ಪದ್ಯ ೯೦: ಅಪ್ಸರೆಯರು ಹೇಗೆ ಇಂದ್ರನೋಲವನ್ನು ಸೇರಿದರು?

ನೇವುರದ ನುಣ್ದನಿಯ ಕಾಂಚಿಯ
ಕೇವಣದ ಕಿಂಕಿಣಿಯ ರಭಸದ
ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ
ಭಾವದುಬ್ಬಿನ ಚೆಲ್ಲೆಗಂಗಳ
ಡಾವರದ ಡೊಳ್ಳಾಸಕಾತಿಯ
ರಾ ವಿಬುಧಪತಿಯೋಲಗವ ಹೊಕ್ಕರು ನವಾಯಿಯಲಿ (ಅರಣ್ಯ ಪರ್ವ, ೮ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕಾಲಂದುಗೆಯ ಮೆಲುದನಿ, ರತ್ನಖಚಿತವಾದ ಡಾಬಿಗೆ ಕಟ್ಟಿದ ಕಿರುಗೆಜ್ಜೆಗಳ ಸದ್ದು, ಚಿನ್ನದ ಹಾರಗಳ ಸದ್ದು, ಮುಖಕ್ಕೆ ಹಾಕಿದ ಸರಿದ ಮುಸುಕುಗಳು, ಭಾವಪೂರಿತವಾಗಿ ಅರಳಿದ ಕಣ್ಣುಅಳು ಇವುಗಳಿಂದ ನೋಟಕರ ಮನಸ್ಸಿನಲ್ಲಿ ತೀವ್ರವಾದ ಏರುಪೇರು ಮಾಡಬಲ್ಲ ಅಪ್ಸರೆಯರು ಸೊಗಸನ್ನು ಬೀರುತ್ತಾ ಇಂದ್ರನೋಲಗನ್ನು ಸೇರಿದರು.

ಅರ್ಥ:
ನೇವುರ: ಅಂದುಗೆ, ನೂಪುರ; ನುಣುಪು: ನಯ; ದನಿ: ಶಬ್ದ; ಕಾಂಚಿ: ಡಾಬು; ಕೇವಣ: ಕೂಡಿಸುವುದು; ಕಿಂಕಿಣಿ: ಕಿರುಗೆಜ್ಜೆ; ರಭಸ: ವೇಗ; ನೇವಣ: ಚಿನ್ನದ ಹಾರ; ಉಲುಹು: ಶಬ್ದ; ಮೌಳಿ: ಶಿರ; ಮುರಿ: ಸೀಳು; ಮುಸುಕು: ಹೊದಿಕೆ; ಭಾವ: ಮನಸ್ಸು; ಉಬ್ಬು: ಹಿಗ್ಗು; ಚೆಲ್ಲೆ: ಚಂಚಲವಾದ; ಕಂಗಳು: ಕಣ್ಣುಗಳು; ಡಾವರ: ಕಾವು, ಗಲಿಬಿಲಿ; ಡೊಳ್ಳಾಸ: ಬೆಡಗು, ಒಯ್ಯಾರ; ಕಾತಿ: ಗರತಿ, ಮುತ್ತೈದೆ; ವಿಬುಧ: ಸುರ, ದೇವತೆ; ಪತಿ: ಒಡೆಯ; ವಿಬುಧಪತಿ: ಇಂದ್ರ; ಓಲಗ: ದರ್ಬಾರು; ಹೊಕ್ಕು: ಸೇರು; ನವಾಯಿ: ಠೀವಿ;

ಪದವಿಂಗಡಣೆ:
ನೇವುರದ +ನುಣ್ದನಿಯ +ಕಾಂಚಿಯ
ಕೇವಣದ+ ಕಿಂಕಿಣಿಯ +ರಭಸದ
ನೇವಣಗಳ್+ಉಲುಹುಗಳ +ಮೌಳಿಯ +ಮುರಿದ +ಮುಸುಕುಗಳ
ಭಾವದುಬ್ಬಿನ +ಚೆಲ್ಲೆಗಂಗಳ
ಡಾವರದ+ ಡೊಳ್ಳಾಸ+ಕಾತಿಯರ್
ಆ+ ವಿಬುಧಪತಿ+ಓಲಗವ+ ಹೊಕ್ಕರು +ನವಾಯಿಯಲಿ

ಅಚ್ಚರಿ:
(೧) ಕ, ಮ ಕಾರದ ತ್ರಿವಳಿ ಪದ – ಕಾಂಚಿಯ ಕೇವಣದ ಕಿಂಕಿಣಿಯ; ಮೌಳಿಯ ಮುರಿದ ಮುಸುಕುಗಳ
(೨) ಇಂದ್ರನನ್ನು ಕರೆದ ಪರಿ – ವಿಬುಧಪತಿ

ಪದ್ಯ ೮೯: ಅಪ್ಸರೆಯರು ಹೇಗೆ ಕಂಡರು?

ಉಗಿದರೋ ಕತ್ತುರಿಯ ತವಲಾ
ಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳ ಸಾರ ಪೂರವಿಸೆ
ಹೊಗರಲಗು ಹೊಳಹುಗಳ ಕಡೆಗ
ಣ್ಣುಗಳ ಬಲುಗರುವಾಯಿ ಮುಸುಕಿನ
ಬಿಗುಹುಗಳ ಬಿರುದಂಕಕಾಂತಿಯರಿಂದ್ರನೋಲಗದ (ಅರಣ್ಯ ಪರ್ವ, ೮ ಸಂಧಿ, ೮೯ ಪದ್ಯ)

ತಾತ್ಪರ್ಯ:
ಕಸ್ತೂರಿಯ ಭರಣಿಯ ಮುಚ್ಚಳವನ್ನು ತೆಗೆದರೆಮ್ಬಮ್ತೆ ಬಾಗಿಲನ್ನು ತೆಗೆಯಲು, ದಿವ್ಯ ದೇಹ ಗಂಧವು ಹಬ್ಬಲು ಅಪ್ಸರೆಯರು ಬಂದರು. ಅವರ ಕಡೆಗಣ್ನುಗಳ ಹೊಳಪು, ಚೂಪಾದ ಅಲಗುಗಳಂತಿದ್ದವು, ಮುಖಕ್ಕೆ ಮುಸುಕು ಹಾಕಿದ್ದರು, ಮನ್ಮಥ ಸಮರದಲ್ಲಿ ಮೇಲುಗೈಯೆಂಬ ಬಿರುದಿನ ಅನಂಗನ ಆಳುಗಳಂತೆ ತೋರಿದರು.

ಅರ್ಥ:
ಉಗಿ: ಹೊರಹಾಕು; ಕತ್ತುರಿ: ಕಸ್ತೂರಿ; ತವಲಾಯಿ: ಕರ್ಪೂರದ ಹಳಕು, ಬಿಲ್ಲೆ; ಮುಚ್ಚಳ: ಪೆಟ್ಟಿಗೆ, ಕರಡಿಗೆ ಪಾತ್ರೆ; ಕವಾಟ: ಬಾಗಿಲು; ತೆಗೆ: ಈಚೆಗೆ ತರು; ಕವಿ: ಆವರಿಸು; ದಿವ್ಯ: ಶ್ರೇಷ್ಠ; ಪರಿಮಳ: ಸುಗಂಧ; ಸಾರ: ರಸ; ಪೂರ: ಪೂರ್ತಿಯಾಗಿ; ಹೊಗರು: ಕಾಂತಿ, ಪ್ರಕಾಶ; ಅಲಗು: ಹರಿತವಾದ ಅಂಚು; ಹೊಳಹು: ಕಾಂತಿ; ಕಡೆ: ಕೊನೆ; ಕಣ್ಣು: ನಯನ; ಬಲು: ದೊಡ್ಡ; ಗರುವಾಯಿ: ಠೀವಿ; ಮುಸುಕು: ಹೊದಿಕೆ; ಯೋನಿ; ಬಿಗುಹು: ಬಿಗಿ; ಬಿರುದು: ಪ್ರಸಿದ್ಧಿ; ಕಾಂತಿ: ಪ್ರಕಾಶ; ಇಂದ್ರ: ಸುರಪತಿ; ಓಲಗ; ದರ್ಬಾರು;

ಪದವಿಂಗಡಣೆ:
ಉಗಿದರೋ+ ಕತ್ತುರಿಯ +ತವಲಾ
ಯಿಗಳ +ಮುಚ್ಚಳವ್+ಎನೆ +ಕವಾಟವ
ತೆಗೆಯೆ +ಕವಿದರು+ ದಿವ್ಯ+ಪರಿಮಳ +ಸಾರ +ಪೂರವಿಸೆ
ಹೊಗರ್+ಅಲಗು +ಹೊಳಹುಗಳ +ಕಡೆಗ
ಣ್ಣುಗಳ +ಬಲುಗರುವಾಯಿ +ಮುಸುಕಿನ
ಬಿಗುಹುಗಳ+ ಬಿರುದಂಕ+ಕಾಂತಿಯರ್+ಇಂದ್ರನ್+ಓಲಗದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉಗಿದರೋ ಕತ್ತುರಿಯ ತವಲಾಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳ ಸಾರ ಪೂರವಿಸೆ

ಪದ್ಯ ೮೮: ಅಪ್ಸರೆಯರ ಸೌಂದರ್ಯ ಹೇಗಿತ್ತು?

ತೊಲಗಿಸೋ ಮಂದಿಯನು ತೆಗೆ ಬಾ
ಗಿಲನೆನಲು ಕವಿದುದುಸುರೇಂದ್ರನ
ಲಲನೆಯರು ಲಾವಣ್ಯ ಲಹರಿಯ ಲಲಿತ ವಿಭ್ರಮದ
ಸುಳಿಗುರುಳ ನಿಟ್ಟೆಸಳುಗಂಗಳ
ಹೊಳೆವ ಕದಪಿನ ನುಣ್ಗೊರಳ ಬಲು
ಮೊಲೆಯ ಮೋಹರ ನೂಕಿತಮರೀ ವಾರನಾರಿಯರ (ಅರಣ್ಯ ಪರ್ವ, ೮ ಸಂಧಿ, ೮೮ ಪದ್ಯ)

ತಾತ್ಪರ್ಯ:
ಗುಂಪುಗಳನ್ನು ಓಡಿಸ್, ಅವರು ಹೋದ ಮೇಲೆ ಬಾಗಿಲು ತೆಗೆಯೆನ್ನಲು ದ್ವಾರಪಾಲಕರು ಹಾಗೆಯೇ ಮಾಡಿದರು. ಬಾಗಿಲು ತೆಗೆದೊಡನೆ ಸ್ವರ್ಗದ ವಿಲಾಸಿನಿಯರು ಆಸ್ಥಾನಕ್ಕೆ ಬಂದರು. ಲಾವಣ್ಯ ತರಂಗದಂತೆ ಸುಂದರವಾಗಿ ಭ್ರಾಂತಿಯನ್ನುಂಟು ಮಾಡುವ ಬೆಡಗಿಯರು ಆಗಮಿಸಿದರು. ಅವರ ಗುಂಗುರು ಕೂದಲು, ನಿಡಿದಾದಾ ಹೂವಿನ ದಳದಂತಿರುವ ಕಣ್ಣುಗಳು, ಹೊಳೆವ ಕೆನ್ನೆಗಳು, ನುಣುಪಾದ ಕೊರಳು, ಉಬ್ಬಿದ ಸ್ತನಗಳು, ದೇವತೆಗಳನ್ನು ಆ ಅಪ್ಸರೆಯರತ್ತ ನೂಕಿತು.

ಅರ್ಥ:
ತೊಲಗು: ಹೊರನೂಕು; ಮಂದಿ: ಜನರು; ತೆಗೆ: ಈಚೆಗೆ ತರು, ಹೊರತರು; ಬಾಗಿಲು: ಕದ; ಕವಿ: ಮುಸುಕು; ಸುರೇಂದ್ರ: ಇಂದ್ರ; ಲಲನೆ: ಹೆಣ್ಣು; ಲಾವಣ್ಯ: ಚೆಲುವು, ಸೌಂದರ್ಯ; ಲಹರಿ: ರಭಸ, ಆವೇಗ; ಲಲಿತ: ಚೆಲುವಾದ, ಸುಂದರವಾದ; ವಿಭ್ರಮ: ಭ್ರಮೆ, ಭ್ರಾಂತಿ; ಸುಳಿ:ಗುಂಡಾಗಿ ಸುತ್ತು; ಕುರುಳು: ಗುಂಗುರು ಕೂದಲು; ಎಸಳು: ಹೂವಿನ ದಳ; ಕಂಗಳು: ಕಣ್ಣು; ಹೊಳೆ: ಕಾಂತಿ; ಕದಪು: ಕೆನ್ನೆ; ನುಣುಪು: ನಯ, ಒರಟಲ್ಲದುದು; ಕೊರಳು: ಗಂಟಲು; ಬಲು: ದೊಡ್ಡ ಮೊಲೆ: ಸ್ತನ; ಮೋಹರ: ಗುಂಪು; ನೂಕು: ತಳ್ಳು; ಅಮರ: ದೇವತೆ; ವಾರನಾರಿ: ವೇಶ್ಯೆ;

ಪದವಿಂಗಡಣೆ:
ತೊಲಗಿಸೋ+ ಮಂದಿಯನು +ತೆಗೆ +ಬಾ
ಗಿಲನ್+ಎನಲು +ಕವಿದುದು+ಸುರೇಂದ್ರನ
ಲಲನೆಯರು +ಲಾವಣ್ಯ +ಲಹರಿಯ +ಲಲಿತ +ವಿಭ್ರಮದ
ಸುಳಿಗುರುಳ+ ನಿಟ್ಟೆಸಳುಗಂಗಳ
ಹೊಳೆವ +ಕದಪಿನ +ನುಣ್ಗೊರಳ+ ಬಲು
ಮೊಲೆಯ +ಮೋಹರ +ನೂಕಿತ್+ಅಮರೀ + ವಾರನಾರಿಯರ

ಅಚ್ಚರಿ:
(೧) ಲ ಕಾರದ ಸಾಲು ಪದಗಳು – ಲಲನೆಯರು ಲಾವಣ್ಯ ಲಹರಿಯ ಲಲಿತ

ಪದ್ಯ ೮೭: ದೇವತೆಗಳು ಏಕೆ ಗದ್ದಲ ಮಾಡಿದರು?

ನೂಕು ಬಾಗಿಲ ಚಾಚು ಬಣಗು ದಿ
ವೌಕಸರ ನಿಲಿಸಲ್ಪಪುಣ್ಯರ
ನೇಕೆ ಹೊಗಿಸಿದೆ ಬಹಳದಾನ ತಪೋ ವಿವರ್ಜಿತರ
ಓಕುಳಿಯ ನೆವದಿಂದ ತೆಕ್ಕೆಯ
ಬಾಕುಳಿಗಳುರವಣಿಸಿತೇ ತಮ
ಗೇಕೆ ರಂಭಾದಿಗಳ ಸೋಂಕೆಂದುದು ಸುರಸ್ತೋಮ (ಅರಣ್ಯ ಪರ್ವ, ೮ ಸಂಧಿ, ೮೭ ಪದ್ಯ)

ತಾತ್ಪರ್ಯ:
ಬಾಗಿಲನ್ನು ಮುಚ್ಚು, ಕೆಲಸಕ್ಕೆ ಬಾರದ ಸ್ವರ್ಗವಾಸಿಗಳನ್ನು ನಿಲ್ಲಿಸು, ಅಲ್ಪ ಪುಣ್ಯದಿಂದ ಸ್ವರ್ಗವಾಸಿಗಳಾದವರನ್ನು ಇಲ್ಲೇಕೆ ಬಿಟ್ಟುಕೋಂಡಿರಿ? ಇವರು ಹೆಚ್ಚಿನ ದಾನವನ್ನೂ ತಪಸ್ಸನ್ನೂ ಮಾಡದೆ ಇಲ್ಲಿಗೆ ಬಂದವರು. ಓಕುಳಿಯಾಡುವ ನೆವದಿಂದ ಸ್ತ್ರೀಯರನ್ನು ಆಲಿಂಗಿಸುವ ಅತಿ ಆಶೆಯುಳ್ಳವರು, ಈ ಗದ್ದಲದಲ್ಲಿ ನುಗ್ಗಿದರೋ? ಇಂತಹವರೆಲ್ಲಾ ಉತ್ತಮ ಅಪ್ಸರೆಯರನ್ನು ಸೋಕುವುದಾದರೆ ನಮಗೇಕೆ ರಂಭೆ ಮೊದಲಾದವರ ಸಹವಾಸ? ಎಂದು ದೇವತೆಗಳು ಹೇಳಿದರು.

ಅರ್ಥ:
ನೂಕು: ತಳ್ಳು; ಬಾಗಿಲು: ಕದ; ಚಾಚು: ಹರಡು; ಬಣಗು: ಕೀಳು, ಅಲ್ಪ; ದಿವೌಕಸರು: ದೇವತೆಗಳು; ನಿಲಿಸು: ತಡೆ; ಅಲ್ಪ: ಚಿಕ್ಕ, ಕ್ಷುದ್ರ; ಪುಣ್ಯ: ಸದಾಚಾರ; ಹೊಗಿಸು: ಸೇರಿಸು; ಬಹಳ: ತುಂಬ; ದಾನ: ಚತುರೋಪಾಯದಲ್ಲಿ ಓಂದು; ತಪ: ತಪಸ್ಸು, ಜಪ; ವಿವರ್ಜಿತ: ಬಿಟ್ಟ, ತ್ಯಜಿಸಿದ; ಓಕುಳಿ: ಉತ್ಸವ ಸಂದರ್ಭಗಳಲ್ಲಿ ಒಬ್ಬರ ಮೇಲೆ ಒಬ್ಬರು ಎರಚುವ ಬಣ್ಣದ ನೀರು; ನೆವ: ಕಾರಣ; ತೆಕ್ಕೆ: ಅಪ್ಪುಗೆ, ಆಲಿಂಗನ; ಬಾಕುಳಿ: ಹೆಬ್ಬಯಕೆ, ಅತ್ಯಾಸೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಆದಿ: ಮುಂತಾದ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ನೂಕು +ಬಾಗಿಲ +ಚಾಚು +ಬಣಗು +ದಿ
ವೌಕಸರ+ ನಿಲಿಸ್+ಅಲ್ಪ+ಪುಣ್ಯರನ್
ಏಕೆ +ಹೊಗಿಸಿದೆ +ಬಹಳದಾನ+ ತಪೋ +ವಿವರ್ಜಿತರ
ಓಕುಳಿಯ+ ನೆವದಿಂದ +ತೆಕ್ಕೆಯ
ಬಾಕುಳಿಗಳ್+ಉರವಣಿಸಿತೇ+ ತಮ
ಗೇಕೆ +ರಂಭಾದಿಗಳ+ ಸೋಂಕ್+ಎಂದುದು+ ಸುರಸ್ತೋಮ

ಅಚ್ಚರಿ:
(೧) ಸುರ, ದಿವೌಕಸರ – ಸಮನಾರ್ಥಕ ಪದ

ಪದ್ಯ ೮೬: ದೇವತೆಗಳು ಏನೆಂದು ಕೂಗಿದರು?

ಅಂದಿನುತ್ಸವದಮರ ನಿಕರದ
ಸಂದಣಿಯನೇನೆಂಬೆನಿಂದ್ರನ
ಮಂದಿರದೊಳೊತ್ತೊತ್ತೆ ಜಡಿದುದು ಝಳದಝಾಡಿಯಲಿ
ಮಂದಿ ತೊಲಗಲಿ ತೆರಹುಗೊಡು ಹೊಯ್
ಮುಂದಣವರನು ಗಜಬಜವ ಮಾ
ಣೆಂದು ಗರ್ಜಿಸಿತಿಂದ್ರನಾಸ್ಥಾನದಲಿ ಸುರನಿಕರ (ಅರಣ್ಯ ಪರ್ವ, ೮ ಸಂಧಿ, ೮೬ ಪದ್ಯ)

ತಾತ್ಪರ್ಯ:
ಆ ದಿನದ ಉತ್ಸವಕ್ಕೆ ದೇವತೆಗಳು ಗುಂಪುಗುಂಪಾಗಿ ದೇವೇಂದ್ರನರಮನೆಗೆ ಬಂದು ಅರಮನೆಯಲ್ಲಿ ಝಳದಂತಹ ಶಾಖವುಂಟಾಯಿತು. ದೇವತೆಗಳ ಮಂದಿಯನ್ನು ತೊಲಗಿಸು. ಜಾಗ ಬಿಡು, ಮುಂದೆ ನಿಂತವರನ್ನು ಹೊಯ್ಯಿ, ಸದ್ದು ಮಾಡುವುದನ್ನು ನಿಲ್ಲಿಸಿ ಎಂದು ದೇವತೆಗಳು ಕೂಗಿದರು.

ಅರ್ಥ:
ಉತ್ಸವ: ಸಮಾರಂಭ; ಅಮರ: ಸುರರು, ದೇವತೆ; ನಿಕರ: ಗುಂಪು; ಸಂದಣಿ: ಸಮೂಹ; ಇಂದ್ರ: ಸುರಪತಿ; ಮಂದಿರ: ಆಲಯ; ಒತ್ತೊತ್ತು: ಹತ್ತಿರ; ಜಡಿ:ಝಳಪಿಸು, ಹರಡು; ಝಳ: ಪ್ರಕಾಶ, ಕಾಂತಿ; ಝಾಡಿ: ಕಾಂತಿ; ಮಂದಿ: ಜನ; ತೊಲಗು: ಹೊರನಡೆ; ತೆರಹು: ಎಡೆ, ಜಾಗ; ಮುಂದಣ: ಮುಂದಿನ; ಗಜಬಜ: ಗೊಂದಲ; ಮಾಣು: ನಿಲ್ಲಿಸು; ಗರ್ಜಿಸು: ಜೋರಾಗಿ ಹೇಳು; ಆಸ್ಥಾನ: ಓಲಗ; ಸುರನಿಕರ: ದೇವತೆಗಳ ಗುಂಪು;

ಪದವಿಂಗಡಣೆ:
ಅಂದಿನ್+ಉತ್ಸವದ್+ಅಮರ +ನಿಕರದ
ಸಂದಣಿಯನ್+ಏನೆಂಬೆನ್+ಇಂದ್ರನ
ಮಂದಿರದೊಳ್+ಒತ್ತೊತ್ತೆ +ಜಡಿದುದು+ ಝಳದ+ಝಾಡಿಯಲಿ
ಮಂದಿ +ತೊಲಗಲಿ+ ತೆರಹುಗೊಡು+ ಹೊಯ್
ಮುಂದಣವರನು+ ಗಜಬಜವ+ ಮಾ
ಣೆಂದು +ಗರ್ಜಿಸಿತ್+ಇಂದ್ರನ್+ಆಸ್ಥಾನದಲಿ+ ಸುರ+ನಿಕರ

ಅಚ್ಚರಿ:
(೧) ಅಮರ, ಸುರ; ಸಂದಣಿ, ನಿಕರ; ಝಳ, ಝಾಡಿ – ಸಮನಾರ್ಥಕ ಪದಗಳು