ಪದ್ಯ ೭೩: ಮಾತಲಿಯು ಅರ್ಜುನನಿಗೆ ಏನು ವಿವರಿಸಿದನು?

ಅವನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನಕೋಶದ ಸನ್ನಿವೇಶವನದ್ರಿ ಜಲಧಿಗಳ
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾದ್ವೀಪಂಗಳಿವು ಮಾ
ನವರ ಧರಣೀ ಸ್ವರ್ಗ ಮೇಲಿನ್ನಿತ್ತ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೩ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ, ಇಂದ್ರನ ಸಾರಥಿಯಾದ ಮಾತಲಿಯು ಅರ್ಜುನನಿಗೆ ಭೂಮಿ, ವಿಶ್ವಕೋಶ, ಪರ್ವತಗಳು, ಸಮುದ್ರಗಳು ಎಲ್ಲವನ್ನೂ ವಿವರಿಸಿದನು. ಇವು ಕುಲಪರ್ವತಗಳು, ಇವು ಸಮುದ್ರಗಳು, ಇವು ಮಹಾದ್ವೀಪಗಳು, ಇದು ಮಾನವರ ಭೂಮಿ, ಇನ್ನು ಇತ್ತ ಸ್ವರ್ಗವನ್ನು ನೋಡು ಎಂದು ತೋರಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಇಂದ್ರ: ಶಕ್ರ; ಸಾರಥಿ: ರಥವನ್ನು ಓಡಿಸುವವ; ವಿವರಿಸು: ಹೇಳು; ಭೂಮಿ: ಧರಿತ್ರಿ; ಭುವನ: ಜಗತ್ತು, ಪ್ರಪಂಚ; ಸನ್ನಿವೇಶ: ಪರಿಸರ, ಸುತ್ತುಮುತ್ತ; ಅದ್ರಿ: ಬೆಟ್ಟ; ಜಲಧಿ: ಸಾಗರ; ಕುಲಾದ್ರಿ: ಬೆಟ್ಟ; ಪಯೋಧಿ: ಸಾಗರ; ಮಹಾ: ದೊಡ್ಡ; ದ್ವೀಪ: ನೀರಿನಿಂದ ಆವರಿಸಿರುವ ಭೂಮಿ; ಮಾನವ: ಮನುಷ್ಯ; ಧರಣಿ: ಭೂಮಿ; ಸ್ವರ್ಗ: ನಾಕ; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನಿಪತಿ +ಕೇಳ್+ಇಂದ್ರ +ಸಾರಥಿ
ವಿವರಿಸಿದನ್+ಅರ್ಜುನಗೆ +ಭೂಮಿಯ
ಭುವನಕೋಶದ +ಸನ್ನಿವೇಶವನ್+ಅದ್ರಿ +ಜಲಧಿಗಳ
ಇವು +ಕುಲಾದ್ರಿಗಳ್+ಇವು +ಪಯೋಧಿಗಳ್
ಇವು +ಮಹಾ+ದ್ವೀಪಂಗಳ್+ಇವು+ ಮಾ
ನವರ +ಧರಣೀ +ಸ್ವರ್ಗ +ಮೇಲಿನ್ನಿತ್ತ +ನೋಡೆಂದ

ಅಚ್ಚರಿ:
(೧) ಭೂಮಿ, ಧರಣೀ, ಅವನಿ; ಜಲಧಿ, ಪಯೋಧಿ – ಸಮನಾರ್ಥಕ ಪದಗಳು

ಪದ್ಯ ೭೨: ಕಾಲವೆಂಬುದೇನು?

ಕಾಲವೆಂಬುದು ರವಿಯ ಗಾಲಿಯ
ಕಾಲಗತಿಯೈ ಸಲೆ ಕೃತಾಂತಗೆ
ಲೀಲೆ ಸೃಷ್ಟಿ ಸ್ಥಿತಿಲಯವು ಸಚರಾಚರಗಳಲಿ
ಕಾಲ ಚಕ್ರದ ಖಚರ ಗತಿಯಲಿ
ಕಾಳಗತ್ತಲೆಯನು ನಿವಾರಿಸಿ
ಪಾಲಿಸುವ ಲೋಕಂಗಳಿನಿತುವ ಪಾರ್ಥ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೨ ಪದ್ಯ)

ತಾತ್ಪರ್ಯ:
ಪಾರ್ಥ ಕೇಳು, ಕಾಲವೆಂಬುದು ಸೂರ್ಯನ ರಥದ ಚಕ್ರದ ಚಲನೆ. ಇದು ಯಮನ ಲೀಲಾವಿನೋದ. ಚಲಿಸುವ ಮತ್ತು ಜಡವಸ್ತುಗಳ ಸೃಷ್ಟಿ, ಸ್ಥಿತಿ, ಲಯಗಳನ್ನು ಸೂರ್ಯನು ಆಕಾಶದಲ್ಲಿ ಚಲಿಸುತ್ತಾ ನಿಯಂತ್ರಿಸುತ್ತಾನೆ, ಕತ್ತಲೆಯನ್ನು ಕಳೆದು ಲೋಕಗಳನ್ನು ಪಾಲಿಸುತ್ತಾನೆ.

ಅರ್ಥ:
ಕಾಲ: ಸಮಯ; ರವಿ: ಸೂರ್ಯ; ಗಾಲಿ: ಚಕ್ರ; ಗತಿ: ಚಲನೆ, ವೇಗ; ಸಲೆ: ಒಂದೇ ಸಮನೆ; ಕೃತಾಂತ: ಯಮ; ಲೀಲೆ: ಆನಂದ, ಸಂತೋಷ; ಸೃಷ್ಟಿ: ಹುಟ್ಟು; ಸ್ಥಿತಿ: ಅವಸ್ಥೆ; ಲಯ; ನಾಶ; ಚರಾಚರ: ಚಲಿಸುವ-ಚಲಿಸದಿರುವ; ಚಕ್ರ: ಗಾಲಿ; ಖಚರ: ಸೂರ್ಯ; ಕಾಳಗತ್ತಲೆ: ಅಂಧಕಾರ; ನಿವಾರಿಸು: ಹೋಗಲಾಡಿಸು; ಪಾಲಿಸು: ರಕ್ಷಿಸು, ಕಾಪಾಡು; ಲೋಕ: ಜಗತ್ತು; ನೋಡು: ವೀಕ್ಷಿಸು;

ಪದವಿಂಗಡಣೆ:
ಕಾಲವೆಂಬುದು +ರವಿಯ +ಗಾಲಿಯ
ಕಾಲಗತಿಯೈ+ ಸಲೆ+ ಕೃತಾಂತಗೆ
ಲೀಲೆ +ಸೃಷ್ಟಿ +ಸ್ಥಿತಿ+ಲಯವು +ಸಚರಾಚರಗಳಲಿ
ಕಾಲ +ಚಕ್ರದ +ಖಚರ +ಗತಿಯಲಿ
ಕಾಳಗತ್ತಲೆಯನು +ನಿವಾರಿಸಿ
ಪಾಲಿಸುವ +ಲೋಕಂಗಳಿನಿತುವ+ ಪಾರ್ಥ +ನೋಡೆಂದ

ಅಚ್ಚರಿ:
(೧) ಕಾಲದ ವಿವರ – ಕಾಲವೆಂಬುದು ರವಿಯ ಗಾಲಿಯ ಕಾಲಗತಿಯೈ

ಪದ್ಯ ೭೧: ಮಂದೇಹರು ಯಾರಿಂದ ವರವನ್ನು ಪಡೆದಿಹರು?

ಪರಿಕಿಸಲು ಪರಮಾತ್ಮ ದಿನಕರ
ಹರಿಹರ ವಿರಿಂಚಿಗಳು ಸೂರ್ಯನ
ನೆರೆದು ಸುತಿ ಕೈವಾರಿಸುತ್ತಿರೆ ಘನ ಮಹಾಮಹಿಮ
ಕಿರಣದುರಿಯ ಮಹಾಪ್ರತಾಪನು
ತರಣಿಯೊಂದಾತನೊಳು ಕಾದಲು
ಸರಸಿರುಹ ಸಂಭವನ ಮೆಚ್ಚಿಸಿ ವರವ ಪಡೆದಿಹರು (ಅರಣ್ಯ ಪರ್ವ, ೮ ಸಂಧಿ, ೭೧ ಪದ್ಯ)

ತಾತ್ಪರ್ಯ:
ಎಲೈ ಪಾರ್ಥ ಗಮನಿಸು, ಹರಿಹರ ಬ್ರಹ್ಮಾದಿಗಳು ಪರಮಾತ್ಮನಾದ ಸೂರ್ಯನನ್ನು ಶೃತಿ ಘೋಷದಿಂದ ಹೊಗಳುತ್ತಿರುವರು. ಮಹಾಮಹಿಮನಾದ ಸೂರ್ಯನ ಕಿರಣದ ಉರಿಯನ್ನು ಯುದ್ಧದಲ್ಲೆದುರಿಸುವುದು ಸುಲಭವಲ್ಲವೆಂದು ತಿಳಿದು ಮಂದೇಹರು ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ವರವನ್ನು ಪಡೆದಿಹರು.

ಅರ್ಥ:
ಪರಿಕಿಸು: ಗಮನಿಸು; ಪರಮಾತ್ಮ: ಭಗವಂತ; ದಿನಕರ: ಸೂರ್ಯ; ಹರಿ: ವಿಷ್ಣು; ಹರ: ಶಿವ; ವಿರಿಂಚಿ: ಬ್ರಹ್ಮ; ಸೂರ್ಯ: ರವಿ; ನೆರೆ: ಜೊತೆ; ಸುತಿ: ಶೃತಿ; ಕೈವಾರಿಸು:ಹೊಗಳು; ಘನ: ಶ್ರೇಷ್ಠ; ಮಹಾಮಹಿಮ: ಉತ್ತಮ, ಶ್ರೇಷ್ಠ; ಕಿರಣ: ಕಾಂತಿ, ಪ್ರಕಾಶ; ಉರಿ: ಜ್ವಾಲೆ; ಪ್ರತಾಪ: ಪರಾಕ್ರಮ; ಕಾದು: ಜಗಳವಾಡು;ಸರಸಿರುಹ: ಕಮಲ; ಸಂಭವ: ಹುಟ್ಟು; ಮೆಚ್ಚು: ಒಲುಮೆ, ಪ್ರೀತಿ, ಇಷ್ಟ; ವರ: ಅನುಗ್ರಹ; ಪಡೆ:ಹೊಂದು, ತಾಳು;

ಪದವಿಂಗಡಣೆ:
ಪರಿಕಿಸಲು+ ಪರಮಾತ್ಮ +ದಿನಕರ
ಹರಿ+ಹರ+ ವಿರಿಂಚಿಗಳು+ ಸೂರ್ಯನ
ನೆರೆದು +ಸುತಿ +ಕೈವಾರಿಸುತ್ತಿರೆ +ಘನ +ಮಹಾಮಹಿಮ
ಕಿರಣದ್+ಉರಿಯ +ಮಹಾ+ಪ್ರತಾಪನು
ತರಣಿಯೊಂದ್+ಆತನೊಳು +ಕಾದಲು
ಸರಸಿರುಹ ಸಂಭವನ +ಮೆಚ್ಚಿಸಿ +ವರವ +ಪಡೆದಿಹರು

ಅಚ್ಚರಿ:
(೧) ದಿನಕರ, ಸೂರ್ಯ, ತರಣಿ – ಸೂರ್ಯನನ್ನು ಕರೆದ ಬಗೆ
(೨) ಬ್ರಹ್ಮನನ್ನು ಸರಸಿರುಹಸಂಭವ ಎಂದು ಕರೆದಿರುವುದು

ಪದ್ಯ ೭೦: ಮಂದೇಹ ಅಸುರರು ಯಾರ ಬಳಿ ಕಾಳಗ ಮಾಡಲಿಚ್ಛಿಸಿದರು?

ಹರಿಹರ ವಿರಿಂಚಿಗಳು ಮೊದಲಾ
ದುರುವ ದೇವರುಗಳೊಳು ಮತ್ತಾ
ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ
ತರಣಿಯತಿ ಬಲವಂತನೆಂಬುದ
ನರಿದು ಮಂದೇಹಾಸುರರು ಸಾ
ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು (ಅರಣ್ಯ ಪರ್ವ, ೮ ಸಂಧಿ, ೭೦ ಪದ್ಯ)

ತಾತ್ಪರ್ಯ:
ಹರಿಹರ ಬ್ರಹ್ಮರು ಮತ್ತು ಹದಿನಾಲ್ಕು ಲೋಕದಲ್ಲಿರುವ ಎಲ್ಲಾ ದೇವತೆಗಳಲ್ಲಿ ಸೂರ್ಯನು ಅತಿ ಬಲಶಾಲಿಯೆಂಬುದನ್ನು ತಿಳಿದು ಮಂದೇಹರೆಂಬ ಅಸುರರು ಸೂರ್ಯನೊಡನೆ ಕಾಳಗ ಮಾಡಲು ಇಚ್ಛೆಪಟ್ಟರು.

ಅರ್ಥ:
ಹರಿ: ವಿಷ್ಣು; ಹರ: ಶಿವ; ವಿರಿಂಚಿ: ಬ್ರಹ್ಮ; ಉರು: ವಿಶೇಷವಾದ, ಶ್ರೇಷ್ಠವಾದ; ದೇವ: ಸುರರು; ಮತ್ತಾರು: ಉಳಿದವರು; ಜಗ: ಪ್ರಪಮ್ಚ; ತರಣಿ: ಸೂರ್ಯ; ಬಲವಂತ: ಶೂರ, ಪರಾಕ್ರಮಿ; ಅರಿ: ತಿಳಿ; ಅಸುರ: ರಾಕ್ಷಸ; ಸಾಸಿರ: ಸಾವಿರ; ಕರ: ಹಸ್ತ; ದಿನನಾಥ: ಸೂರ್ಯ; ಕಾಳಗ: ಯುದ್ಧ; ಬಯಸು: ಇಷ್ಟಪಡು;

ಪದವಿಂಗಡಣೆ:
ಹರಿ+ಹರ+ ವಿರಿಂಚಿಗಳು +ಮೊದಲಾದ್
ಉರುವ +ದೇವರುಗಳೊಳು +ಮತ್ತಾ
ತರವಿಡಿದ +ಹದಿನಾಲ್ಕು +ಜಗದೊಳಗುಳ್ಳ+ ದೇವರಲಿ
ತರಣಿ+ಅತಿ +ಬಲವಂತನ್+ಎಂಬುದನ್
ಅರಿದು+ ಮಂದೇಹಾಸುರರು+ ಸಾ
ಸಿರ +ಕರದ +ದಿನನಾಥನೊಳು +ಕಾಳಗವ +ಬಯಸಿಹರು

ಅಚ್ಚರಿ:
(೧) ದಿನನಾಥ, ತರಣಿ – ಸೂರ್ಯನನ್ನು ಕರೆದ ಪರಿ

ಪದ್ಯ ೬೯: ಮಂದೇಹರುಗಳೆಂಬುವರು ಯಾರು?

ವರಕುಮಾರಕ ನೀನು ಕೇಳೈ
ಪಿರಿಯಲೋಕಾಲೋಕವೆಂಬಾ
ಗಿರಿಯ ಬಳಸಿದ ಕಾಳಕತ್ತಲೆಯೊಳಗೆ ಮೆರೆದಿಪ್ಪ
ಧರೆಯೊಳರುಣದ್ವೀಪವದರೊಳು
ನೆರೆದ ಮಂದೇಹರುಗಳೆಂಬ
ಚ್ಚರಿಯದಲಿ ಸರಸಿರುಹ ಸಂಭವನಿಂದ ಜನಿಸಿದರು (ಅರಣ್ಯ ಪರ್ವ, ೮ ಸಂಧಿ, ೬೯ ಪದ್ಯ)

ತಾತ್ಪರ್ಯ:
ಎಲೈ ಶ್ರೇಷ್ಠನಾದ ಅರ್ಜುನನೇ ಕೇಳು, ದೊಡ್ಡದಾದ ಲೋಕಾಲೋಕವೆಂಬ ಗಿರಿಯತ್ತಣ ಕಾಳಕತ್ತಲೆಯಲ್ಲಿ ಅರುಣ ದ್ವೀಪವಿದೆ. ಅದರಲ್ಲಿ ಬ್ರಹ್ಮನಿಂದ ಜನಿಸಿದ ಮಂದೇಹರೆಂಬ ಆಶ್ಚರ್ಯಕರರಾದ ಅಸುರರಿದ್ದಾರೆ.

ಅರ್ಥ:
ವರ: ಶ್ರೇಷ್ಠ; ಕುಮಾರ: ಮಗ; ಕೇಳು: ಆಲಿಸು; ಪಿರಿಯ: ದೊಡ್ಡ; ಲೋಕ: ಜಗತ್ತು; ಗಿರಿ: ಬೆಟ್ಟ; ಬಳಸು: ಆವರಿಸು; ಕಾಳಕತ್ತಲೆ: ಅಂಧಕಾರ; ಮೆರೆ:ಹೊಳೆ, ಪ್ರಕಾಶಿಸು; ಧರೆ: ಭೂಮಿ; ಅರುಣ: ಕೆಂಪು; ದ್ವೀಪ: ನೀರಿನಿಂದ ಆವರಿಸಿದ ಭೂಮಿ; ನೆರೆದ: ಒಟ್ಟುಗೂಡು; ಅಚ್ಚರಿ: ಆಶ್ಚರ್ಯ; ಸರಸಿರುಹ: ಕಮಲ; ಸಂಭವ: ಹುಟ್ಟು; ಜನಿಸು: ಹುಟ್ಟು; ಸರಸಿರುಹಸಂಭವ: ಬ್ರಹ್ಮ;

ಪದವಿಂಗಡಣೆ:
ವರ+ಕುಮಾರಕ +ನೀನು +ಕೇಳೈ
ಪಿರಿಯ+ಲೋಕಾಲೋಕವೆಂಬಾ
ಗಿರಿಯ +ಬಳಸಿದ+ ಕಾಳಕತ್ತಲೆಯೊಳಗೆ +ಮೆರೆದಿಪ್ಪ
ಧರೆಯೊಳ್+ಅರುಣ+ದ್ವೀಪವ್+ಅದರೊಳು
ನೆರೆದ+ ಮಂದೇಹರುಗಳೆಂಬ್
ಅಚ್ಚರಿಯದಲಿ +ಸರಸಿರುಹ ಸಂಭವನಿಂದ +ಜನಿಸಿದರು

ಅಚ್ಚರಿ:
(೧) ಅರುಣ ದ್ವೀಪ, ಲೋಕಾಲೋಕ ಗಿರಿ – ಸ್ಥಳಗಳ ವಿವರ
(೨) ಬ್ರಹ್ಮನನ್ನು ಸರಸಿರುಹಸಂಭವ ಎಂದು ಕರೆದಿರುವುದು