ಪದ್ಯ ೩: ಊರ್ವಶಿಯ ರೂಪ ಹೇಗೆ ಬೆಳಗಿತು?

ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸಜವ್ವನದ ಜೋಡಿಯ ಜಾಡಿಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪ ಸುರಸತಿಯ (ಅರಣ್ಯ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಸುಗಂಧದ ಅನುಲೇಪಗಳನ್ನು ಲೇಪಿಸಿಕೊಂಡಳು. ಸಖಿಯರು ತಿಲಕವನ್ನಿಟ್ಟು ಅಲಂಕರಿಸಿದರು. ಮೊದಲೇ ಹೊಳೆಯುತ್ತಿದ್ದ ಅವಳ ನವ ಯೌವನದ ಕಾಂತಿಯು ಇಮ್ಮಡಿಸಿತು. ಒರೆಯಿಂದ ತೆಗೆದ ಕತ್ತಿಯೋ, ಸಾಣೆ ಹಿಡಿದ ಕತ್ತಿಯ ಅಲಗೋ, ಮನ್ಮಥನ ಶತ್ರುಗಳ ಕೇಡಿಗಾಗಿ ಹುಟ್ಟಿದ ಧೂಮಕೇತುವೋ ಎನ್ನುವಂತೆ ಊರ್ವಶಿಯ ರೂಪ ಬೆಳಗುತ್ತಿತ್ತು.

ಅರ್ಥ:
ತಿಗುರು: ಸುಗಂಧ ವಸ್ತು, ಪರಿಮಳದ್ರವ್ಯ; ತಿಲಕ: ಹಣೆಯಲ್ಲಿಡುವ ಬೊಟ್ಟು; ತೆತ್ತು: ಹಾಕು; ಅಲಂಕರಿಸು: ಶೃಂಗಾರಮಾಡು; ಹೊಳಹು: ಪ್ರಕಾಶ, ಕಾಂತಿ; ಹೊಗರು: ಕಾಂತಿ, ಪ್ರಕಾಶ; ಹೊಸ: ನವೀನ; ಜವ್ವನ: ಹರೆಯ, ಯೌವನ; ಜೋಡಿ: ಜೊತೆ; ಜಾಡಿ: ಸಂದಣಿ; ಇಮ್ಮಡಿ: ಎರಡುಪಟ್ಟು; ಉಗಿ: ಹೊರಕ್ಕೆ ತೆಗೆ; ತೊರೆ:ಒಸರು, ಜಿನುಗು, ತೊಟ್ಟಿಡು, ಪ್ರವಹಿಸು; ಕೂರು: ಗುರಾಣಿ; ಅಲಗು: ಖಡ್ಗ; ಧಾರೆ: ರಭಸ; ಹಿಡಿ: ಬಂಧಿಸು; ಖಂಡೆಯ: ಕತ್ತಿ, ಖಡ್ಗ; ಕಾಮ: ಮನ್ಮಥ; ಹಗೆ: ವೈರಿ; ಹುಟ್ಟು: ಜನಿಸು; ಧೂಮಕೇತು: ಉಲ್ಕೆ; ರೂಪ: ಆಕಾರ; ಸುರಸತಿ: ಅಪ್ಸರೆ;

ಪದವಿಂಗಡಣೆ:
ತಿಗುರ +ಗೆಲಿದಳು +ತಿಲಕವನು +ತೆ
ತ್ತಿಗರ್+ಅಲಂಕರಿಸಿದರು +ಹೊಳಹಿನ
ಹೊಗರ+ ಹೊಸ+ಜವ್ವನದ +ಜೋಡಿಯ +ಜಾಡಿ+ಇಮ್ಮಡಿಸೆ
ಉಗಿದೊರೆಯ+ ಕೂರ್+ಅಲಗೊ+ ಧಾರೆಯ
ಮಿಗೆ+ ಹಿಡಿದ+ ಖಂಡೆಯವೊ +ಕಾಮನ
ಹಗೆಗೆ+ ಹುಟ್ಟಿದ+ ಧೂಮಕೇತುವೊ+ ರೂಪ +ಸುರಸತಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉಗಿದೊರೆಯ ಕೂರಲಗೊ; ಧಾರೆಯಮಿಗೆ ಹಿಡಿದ ಖಂಡೆಯವೊ; ಕಾಮನ ಹಗೆಗೆ ಹುಟ್ಟಿದ ಧೂಮಕೇತುವೊ;
(೨) ಜೋಡಿ ಅಕ್ಷರದ (ಹ, ಜ) ಪದಗಳು – ಹೊಳಹಿನ ಹೊಗರ ಹೊಸ; ಜವ್ವನದ ಜೋಡಿಯ ಜಾಡಿಯಿಮ್ಮಡಿಸೆ

ನಿಮ್ಮ ಟಿಪ್ಪಣಿ ಬರೆಯಿರಿ