ಪದ್ಯ ೪೩: ಕೇತುಮಾಲ, ಇಳಾವೃತ, ಭದ್ರಾಶ್ವ ವರ್ಷಗಳ ವಿಸ್ತೀರ್ಣವೆಷ್ಟು?

ಸುರಗಿರಿಯ ಬಳಸಿಪ್ಪಿಳಾವೃತ
ವರುಷದಿಂದವೆ ಮೂಡಲೊಪ್ಪುವ
ಹಿರಿಯಗಿರಿ ಮಾಲ್ಯವತ ಜಲನಿಧಿತನಕ ಭದ್ರಾಶ್ವ
ವರುಷ ಪಡುವಣ ಗಂಧಮಾದನ
ಗಿರಿ ತೊಡಗಿಯಾ ಪಶ್ಚಿಮಾಶಾ
ಶರಧಿ ಪರಿಯಂತಿಪ್ಪ ವರುಷವು ಕೇತುಮಾಲವದು (ಅರಣ್ಯ ಪರ್ವ, ೮ ಸಂಧಿ, ೪೩ ಪದ್ಯ)

ತಾತ್ಪರ್ಯ:
ಹಿಮಾಲಯ ಪರ್ವತವನ್ನು ಬಳಸಿರುವ ಇಳಾವೃತ ವರ್ಷಕ್ಕೆ ಪೂರ್ವದಲ್ಲಿ ಮಾಲ್ಯವಂತವೆಂಬ ಮಹಾಪರ್ವತವಿದೆ. ಅಲ್ಲಿಂದ ಸಮುದ್ರದವರೆಗಿರುವುದು ಭದ್ರಾಶ್ವವರ್ಷ. ಗಂಧಮಾದನ ಪರ್ವತದಿಂದ ಪಶ್ಚಿಮ ಸಮುದ್ರದವರೆಗಿರುವುದು ಕೇತುಮಾಲ ವರ್ಷ.

ಅರ್ಥ:
ಸುರಗಿರಿ: ದೇವತೆಗಳ ಬೆಟ್ಟ, ಹಿಮಾಲಯ; ಬಳಸು: ಆವರಿಸು; ಮೂಡಲ: ಪೂರ್ವ; ಹಿರಿಯ: ದೊಡ್ಡ; ಗಿರಿ: ಬೆಟ್ಟ; ಜಲನಿಧಿ: ಸಾಗರ; ಪಡುವಣ: ಪಶ್ಚಿಮ; ಶರಧಿ: ಸಮುದ್ರ; ಪರಿ: ವರೆಗು;

ಪದವಿಂಗಡಣೆ:
ಸುರಗಿರಿಯ +ಬಳಸಿಪ್+ಇಳಾವೃತ
ವರುಷದಿಂದವೆ +ಮೂಡಲ್+ಒಪ್ಪುವ
ಹಿರಿಯ+ಗಿರಿ+ ಮಾಲ್ಯವತ+ ಜಲನಿಧಿ+ತನಕ+ ಭದ್ರಾಶ್ವ
ವರುಷ +ಪಡುವಣ +ಗಂಧಮಾದನ
ಗಿರಿ+ ತೊಡಗಿಯಾ +ಪಶ್ಚಿಮಾಶಾ
ಶರಧಿ+ ಪರಿಯಂತಿಪ್ಪ+ ವರುಷವು +ಕೇತುಮಾಲವದು

ಅಚ್ಚರಿ:
(೧) ಭೂಭಾಗದ ಪರಿಚಯ – ಇಳಾವೃತವರ್ಷ, ಕೇತುಮಾಲವರ್ಷ, ಭದ್ರಾಶ್ವವರ್ಷ

ಪದ್ಯ ೪೨: ಭರತವರ್ಷವು ಹೇಗೆ ಹರಡಿದೆ?

ಕುರುಹಿರಣ್ಮಯ ರಮ್ಯಕವು ಸುರ
ಗಿರಿಯನೊಳಕೊಂಡಿಪ್ಪಿಳಾವೃತ
ಹರಿವರುಷ ಕಿಂಪುರುಷಭಾರತವುತ್ತರಾದಿಗಳ
ಪಿರಿಯ ಶೃಂಗಶ್ವೇತ ವಿಂಧ್ಯದ
ಗಿರಿ+ ನಿಷಧನಗ +ಹೇಮಕೂಟದ
ಗಿರಿ +ಹಿಮಾಲಯವಾಗಪರ+ಜಲಧಿಯನು +ಮುಟ್ಟಿಗವು (ಅರಣ್ಯ ಪರ್ವ, ೮ ಸಂಧಿ, ೪೨ ಪದ್ಯ)

ತಾತ್ಪರ್ಯ:
ಉತ್ತರದಿಂದ ಆರಂಭಿಸಿ ಕುರು, ಹಿರಣ್ಮಯ, ರಮ್ಯಕ, ಹಿಮಾಲಯವನ್ನೊಳಗೊಂಡ ಇಳಾವೃತ, ಹರಿ, ಕಿಂಪುರುಷ, ಭರತವರ್ಷಗಳು ಇವೆ. ಶ್ವೇತ, ಶೃಂಗ, ವಿಂಧ್ಯ, ನಿಷಧ, ಹೇಮಕೂಟಗಳು ಪಶ್ಚಿಮ ಸಮುದ್ರದವರೆಗೆ ಹರಡಿವೆ.

ಅರ್ಥ:
ಸುರಗಿರಿ: ಹಿಮಾಲಯ; ಗಿರಿ: ಬೆಟ್ಟ; ಪಿರಿ: ದೊಡ್ಡ, ಹಿರಿಯ; ಜಲಧಿ: ಸಾಗರ; ಮುಟ್ಟು: ಸೋಕುವುದು, ಸ್ಪರ್ಶ;

ಪದವಿಂಗಡಣೆ:
ಕುರು+ಹಿರಣ್ಮಯ +ರಮ್ಯಕವು+ ಸುರ
ಗಿರಿಯನೊಳಕೊಂಡಿಪ್+ಇಳಾವೃತ
ಹರಿವರುಷ +ಕಿಂಪುರುಷ+ಭಾರತ+ಉತ್ತರಾದಿಗಳ
ಪಿರಿಯ +ಶೃಂಗ+ಶ್ವೇತ+ ವಿಂಧ್ಯದ
ಗಿರಿ +ನಿಷಧನ್+ಅಗ+ ಹೇಮಕೂಟದ
ಗಿರಿ ಹಿಮಾಲಯವ್+ಅಗಪರ+ಜಲಧಿಯನು +ಮುಟ್ಟಿಗವು

ಅಚ್ಚರಿ:
(೧) ಗಿರಿಗಳ ಹೆಸರು – ಕುರು, ಹಿರಣ್ಮಯ, ರಮ್ಯಕ, ಹಿಮಾಲಯ, ಶ್ವೇತ, ಶೃಂಗ, ವಿಂಧ್ಯ, ನಿಷಧ, ಹೇಮಕೂಟ

ಪದ್ಯ ೪೧: ಭೂಮಂಡಲ ಮಧ್ಯದಲ್ಲಿ ಯಾವ ಖಂಡವಿದೆ?

ಧಾರಿಣಿಯ ನಡುಬಳಸಿ ಬೆಳೆದಿಹ
ಮೇರು ಗಿರಿಯನು ಬಳಸಿ ವೃತ್ತಾ
ಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ
ಮೇರೆಯಾಗಿಹ ಗಿರಿಕುಲಂಗಳ
ತೋರದಗಲವನುನ್ನತಂಗಳ
ಸಾರ ಹೃದಯರು ಬಲ್ಲರೈ ಕಲಿಪಾರ್ಥ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಭೂಮಂಡಲ ಮಧ್ಯದಲ್ಲಿರುವ ಮೇರುಪರ್ವತದ ಸುತ್ತಲೂ ಜಂಬೂದ್ವೀಪದ ನವಖಂಡಗಳು ವೃತ್ತಾಕಾರವಾಗಿವೆ. ಈ ಗಿರಿಗಳ ಎತ್ತರ ಹರಹುಗಳನ್ನು ಬಲ್ಲ ಪುಣ್ಯಾತ್ಮರು ಇದ್ದಾರೆ.

ಅರ್ಥ:
ಧಾರಿಣಿ: ಭೂಮಿ; ನಡು: ಮಧ್ಯ; ಬಳಸು: ಆವರಿಸುವಿಕೆ; ಬೆಳೆ: ಬೆಳೆದುದು; ಗಿರಿ: ಬೆಟ್ಟ; ವೃತ್ತ: ಬಳಸಿದ, ಸುತ್ತುವರಿದ; ಎಸೆ: ತೋರು; ದ್ವೀಪ: ನೀರಿನಿಂದ ಆವರಿಸಿದ ಭೂಭಾಗ; ನವ: ಹೊಸ; ಖಂಡ: ತುಂಡು, ಚೂರು; ಮೇರೆ: ಎಲ್ಲೆ, ಗಡಿ; ಗಿರಿ: ಬೆಟ್ಟ; ತೋರು: ಗೋಚರಿಸು; ಅಗಲ: ವಿಸ್ತಾರ; ಉನ್ನತ: ಹಿರಿಯ, ಉತ್ತಮ; ಸಾರ: ರಸ; ಹೃದಯ: ವಕ್ಷಸ್ಥಳ; ಬಲ್ಲರು: ತಿಳಿದವರು; ಕಲಿ: ಶೂರ;

ಪದವಿಂಗಡಣೆ:
ಧಾರಿಣಿಯ +ನಡುಬಳಸಿ +ಬೆಳೆದಿಹ
ಮೇರು +ಗಿರಿಯನು +ಬಳಸಿ +ವೃತ್ತಾ
ಕಾರವಾಗ್+ಎಸೆದಿಹುದು +ಜಂಬೂದ್ವೀಪ +ನವಖಂಡ
ಮೇರೆಯಾಗಿಹ +ಗಿರಿಕುಲಂಗಳ
ತೋರದಗಲವನ್+ಉನ್ನತಂಗಳ
ಸಾರ +ಹೃದಯರು +ಬಲ್ಲರೈ+ ಕಲಿಪಾರ್ಥ+ ಕೇಳೆಂದ

ಅಚ್ಚರಿ:
(೧) ಜಂಬೂದ್ವೀಪ – ಮೇರು ಗಿರಿಯನು ಬಳಸಿ ವೃತ್ತಾಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ

ಪದ್ಯ ೪೦: ಉತ್ತರ ದಿಕ್ಕಿನ ಕುಲಾದ್ರಿಗಳಾವುವು?

ನಾಗ ಕಾಲಾಂಜನವು ಹಂಸನು
ಮೇಘಪುಷ್ಪಕ ಶಂಕಕೂಟವ
ನೀಗಲೀಕ್ಷಿಸು ಬಡಗದಿಕ್ಕಿನಲಿಹಕುಲಾದ್ರಿಗಳು
ಮೇಗೆ ಕೇಳೀರೈದು ದೆಸೆಗಳ
ಲಾ ಗಿರಿಯ ಹೊರಗಿಹರು ಸುರಜನ
ಯೋಗಿಸಿದ್ಧ ನಿಷೇವಿತರು ತಾವಾಗಿ ವಿಭವದಲಿ (ಅರಣ್ಯ ಪರ್ವ, ೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ನಾಗ, ಕಾಲಾಂಜಲ, ಹಂಸ, ಮೇಘ, ಪುಷ್ಪಕ, ಶಂಕ, ಕೂಟ ಗಿರಿಗಳು ಉತ್ತರದಿಕ್ಕಿನ ಕುಲಾದ್ರಿಗಳು. ಈ ಪರ್ವತಗಳ ಹತ್ತು ದಿಕ್ಕಿನಲ್ಲೂ ಯೋಗಿಗಳಿಂದಲೂ ಸಿದ್ಧರಿಂದಲೂ ಸೇವಿಸಲ್ಪಡುವ ದೇವತೆಗಳಿದ್ದಾರೆ.

ಅರ್ಥ:
ಈಕ್ಷಿಸು: ನೋಡು; ಬಡಗದಿಕ್ಕು: ಉತ್ತರ ದಿಕ್ಕು; ಅದ್ರಿ: ಬೆಟ್ಟ; ಮೇಗೆ: ಮೇಲಕ್ಕೆ; ಕೇಳು: ಆಲಿಸು; ದೆಸೆ: ದಿಕ್ಕು; ಗಿರಿ: ಬೆಟ್ಟ; ಹೊರಗೆ: ಆಚೆ; ಸುರಜನ: ದೇವತೆಗಳು; ನಿಷೇವಿತ: ಪೂಜಿಸಲ್ಪಟ್ಟ; ವಿಭವ: ವೈಭವ, ಘನತೆ;

ಪದವಿಂಗಡಣೆ:
ನಾಗ +ಕಾಲಾಂಜನವು +ಹಂಸನು
ಮೇಘಪುಷ್ಪಕ +ಶಂಕಕೂಟವ
ನೀಗಲ್+ಈಕ್ಷಿಸು+ ಬಡಗದಿಕ್ಕಿನಲಿಹ+ಕುಲಾದ್ರಿಗಳು
ಮೇಗೆ +ಕೇಳೀರ್+ಐದು +ದೆಸೆಗಳಲ್
ಆ+ ಗಿರಿಯ +ಹೊರಗಿಹರು+ ಸುರಜನ
ಯೋಗಿಸಿದ್ಧ+ ನಿಷೇವಿತರು +ತಾವಾಗಿ +ವಿಭವದಲಿ

ಅಚ್ಚರಿ:
(೧) ಗಿರಿಗಳ ಹೆಸರು: ನಾಗ, ಕಾಲಾಂಜಲ, ಹಂಸ, ಮೇಘ, ಪುಷ್ಪಕ, ಶಂಕ, ಕೂಟ

ಪದ್ಯ ೩೯: ಕೀಲಗಿರಿಯ ಸುತ್ತವಿರುವ ಗಿರಿಗಳಾವುವು?

ವರ ಸಿತಾಂತರ ಬಿಂದು ಮಂದರ
ಕುರು ರುಚಕಗಳಿವು ಇಂದ್ರದಿಕ್ಕಿನ
ಲುರು ಕಳಿಂಗ ಪತಂಗ ನಿಷಧ ನಿಷಾದ ತಾಮಿಂತು
ತಿರುಗಿ ದಕ್ಷಿಣದಲ್ಲಿ ಮಧುಮಾ
ನ್ಯರಸ ಕುಮುದ ಸುಪಾರ್ಶ್ವವಾ ಪಿಂ
ಜರಗಳಿವು ವಾರುಣ ದಿಶಾಭಾಗದಲಿ ರಂಜಿಪುವು (ಅರಣ್ಯ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶ್ರೇಷ್ಠವಾದ ಸಿತಾಂತರ, ಬಿಂದು, ಮಂದರ, ಕುರುರುಚಕಗಳು ಪೂರ್ವದಲ್ಲೂ ಕಳಿಂಗ, ಪತಂಗ, ನಿಷಧ, ನಿಷಾದಗಳು ದಕ್ಷಿಣದಲ್ಲೂ ಮಧುಮಾನ್ಯ, ಕುಮುದ, ಸುಪಾರ್ಶ್ವ, ಪಿಂಜರಗಳು ಪಶ್ಚಿಮದಲ್ಲೂ ಇರುವ ಗಿರಿಗಳು.

ಅರ್ಥ:
ವರ: ಶ್ರೇಷ್ಠ; ಇಂದ್ರದಿಕ್ಕು: ಪೂರ್ವ; ಇಂದ್ರ: ಸುರಪತಿ; ದಿಕ್ಕು: ದಿಶೆ; ಉರು: ಶ್ರೇಷ್ಠವಾದ; ವಾರುಣದಿಶ: ಪಶ್ಚಿಮದಿಕ್ಕು; ರಂಜಿಸು: ಶೋಭಿಸು;

ಪದವಿಂಗಡಣೆ:
ವರ +ಸಿತಾಂತರ +ಬಿಂದು +ಮಂದರ
ಕುರು +ರುಚಕಗಳಿವು+ ಇಂದ್ರದಿಕ್ಕಿನಲ್
ಉರು +ಕಳಿಂಗ +ಪತಂಗ +ನಿಷಧ +ನಿಷಾದ +ತಾಮಿಂತು
ತಿರುಗಿ +ದಕ್ಷಿಣದಲ್ಲಿ+ ಮಧು+ಮಾ
ನ್ಯರಸ+ ಕುಮುದ +ಸುಪಾರ್ಶ್ವವಾ +ಪಿಂ
ಜರಗಳಿವು +ವಾರುಣ+ ದಿಶಾಭಾಗದಲಿ+ ರಂಜಿಪುವು

ಅಚ್ಚರಿ:
(೧) ಗಿರಿಗಳ ಹೆಸರು: ಸಿತಾಂತರ, ಬಿಂದು, ಮಂದರ, ಕುರುರುಚಕ, ಕಳಿಂಗ, ಪತಂಗ, ನಿಷಧ, ನಿಷಾದ,ಮಧುಮಾನ್ಯ, ಕುಮುದ, ಸುಪಾರ್ಶ್ವ, ಪಿಂಜರ