ಪದ್ಯ ೫೩: ಕ್ಷೀರಸಾಗರವನ್ನು ಯಾವ ದ್ವೀಪವು ಸುತ್ತುವರೆದಿದೆ?

ನಳಿನನಾಭನ ದುಗ್ಧಶರಧಿಯ
ಬಳಸಿಕೊಂಡಿಹ ಪುಷ್ಕರದ ಹೊರ
ವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಶಿ
ಇಳೆಗೆ ಕೋಟೆಯ ನಿಕ್ಕಿದಂತಿರೆ
ಬೆಳೆದ ಲೋಕಾಲೋಕ ಪರ್ವತ
ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರ್ಯಂತ (ಅರಣ್ಯ ಪರ್ವ, ೮ ಸಂಧಿ, ೫೩ ಪದ್ಯ)

ತಾತ್ಪರ್ಯ:
ಕ್ಷೀರಸಾಗರವನ್ನು ಸುತ್ತುವರಿದಿರವ ಪುಷ್ಕರ ದ್ವೀಪದ ಹೊರಗೆ ಸಿಹಿನೀರಿನ ಸಮುದ್ರವಿದೆ. ಅದರಾಚೆ ಭೂಲೋಕದ ಕೋಟೆಯೋ ಎಂಬಂತೆ ಲೋಕಾಲೋಕ ಪರ್ವತವಿದೆ. ಅಲ್ಲಿಂದ ಬ್ರಹ್ಮಾಂಡದ ಕೊನೆಯವರೆಗೂ ಅಂಧಕಾರವಿದೆ.

ಅರ್ಥ:
ನಳಿನ: ತಾವರೆ; ನಳಿನನಾಭ: ವಿಷ್ಣು; ದುಗ್ಧ: ಹಾಲು, ಕ್ಷೀರ; ಶರಧಿ: ಸಮುದ್ರ; ಬಳಸು: ಆವರಿಸು; ಪುಷ್ಕರ: ತಾವರೆ, ಕಮಲ; ಹೊರವಳಯ: ಆಚೆ; ಮೆರೆ: ಶೋಭಿಸು; ವಾರಾಶಿ: ಸಮುದ್ರ; ಇಳೆ: ಭೂಮಿ; ಕೋಟೆ: ದುರ್ಗ; ಬೆಳೆ: ವೃದ್ಧಿಸು; ಪರ್ವತ: ಗಿರಿ; ತಿಮಿರ: ಅಂಧಕಾರ; ಪರ್ಯಂತ: ವರೆಗೂ; ಸ್ವಾದ: ಸವಿ, ರುಚಿ; ಉದ: ನೀರು;

ಪದವಿಂಗಡಣೆ:
ನಳಿನನಾಭನ +ದುಗ್ಧ+ಶರಧಿಯ
ಬಳಸಿಕೊಂಡಿಹ +ಪುಷ್ಕರದ +ಹೊರ
ವಳಯದಲಿ +ಮೆರೆದಿಪ್ಪುದಾ+ ಸ್ವಾದೋದ +ವಾರಾಶಿ
ಇಳೆಗೆ ಕೋಟೆಯ ನಿಕ್ಕಿದಂತಿರೆ
ಬೆಳೆದ ಲೋಕಾಲೋಕ ಪರ್ವತ
ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರ್ಯಂತ

ಅಚ್ಚರಿ:
(೧) ವಾರಾಶಿ, ಶರಧಿ – ಸಮನಾರ್ಥಕ ಪದ

ಪದ್ಯ ೫೨: ಯಾವ ನಗರವನ್ನು ನೋಡಲು ಪಾರ್ಥನಿಗೆ ಮಾತಲಿ ಹೇಳಿದನು?

ಯೋಗಿಗಳ ನೆಲೆನೀಡು ಬೊಮ್ಮದ
ಸಾಗರವು ಸನಕಾದಿ ಮುನಿಗಳ
ಭೋಗ ಭೂಮಿಯನಂತವೆನಿಸಿರ್ದುಪನಿಷತ್ತುಗಳು
ಆಗರವು ಮೂಲೋಕದರ್ಪಣ
ವಾಗಿ ದುಗ್ಧೋದಧಿಯೊಳೆಸೆವುದು
ಶ್ರೀಗಧೀಶನ ನಗರ ನೋಡೆಲೆ ಪಾರ್ಥ ನೀನೆಂದ (ಅರಣ್ಯ ಪರ್ವ, ೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕ್ಷೀರಸಾಗರದಲ್ಲಿರುವ ಶ್ರೀನಗರವು ಯೋಗಿಗಳು ನೆಲೆಸುವ ಸ್ಥಾನ, ಬ್ರಹ್ಮಸಾಗರವು ಸನಕಾದಿಗಳು ಭೋಗಿಸುವ ಆತ್ಮಾನಂದ ಭೂಮಿ, ಅನಂತ ಉಪನಿಷತ್ತುಗಳ ಉಗಮಸ್ಥಾನ, ಮೂರು ಲೋಕಗಳ ಕನ್ನಡಿಯಂತಿರುವ ಶ್ರೀನಗರವನ್ನು ಪಾರ್ಥ ನೋಡು ಎಂದು ಮಾತಲಿಯು ಹೇಳಿದನು.

ಅರ್ಥ:
ಯೋಗಿ: ಋಷಿ; ನೆಲೆ: ಸ್ಥಾನ; ಬೊಮ್ಮ: ಬ್ರಹ್ಮ; ಸಾಗರ: ಸಮುದ್ರ; ಮುನಿ: ಋಷಿ; ಭೋಗ: ಸುಖವನ್ನು ಅನುಭವಿಸುವುದು; ಭೂಮಿ: ಧರಿತ್ರಿ; ಅನಂತ: ವಿಷ್ಣು, ಕೊನೆಯಿಲ್ಲದ್ದು; ಉಪನಿಷತ್ತು: ವೇದದ ಕೊನೆಯ ಭಾಗ; ಆಗರ: ಆಶ್ರಯ; ಮುಲೋಕ: ತ್ರಿಜಗತ್ತು; ದರ್ಪಣ: ಕನ್ನಡಿ, ಮುಕುರ; ದುಗ್ಧೋದಧಿ: ಕ್ಷೀರಸಾಗರ; ಎಸೆ: ತೋರು; ಶ್ರೀ: ಲಕ್ಷ್ಮೀ, ಐಶ್ವರ್ಯ; ಈಶ:ಒಡೆಯ; ನಗರ: ಪುರ; ನೋಡು: ವೀಕ್ಷಿಸು;

ಪದವಿಂಗಡಣೆ:
ಯೋಗಿಗಳ +ನೆಲೆನೀಡು +ಬೊಮ್ಮದ
ಸಾಗರವು +ಸನಕಾದಿ +ಮುನಿಗಳ
ಭೋಗ+ ಭೂಮಿ+ಅನಂತವ್+ ಎನಿಸಿರ್ದ್+ಉಪನಿಷತ್ತುಗಳು
ಆಗರವು +ಮೂಲೋಕ+ದರ್ಪಣ
ವಾಗಿ+ ದುಗ್ಧೋದಧಿಯೊಳ್+ಎಸೆವುದು
ಶ್ರೀಗಧೀಶನ+ ನಗರ+ ನೋಡೆಲೆ+ ಪಾರ್ಥ +ನೀನೆಂದ

ಅಚ್ಚರಿ:
(೧) ಶ್ರೀನಗರದ ಹಿರಿಮೆ – ಯೋಗಿಗಳ ನೆಲೆನೀಡು, ಬೊಮ್ಮದ ಸಾಗರವು, ಸನಕಾದಿ ಮುನಿಗಳ
ಭೋಗ ಭೂಮಿ, ಮೂಲೋಕದರ್ಪಣ

ಪದ್ಯ ೫೧: ಕ್ಷೀರಸಾಗರದ ವೈಶಿಷ್ಟ್ಯತೆಗಳೇನು?

ಚೆಲುವಿಕೆಗೆ ನೆಲೆಯೆನಿಸಿ ಮೆರೆವುದು
ಪ್ರಳಯವೆಂದೂಯಿಲ್ಲ ಲಕ್ಷ್ಮೀ
ನಿಲಯನಿಹನನವರತ ಸುಳಿಯವು ಮೃತ್ಯುಮಾಯೆಗಳು
ಬಳಕೆ ಸಲ್ಲದು ಕಲಿಯ ಕಾಲದ
ಹೊಲಬು ಹೊದ್ದದು ಹರಿಯ ರೂಪನು
ತಳೆದ ಪುರವನು ಕ್ಷೀರವಾರಿಧಿ ಬಳಸಿಕೊಂಡಿಹುದು (ಅರಣ್ಯ ಪರ್ವ, ೮ ಸಂಧಿ, ೫೧ ಪದ್ಯ)

ತಾತ್ಪರ್ಯ:
ವಿಷ್ಣುವಿನ ನಿಲಯವಾದ ಕ್ಷೀರಸಾಗರವು ಸೌಂದರ್ಯದ ನೆಲೆಯಾಗಿದೆ. ಅಲ್ಲಿ ಪ್ರಳಯವೆನ್ನುವುದು ಇಲ್ಲ. ಲಕ್ಷ್ಮೀರಮಣನು ಸದಾ ಇರುವುದರಿಂದ ಮೃತ್ಯುಮಾಯೆಗಳು ಅಲ್ಲಿ ಸುಳಿಯುವುದಿಲ್ಲ. ಕಲಿಯು ಅಲ್ಲಿಗೆ ಬರುವುದಿಲ್ಲ. ಕಾಲದ ದಾರಿ ಅದರ ಹತ್ತಿರಕ್ಕೂ ಬರುವುದಿಲ್ಲ. ಶ್ರೀಮನ್ಮಹಾವಿಷ್ಣುವಿರುವ ಅದನ್ನು ಕ್ಷೀರಸಾಗರವು ಆವರಿಸಿದೆ.

ಅರ್ಥ:
ಚೆಲುವು: ಸುಂದರ; ನೆಲೆ: ಆಲಯ, ಸ್ಥಾನ; ಮೆರೆ: ಶೋಭಿಸು; ಪ್ರಳಯ: ನಾಶ; ಲಕ್ಷ್ಮೀ; ಶ್ರೀ, ಐಶ್ವರ್ಯ; ನಿಳಯ: ಆಲಯ; ಅನವರತ: ಯಾವಾಗಲು; ಸುಳಿ: ಸೇರು; ಮೃತ್ಯು: ಸಾವು; ಮಾಯ: ಗಾರುಡಿ, ಇಂದ್ರಜಾಲ; ಬಳಕೆ: ಉಪಯೋಗಿಸುವಿಕೆ; ಸಲ್ಲದು: ಸರಿಹೊಂದದು; ಕಲಿ: ಯುಗದ ಹೆಸರು; ಕಾಲ: ಸಮಯ; ಹೊಲಬು: ದಾರಿ, ಪಥ; ಹೊದ್ದು: ಹೊಂದು, ಸೇರು; ಹರಿ: ವಿಷ್ಣು; ರೂಪ: ಆಕಾರ; ತಳೆದು: ಹೊಂದು; ಪುರ: ಊರು; ವಾರಿಧಿ: ಸಾಗರ; ಬಳಸು: ಆವರಿಸು;

ಪದವಿಂಗಡಣೆ:
ಚೆಲುವಿಕೆಗೆ +ನೆಲೆಯೆನಿಸಿ +ಮೆರೆವುದು
ಪ್ರಳಯವೆಂದೂಯಿಲ್ಲ+ ಲಕ್ಷ್ಮೀ
ನಿಲಯನಿಹನ್+ಅನವರತ +ಸುಳಿಯವು +ಮೃತ್ಯು+ಮಾಯೆಗಳು
ಬಳಕೆ+ ಸಲ್ಲದು +ಕಲಿಯ +ಕಾಲದ
ಹೊಲಬು +ಹೊದ್ದದು+ ಹರಿಯ+ ರೂಪನು
ತಳೆದ+ ಪುರವನು +ಕ್ಷೀರ+ವಾರಿಧಿ +ಬಳಸಿಕೊಂಡಿಹುದು

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಲಬು ಹೊದ್ದದು ಹರಿಯ
(೨) ವಿಷ್ಣುವಿನ ಆಲಯದ ಹಿರಿಮೆ – ಬಳಕೆ ಸಲ್ಲದು ಕಲಿಯ ಕಾಲದ ಹೊಲಬು ಹೊದ್ದದು ಹರಿಯ ರೂಪನು ತಳೆದ ಪುರವನು ಕ್ಷೀರವರಿಧಿ ಬಳಸಿಕೊಂಡಿಹುದು

ಪದ್ಯ ೫೦: ವಿಷ್ಣುವಿನ ನಿಲಯ ಯಾವುದು?

ತಿಳಿವೊಡಾ ಸುರೆಯಿಂದ ಕುಶಘೃತ
ಜಲಧಿ ಕ್ರೌಂಚ ದ್ವೀಪವೆಂಬಿವ
ರಳತೆಗಿಮ್ಮಡಿಯಾಗಿ ದಧಿಯ ಸಮುದ್ರವಲ್ಲಿಂದ
ಇಳೆಯ ಮೇಲೆಸೆದಿಪ್ಪ ಶಾಕದ
ಬಳಿಯ ದುಗ್ಧವಿದೊಂದನೊಂದನು
ಬಳಸಿಕೊಂಡಿಹವಬುಜನಾಭನ ನಿಳಯವದು ನೋಡು (ಅರಣ್ಯ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸುರಾಸಮುದ್ರದಿಮ್ದ ಆಚೆ ಕುಶದ್ವೀಪ, ಅದನ್ನು ಘೃತ ಸಮುದ್ರವು ಬಳಸಿದೆ. ಅಲ್ಲಿಂದ ಮುಂದೆ ಕ್ರೌಂಚದ್ವೀಪ, ಅದನ್ನು ಮೊಸರಿನ ಸಮುದ್ರವು ಬಳಸಿದೆ. ಅಲ್ಲಿಂದ ಮುಂದೆ ಶಾಕದ್ವೀಪ, ಅದನ್ನು ಕ್ಷೀರ ಸಮುದ್ರವು ಬಳಸಿದೆ. ಆ ಕ್ಷೀರ ಸಮುದ್ರವು ವಿಷ್ಣುವಿನ ಆಲಯ, ಅದನ್ನು ಗಮನಿಸು ಎಂದು ಮಾತಲಿಯು ವಿವರಿಸಿದನು.

ಅರ್ಥ:
ತಿಳಿ: ಗ್ರಹಿಸು, ಕಲಿ; ಸುರೆ: ಸೋಮರಸ; ಘೃತ: ತುಪ್ಪ; ಜಲಧಿ: ಸಾಗರ; ಅಳತೆ: ವಿಸ್ತಾರ; ಇಮ್ಮಡಿ:ಎರಡು ಪಟ್ಟು; ದಧಿ: ಮೊಸರು; ಸಮುದ್ರ: ಸಾಗರ; ಇಳೆ: ಭೂಮಿ; ಎಸೆ: ತೋರು; ಬಳಿ: ಹತ್ತಿರ; ದುಗ್ಧ: ಹಾಲು; ಬಳಸು: ಆವರಿಸು; ಅಬುಜನಾಭ: ಕಮಲನಾಭ (ವಿಷ್ಣು); ನಿಳಯ: ಮನೆ; ನೋಡು: ವೀಕ್ಷಿಸು;

ಪದವಿಂಗಡಣೆ:
ತಿಳಿವೊಡ್+ಆ+ ಸುರೆಯಿಂದ +ಕುಶ+ಘೃತ
ಜಲಧಿ+ ಕ್ರೌಂಚ +ದ್ವೀಪವೆಂಬ್+ಇವರ್
ಅಳತೆಗ್+ಇಮ್ಮಡಿಯಾಗಿ +ದಧಿಯ+ ಸಮುದ್ರವ್+ಅಲ್ಲಿಂದ
ಇಳೆಯ +ಮೇಲೆಸೆದಿಪ್ಪ+ ಶಾಕದ
ಬಳಿಯ +ದುಗ್ಧವಿದ್+ಒಂದನೊಂದನು
ಬಳಸಿಕೊಂಡಿಹವ್+ಅಬುಜನಾಭನ+ ನಿಳಯವದು+ ನೋಡು

ಅಚ್ಚರಿ:
(೧) ದ್ವೀಪಗಳ ಹೆಸರು – ಕುಶ, ಕ್ರೌಂಚ, ಶಾಕ
(೨) ಸಾಗರಗಳ ಹೆಸರು – ಘೃತಸಾಗರ, ಸುರಾಸಮುದ್ರ, ದಧಿಯ ಸಾಗರ, ದುಗ್ಧಸಾಗರ

ಪದ್ಯ ೪೯: ಶಾಲ್ಮಲೀ ಮತ್ತು ಪ್ಲಕ್ಷದ್ವೀಪಗಳು ಎಲ್ಲಿವೆ?

ವರುಷವನು ಗಿರಿಗಳನು ಬಳಸಿಹ
ಪಿರಿಯ ಲವಣ ಸಮುದ್ರ ತದನಂ
ತರದಿ ಪ್ಲಕ್ಷದ್ವೀಪ ಇಕ್ಷ್ ಸಮುದ್ರವಲ್ಲಿಂದ
ಇರಲು ಶಾಲ್ಮಲವದರ ಹೊರಗಣ
ಸುರೆಯ ಶರಧಿಯನೊಂದೊನೊಂದಾ
ವರಸಿ ಪರಿಭಾವಿಸಲು ತದಿವ್ಗುನಂಗಳಾಗಿಹವು (ಅರಣ್ಯ ಪರ್ವ, ೮ ಸಂಧಿ, ೪೯ ಪದ್ಯ)

ತಾತ್ಪರ್ಯ:
ಈ ಮೊದಲು ಹೇಳಿದ ವರ್ಷಗಳನ್ನು ಬೆಟ್ಟಗಳನ್ನು ಲವಣ ಸಮುದ್ರವು ಸುತ್ತುವರೆದಿದೆ. ಅಲ್ಲಿಂದ ಮುಂದೆ ಪ್ಲಕ್ಷದ್ವೀಪ, ಅದನ್ನು ಕಬ್ಬಿನ ಹಾಲಿನ ಸಮುದ್ರವು ಸುತ್ತುವರೆದಿದೆ, ಅಲ್ಲಿಂದ ಮುಂದೆ ಶಾಲ್ಮಲೀ ದ್ವೀಪ ಅದನ್ನು ಸುರೆಯ ಸಮುದ್ರವು ಸುತ್ತುವರೆದಿದೆ, ಇವು ಒಂದಕ್ಕೊಂದು ಎರಡರಷ್ಟಿವೆ.

ಅರ್ಥ:
ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಗಿರಿ: ಬೆಟ್ಟ; ಬಳಸು: ಆವರಿಸು; ಪಿರಿ: ದೊಡ್ಡ; ಲವಣ: ಉಪ್ಪು; ಸಮುದ್ರ: ಸಾಗರ; ನಂತರ: ಆಮೇಲೆ; ಇಕ್ಷು: ಕಬ್ಬು; ಆವರಿಸು: ಸುತ್ತುವರಿ; ಭಾವಿಸು: ತಿಳಿ; ದ್ವಿಗುಣ: ಎರಡು ಪಟ್ಟು;

ಪದವಿಂಗಡಣೆ:
ವರುಷವನು +ಗಿರಿಗಳನು+ ಬಳಸಿಹ
ಪಿರಿಯ +ಲವಣ +ಸಮುದ್ರ +ತದನಂ
ತರದಿ+ ಪ್ಲಕ್ಷದ್ವೀಪ+ ಇಕ್ಷು+ ಸಮುದ್ರವ್+ಅಲ್ಲಿಂದ
ಇರಲು +ಶಾಲ್ಮಲವ್+ಅದರ +ಹೊರಗಣ
ಸುರೆಯ +ಶರಧಿಯನ್+ಒಂದೊನ್+ಒಂದ್
ಆವರಸಿ+ ಪರಿಭಾವಿಸಲು +ತದ್ವಿಗುಣಂಗಳಾಗಿಹವು

ಅಚ್ಚರಿ:
(೧) ದ್ವೀಪಗಳ ಹೆಸರು – ಪ್ಲಕ್ಷ, ಶಾಲ್ಮಲ
(೨) ಸಮುದ್ರಗಳ ವಿವರ – ಇಕ್ಷುಸಮುದ್ರ, ಸುರೆಯ ಶರಧಿ
(೩) ಸಮುದ್ರ, ಶರಧಿ – ಸಮನಾರ್ಥಕ ಪದ