ಪದ್ಯ ೭೯: ಅರ್ಜುನನು ಯಾರನ್ನು ಸ್ವರ್ಗದಲಿ ನೋಡಿದನು?

ಈತ ಭರತನು ದೂರದಲಿ ತೋ
ರ್ಪಾತನು ಹರಿಶ್ಚಂದ್ರನಳ ನೃಗ
ರೀತಗಳು ಪುರುಕುತ್ಸನೀತ ಮರುತ್ತ ನೃಪನೀತ
ಈತ ಹೈಹಯ ದುಂದುಮಾರಕ
ನಿತ ನಹುಷ ದಿಳೀಪ ದಶರಥ
ನೀತ ರಘು ತಾನೀತ ಶಂತನು ಪಾರ್ಥ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೯ ಪದ್ಯ)

ತಾತ್ಪರ್ಯ:
ಮಾತಲಿಯು ಅರ್ಜುನನಿಗೆ ಸ್ವರ್ಗವನ್ನು ತೋರಿಸುತ್ತಾ, ಇವನು ಭರತ, ಅಲ್ಲಿ ದೂರದಲ್ಲಿ ಕಾಣುವವನು ಹರಿಶ್ಚಂದ್ರ, ಇವನು ನಳ, ಇವನು ನೃಗ, ಇವನು ಪುರುಕುತ್ಸ, ಇವನು ಮರುತ್ತ, ಇವನು ಹೈಹಯ, ಇವನು ದುಂದುಮಾರ, ಇವನು ನಹುಷ, ಇವನು ದಿಲೀಪ, ಇವನು ದಶರಥ, ಇವನು ರಘು, ಇವನು ಶಂತನು ಎಂದು ಹೇಳಿದನು.

ಅರ್ಥ:
ದೂರ: ಅಂತರ; ತೋರ್ಪ: ತೋರುವ; ನೋಡು: ವೀಕ್ಷಿಸು;

ಪದವಿಂಗಡಣೆ:
ಈತ +ಭರತನು +ದೂರದಲಿ +ತೋರ್ಪ
ಆತನು +ಹರಿಶ್ಚಂದ್ರ+ ನಳ +ರ್
ಈತಗಳು +ಪುರುಕುತ್ಸನ್+ಈತ +ಮರುತ್ತ ನೃಪನ್+ಈತ
ಈತ+ ಹೈಹಯ +ದುಂದುಮಾರಕನ್
ಈತ +ನಹುಷ +ದಿಲೀಪ +ದಶರಥನ್
ಈತ +ರಘು +ತಾನ್+ಈತ +ಶಂತನು +ಪಾರ್ಥ +ನೋಡೆಂದ

ಅಚ್ಚರಿ:
(೧) ಈತ – ೮ ಬಾರಿ ಪ್ರಯೋಗ
(೨) ಮುಖ್ಯ ರಾಜರ ಪರಿಚಯ – ಭರತ, ಹರಿಶ್ಚಂದ್ರ, ನಳ, ನೃಗ, ದುಂದುಮಾರ, ಪುರುಕುತ್ಸ, ಹೈಹಯ, ದಿಲೀಪ, ದಶರಥ, ರಘು, ಶಂತನು

ಪದ್ಯ ೭೮: ಸ್ವರ್ಗಕ್ಕೆ ಹೋಗುವವರ ಗುಣಗಳೆಂತಿಹವು?

ಮೇಲೆ ಮೇಲೈದರೆ ಸುತಾರಾ
ಮಾಲೆಗಳವೊಲು ರಾಜಸೂಯದ
ಮೇಲುಯಜ್ಞದ ವಾಜಿ ಮೇಧದ ಭೂರಿಸುಕೃತಿಗಳು
ಕಾಳಗದೊಳರಿ ಸುಭಟ ಸಿತ ಕರ
ವಾಲ ಧಾರಾತೀರ್ಥ ಸೇವಿ ನೃ
ಪಾಲರೈದರೆ ದೀಪ್ಯಮಾನ ವಿಮಾನ ಮಧ್ಯದಲಿ (ಅರಣ್ಯ ಪರ್ವ, ೮ ಸಂಧಿ, ೭೮ ಪದ್ಯ)

ತಾತ್ಪರ್ಯ:
ಮಾತಲಿಯು ಅರ್ಜುನನಿಗೆ, ಅಗೋ ಅಲ್ಲಿ ಮೇಲೆ ನಕ್ಷತ್ರ ಮಾಲೆಗಳಂತೆ ವಿಮಾನದಲ್ಲಿ ರಾಜಸೂಯ ಅಶ್ವಮೇಧಗಳನ್ನು ಮಾಡಿದ ಮಹಾ ಪುಣ್ಯಶಾಲಿಗಳಿದ್ದಾರೆ, ಯುದ್ಧದಲ್ಲಿ ಶತ್ರುಗಳೊಡನೆ ಕತ್ತಿಯಲ್ಲಿ ಯುದ್ಧಮಾಡಿ ರಕ್ತಸುರಿದು ಸತ್ತವರು ಅವರು ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ಮೇಲೆ: ಎತ್ತರ, ದೂರ, ಉತ್ತುಂಗ; ಐದು: ಹೋಗಿಸೇರು; ತಾರ: ನಕ್ಷತ್ರ; ಮಾಲೆ: ಹಾರ; ಮೇಲುಯಜ್ಞ: ಶ್ರೇಷ್ಠವಾದ ಯಾಗ; ವಾಜಿ: ಕುದುರೆ; ಮೇಧ: ಯಾಗ, ಯಜ್ಞ; ಭೂರಿ: ಹೆಚ್ಚು, ಅಧಿಕ; ಸುಕೃತಿ: ಒಳ್ಳೆಯ ಆಕೃತಿ; ಕಾಳಗ: ಯುದ್ಧ; ಅರಿ: ವೈರಿ; ಸುಭಟ: ಸೈನಿಕ; ಸಿತ: ಶ್ವೇತ; ಕರವಾಲ: ಕತ್ತಿ; ಧಾರೆ: ಪ್ರವಾಹ; ತೀರ್ಥ: ಪವಿತ್ರವಾದ ಜಲ; ನೃಪಾಲ: ರಾಜ; ದೀಪ್ಯಮಾನ: ಪ್ರಜ್ವಲಿಸು; ಮಧ್ಯ: ನಡುವೆ; ವಿಮಾನ: ಆಕಾಶದಲ್ಲಿ ಚರಿಸುವ ವಾಹನ;

ಪದವಿಂಗಡಣೆ:
ಮೇಲೆ +ಮೇಲ್+ಐದರೆ+ ಸುತಾರಾ
ಮಾಲೆಗಳವೊಲು +ರಾಜಸೂಯದ
ಮೇಲುಯಜ್ಞದ +ವಾಜಿ ಮೇಧದ +ಭೂರಿ+ಸುಕೃತಿಗಳು
ಕಾಳಗದೊಳ್+ಅರಿ+ ಸುಭಟ+ ಸಿತ+ ಕರ
ವಾಲ +ಧಾರಾ+ತೀರ್ಥ +ಸೇವಿ +ನೃ
ಪಾಲರ್+ಐದರೆ+ ದೀಪ್ಯಮಾನ +ವಿಮಾನ +ಮಧ್ಯದಲಿ

ಅಚ್ಚರಿ:
(೧) ಕರವಾಲ, ನೃಪಾಲ – ಪ್ರಾಸ ಪದ

ಪದ್ಯ ೭೭: ಸ್ವರ್ಗಕ್ಕೆ ಹೋಗುವವರ ಗುಣಗಳಾವುವು?

ಇತ್ತ ನೋಡೈ ಸ್ವಾಮಿ ಕಾರ್ಯಕೆ
ತೆತ್ತನೊಡಲನು ವರ ರಣಾಗ್ರದೊ
ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ
ಇತ್ತವನು ಸತ್ಪುತ್ರನನುತಾ
ಹೆತ್ತವನು ಗೋವಿಪ್ರಬಾಧೆಗೆ
ಸತ್ತವನ ನೆಲೆ ಪಾರ್ಥ ನೋಡುತ್ತಮ ವಿಮಾನದಲಿ (ಅರಣ್ಯ ಪರ್ವ, ೮ ಸಂಧಿ, ೭೭ ಪದ್ಯ)

ತಾತ್ಪರ್ಯ:
ಅರ್ಜುನ ವಿಮಾನದಲ್ಲಿ ಹೋಗುತ್ತಿರುವವರನ್ನು ಇತ್ತ ನೋಡು, ಇವನು ರಣರಂಗದಲ್ಲಿ ತನ್ನ ಒಡೆಯನಿಗಾಗಿ ಪ್ರಾಣವನ್ನು ಬಿಟ್ಟವನು, ಭೂದಾನ, ಕನ್ಯಾದಾನ, ಗೋದಾನಗಳನ್ನು ಕೊಟ್ಟವನಿವನು, ಇವನು ಸತ್ಪುತ್ರನನ್ನು ಪಡೆದವನು, ಇವನು ಗೋಗಳಿಗೆ ಬ್ರಾಹ್ಮಣರಿಗೆ ಬಾಧೆಯನ್ನು ಹೋಗಲಾಡಿಸಲು ಹೊರಟು ಸತ್ತವನು ಎಂದು ಮಾತಲಿಯು ಅರ್ಜುನನಿಗೆ ತೋರಿಸಿದನು.

ಅರ್ಥ:
ನೋಡು: ವೀಕ್ಷಿಸು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ತೆತ್ತ: ನೀಡು; ಒಡಲು: ಪ್ರಾಣ; ವರ: ಶ್ರೇಷ್ಠ; ರಣ: ಯುದ್ಧ; ಭೂಮಿ: ಧರಿತ್ರಿ; ಕನ್ಯ: ಹೆಣ್ಣು; ಗೋಧನ: ಗೋವು; ಆವಳಿ: ಗುಂಪು; ಸತ್ಪುತ್ರ: ಒಳ್ಳೆಯ ಮಗ; ಗೋ: ಗೋವು, ಹಸು; ವಿಪ್ರ: ಬ್ರಾಹ್ಮಣ; ಬಾಧೆ: ನೋವು; ಸತ್ತ: ಪ್ರಾಣ ಬಿಡು, ಅಳಿ; ನೆಲೆ: ಸ್ಥಾನ; ಉತ್ತಮ: ಶ್ರೇಷ್ಠ; ವಿಮಾನ: ಆಕಾಶದಲ್ಲಿ ಹಾರುವ ವಾಹನ;

ಪದವಿಂಗಡಣೆ:
ಇತ್ತ +ನೋಡೈ +ಸ್ವಾಮಿ +ಕಾರ್ಯಕೆ
ತೆತ್ತನ್+ಒಡಲನು +ವರ +ರಣಾಗ್ರದೊಳ್
ಇತ್ತಲೈದನೆ +ಭೂಮಿ +ಕನ್ಯಾ +ಗೋಧನ+ಆವಳಿಯ
ಇತ್ತವನು +ಸತ್ಪುತ್ರನನು+ತಾ
ಹೆತ್ತವನು +ಗೋ+ವಿಪ್ರ+ಬಾಧೆಗೆ
ಸತ್ತವನ +ನೆಲೆ +ಪಾರ್ಥ +ನೋಡ್+ಉತ್ತಮ +ವಿಮಾನದಲಿ

ಅಚ್ಚರಿ:
(೧) ಇತ್ತ, ತೆತ್ತ, ಸತ್ತ, ಹೆತ್ತ – ಪ್ರಾಸ ಪದಗಳು

ಪದ್ಯ ೭೬: ಯಾರು ಸ್ವರ್ಗಕ್ಕೆ ಹೋಗಲು ಅರ್ಹರು?

ಭೂತದಯೆಯಲಿ ನಡೆವನೀ ತೋ
ರ್ಪಾತ ನಿರ್ಮಳ ಸತ್ಯಭಾಷಿತ
ನೀತ ಪರಹಿತನಿವ ಯಥಾಲಾಭೈಕ ಸಂತೋಷಿ
ಈತ ಶುಚಿರುಚಿಯೀತ ನಿಶ್ಚಲ
ನೀತ ನಿರ್ಭಯ ನೀತ ನಿಸ್ಪೃಹ
ನೀತರಾಗದ್ವೇಷರಹಿತನು ಪಾರ್ಥ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೭೬ ಪದ್ಯ)

ತಾತ್ಪರ್ಯ:
ಪಾರ್ಥ ಸ್ವರ್ಗಕ್ಕೆ ಹೋಗುವವರನ್ನು ನೋಡು, ಇವನು ಎಲ್ಲಾ ಪ್ರಾಣಿಗಳಲ್ಲೂ ದಯೆ ತೋರಿಸುವವನು, ಇಲ್ಲಿ ಕಾಣುವವನು ನಿರ್ಮಲ ಮನಸ್ಸುಳ್ಳವನು, ಇವನು ಸತ್ಯವನ್ನೇ ನುಡಿಯುವವನು, ಇವನು ಪರಹಿತ, ಇವನು ಸಿಕ್ಕಷ್ಟರಲ್ಲೇ ಸಂತೋಷ ಪಟ್ಟವನು, ಇವನು ಶುಚಿ, ಇವನು ಉಜ್ವಲ ಗುಣವುಳ್ಳವನು, ಇವನು ಸುಖ ದುಃಖಗಳಿಂದ ಪೀಡಿತನಾಗದೆ ನಿಶ್ಚಲನಾಗಿದ್ದವನು. ಇವನು ಭಯರಹಿತ, ಇವನು ಪರರ ವಸ್ತುವಿಗಾಗಲಿ, ಧನಕ್ಕಾಗಲಿ, ಆಶೆ ಪಡದಿದ್ದವನು, ಇವನು ಬಯಕೆ ದ್ವೇಷಗಳಿಲ್ಲದಿದ್ದವನು ಎಂದು ಮಾತಲಿ ಅರ್ಜುನನಿಗೆ ತೋರಿಸಿದನು.

ಅರ್ಥ:
ಭೂತ: ಜಗತ್ತಿನ ಪ್ರಾಣಿವರ್ಗ; ದಯೆ: ಕರುಣೆ; ನಿರ್ಮಳ: ವಿಮಲ, ಶುದ್ಧ; ಸತ್ಯ: ದಿಟ; ಭಾಷಿತ: ಮಾತು; ಹಿತ: ಪ್ರಿಯಕರವಾದುದು; ಸಂತೋಷ: ಹರ್ಷ; ಪರ: ಬೇರೆ; ಹಿತ: ಒಳಿತು; ಲಾಭ: ಪ್ರಯೋಜನ; ಶುಚಿ: ನಿರ್ಮಲ; ರುಚಿ: ಕಾಂತಿ, ಪ್ರಕಾಶ, ಅಪೇಕ್ಷೆ; ನಿಶ್ಚಲ: ಸ್ಥಿರವಾದುದು; ನಿರ್ಭಯ: ಭಯವಿಲ್ಲದವ; ನಿಸ್ಪೃಹ: ಆಸೆ ಇಲ್ಲದವ; ರಾಗ: ಪ್ರೀತಿ, ಮೋಹ; ದ್ವೇಷ: ವೈರ; ರಹಿತ: ಇಲ್ಲದವ;

ಪದವಿಂಗಡಣೆ:
ಭೂತ+ದಯೆಯಲಿ +ನಡೆವನ್+ಈ +ತೋ
ರ್ಪಾತ +ನಿರ್ಮಳ +ಸತ್ಯಭಾಷಿತನ್
ಈತ+ ಪರಹಿತನಿವ+ ಯಥಾಲಾಭೈಕ+ ಸಂತೋಷಿ
ಈತ +ಶುಚಿರುಚಿ+ಈತ +ನಿಶ್ಚಲನ್
ಈತ +ನಿರ್ಭಯನ್ +ಈತ +ನಿಸ್ಪೃಹನ್
ಈತ+ರಾಗದ್ವೇಷ+ರಹಿತನು +ಪಾರ್ಥ+ ಕೇಳೆಂದ

ಅಚ್ಚರಿ:
(೧) ಸ್ವರ್ಗಕ್ಕೆ ಹೋಗುವ ಗುಣವುಳ್ಳವರು – ಸತ್ಯಭಾಷಿತ, ಭೂತದಯೆ, ನಿರ್ಮಳ, ಪರಹಿತ, ಶುಚಿರುಚಿ, ನಿಶ್ಚಲ, ನಿರ್ಭಯ, ನಿಸ್ಪೃಹ
(೨) ನ ಕಾರದ ಪದಪುಂಜ – ನಿಶ್ಚಲ ನೀತ ನಿರ್ಭಯ ನೀತ ನಿಸ್ಪೃಹ ನೀತರಾಗದ್ವೇಷರಹಿತನು

ಪದ್ಯ ೭೫: ಯಾರು ಸ್ವರ್ಗದತ್ತ ಪ್ರಯಾಣ ಬಳಸಿದರು?

ಈತನಿಂದ್ರಿಯ ವಿಜಯಿ ದುಷ್ಕೃತ
ಭೀತನಿವ ವೇದಾಧ್ಯಯನ ಪರ
ನೀತ ತೀರ್ಥವಿಹಾರಿ ಸಜ್ಜನನೀತ ಗುಣಿಯೀತ
ಈತ ನಿರ್ಮತ್ಸರನಸೂಯಾ
ತೀತನಿವನತಿ ವಿಪ್ರಪೂಜಕ
ನೀತ ಮಾತಾ ಪಿತರ ಭಕ್ತನು ಪಾರ್ಥನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೫ ಪದ್ಯ)

ತಾತ್ಪರ್ಯ:
ಇವನು ಇಂದ್ರಿಯಗಳನ್ನು ಗೆದ್ದವನು, ಇವನು ಪಾಪ ಕರ್ಮಗಳಿಗೆ ಹೆದರಿದವನು. ಇವನು ವೇದಾಧ್ಯಯನ ಮಾಡಿದವನು, ಇವನು ತೀರ್ಥ ಯಾತ್ರೆ ಮಾಡಿದವನು, ಇವನು ಸಜ್ಜನ, ಇವನು ಸದ್ಗುಣ ಶಾಲಿ, ಇವನು ಅಸೂಯೆಯನ್ನು ಗೆದ್ದವನು, ಇವನು ಬ್ರಾಹ್ಮಣರನ್ನು ಪೂಜಿಸಿದವನು, ಇವನು ತಂದೆ ತಾಯಿಗಳ ಭಕ್ತ, ಇವರು ಸ್ವರ್ಗದತ್ತ ಹೊರಟಿದ್ದಾರೆ.

ಅರ್ಥ:
ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವಿಜಯ: ಗೆಲುವು; ದುಷ್ಕೃತ: ಕೆಟ್ಟ ಕೆಲಸ, ಪಾಪ; ಭೀತ: ಹೆದರು; ವೇದ: ಶೃತಿ; ಅಧ್ಯಯನ: ಓದುವುದು, ಕಲಿಯುವುದು; ತೀರ್ಥ: ಪವಿತ್ರಸ್ಥಳ; ವಿಹಾರಿ: ಓಡಾಡುವವ; ಸಜ್ಜನ: ಒಳ್ಳೆಯ ವ್ಯಕ್ತಿ; ಗುಣಿ: ಒಳ್ಳೆಯ ಗುಣವುಳ್ಳವ; ಮತ್ಸರ: ಹೊಟ್ಟೆಕಿಚ್ಚು; ಅಸೂಯೆ: ಹೊಟ್ಟೆಕಿಚ್ಚು ;ವಿಪ್ರ: ಬ್ರಾಹ್ಮಣ; ಪೂಜಕ: ಆರಾಧಕ; ಮಾತ: ತಾಯಿ; ಪಿತ: ತಂದೆ; ಭಕ್ತ: ಪೂಜಿಸುವವನು, ಆರಾಧಕ;

ಪದವಿಂಗಡಣೆ:
ಈತನ್+ಇಂದ್ರಿಯ +ವಿಜಯಿ +ದುಷ್ಕೃತ
ಭೀತನ್+ಇವ +ವೇದಾಧ್ಯಯನಪರನ್
ಈತ +ತೀರ್ಥವಿಹಾರಿ+ ಸಜ್ಜನನ್+ಈತ +ಗುಣಿಯೀತ
ಈತ +ನಿರ್ಮತ್ಸರನ್+ಅಸೂಯಾ
ತೀತನ್+ಇವನ್+ಅತಿ+ ವಿಪ್ರ+ಪೂಜಕನ್
ಈತ +ಮಾತಾ +ಪಿತರ+ ಭಕ್ತನು +ಪಾರ್ಥ+ನೋಡೆಂದ

ಅಚ್ಚರಿ:
(೧) ಸ್ವರ್ಗಕ್ಕೆ ಹೋಗುವವರು – ಇಂದ್ರಿಯವಿಜಯಿ, ದುಷ್ಕೃತಭೀತನ್, ವೇದಾಧ್ಯಯನಪರ, ತೀರ್ಥವಿಹಾರಿ, ಸಜ್ಜನ, ಮಾತಾ ಪಿತರ ಭಕ್ತ

ಪದ್ಯ ೭೪: ಯಾರು ಸ್ವರ್ಗಕ್ಕೆ ಪ್ರಯಾಣವನ್ನು ಮಾಡುತ್ತಾರೆ?

ಈ ವಿಮಾನದ ಸಾಲ ಸಂದಣಿ
ತೀವಿಕೊಂಡಿದೆ ಗಗನತಳದಲಿ
ದೇವಕನ್ಯಾ ಶತ ಸಹಸ್ರದ ಖೇಳ ಮೇಳದಲಿ
ಭೂವಳಯದಲಿ ಸುಕೃತಿಗಳು ನಾ
ನಾ ವಿಧದ ಜಪ ಯಜ್ಞದಾನ ತ
ಪೋವಿಧಾನದಲೊದಗಿದವರನು ಪಾರ್ಥ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೪ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ಸಾಲಾಗಿ ಸೇರಿದ ವಿಮಾನಗಳು ಲಕ್ಷ ಸಂಖ್ಯೆಯ ಅಪ್ಸರ ಸ್ತ್ರೀಯರ ವಿನೋದ ಗೋಷ್ಠಿಯೊಡನೆ ಕಾದಿವೆ. ಭೂಮಂಡಲದಲ್ಲಿ ಜಪ, ತಪ, ಯಜ್ಞ, ದಾನ, ತಪಸ್ಸುಗಳನ್ನು ಮಾಡಿದ ಪುಣ್ಯವಂತರು ಸ್ವರ್ಗಕ್ಕೆ ಈ ಅಪ್ಸರೆಯರೊಡನೆ ಪ್ರಯಾಣ ಬೆಳೆಸಿದ್ದಾರೆ.

ಅರ್ಥ:
ವಿಮಾನ: ವಾಯು ಮಾರ್ಗದಲ್ಲಿ ಸಂಚರಿಸುವ ವಾಹನ; ಸಾಲ: ಸಾಲು, ಪಂಕ್ತಿ; ಸಂದಣಿ: ಗುಂಪು; ತೀವು: ತುಂಬು, ಭರ್ತಿಮಾಡು; ಗಗನ: ಆಗಸ; ದೇವಕನ್ಯೆ: ಅಪ್ಸರೆ; ಶತ: ನೂರು; ಸಹಸ್ರ: ಸಾವಿರ; ಖೇಳ: ಆಟ; ಮೇಳ: ಗುಂಪು; ಭೂವಳಯ: ಭೂಮಿ; ಸುಕೃತಿ: ಒಳ್ಳೆಯ ರಚನೆ; ವಿಧ: ರೀತಿ; ಜಪ: ತಪ; ಯಜ್ಞ: ಯಾಗ; ದಾನ: ಚತುರೋಪಾಯಗಳಲ್ಲಿ ಒಂದು; ವಿಧಾನ: ರೀತಿ; ಒದಗು: ಲಭ್ಯ, ದೊರೆತುದು; ನೋಡು: ವೀಕ್ಷಿಸು;

ಪದವಿಂಗಡಣೆ:
ಈ +ವಿಮಾನದ +ಸಾಲ +ಸಂದಣಿ
ತೀವಿಕೊಂಡಿದೆ +ಗಗನತಳದಲಿ
ದೇವಕನ್ಯಾ +ಶತ+ ಸಹಸ್ರದ +ಖೇಳ +ಮೇಳದಲಿ
ಭೂವಳಯದಲಿ +ಸುಕೃತಿಗಳು +ನಾ
ನಾ +ವಿಧದ +ಜಪ +ಯಜ್ಞ+ದಾನ +ತ
ಪೋ+ವಿಧಾನದಲ್+ಒದಗಿದವರನು +ಪಾರ್ಥ +ನೋಡೆಂದ

ಅಚ್ಚರಿ:
(೧) ಅಪ್ಸರೆ ಎಂದು ಹೇಳಲು ದೇವಕನ್ಯಾ ಪದದ ಬಳಕೆ
(೨) ಗಗನತಳ, ಭೂವಳಯ – ಸ್ವರ್ಗ, ಭೂಮಿಯನ್ನು ಸೂಚಿಸುವ ಪದಗಳು