ಪದ್ಯ ೭೩: ಮಾತಲಿಯು ಅರ್ಜುನನಿಗೆ ಏನು ವಿವರಿಸಿದನು?

ಅವನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನಕೋಶದ ಸನ್ನಿವೇಶವನದ್ರಿ ಜಲಧಿಗಳ
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾದ್ವೀಪಂಗಳಿವು ಮಾ
ನವರ ಧರಣೀ ಸ್ವರ್ಗ ಮೇಲಿನ್ನಿತ್ತ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೩ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ, ಇಂದ್ರನ ಸಾರಥಿಯಾದ ಮಾತಲಿಯು ಅರ್ಜುನನಿಗೆ ಭೂಮಿ, ವಿಶ್ವಕೋಶ, ಪರ್ವತಗಳು, ಸಮುದ್ರಗಳು ಎಲ್ಲವನ್ನೂ ವಿವರಿಸಿದನು. ಇವು ಕುಲಪರ್ವತಗಳು, ಇವು ಸಮುದ್ರಗಳು, ಇವು ಮಹಾದ್ವೀಪಗಳು, ಇದು ಮಾನವರ ಭೂಮಿ, ಇನ್ನು ಇತ್ತ ಸ್ವರ್ಗವನ್ನು ನೋಡು ಎಂದು ತೋರಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಇಂದ್ರ: ಶಕ್ರ; ಸಾರಥಿ: ರಥವನ್ನು ಓಡಿಸುವವ; ವಿವರಿಸು: ಹೇಳು; ಭೂಮಿ: ಧರಿತ್ರಿ; ಭುವನ: ಜಗತ್ತು, ಪ್ರಪಂಚ; ಸನ್ನಿವೇಶ: ಪರಿಸರ, ಸುತ್ತುಮುತ್ತ; ಅದ್ರಿ: ಬೆಟ್ಟ; ಜಲಧಿ: ಸಾಗರ; ಕುಲಾದ್ರಿ: ಬೆಟ್ಟ; ಪಯೋಧಿ: ಸಾಗರ; ಮಹಾ: ದೊಡ್ಡ; ದ್ವೀಪ: ನೀರಿನಿಂದ ಆವರಿಸಿರುವ ಭೂಮಿ; ಮಾನವ: ಮನುಷ್ಯ; ಧರಣಿ: ಭೂಮಿ; ಸ್ವರ್ಗ: ನಾಕ; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನಿಪತಿ +ಕೇಳ್+ಇಂದ್ರ +ಸಾರಥಿ
ವಿವರಿಸಿದನ್+ಅರ್ಜುನಗೆ +ಭೂಮಿಯ
ಭುವನಕೋಶದ +ಸನ್ನಿವೇಶವನ್+ಅದ್ರಿ +ಜಲಧಿಗಳ
ಇವು +ಕುಲಾದ್ರಿಗಳ್+ಇವು +ಪಯೋಧಿಗಳ್
ಇವು +ಮಹಾ+ದ್ವೀಪಂಗಳ್+ಇವು+ ಮಾ
ನವರ +ಧರಣೀ +ಸ್ವರ್ಗ +ಮೇಲಿನ್ನಿತ್ತ +ನೋಡೆಂದ

ಅಚ್ಚರಿ:
(೧) ಭೂಮಿ, ಧರಣೀ, ಅವನಿ; ಜಲಧಿ, ಪಯೋಧಿ – ಸಮನಾರ್ಥಕ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ