ಪದ್ಯ ೧೦೩: ಚಿತ್ರಸೇನನು ಊರ್ವಶಿಗೆ ಏನು ಹೇಳಿದನು?

ಆತನುತ್ತಮ ನಾಯಕನು ವಿ
ಖ್ಯಾತೆ ನೀ ಸುರಲೋಕದಲಿ ಲ
ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ
ಸೋತಡೆಯು ದಿಟಭಂಗವಲ್ಲ ಪು
ರಾತನದ ನಳನಹುಷ ಭರತ ಯ
ಯಾತಿ ನೃಪರೊಳಗೀತನಗ್ಗಳನಬಲೆ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಚಿತ್ರಸೇನನು ಅರ್ಜುನನು ಉತ್ತಮ ದೀರೋದಾತ್ತ ನಾಯಕ, ನೀಣು ಸ್ವರ್ಗದಲ್ಲಿ ಮಹಾ ಪ್ರಸಿದ್ಧೆಯಾಗಿರುವವಳು. ನಾವು ನಿಮ್ಮ ಪರಿವಾರದವರು, ನಾಚಿಕೆಯೇಕೆ? ಒಂದು ಪಕ್ಷ ಸೋತರೂ ಅವಮಾನವೇನೂ ಆಗುವುದಿಲ್ಲ, ಹಿಂದಿನ ನಳ, ನಹುಷ, ಭರತ, ಯಯಾತಿ ಇವರಿಗಿಂತಲೂ ಇವನು ಹೆಚ್ಚಿನವನು ಎಂದು ಊರ್ವಶಿಗೆ ಹೇಳಿದನು.

ಅರ್ಥ:
ಉತ್ತಮ: ಶ್ರೇಷ್ಠ; ನಾಯಕ: ಒಡೆಯ; ವಿಖ್ಯಾತ: ಪ್ರಸಿದ್ಧಿ; ಸುರಲೋಕ: ಸ್ವರ್ಗ; ಅತಿಶಯ: ಹೆಚ್ಚಳ, ಅಸಾಧಾರಣ ಮಹಿಮೆ; ಪರಿವಾರ: ಸುತ್ತಲಿನವರು, ಪರಿಜನ; ಸೋತು: ಪರಾಭವ; ದಿಟ: ಸತ್ಯ; ಭಂಗ: ಮುರಿ, ಚೂರು; ಪುರಾತನ: ಹಳೆಯದು; ನೃಪ: ರಾಜ; ಅಗ್ಗ: ಶ್ರೇಷ್ಠ; ಅಬಲೆ: ಸ್ತ್ರೀ, ಹೆಣ್ಣು; ಕೇಳು: ಆಲಿಸು; ಲಜ್ಜ: ನಾಚಿಕೆ;

ಪದವಿಂಗಡಣೆ:
ಆತನ್+ಉತ್ತಮ +ನಾಯಕನು +ವಿ
ಖ್ಯಾತೆ +ನೀ +ಸುರಲೋಕದಲಿ+ ಲಜ್ಜ
ಅತಿಶಯವೇಕಿಲ್ಲಿ +ನಾವೇ +ನಿಮ್ಮ +ಪರಿವಾರ
ಸೋತಡೆಯು +ದಿಟ+ಭಂಗವಲ್ಲ +ಪು
ರಾತನದ +ನಳ+ನಹುಷ+ ಭರತ+ ಯ
ಯಾತಿ +ನೃಪರೊಳಗ್+ಈತನ್+ಅಗ್ಗಳನ್+ಅಬಲೆ +ಕೇಳೆಂದ

ಅಚ್ಚರಿ:
(೧) ಅರ್ಜುನನ ಹಿರಿಮೆ – ನೃಪರೊಳಗೀತನಗ್ಗಳನಬಲೆ ಕೇಳೆಂದ

ಪದ್ಯ ೧೦೨: ಊರ್ವಶಿಯು ತನ್ನ ಉತ್ತರವನ್ನು ಹೇಗೆ ನೀಡಿದಳು?

ಕೇಳುತವೆ ರೋಮಾಂಚ ಲಜ್ಜೆಯ
ಜೋಳಿಯೆದ್ದುದು ಝೋಂಪಿಸಿತು ಪುಳ
ಕಾಳಿ ಭಯವನು ಪಂಟಿಸಿದುದನುರಾಗದಭಿಮಾನ
ಮೇಲೆ ಮೇಲಭಿಲಾಷೆ ಧೈರ್ಯವ
ಚಾಳವಿಸಿ ಪರಿತೋಷ ಪೂರಣ
ದೇಳು ಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ (ಅರಣ್ಯ ಪರ್ವ, ೮ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಚಿತ್ರಸೇನನ ಮಾತನ್ನು ಕೇಳಿ ಊರ್ವಶಿಯು ರೋಮಾಂಚನಗೊಂಡಳು. ರೋಮಾಂಚನ ದೊಂದಿಗೆ ಲಜ್ಜೆಯು ಆಕೆಯನ್ನು ಆವರಿಸಿತು. ಮೈನವಿರೆದ್ದಿತು. ಭಯವನ್ನು ಅನುರಾಗವು ಮುಚ್ಚಿ ಹಾಕಿತು. ಅರ್ಜುನನ ಮೇಲಿನ ಅಭಿಲಾಷೆಯು ಧೈರ್ಯವನ್ನು ಹೆಚ್ಚಿಸಿತು. ಅತಿಶಯವಾದ ಸಂತೋಷದಲ್ಲಿ ಊರ್ವಶಿಯು ಮುಳುಗಿ ಎದ್ದಳು. ಚಿತ್ರಸೇನನಿಗೆ ಉತ್ತರವಾಗಿ ತಲೆಯನ್ನು ಸ್ವಲ್ಪ ಬಾಗಿಸಿದಳು.

ಅರ್ಥ:
ಕೇಳು: ಆಲಿಸು; ರೋಮಾಂಚನ: ಪುಳುಕಗೊಳ್ಳು; ಲಜ್ಜೆ: ನಾಚಿಕೆ; ಜೋಳಿ:ಗುಂಪು; ಝೋಂಪಿಸು: ಬೆಚ್ಚಿಬೀಳು; ಪುಳಕ: ಮೈನವಿರೇಳುವಿಕೆ; ಭಯ: ಭೀತಿ; ಪಂಟಿಸು: ಮುಚ್ಚು; ಅನುರಾಗ: ಪ್ರೀತಿ; ಅಭಿಮಾನ: ಹೆಮ್ಮೆ, ಅಹಂಕಾರ; ಮೇಲೆ: ಅನಂತರ; ಅಭಿಲಾಷೆ: ಆಸೆ, ಬಯಕೆ; ಧೈರ್ಯ: ಎದೆಗಾರಿಕೆ, ಕೆಚ್ಚು; ಚಾಳನ: ಚಲನೆ; ಪರಿತೋಷ: ಸಂತುಷ್ಟಿ, ಆನಂದ; ಪೂರಣ: ತುಂಬುವುದು; ಮುಳುಗು: ತೋಯು; ಉತ್ತರ: ಏರಿಕೆ; ನಸು: ಸ್ವಲ್ಪ; ಬಾಗು: ಬಗ್ಗು, ಮಣಿ; ಶಿರ: ತಲೆ;

ಪದವಿಂಗಡಣೆ:
ಕೇಳುತವೆ +ರೋಮಾಂಚ +ಲಜ್ಜೆಯ
ಜೋಳಿಯೆದ್ದುದು +ಝೋಂಪಿಸಿತು +ಪುಳ
ಕಾಳಿ +ಭಯವನು +ಪಂಟಿಸಿದುದ್+ಅನುರಾಗದ್+ಅಭಿಮಾನ
ಮೇಲೆ+ ಮೇಲ್+ಅಭಿಲಾಷೆ +ಧೈರ್ಯವ
ಚಾಳವಿಸಿ +ಪರಿತೋಷ +ಪೂರಣದ್
ಏಳು+ ಮುಳುಗಾಯ್ತ್+ಉತ್ತರಕೆ+ ನಸುಬಾಗಿದಳು +ಶಿರವ

ಅಚ್ಚರಿ:
(೧) ಊರ್ವಶಿಯ ಉತ್ತರ – ಮೇಲೆ ಮೇಲಭಿಲಾಷೆ ಧೈರ್ಯವಚಾಳವಿಸಿ ಪರಿತೋಷ ಪೂರಣ
ದೇಳು ಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ

ಪದ್ಯ ೧೦೧: ಇಂದ್ರನು ಊರ್ವಶಿಗೆ ಯಾವ ಸಂದೇಶವನ್ನು ಕಳಿಸಿದ್ದನು?

ಎಮಗೆ ಮಗನರ್ಜುನನು ನೀನಿಂ
ದೆಮಗೆ ಸೊಸೆಯಹುದಾತನಂತ
ಸ್ತಿಮಿರವನು ಕಳೆ ನಿನ್ನ ಕುಚಯುಗ ಕಾಂತಿಲಹರಿಯಲಿ
ಕಮಲಮುಖಿನೀ ಕಮಲವಾತನು
ಭ್ರಮರ ನೀ ಸುರವನದ ಸಿರಿಮಧು
ಸಮಯವರ್ಜುನನೆಂದು ಬೆಸಸಿದನಮರಪತಿಯೆಂದ (ಅರಣ್ಯ ಪರ್ವ, ೮ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಚಿತ್ರಸೇನನು ಊರ್ವಶಿಯನ್ನುದ್ದೇಶಿಸಿ ಇಂದ್ರನು ಹೇಳಿದ ಮಾತುಗಳನ್ನು ಹೇಳಿದನು, ಅರ್ಜುನನು ನನಗೆ ಮಗ, ಇಂದು ನೀನು ನಮಗೆ ಸೊಸೆಯಾಗಬೇಕು, ಅವನ ಅಂತರಂಗದ ಕತ್ತಲನ್ನು ನಿನ್ನ ಸ್ತನಗಳ ಕಾಂತಿಯ ತರಂಗದಿಂದ ಬೆಳಗಬೇಕು. ಊರ್ವಶಿ, ನೀನು ಕಮಲ, ಅವನು ದುಂಬಿ, ನೀನು ಸ್ವರ್ಗದ ನಂದನವನದ ಐಸಿರಿ, ಅವನು ನಂದನವನಕ್ಕೆ ಬಂದ ವಸಂತಕಾಲ, ಹೀಗೆಂದು ದೇವೇಂದ್ರನು ಹೇಳಿದನೆಂದು ಚಿತ್ರಸೇನನು ಊರ್ವಶಿಗೆ ತಿಳಿಸಿದನು.

ಅರ್ಥ:
ಎಮಗೆ: ನನಗೆ; ಮಗ: ಸುತ; ಸೊಸೆ: ಮಗನ ಹೆಂಡತಿ; ಅಂತಸ್ತಿಮಿರ: ಒಳಗಿನ ಕತ್ತಲೆ; ಕಳೆ: ನಿವಾರಿಸು; ಕುಚ: ಮೊಲೆ, ಸ್ತನ; ಯುಗ: ಎರಡು; ಕಾಂತಿ: ಪ್ರಕಾಶ; ಲಹರಿ: ತರಂಗ; ಕಮಲಮುಖಿ: ಸುಂದರಿ; ಕಮಲ: ತಾವರೆ; ಭ್ರಮರ: ದುಂಬಿ; ಸುರವನ: ಸ್ವರ್ಗದ ಕಾಡು; ಸಿರಿ: ಶ್ರೇಷ್ಠ, ಐಶ್ವರ್ಯ; ಮಧು: ಜೇನು; ಸಮಯ: ಕಾಲ; ಬೆಸಸು: ಹೇಳು, ಆಜ್ಞಾಪಿಸು; ಅಮರಪತಿ: ಇಂದ್ರ; ಅಮರ: ದೇವತೆ; ಪತಿ: ಒಡೆಯ;

ಪದವಿಂಗಡಣೆ:
ಎಮಗೆ +ಮಗನ್+ಅರ್ಜುನನು+ ನೀನ್
ಇಂದ್+ಎಮಗೆ +ಸೊಸೆಯಹುದ್+ಆತನ್+ಅಂತ
ಸ್ತಿಮಿರವನು+ ಕಳೆ+ ನಿನ್ನ+ ಕುಚಯುಗ+ ಕಾಂತಿ+ಲಹರಿಯಲಿ
ಕಮಲಮುಖಿ+ ನೀ +ಕಮಲವ್+ಆತನು
ಭ್ರಮರ+ ನೀ +ಸುರವನದ +ಸಿರಿಮಧು
ಸಮಯವ್+ಅರ್ಜುನನೆಂದು +ಬೆಸಸಿದನ್+ಅಮರಪತಿ+ಎಂದ

ಅಚ್ಚರಿ:
(೧) ಊರ್ವಶಿಯನ್ನು ಕಮಲಮುಖಿ, ಸುರವನದ ಸಿರಿಮಧಿ ಎಂದು ಕರೆದಿರುವುದು
(೨) ಅರ್ಜುನನೊಂದಿಗೆ ಸೇರು ಎಂದು ಹೇಳುವ ಪರಿ – ನೀನಿಂದೆಮಗೆ ಸೊಸೆಯಹುದಾತನಂತ
ಸ್ತಿಮಿರವನು ಕಳೆ ನಿನ್ನ ಕುಚಯುಗ ಕಾಂತಿಲಹರಿಯಲಿ
(೩) ಊರ್ವಶಿಯನ್ನು ಹೊಗಳುವ ಪರಿ – ಕಮಲಮುಖಿನೀ ಕಮಲವಾತನುಭ್ರಮರ ನೀ ಸುರವನದ ಸಿರಿಮಧು ಸಮಯವರ್ಜುನನೆಂದು

ಪದ್ಯ ೧೦೦: ಊರ್ವಶಿಯು ದೂತನಿಗೆ ಏನೆಂದು ಹೇಳಿದಳು?

ಅಣಕವಲ್ಲಿದು ರಾಯನಟ್ಟಿದ
ಮಣಿಹವೋ ನಿಜಕಾರ್ಯಗತಿಗಳ
ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ
ಗುಣಭರಿತ ಹೇಳೆನಲು ನಸುನಗೆ
ಕುಣಿಯೆ ಮುಖದಲಿ ಮಾನಿನಿಗೆ ವೆಂ
ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ (ಅರಣ್ಯ ಪರ್ವ, ೮ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಊರ್ವಶಿಯು ಚಿತ್ರಸೇನನಿಗೆ, ನೀನು ಇಲ್ಲಿಗೆ ಬಂದಿರುವುದೇನು ಹುಡುಗಾಟವಲ್ಲ ತಾನೆ? ರಾಜನು ಹೇಳಿದ ಕರ್ತವ್ಯಕ್ಕಾಗಿ ಇಲ್ಲಿಗೆ ಬಂದೆಯೋ, ನಿನ್ನದೇನಾದರೂ ಕೆಲಸವಿದೆಯೋ? ನೀವು ಯಾವ ಕಾರ್ಯಕ್ಕಾಗಿ ಬಂದಿರಿ ಎಂದು ಕೇಳಲು, ಚಿತ್ರಸೇನನು ನಾಚಿಕೆಗೊಂಡು ನಸುನಗುತ್ತಾ ನಮಸ್ಕರಿಸುತ್ತಾ ಹೀಗೆ ಹೇಳಿದನು.

ಅರ್ಥ:
ಅಣಕ: ಕುಚೋದ್ಯ; ರಾಯ: ರಾಜ; ಅಟ್ಟು: ಕಳುಹಿಸು; ಮಣಿಹ: ಉದ್ಯೋಗ; ಕಾರ್ಯ: ಕೆಲಸ; ಗತಿ: ಸಂಚಾರ; ಕುಣಿಕೆ: ಜೀರುಗುಣಿಕೆ; ಕರ್ತವ್ಯ: ಕೆಲಸ; ಗುಣ: ನಡತೆ; ಭರಿತ: ತುಂಬಿದ; ಹೇಳು: ತಿಳಿಸು; ನಸುನಗೆ: ಹಸನ್ಮುಖ; ಕುಣಿ: ನರ್ತಿಸು; ಮುಖ: ಆನನ; ಮಾನಿನಿ: ಹೆಂಗಸು, ಸ್ತ್ರೀ; ವೆಂಟಣಿಸು: ನಮಸ್ಕರಿಸು; ಲಜ್ಜೆ: ನಾಚಿಕೆ, ಸಂಕೋಚ; ನುಡಿ: ಮಾತಾಡು; ದೂತ: ಸೇವಕ; ಮಾತು: ವಾಣಿ;

ಪದವಿಂಗಡಣೆ:
ಅಣಕವಲ್ಲಿದು +ರಾಯನ್+ಅಟ್ಟಿದ
ಮಣಿಹವೋ +ನಿಜಕಾರ್ಯಗತಿಗಳ
ಕುಣಿಕೆಯೋ +ಕರ್ತವ್ಯವ್+ಆವುದು+ ನಿಮಗೆ+ ನಮ್ಮಲ್ಲಿ
ಗುಣಭರಿತ+ ಹೇಳೆನಲು+ ನಸುನಗೆ
ಕುಣಿಯೆ+ ಮುಖದಲಿ +ಮಾನಿನಿಗೆ +ವೆಂ
ಟಣಿಸಿ+ ಲಜ್ಜಾಭರದಿ+ ನುಡಿದನು+ ದೂತನ್+ಈ+ ಮಾತ

ಅಚ್ಚರಿ:
(೧) ನಕ್ಕನು ಎಂದು ಹೇಳಲು – ನಸುನಗೆ ಕುಣಿಯೆ ಮುಖದಲಿ

ಪದ್ಯ ೯೯: ಊರ್ವಶಿಯು ಚಿತ್ರಸೇನನನ್ನು ಹೇಗೆ ಸತ್ಕರಿಸಿದಳು?

ತಾಯೆ ಚಿತ್ತೈಸರಮನೆಯ ಸೂ
ಳಾಯಿತನು ಬಂದೈದನೆನೆ ಕಮ
ಲಾಯತಾಂಬಕಿ ಚಿತ್ರಸೇನನ ಕರೆಸಿದಳು ನಗುತ
ತಾಯೆನುತ ವಸ್ತ್ರಾಭರಣದ ಪ
ಸಾಯವಿತ್ತಳು ಪರಿಮಳದ ತವ
ಲಾಯಿಗಳ ನೂಕಿದಳು ವರ ಕತ್ತುರಿಯ ಕರ್ಪುರದ (ಅರಣ್ಯ ಪರ್ವ, ೮ ಸಂಧಿ, ೯೯ ಪದ್ಯ)

ತಾತ್ಪರ್ಯ:
ಊರ್ವಶಿಯ ಮನೆಯ ದಾಸಿಯರು ಚಿತ್ರಸೇನನನ್ನು ಕಂಡು ಊರ್ವಶಿಯ ಬಳಿ ತೆರಳಿ, ತಾಯಿ, ಇಂದ್ರನ ಅರಮನೆಯ ಸೇವಕನು ಬಂದಿದ್ದಾನೆ ಎಂದು ಹೇಳಲು, ಊರ್ವಶಿಯು ನಗುತ್ತಾ ಚಿತ್ರಸೇನನನ್ನು ಬರೆಮಾಡಿಕೊಂಡು ತನ್ನ ದಾಸಿಯರಿಗೆ ಉಡುಗೊರೆಗಳನ್ನು ತರಲು ಹೇಳಿ, ಚಿತ್ರಸೇನನಿಗೆ ಉಚಿತವಾಗಿ ಸತ್ಕರಿಸಿ, ವಸ್ತ್ರ, ಆಭರಣ, ಕರ್ಪೂರ, ಕಸ್ತೂರಿಗಳ ಭರಣಿಗಳನ್ನು ನೀಡಿದಳು.

ಅರ್ಥ:
ತಾಯೆ: ಮಾತೆ; ಚಿತ್ತೈಸು: ಗಮನವಿಟ್ಟು ಕೇಳು; ಅರಮನೆ: ರಾಜರ ಆಲಯ; ಸೂಳಾಯತ: ಸೇವಕ; ಬಂದು: ಆಗಮಿಸು; ಕಮಲ: ತಾವರೆ; ಆಯತ: ವಿಶಾಲ; ಅಂಬಕ: ಕಣ್ಣು; ಕರೆಸು: ಬರೆಮಾಡು; ನಗು: ಸಂತಸ; ತಾ: ತೆಗೆದುಕೊಂಡು ಬಾ; ವಸ್ತ್ರ: ಬಟ್ಟೆ; ಆಭರಣ: ಒಡವೆ; ಪಸಾಯ: ಉಡುಗೊರೆ; ಪರಿಮಳ: ಸುಗಂಧ; ತವಲಾಯಿ: ಕರ್ಪೂರದ ಬಿಲ್ಲೆ; ನೂಕು: ತಳ್ಳು; ವರ: ಶ್ರೇಷ್ಠ; ಕತ್ತುರಿ: ಕಸ್ತೂರಿ; ಕರ್ಪುರ: ಸುಗಂಧದ ದ್ರವ್ಯ;

ಪದವಿಂಗಡಣೆ:
ತಾಯೆ +ಚಿತ್ತೈಸ್+ಅರಮನೆಯ +ಸೂ
ಳಾಯಿತನು +ಬಂದೈದನ್+ಎನೆ+ ಕಮ
ಲಾಯತ+ಅಂಬಕಿ+ ಚಿತ್ರಸೇನನ +ಕರೆಸಿದಳು +ನಗುತ
ತಾ+ಎನುತ +ವಸ್ತ್ರ+ಆಭರಣದ+ ಪ
ಸಾಯವಿತ್ತಳು+ ಪರಿಮಳದ +ತವ
ಲಾಯಿಗಳ +ನೂಕಿದಳು +ವರ +ಕತ್ತುರಿಯ +ಕರ್ಪುರದ

ಅಚ್ಚರಿ:
(೧)ತಾಯೆ – ಪದವನ್ನು ಬಳಸಿದ ಬಗೆ – ೧, ೪ ಸಾಲು
(೨) ಊರ್ವಶಿಯನ್ನು ಕರೆದ ಪರಿ – ಕಮಲಾಯತಾಂಬಕಿ – ಕಮಲದಂತ ಅಗಲವಾದ ಕಣ್ಣುಳ್ಳವಳು

ಪದ್ಯ ೯೮: ಚಿತ್ರಸೇನನು ಯಾರ ಮನೆಗೆ ಬಂದನು?

ಇನಿಬರಿರೆ ರಂಭಾದಿ ಸೀಮಂ
ತಿನಿಯರೊಳಗೂರ್ವಶಿಯೊಳಾದುದು
ಮನ ಧನಂಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ
ವನಿತೆಯನು ಕಳುಹೇಳು ನೀನೆಂ
ದೆನೆ ಹಸಾದವೆನುತ್ತ ದೇವಾಂ
ಗನೆಯ ಭವನಕೆ ಬಂದನೀತನು ಹರಿಯ ನೇಮದಲಿ (ಅರಣ್ಯ ಪರ್ವ, ೮ ಸಂಧಿ, ೯೮ ಪದ್ಯ)

ತಾತ್ಪರ್ಯ:
ರಂಭೆ ಮೊದಲಾಗಿ ಇಷ್ಟು ಜನ ಅಪ್ಸರೆಯರಿದ್ದರೂ, ಅರ್ಜುನನಿಗೆ ಊರ್ವಶಿಯಲ್ಲಿ ಮನಸ್ಸು ನೆಟ್ಟಿತು, ಊರ್ವಶಿಯನ್ನು ರೆಪ್ಪೆ ಬಡಿಯದೆ ಒಂದೇ ದೃಷ್ಟಿಯಿಂದ ನೋಡುತ್ತಿದ್ದನು. ಇಂದ್ರನು ಚಿತ್ರಸೇನನಿಗೆ, ನೀನು ಹೋಗಿ ಊರ್ವಶಿಯನ್ನು ಕಳುಹಿಸು, ಎಂದು ಹೇಳಲು, ಚಿತ್ರಸೇನನು ಊರ್ವಶಿಯ ಮನೆಗೆ ಬಂದನು.

ಅರ್ಥ:
ಇನಿಬರು: ಇಷ್ಟುಜನ; ಆದಿ: ಮೊದಲಾದ; ಸೀಮಂತಿನಿ: ಹೆಂಗಸು, ಸ್ತ್ರೀ; ಮನ: ಮನಸ್ಸು; ಈಕ್ಷಿಸು: ನೋಡು; ಅನಿಮೇಷ: ಕಣ್ಣಿನ ರೆಪ್ಪೆ ಬಡಿಯದೆ; ದೃಷ್ಟಿ: ನೋಟ; ವನಿತೆ: ಹೆಂಗಸು; ಕಳುಹೇಳು: ಬರೆಮಾಡು; ಹಸಾದ: ಪ್ರಸಾದ; ದೇವಾಂಗನೆ: ಅಪ್ಸರೆ; ಭವನ: ಆಲಯ; ಬಂದು: ಆಗಮಿಸು; ಹರಿ: ಇಂದ್ರ; ನೇಮ: ಆಜ್ಞೆ;

ಪದವಿಂಗಡಣೆ:
ಇನಿಬರಿರೆ +ರಂಭಾದಿ +ಸೀಮಂ
ತಿನಿಯರೊಳಗ್+ಊರ್ವಶಿಯೊಳ್+ಆದುದು
ಮನ +ಧನಂಜಯನ್+ಈಕ್ಷಿಸಿದನ್+ಅನಿಮೇಷ +ದೃಷ್ಟಿಯಲಿ
ವನಿತೆಯನು +ಕಳುಹೇಳು +ನೀನೆಂದ್
ಎನೆ +ಹಸಾದವೆನುತ್ತ +ದೇವಾಂ
ಗನೆಯ +ಭವನಕೆ+ ಬಂದನ್+ಈತನು+ ಹರಿಯ +ನೇಮದಲಿ

ಅಚ್ಚರಿ:
(೧) ಸೀಮಂತಿನಿ, ವನಿತೆ, ಅಂಗನೆ – ಸಮನಾರ್ಥಕ ಪದ

ಪದ್ಯ ೯೭: ಇಂದ್ರನು ಯಾರನ್ನು ಬರೆಮಾಡಲು ಆಜ್ಞಾಪಿಸಿದನು?

ಅರಸಕೇಳಾರೋಗಿಸಿದರಿ
ಬ್ಬರು ಸಮೇಳದಲಿದ್ದು ಬೇರೊಂ
ದರಮನೆಗೆ ಕಳುಹಿದನು ಪವಡಿಸುವೊಡೆ ನಿಜಾತ್ಮಜನ
ಸುರಪನಿತ್ತಲು ಚಿತ್ರಸೇನನ
ಕರೆಸಿದನು ಫಲುಗುಣನ ಭಾವವ
ನರುಹಿದನು ನಮ್ಮೂರ್ವಶಿಯ ಕಳುಹೆಂದು ನೇಮಿಸಿದ (ಅರಣ್ಯ ಪರ್ವ, ೮ ಸಂಧಿ, ೯೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಓಲಗವು ಮುಗಿದ ಮೇಲೆ ಅರ್ಜುನ ಮತ್ತು ಇಂದ್ರರಿಬ್ಬರು ಒಟ್ಟಿಗೆ ಊಟವನ್ನು ಮಾಡಿದರು, ಮಲಗಲು ಅರ್ಜುನನನ್ನು ಬೇರೊಂದು ಅರಮನೆಗೆ ಕಳಿಸಿದನು. ಅರ್ಜುನನು ಮಲಗಲು ಹೋದ ಮೇಲೆ ಇಂದ್ರನು ಚಿತ್ರಸೇನನನ್ನು ಕರೆಸಿ, ಅರ್ಜುನನು ಊರ್ವಶಿಯನ್ನು ಮೋಹಿಸಿದ್ದಾನೆ, ನಮ್ಮ ಊರ್ವಶಿಯನ್ನು ಅವನ ಬಳಿಗೆ ಕಳಿಸು ಎಂದು ಅಪ್ಪಣೆ ಮಾಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಆರೋಗಿಸು: ಸೇವಿಸು; ಮೇಳ: ಕೂಡು, ಗುಂಪು; ಬೇರೆ: ಅನ್ಯ; ಅರಮನೆ: ಆಲಯ; ಕಳುಹು: ಬೀಳ್ಕೊಡು; ಪವಡಿಸು: ಮಲಗು; ಆತ್ಮಜ: ಮಗ; ಸುರಪ: ಇಂದ್ರ; ಕರೆಸು: ಬರೆಮಾಡು; ಭಾವ: ಮನಸ್ಸು; ಅರುಹು: ತಿಳಿದು; ಕಳುಹು: ಬರೆಮಾಡು; ನೇಮಿಸು: ಆಜ್ಞಾಪಿಸು;

ಪದವಿಂಗಡಣೆ:
ಅರಸ+ಕೇಳ್+ಆರೋಗಿಸಿದರ್
ಇಬ್ಬರು +ಸಮೇಳದಲಿದ್ದು +ಬೇರೊಂದ್
ಅರಮನೆಗೆ +ಕಳುಹಿದನು +ಪವಡಿಸುವೊಡೆ +ನಿಜಾತ್ಮಜನ
ಸುರಪನ್+ಇತ್ತಲು +ಚಿತ್ರಸೇನನ
ಕರೆಸಿದನು +ಫಲುಗುಣನ +ಭಾವವನ್
ಅರುಹಿದನು +ನಮ್ಮೂರ್ವಶಿಯ +ಕಳುಹೆಂದು +ನೇಮಿಸಿದ

ಅಚ್ಚರಿ:
(೧) ಅರಸ, ಅರಮನೆ, ಅರುಹು, ಆರೋಗಿಸು – ಪದಗಳ ಬಳಕೆ

ಪದ್ಯ ೯೬: ಇಂದ್ರನ ಓಲಗವು ಹೇಗೆ ಮುಕ್ತಾಯಗೊಂಡಿತು?

ಪಾರುಖಾಣೆಯನಿತ್ತನಾ ಜಂ
ಭಾರಿಯೂರ್ವಶಿ ರಂಭೆ ಮೇನಕೆ
ಗೌರಿಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ
ನಾರಿಯರು ನಿಖಿಳಾಮರರು ಬೀ
ಡಾರಕೈದಿತು ಹರೆದುದೋಲಗ
ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ (ಅರಣ್ಯ ಪರ್ವ, ೮ ಸಂಧಿ, ೯೬ ಪದ್ಯ)

ತಾತ್ಪರ್ಯ:
ಇಂದ್ರನು ಊರ್ವಶಿ ರಂಭೆ, ಮೇನಕೆ, ಗೌರಿ ಮೊದಲಾದ ಅಪ್ಸರೆಯರಿಗೆ ಬಹುಮಾನವನ್ನು ಕೊಟ್ಟನು. ಅಪ್ಸರೆಯರೂ, ಸಮಸ್ತ ದೇವತೆಗಳೂ ತಮ್ಮ ತಮ್ಮ ಮನೆಗಳಿಗೆ ಹೋದರು. ಓಲಗ ಮುಗಿಯಿತು. ಸಾಲು ದೀಪಗಳನ್ನು ಹಚ್ಚಿದರು. ಆರತಿಯ ಹರಿವಾಣಗಳ ಸಾಲು ಸುಳಿಯಿತು.

ಅರ್ಥ:
ಪಾರುಖಾಣೆ: ಬಹು ಮಾನ, ಉಡುಗೊರೆ; ಜಂಭ: ತಾರಕಾಸುರನ ಪ್ರಧಾನಿ; ಜಂಭಾರಿ: ಇಂದ್ರ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಪಾತ್ರ: ಅರ್ಹನಾದವನು; ಪರಮ: ಅತೀವ; ಹರುಷ: ಸಂತಸ; ನಾರಿ: ಸ್ತ್ರೀ; ನಿಖಿಳ: ಎಲ್ಲಾ; ಅಮರ: ದೇವತೆ; ಬೀಡಾರ: ತಂಗುವ ಸ್ಥಳ, ವಸತಿ; ಐದು: ಬಂದು ಸೇರು; ಹರೆದು: ತೀರಿತು; ಓಲಗ: ದರ್ಬಾರು; ಆರತಿ: ನೀರಾಜನ; ಹರಿವಣ: ತಟ್ಟೆ; ಸುಳಿ: ಕಾಣಿಸಿಕೊಳ್ಳು; ಸಾಲು: ಆವಳಿ; ಸೊಡರು: ದೀಪ;

ಪದವಿಂಗಡಣೆ:
ಪಾರುಖಾಣೆಯನಿತ್ತನಾ +ಜಂ
ಭಾರಿ+ಊರ್ವಶಿ +ರಂಭೆ +ಮೇನಕೆ
ಗೌರಿ+ಮೊದಲಾದ್+ಅಖಿಳ +ಪಾತ್ರಕೆ +ಪರಮ +ಹರುಷದಲಿ
ನಾರಿಯರು +ನಿಖಿಳ+ಅಮರರು+ ಬೀ
ಡಾರಕ್+ಐದಿತು +ಹರೆದುದ್+ಓಲಗವ್
ಆರತಿಯ +ಹರಿವಾಣ+ ಸುಳಿದುದು +ಸಾಲು +ಸೊಡರುಗಳ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸುಳಿದುದು ಸಾಲು ಸೊಡರುಗಳ