ಪದ್ಯ ೧೦೪: ಊರ್ವಶಿಯು ತನ್ನ ಚಿತ್ತದಲ್ಲಿ ಯಾರ ಚಿತ್ರವನ್ನು ಬಿಡಿಸಿದಳು?

ರಾಯನಟ್ಟಿದ ನೇಮಗಡ ಕಮ
ನೀಯವಲ್ಲಾ ನಿನ್ನ ನುಡಿ ರಮ
ಣೀಯತರವಿದು ನಿನ್ನ ರಚನೆ ಮಹಾನುಭಾವನಲೆ
ಆಯಿತಿದು ನೀ ಹೋಗೆನುತಲಬು
ಜಾಯತಾಕ್ಷಿ ಮಹೋತ್ಸವದಿ ನಾ
ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ (ಅರಣ್ಯ ಪರ್ವ, ೮ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಚಿತ್ರಸೇನನ ಮಾತಿಗೆ ಊರ್ವಶಿಯು, ಇದು ದೇವೇಂದ್ರನ ಆಜ್ಞೆಯಲ್ಲವೇ? ನಿನ್ನ ಮಾತು ಅತೀವ ಮಧುರವಾಗಿದೆ, ನೀನು ರಚಿಸಿರುವ ಈ ಸಂಯೋಗವು ಅತ್ಯಂತ ಮನೋಹರವಾದುದು, ಇದು ಹೆಚ್ಚಿನ ಅನುಭಾವವಾಯಿತು, ನೀನು ಇನ್ನು ತೆರಳು ಎಂದು ಹೇಳಿ ತನ್ನ ಚಿತ್ತಪಟದಲ್ಲಿ ಅರ್ಜುನನ ಚಿತ್ರವನ್ನು ಬಿಡಿಸಿದಳು.

ಅರ್ಥ:
ರಾಯ: ರಾಜ; ಅಟ್ಟು: ಕಳಿಸು; ನೇಮ: ನಿಯಮ, ಆಜ್ಞೆ; ಗಡ: ಅಲ್ಲವೆ; ಕಮನೀಯ: ಮನೋಹರ, ಸುಂದರ; ನುಡಿ: ಮಾತು; ರಮಣೀಯ: ಸುಂದರವಾದ, ಚೆಲುವಾದ; ರಚನೆ: ನಿರ್ಮಾಣ; ಮಹಾ: ದೊಡ್ಡ, ಶ್ರೇಷ್ಠ; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ಹೋಗು: ತೆರಳು; ಅಬುಜಾಯತಾಕ್ಷಿ: ಕಮಲದಂತ ಕಣ್ಣಿರುವ; ಅಕ್ಷಿ: ಕಣ್ಣು; ಅಬುಜ: ಕಮಲ; ಆಯತ: ಅಗಲ; ಮಹೋತ್ಸವ: ಸಮಾರಂಭ; ನಾರಾಯಣ: ವಿಷ್ಣು; ಮೈದುನ: ತಂಗಿಯ ಗಂಡ; ಬರೆ: ಲಿಖಿಸು; ಚಿತ್ತ: ಮನಸ್ಸು; ಭಿತ್ತಿ: ಮುರಿ, ಸೀಳು;

ಪದವಿಂಗಡಣೆ:
ರಾಯನ್+ಅಟ್ಟಿದ +ನೇಮ+ಗಡ +ಕಮ
ನೀಯವಲ್ಲಾ +ನಿನ್ನ +ನುಡಿ +ರಮ
ಣೀಯತರವಿದು +ನಿನ್ನ +ರಚನೆ +ಮಹಾನುಭಾವನಲೆ
ಆಯಿತಿದು+ ನೀ ಹೋಗ್+ಎನುತಲ್ +ಅಬುಜ
ಆಯತಾಕ್ಷಿ+ ಮಹೋತ್ಸವದಿ+ ನಾ
ರಾಯಣನ +ಮೈದುನನ+ ಬರೆದಳು +ಚಿತ್ತ+ಭಿತ್ತಿಯಲಿ

ಅಚ್ಚರಿ:
(೧) ಅರ್ಜುನನನ್ನು ನಾರಾಯಣನ ಮೈದುನ ಎಂದು ಕರೆದಿರುವುದು
(೨) ಅರ್ಜುನನಿಗೆ ಮನಸ್ಸನ್ನು ನೀಡಿದಳು ಎಂದು ಹೇಳುವ ಪರಿ – ಅಬುಜಾಯತಾಕ್ಷಿ ಮಹೋತ್ಸವದಿ ನಾರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ
(೩) ರಮಣೀಯ, ಕಮನೀಯ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ