ಪದ್ಯ ೫೮: ಮಾನಸಗಿರಿಯ ಮೇಲೆ ಯಾರು ನೆಲೆಸಿದ್ದಾರೆ?

ವರುಷವೆರಡಾಗೊಪ್ಪುತಿಹ ಪು
ಷ್ಕರದ ನಡುವಣ ಮಾನಸೋತ್ತರ
ಗಿರಿಯುದಯವೈವತ್ತು ಸಾವಿರ ಹರವು ತದ್ವಿಗುಣ
ಪಿರಿದು ಪುಣ್ಯ ಶ್ಲೋಕ ಕೇಳಾ
ಗಿರಿಯ ಶಿಖರದ ಮೇಲೆ ದಿಗ್ದೇ
ವರ ಪುರಂಗಳು ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು (ಅರಣ್ಯ ಪರ್ವ, ೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಪುಷ್ಕರದಲ್ಲಿ ಎರಡು ವರ್ಷಗಳಿವೆ. ಅದರ ನಡುವಿರುವ ಉತ್ತರ ಮಾನಸಗಿರಿಯ ಕೆಳಗೆ ಐವತ್ತು ಸಾವಿರ ಯೋಜನ ವಿಸ್ತಾರ, ಅದು ಒಂದು ಲಕ್ಷ ವಿಸ್ತಾರವಾಗಿ ಹರಡಿದೆ. ಆ ಗಿರಿಯ ಶಿಖರಗಳ ಮೇಲೆ ದಿಕ್ಪಾಲಕರ ಪುರಗಳಿವೆ.

ಅರ್ಥ:
ವರ್ಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಪುಷ್ಕರ: ತಾವರೆ; ನಡುವೆ: ಮಧ್ಯ; ಗಿರಿ: ಬೆಟ್ಟ; ಉದಯ: ಮೇಲೆ; ಹರವು: ವಿಸ್ತಾರ; ದ್ವಿಗುಣ: ಎರಡು ಪಟ್ಟು; ಪಿರಿ: ದೊಡ್ಡ; ಪುಣ್ಯ: ಸದಾಚಾರ; ಗಿರಿ: ಬೆಟ್ಟ; ಶಿಖರ: ತುದಿ; ದಿಕ್ಕು: ದಿಹ್ಸೆ; ದೇವರು: ಸುರರು; ಪುರ: ಊರು; ಸಿರಿ: ಐಶ್ವರ್ಯ; ನೆಲೆ: ವಾಸಸ್ಥಾನ; ಮೆರೆ: ಶೋಭಿಸು;

ಪದವಿಂಗಡಣೆ:
ವರುಷವ್+ಎರಡಾಗ್+ಒಪ್ಪುತಿಹ +ಪು
ಷ್ಕರದ+ ನಡುವಣ +ಮಾನಸೋತ್ತರ
ಗಿರಿ+ಉದಯವ್+ಐವತ್ತು+ ಸಾವಿರ+ ಹರವು +ತದ್ವಿಗುಣ
ಪಿರಿದು +ಪುಣ್ಯ +ಶ್ಲೋಕ +ಕೇಳ್+ಆ
ಗಿರಿಯ+ ಶಿಖರದ+ ಮೇಲೆ +ದಿಗ್
ದೇವರ +ಪುರಂಗಳು +ಸಿರಿಗೆ+ ನೆಲೆವನೆಯೆನಿಸಿ +ಮೆರೆದಿಹವು

ಪದ್ಯ ೫೭: ಜಂಬೂದ್ವೀಪದಲ್ಲಿ ಎಷ್ಟು ವರುಷಗಳಿವೆ?

ವರುಷವೊಂಬತ್ತಾಗಿಹುದು ವಿ
ಸ್ತರದ ಜಂಬೂದ್ವೀಪವೊಂದೇ
ವರುಷವೇಳಾಗಿಹವು ತಾ ಶತ ಸಂಖ್ಯೆಯಾದ್ವೀಪ
ನಿರುತಕಡೆಯದ್ವೀಪವೆಂಬುದು
ವರುಷವೆರಡಾಗಿರಲು ಮಾನಸ
ಗಿರಿಯದರ ನಡುವಿಹುದು ಚಕ್ರದ ಕಂಬಿಯಂದದಲಿ (ಅರಣ್ಯ ಪರ್ವ, ೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಜಂಬೂದ್ವೀಪದಲ್ಲಿ ಒಂಬತ್ತು ವರ್ಷಗಳಿವೆ. ಉಳಿದವುಗಳಲ್ಲಿ ಹಲವು ದ್ವೀಪಗಳಿವೆ. ಕಡೆಯ ದ್ವೀಪದಲ್ಲಿ ಎರಡು ವರ್ಷಗಳಿವೆ. ಅಲ್ಲಿ ಚಕ್ರದ ಕಂಬಿಯಂತೆ ಮಾನಸಗಿರಿಯಿದೆ.

ಅರ್ಥ:
ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ವಿಸ್ತರ: ವಿಸ್ತಾರ, ಅಗಲ; ದ್ವೀಪ: ನೀರಿನಿಂದ ಆವರಿಸಿಕೊಂಡಿರುವ ಭೂಭಾಗ; ನಿರುತ: ನಿಶ್ಚಯ; ಗಿರಿ: ಬೆಟ್ಟ; ನಡು: ಮಧ್ಯ; ಚಕ್ರ: ಗಾಲಿ; ಕಂಬಿ: ಉಕ್ಕಿನ ಸಲಾಕಿ;

ಪದವಿಂಗಡಣೆ:
ವರುಷವ್+ಒಂಬತ್ತಾಗಿಹುದು +ವಿ
ಸ್ತರದ +ಜಂಬೂ+ದ್ವೀಪವ್+ಒಂದೇ
ವರುಷವ್+ಏಳಾಗಿಹವು +ತಾ +ಶತ+ ಸಂಖ್ಯೆಯಾ+ದ್ವೀಪ
ನಿರುತಕಡೆಯ+ ದ್ವೀಪವೆಂಬುದು
ವರುಷವ್+ಎರಡಾಗಿರಲು +ಮಾನಸ
ಗಿರಿ+ಅದರ +ನಡುವಿಹುದು +ಚಕ್ರದ +ಕಂಬಿಯಂದದಲಿ

ಪದ್ಯ ೫೬: ಭೂಮಿಯ ವಿಸ್ತಾರವೆಷ್ಟು?

ಹತ್ತು ಲಕ್ಕವು ಹೀನವಾಗಿ
ಪ್ಪತ್ತು ಕೋಟಿ ತಮಂಧದುರ್ವರೆ
ಸುತ್ತುವರೆ ಬೆಳೆದಿಹುದು ಗರ್ಭೋದಕದ ಪರ್ಯಂತ
ಇತ್ತಸುರಗಿರಿಯಿಂದ ಹಿಂದಿ
ಪ್ಪತ್ತು ಕೋಟಿಯ ಕೂಡಿನೋಡೆ ಧ
ರಿತ್ರಿ ತಾನೈವತ್ತು ಕೋಟಿಯ ಲೆಕ್ಕ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೫೬ ಪದ್ಯ)

ತಾತ್ಪರ್ಯ:
ಹತ್ತೊಂಬತ್ತು ಕೋಟಿ ತೊಂಬತ್ತು ಲಕ್ಷ ಯೋಜನ ವಿಸ್ತಾರವಾಗಿ ಲೋಕಾಲೋಕ ಪರ್ವತದತ್ತ ಹಬ್ಬಿದೆ. ಮೇರು ಪರ್ವತದ ಹಿಂದಿರುವ ಇಪ್ಪತ್ತು ಕೋಟಿಯನ್ನು ಕೂಡಿದರೆ ಭೂಮಿಯ ವಿಸ್ತಾರ ಐವತ್ತು ಕೋಟಿ ಯೋಜನೆ.

ಅರ್ಥ:
ಹತ್ತು: ದಶ; ಹೀನ: ಕಳೆ, ಕಡಿಮೆಯಾಗು; ತಮಂಧ: ಅಂಧಕಾರ; ಬೆಳೆ: ವಿಸ್ತರಿಸು, ಹೆಚ್ಚಾಗು; ಉದಕ: ನೀರು; ಸುರಗಿರಿ: ಮೇರು ಪರ್ವತ; ಗಿರಿ: ಬೆಟ್ಟ; ಸುರ: ದೇವತೆ; ಹಿಂದೆ: ಹಿಂಭಾಗ; ಕೂಡು: ಸೇರಿಸು; ಧರಿತ್ರಿ: ಭೂಮಿ; ಲೆಕ್ಕ: ಎಣಿಕೆ;

ಪದವಿಂಗಡಣೆ:
ಹತ್ತು +ಲಕ್ಕವು +ಹೀನವಾಗ್
ಇಪ್ಪತ್ತು +ಕೋಟಿ +ತಮಂಧದುರ್ವರೆ
ಸುತ್ತುವರೆ+ ಬೆಳೆದಿಹುದು +ಗರ್ಭೋದಕದ +ಪರ್ಯಂತ
ಇತ್ತ+ಸುರಗಿರಿಯಿಂದ +ಹಿಂದ್
ಇಪ್ಪತ್ತು +ಕೋಟಿಯ +ಕೂಡಿನೋಡೆ +ಧ
ರಿತ್ರಿ +ತಾನೈವತ್ತು +ಕೋಟಿಯ +ಲೆಕ್ಕ +ನೋಡೆಂದ

ಅಚ್ಚರಿ:
(೧) ಭೂಮಿಯ ವಿಸ್ತಾರವನ್ನು ೫೦ ಕೋಟಿ ಯೋಜನೆ ಎಂದು ಹೇಳಿರುವುದು

ಪದ್ಯ ೫೫: ಮಿಕ್ಕ ಸಮುದ್ರಗಳ ವಿಸ್ತಾರವೆಷ್ಟು?

ಲಕ್ಕ ತಾನರವತ್ತು ನಾಲ್ಕಾ
ಗಿಕ್ಕು ಶಾಕ ಕ್ಷೀರ ಕೋಟಿಯ
ಲಕ್ಕ ವಿಪ್ಪತ್ತೆಂಟು ಪುಷ್ಕರ ಸುಜಲವೊಂದಾಗಿ
ಮಿಕ್ಕ ಕೋಟಿದ್ವಯದ ಮೇಲಣ
ಲಕ್ಕವೈವತ್ತಾರು ಯೋಜನ
ವಕ್ಕು ಹೇಮದ ಭೂಮಿ ಲೋಕಾಲೋಕಗಿರಿ ಸಹಿತ (ಅರಣ್ಯ ಪರ್ವ, ೮ ಸಂಧಿ, ೫೫ ಪದ್ಯ)

ತಾತ್ಪರ್ಯ:
ಶಕದ್ವೀಪ ಕ್ಷೀರಾಬ್ಧಿಗಳು ಅರವತ್ತು ನಾಲ್ಕು ಲಕ್ಷ, ಪುಷ್ಕರ ಸಿಹಿ ನೀರು ಸಮುದ್ರಗಳ್ ಒಂದು ಕೋಟಿ ಇಪ್ಪತ್ತೆಂಟು ಲಕ್ಷ, ಲೋಕಾಲೋಕಗಿರಿಯನ್ನು ಸೇರಿಸಿ ಚಿನ್ನದಂತಹ ಭೂಮಿಯು ಎರಡು ಕೋಟಿ ಐವತ್ತಾರು ಲಕ್ಷ ಯೋಜನ ವಿಸ್ತಾರ.

ಅರ್ಥ:
ಲಕ್ಕ: ಲಕ್ಷ; ಕ್ಷೀರ: ಹಾಲು; ಪುಷ್ಕರ: ಕಮಲ; ಸುಜಲ: ನಿರ್ಮಲವಾದ ನೀರು; ದ್ವಯ: ಎರಡು; ಹೇಮ: ಚಿನ್ನ; ಭೂಮಿ: ಧರಿಣಿ; ಸಹಿತ: ಜೊತೆ;

ಪದವಿಂಗಡಣೆ:
ಲಕ್ಕ +ತಾನರವತ್ತು+ ನಾಲ್ಕಾ
ಗಿಕ್ಕು +ಶಾಕ +ಕ್ಷೀರ +ಕೋಟಿಯ
ಲಕ್ಕ +ವಿಪ್ಪತ್ತೆಂಟು +ಪುಷ್ಕರ+ ಸುಜಲವೊಂದಾಗಿ
ಮಿಕ್ಕ+ ಕೋಟಿ+ದ್ವಯದ +ಮೇಲಣ
ಲಕ್ಕವ್+ಐವತ್ತಾರು +ಯೋಜನ
ವಕ್ಕು +ಹೇಮದ +ಭೂಮಿ +ಲೋಕಾಲೋಕಗಿರಿ+ ಸಹಿತ

ಅಚ್ಚರಿ:
(೧) ೬೪, ೧೨೮, ೨೫೬ – ಸಂಖ್ಯೆಗಳ ಬಳಕೆ

ಪದ್ಯ ೫೪: ಸಮುದ್ರಗಳ ವಿಸ್ತಾರವೆಷ್ಟು?

ಲಕ್ಕ ಜಂಬೂದ್ವೀಪವಾಪರಿ
ಲಕ್ಕ ಲವಣ ಸಮುದ್ರ ನಾಲಕು
ಲಕ್ಕ ದ್ವೀಪ ಪ್ಲಕ್ಷ ವಿಕ್ಷು ಸಮುದ್ರವೊಂದಾಗಿ
ಲಕ್ಕವೆಂಟುಸುಶಾಲ್ಮಲಿಯು ಸುರೆ
ಲಕ್ಕ ಷೋಡಶ ಕುಶಘೃತಂಗಳು
ಲಕ್ಕಮೂವತ್ತೆರಡು ಕ್ರೌಂಚದ್ವೀಪ ದಧಿಗೂಡಿ (ಅರಣ್ಯ ಪರ್ವ, ೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ಜಂಬೂದ್ವೀಪ ಲವಣ ಸಮುದ್ರಗಳು ಒಂದೊಂದು ಲಕ್ಷ ಯೋಜನ ವಿಸ್ತಾರ. ಪ್ಲಕ್ಷ ಇಕ್ಷು ಸಮುದ್ರಗಳು ನಾಲ್ಕು ಲಕ್ಷ. ಶಾಲ್ಮಲಿದ್ವೀಪ ಸುರಾಸಮುದ್ರಗಳು ಎಂತು ಲಕ್ಷ, ಕುಶದ್ವೀಪ ಘೃತ ಸಮುದ್ರಗಳು ಹದಿನಾರು ಲಕ್ಷ, ಕ್ರೌಂಚದ್ವೀಪ ದಧಿಸಮುದ್ರಗಳು ಮುವತ್ತೆರಡು ಲಕ್ಷ.

ಅರ್ಥ:
ಲಕ್ಕ: ಲಕ್ಷ; ದ್ವೀಪ: ನೀರಿನಿಂದ ಆವರಿಸಿಕೊಂಡಿರುವ ಭೂಭಾಗ; ಲವಣ: ಉಪ್ಪು; ಸಮುದ್ರ: ಸಾಗರ; ಷೋಡಶ: ಹದಿನಾರು; ಘೃತ: ತುಪ್ಪ; ದಧಿ: ಮೊಸರು;

ಪದವಿಂಗಡಣೆ:
ಲಕ್ಕ +ಜಂಬೂ+ದ್ವೀಪವ್+ಆ+ಪರಿ
ಲಕ್ಕ +ಲವಣ+ ಸಮುದ್ರ +ನಾಲಕು
ಲಕ್ಕ+ ದ್ವೀಪ +ಪ್ಲಕ್ಷವ್+ಇಕ್ಷು+ ಸಮುದ್ರವೊಂದಾಗಿ
ಲಕ್ಕವ್+ಎಂಟು+ಸುಶಾಲ್ಮಲಿಯು +ಸುರೆ
ಲಕ್ಕ +ಷೋಡಶ +ಕುಶ+ಘೃತಂಗಳು
ಲಕ್ಕ+ಮೂವತ್ತೆರಡು +ಕ್ರೌಂಚ+ದ್ವೀಪ +ದಧಿಗೂಡಿ

ಅಚ್ಚರಿ:
(೧) ಲಕ್ಕ – ೬ ಸಾಲಿನ ಮೊದಲ ಪದ
(೨) ೧, ೨, ೪, ೮, ೧೬, ೩೨ – ಸಂಖ್ಯೆಗಳ ಬಳಕೆ