ಪದ್ಯ ೪೮: ಕಿಂಪುರುಷಕ್ಕೆ ಪಾಲಕರಾರು?

ರಾಮ ಕಿಂಪುರುಷಕ್ಕೆ ಭಾರತ
ಸೀಮೆಯಲಿ ನಾರಾಯಣನು ನರ
ನಾಮಧಾರಕ ಹನುಮ ವಸುಧಾದೇವಿ ನಾರದನು
ಆ ಮನು ಜಗಚ್ಚಕ್ಷು ಲಕ್ಷ್ಮಿಯು
ಪ್ರೇಮದಿಂ ಪ್ರಹ್ಲಾದ ನಿಜ ನಿ
ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು (ಅರಣ್ಯ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಶ್ರೀರಾಮನು ಕಿಂಪುರುಷ ವರ್ಷಕ್ಕೆ ಪಾಲಕ, ಭರವರ್ಷಕ್ಕೆ ನರ, ನಾರಾಯನ, ಹನುಮಂತ, ಭೂದೇವಿ, ನಾರದ, ಮನು, ಸೂರ್ಯ, ಲಕ್ಷ್ಮೀದೇವಿ, ಪ್ರಹ್ಲಾದ, ಭದ್ರಶ್ರವ, ಸದಾಶಿವ ಇವರು ಪಾಲಕರು.

ಅರ್ಥ:
ಸೀಮೆ: ಎಲ್ಲೆ, ಗಡಿ; ವಸುಧ: ಭೂಮಿ; ಚಕ್ಷು: ಕಣ್ಣು; ನಿಸ್ಸೀಮ: ಎಲ್ಲೆಯಿಲ್ಲದುದು; ಪ್ರೇಮ: ಒಲವು;

ಪದವಿಂಗಡಣೆ:
ರಾಮ+ ಕಿಂಪುರುಷಕ್ಕೆ +ಭಾರತ
ಸೀಮೆಯಲಿ +ನಾರಾಯಣನು +ನರ
ನಾಮಧಾರಕ+ ಹನುಮ +ವಸುಧಾದೇವಿ+ ನಾರದನು
ಆ +ಮನು+ ಜಗ+ಚಕ್ಷು +ಲಕ್ಷ್ಮಿಯು
ಪ್ರೇಮದಿಂ +ಪ್ರಹ್ಲಾದ +ನಿಜ +ನಿ
ಸ್ಸೀಮ +ಭದ್ರಶ್ರವ +ಸದಾಶಿವನಿವರು +ಪಾಲಕರು

ಅಚ್ಚರಿ:
(೧) ಸೂರ್ಯನನ್ನು ಜಗಚ್ಚಕ್ಷು ಎಂದು ಕರೆದಿರುವುದು

ಪದ್ಯ ೪೭: ವರ್ಷದ ಅಧಿಪತಿಗಳಾರು?

ವರುಷದೊಡೆಯನಿಳಾವೃತಕೆ ಸಂ
ಕರುಷಣನು ಭದ್ರಾಶ್ವದೊಳು ಹಯ
ಶಿರನು ಹರಿವರುಷಕ್ಕೆ ನರಹರಿ ಕೇತುಮಾಲದಲಿ
ಸಿರಿಯರಸ ರಮ್ಯಕಕೆಮತ್ಸ್ಯನು
ಪಿರಿಯಕಮಠ ಹಿರಣ್ಮಯಕೆ ಕುರು
ವರುಷದಲ್ಲಿ ಮಹಾವರಾಹನು ಪಾರ್ಥ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಇಳಾವೃತ ವರ್ಷಕ್ಕೆ ಸಂಕರ್ಷಣ, ಭದ್ರಾಶ್ವದಲ್ಲಿ ಹಯವದನನು, ಹರಿವರ್ಷಕ್ಕೆ ನರಹರಿ, ಕೇತುಮಾಲಕ್ಕೆ ಲಕ್ಷ್ಮೀಪತಿ, ರಮ್ಯಕ ವರ್ಷಕ್ಕೆ ಮತ್ಸ್ಯ, ಹಿರಣ್ಮಯ ವರ್ಷಕ್ಕೆ ಕೂರ್ಮ, ಕುರುವರ್ಷಕ್ಕೆ ವರಾಹ ಇವರು ಅಧಿಪತಿಗಳು.

ಅರ್ಥ:
ವರ್ಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಒಡೆಯ: ದೊರೆ; ಪಿರಿ: ದೊಡ್ಡದ್ದು; ಶಿರ: ತಲೆ;

ಪದವಿಂಗಡಣೆ:
ವರುಷದ್+ಒಡೆಯನ್+ಇಳಾವೃತಕೆ +ಸಂ
ಕರುಷಣನು +ಭದ್ರಾಶ್ವದೊಳು +ಹಯ
ಶಿರನು +ಹರಿವರುಷಕ್ಕೆ+ ನರಹರಿ +ಕೇತುಮಾಲದಲಿ
ಸಿರಿಯರಸ+ ರಮ್ಯಕಕೆ+ಮತ್ಸ್ಯನು
ಪಿರಿಯ+ಕಮಠ +ಹಿರಣ್ಮಯಕೆ+ ಕುರು
ವರುಷದಲ್ಲಿ +ಮಹಾವರಾಹನು +ಪಾರ್ಥ +ಕೇಳೆಂದ

ಅಚ್ಚರಿ:
(೧) ವಿಷ್ಣುವನ್ನು ಸಿರಿಯರಸ ಎಂದು ಕರೆದಿರುವುದು

ಪದ್ಯ ೪೬: ನೀಲಗಿರಿಯ ವಿಸ್ತಾರವೆಷ್ಟು?

ನೀಲಗಿರಿಯಿಕ್ಕೆಲಕೆ ವಾರಿಧಿ
ಮೇಲೆನಿಪ್ಪತ್ರಿಶೃಂಗವಿವು ಮೈ
ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹವು
ಹೇಳಿದೆಂಟುಪಪರ್ವತಾಗ್ರವಿ
ಶಾಲ ತಾನೆಂಬತ್ತು ಯೋಜನ
ಕೇಳಿಳಾವೃತ ಮೇಲೆಯಾಗಿಹ ಗಿರಿಯ ಲೆಕ್ಕವನು (ಅರಣ್ಯ ಪರ್ವ, ೮ ಸಂಧಿ, ೪೬ ಪದ್ಯ)

ತಾತ್ಪರ್ಯ:
ನೀಲ ಪರ್ವತದ ಎರಡೂ ಕಡೆಗೆ ಸಮುದ್ರದ ದಡದಿಂದ ಮೇಲೆ ಹಬ್ಬಿರುವ ಪರ್ವತಗಳಲ್ಲಿ ಮೂರು ಶಿಖರಗಳಿವೆ. ಇವಲ್ಲದೆ ಇಳಾವೃತ ವರ್ಷಕ್ಕೆ ಸೀಮೆಯಾಗಿ ಎಂಟು ಉಪ ಪರ್ವತಗಳಿವೆ.

ಅರ್ಥ:
ಗಿರಿ: ಬೆಟ್ಟ; ಇಕ್ಕೆಲ: ಎರಡು ಬದಿ; ವಾರಿಧಿ: ಸಮುದ್ರ; ಶೃಂಗ: ಶಿಖರ; ತ್ರಿ: ಮೂರು; ಮೈ: ತನು; ನೀಳ: ವಿಸ್ತಾರ, ಹರಹು; ಪೂರ್ವ: ಮೂಡಣ; ಅಪರ: ಪಶ್ಚಿಮದಿಕ್ಕು ; ಜಲನಿಧಿ: ಸಾಗರ; ಮುಟ್ಟು: ತಾಗು, ತಗಲು; ವಿಶಾಲ: ವಿಸ್ತಾರ; ಯೋಜನ: ಅಳತೆಯ ಪ್ರಮಾಣ; ಲೆಕ್ಕ: ಎಣಿಕೆ;

ಪದವಿಂಗಡಣೆ:
ನೀಲಗಿರಿ+ಇಕ್ಕೆಲಕೆ+ ವಾರಿಧಿ
ಮೇಲೆನಿಪ್ಪ+ತ್ರಿಶೃಂಗವ್+ಇವು+ ಮೈ
ನೀಳದಲಿ +ಪೂರ್ವ+ಅಪರದ +ಜಲನಿಧಿಯ +ಮುಟ್ಟಿಹವು
ಹೇಳಿದ್+ಎಂಟು+ಪಪರ್ವತ+ಅಗ್ರ+ವಿ
ಶಾಲ +ತಾನ್+ಎಂಬತ್ತು +ಯೋಜನ
ಕೇಳ್+ಇಳಾವೃತ+ ಮೇಲೆಯಾಗಿಹ +ಗಿರಿಯ +ಲೆಕ್ಕವನು

ಅಚ್ಚರಿ:
(೧) ಜಲನಿಧಿ, ವಾರಿಧಿ – ಸಮನಾರ್ಥಕ ಪದ
(೨) ನೀಲಗಿರಿಯ ವಿಸ್ತಾರವನ್ನು ತಿಳಿಸುವ ಪದ್ಯ

ಪದ್ಯ ೪೫: ಕೈಲಾಸ ಪರ್ವತವು ಎಲ್ಲಿದೆ?

ದೇವಕೂಟದ ಜಠರವೆಂಬಿವು
ಭಾವಿಸಲು ಮಾಲ್ಯವತದಿಕ್ಕೆಲ
ನಾವಿಧದಿ ಕೈಲಾಸ ಪರ್ವತ ಗಂಧಮಾದನವು
ಭೂವಳಯದಲಿ ಪುಣ್ಯವಂತರು
ಭಾವಿಸುವೊಡಾ ಈಶ ದಿಕ್ಕಿನ
ದೀವಕೂಟಡ ನಿಕರ ಪಡುವಣ ಗಿರಿಯ ಪ್ರಾಂತ್ಯದಲಿ (ಅರಣ್ಯ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಮಾಲ್ಯವಂತ ಪರ್ವತದ ಎರಡು ಕಡೆಯೂ ದೇವ್ಕೂಟದ ಜಠರದಂತಿರುವ ಕೈಲಾಸ ಗಂಧಮಾದನವೆಂಬ ಪರ್ವತಗಳಿವೆ. ದೇವಗಿರಿಯ ಈಶಾನ್ಯ ದಿಕ್ಕಿನಲ್ಲಿ ಪುಣ್ಯವಂತರು ಸೇರುವ ಗಿರಿಗಳ ಪ್ರಾಂತ್ಯವಿದೆ.

ಅರ್ಥ:
ದೇವ: ಸುರರು; ಕೂಟ: ಗುಂಪು; ಜಠರ: ಹೊಟ್ಟೆ; ಭಾವಿಸು: ತಿಳಿ; ಇಕ್ಕೆಲ: ಎರಡು ಕಡೆ; ಭೂವಳಯ: ಭೂಪ್ರದೇಶ; ಪುಣ್ಯ: ಸದಾಚಾರ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಈಶನ್ಯ:ಉತ್ತರದಿಕ್ಕಿಗೂ ಪೂರ್ವ ದಿಕ್ಕಿಗೂ ಮಧ್ಯೆ ಇರುವ ದಿಕ್ಕು; ಈಶ: ಒಡೆಯ; ದಿಕ್ಕು: ದಿಶೆ; ದೇವಕೂಟ: ಸುರರ ಗುಂಪು; ನಿಕರ: ಗುಂಪು; ಪಡುವಣ: ಪಶ್ಚಿಮ; ಗಿರಿ: ಬೆಟ್ಟ; ಪ್ರಾಂತ್ಯ: ರಾಜ್ಯ;

ಪದವಿಂಗಡಣೆ:
ದೇವಕೂಟದ +ಜಠರವೆಂಬಿವು
ಭಾವಿಸಲು +ಮಾಲ್ಯವತದ್+ಇಕ್ಕೆಲ
ನಾವಿಧದಿ+ ಕೈಲಾಸ +ಪರ್ವತ +ಗಂಧಮಾದನವು
ಭೂವಳಯದಲಿ+ ಪುಣ್ಯವಂತರು
ಭಾವಿಸುವೊಡ್+ಆ+ ಈಶ+ ದಿಕ್ಕಿನ
ದೇವಕೂಟಡ +ನಿಕರ +ಪಡುವಣ+ ಗಿರಿಯ +ಪ್ರಾಂತ್ಯದಲಿ

ಅಚ್ಚರಿ:
(೧) ದೇವಕೂಟ – ೧, ೬ ಸಾಲಿನ ಮೊದಲ ಪದ
(೨) ಕೈಲಾಸ ಪರ್ವತದ ವಿವರ – ಮಾಲ್ಯವತದಿಕ್ಕೆಲನಾವಿಧದಿ ಕೈಲಾಸ ಪರ್ವತ ಗಂಧಮಾದನವು

ಪದ್ಯ ೪೪: ಗಿರಿಗಳ ವಿಸ್ತಾರವೆಷ್ಟು?

ವರುಷ ಮಧ್ಯದ ಪರ್ವತಂಗಳ
ಹರಹು ತಾನೆರಡೆರಡು ಸಾಸಿರ
ವರುಷ ನವನವ ನವಸಹಸ್ರವದಾರು ಮಧ್ಯದಲಿ
ವರುಷವದು ಇಪ್ಪತ್ತ ನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರಂತೆ ಮೆರೆವುದು ಹೊರಗೆ ಲವಣಾಬ್ಧಿ (ಅರಣ್ಯ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಒಂಬತ್ತು ವರ್ಷಗಳ (ಕುರು, ಹಿರಣ್ಮಯ, ರಮ್ಯಕ, ಇಳಾವೃತ, ಹರಿ, ಕಿಂಪುರುಷ, ಭರತ, ಭದ್ರಾಶ್ವ, ಕೇತುಮಾಲ) ನಡುವಿರುವ ಗಿರಿಗಳು ಎರಡೆರಡು ಸಹಸ್ರ ಯೋಜನ ವಿಸ್ತಾರವಾಗಿವೆ. ಮಧ್ಯದಲ್ಲಿ ಆರು ಸಹಸ್ರ ಯೋಜನ ವಿಸ್ತಾರದ ಪರ್ವತಗಳಿವೆ. ಹೀಗೆ ಪೂರ್ವ, ಪಶ್ಚಿಮ ದಿಕ್ಕುಗಳಲ್ಲಿ ಇಪ್ಪತ್ನಾಲ್ಕು ಯೋಜನ ವಿಸ್ತಾರದ ಪರ್ವತಗಳಿವೆ. ಇವು ಲವಣ ಸಮುದ್ರದವರೆಗೂ ಹಬ್ಬಿವೆ.

ಅರ್ಥ:
ವರ್ಷ: ಭೂ ಮಂಡಲದ ವಿಭಾಗ; ಮಧ್ಯ: ನಡುವೆ; ಪರ್ವತ: ಗಿರಿ, ಬೆಟ್ಟ; ಹರಹು: ವಿಸ್ತಾರ; ಸಾಸಿರ: ಸಹಸ್ರ, ಸಾವಿರ; ನವ: ಹೊಸ; ಪರಿಗಣನೆ: ಗಮನ, ಲೆಕ್ಕಾಚಾರ; ಮೂಡಣ: ಪೂರ್ವ; ಪಡುವಣ: ಪಶ್ಚಿಮ; ಮೆರೆ: ಹೊಳೆ, ಪ್ರಕಾಶಿಸು; ಹೊರಗೆ: ಆಚೆ; ಲವಣ: ಉಪ್ಪು; ಅಬ್ಧಿ: ಸಾಗರ;

ಪದವಿಂಗಡಣೆ:
ವರುಷ +ಮಧ್ಯದ +ಪರ್ವತಂಗಳ
ಹರಹು+ ತಾನ್+ಎರಡೆರಡು +ಸಾಸಿರ
ವರುಷ +ನವನವ +ನವ+ಸಹಸ್ರವದ್+ಆರು+ ಮಧ್ಯದಲಿ
ವರುಷವದು +ಇಪ್ಪತ್ತ +ನಾಲ್ಕರ
ಪರಿಗಣಿತ+ ಮೂಡಣದು +ಪಡುವಣದ್
ಎರಡು+ ತಾನದರಂತೆ +ಮೆರೆವುದು+ ಹೊರಗೆ +ಲವಣಾಬ್ಧಿ

ಅಚ್ಚರಿ:
(೧) ಎರಡೆರಡು , ನವನವ – ಜೋಡಿ ಪದಗಳ ಬಳಕೆ