಊರ್ವಶಿಯ ರೂಪವು ಹೇಗಿತ್ತು?

ಲೋಕವಶ್ಯದ ತಿಲಕವೋ ಜಗ
ದೇಕರತ್ನವೊ ವಿಗಡಮುನಿ ಚಿ
ತ್ತಾಕರುಷಣದ ಮಂತ್ರನಾದವೊ ಋಷಿತಪಃಫಲವೊ
ಲೋಕ ಸೌಂದರೈಕ ಸರ್ಗವೊ
ನಾಕಸುಖ ಸಾಕಾರವೋ ರೂ
ಪೈಕತಾನವೊ ಚಿತ್ರವಾಯ್ತೂರ್ವಶಿಯ ರೂಪಿನಲಿ (ಅರಣ್ಯ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಊರ್ವಶಿಯ ರೂಪವನ್ನು ವರ್ಣಿಸುವುದಾದರೂ ಹೇಗೆ? ಅವಳು ಲೋಕವನ್ನೇ ವಶೀಕರಣ ಮಾಡಬಲ್ಲ ತಿಲಕ. ಜಗತ್ತಿನ ಏಕೈಕ ರತ್ನ, ತಪೋ ಗರ್ವಿತರಾದ ಮುನಿಗಳ ಚಿತ್ತವನ್ನು ಆಕರ್ಷಿಸುವ ಮಂತ್ರ, ಋಷಿಗಳ ತಪಸ್ಸಿನ ಫಲ, ಲೋಕದ ಸಮಸ್ತ ಸೌಂದರ್ಯದ ಉತ್ಸಾಹ, ಸ್ವರ್ಗಸುಖವೇ ಆಕಾರ ತಳೆದು ಬಂದರೆ ಅದು ಊರ್ವಶಿ, ರೂಪವಿರುವ ಏಕಮಾತ್ರ ಸ್ಥಾನ, ಊರ್ವಶಿಯ ರೂಪವು ಅಷ್ಟು ಅದ್ಭುತವಾಗಿತ್ತು.

ಅರ್ಥ:
ಲೋಕ: ಜಗತ್ತು; ವಶ್ಯ: ವಶಮಾಡಿಕೊಳ್ಳುವಿಕೆ; ತಿಲಕ: ಶ್ರೇಷ್ಠ; ಜಗತ್ತು: ಲೋಕ; ರತ್ನ: ಬೆಲೆಬಾಳುವ ಮಣಿ; ವಿಗಡ: ಸಾಹಸ, ವಿರೋಧ; ಮುನಿ: ಋಷಿ; ಚಿತ್ತ: ಮನಸ್ಸು; ಆಕರುಷಣ: ಸೆಳೆತ; ಮಂತ್ರ: ವಿಚಾರ, ಆಲೋಚನೆ; ನಾದ: ಧ್ವನಿ, ಶಬ್ದ, ಸಪ್ಪಳ; ತಪ: ತಪಸ್ಸು, ಧ್ಯಾನ; ಫಲ: ಪರಿಣಾಮ, ಫಲಿತಾಂಶ; ಸೌಂದರ್ಯ: ಚೆಲುವು; ಸರ್ಗ: ಗುಂಪು; ನಾಕ: ಸ್ವರ್ಗ; ಸುಖ: ಸಂತಸ, ನೆಮ್ಮದಿ; ಸಾಕಾರ: ಆಕೃತಿಯುಳ್ಳ; ರೂಪ: ಆಕಾರ; ತಾಣ: ನೆಲೆ; ಚಿತ್ರ: ಬರೆದ ಆಕೃತಿ;

ಪದವಿಂಗಡಣೆ:
ಲೋಕ+ವಶ್ಯದ +ತಿಲಕವೋ +ಜಗ
ದೇಕ+ರತ್ನವೊ +ವಿಗಡ+ಮುನಿ +ಚಿತ್ತ
ಆಕರುಷಣದ +ಮಂತ್ರ+ ನಾದವೊ +ಋಷಿ+ತಪಃ+ಫಲವೊ
ಲೋಕ +ಸೌಂದರೈಕ+ ಸರ್ಗವೊ
ನಾಕಸುಖ+ ಸಾಕಾರವೋ +ರೂ
ಪೈಕ+ತಾನವೊ+ ಚಿತ್ರವಾಯ್ತ್+ಊರ್ವಶಿಯ +ರೂಪಿನಲಿ

ಅಚ್ಚರಿ:
(೧) ಲೋಕ, ಜಗ – ಸಮನಾರ್ಥಕ ಪದ – ೧ ಸಾಲಿನ ಮೊದಲ ಮತ್ತು ಕೊನೆ ಪದ
(೨) ಊರ್ವಶಿಯ ಸೌಂದರ್ಯದ ವಿವರ – ಲೋಕವಶ್ಯದ ತಿಲಕವೋ; ಜಗದೇಕರತ್ನವೊ; ವಿಗಡಮುನಿ ಚಿತ್ತಾಕರುಷಣದ ಮಂತ್ರನಾದವೊ; ಋಷಿತಪಃಫಲವೊ; ಲೋಕ ಸೌಂದರೈಕ ಸರ್ಗವೊ; ನಾಕಸುಖ ಸಾಕಾರವೋ