ಪದ್ಯ ೩೩: ಗಂಗಾಧಾರೆಯು ಹೇಗೆ ಶೋಭಿಸುತ್ತಿತ್ತು?

ಮೇರೆಯಿಲ್ಲದ ದೇವತತಿಗಲ
ಭಾರದಿಂ ಜಗ ಜರಿವುದೆಂದಾ
ಮೇರುವಿಂಗಾನಿಸಿದ ರಜತಸ್ತಂಭವೊ ಮೇಣು
ಸಾರತ ಸುಕೃತವನು ಸಂಚಿಸಿ
ಧೀರರೈದುವ ಸತ್ಯಲೋಕದ
ದಾರಿಯೆಂಬಂದದಲಿ ಗಂಗೆಯಧಾರೆ ಮೆರೆದಿಹುದು (ಅರಣ್ಯ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಲೆಕ್ಕವಿಲ್ಲದಷ್ಟು ದೇವತೆಗಳ ಭಾರದಿಂದ ಮೇರುಪರ್ವತವು ಜಾರೀತು ಎಂದು ಅದಕ್ಕೆ ಆಸರೆಗಾಗಿ ಕೊಟ್ಟ ಕಂಬವೋ, ಮಹಾಪುಣ್ಯವನ್ನು ಸಂಪಾದಿಸಿದ ಧೀರರು ಸತ್ಯಲೋಕಕ್ಕೆ ಹೋಗುವ ದಾರಿಯೋ ಎಮ್ಬಂತೆ ಗಂಗಾನದಿಯ ಧಾರೆಯು ಶೋಭಿಸುತ್ತಿತ್ತು.

ಅರ್ಥ:
ಮೇರೆ: ಎಲ್ಲೆ, ಗಡಿ; ದೇವ: ಸುರರು; ತತಿ: ಗುಂಪು, ಸಮೂಹ; ಭಾರ:ಹೊರೆ; ಜಗ: ಜಗತ್ತು; ಜರಿ: ಬೆಟ್ಟದ ಇಳಿಜಾರು; ರಜತ: ಬೆಳ್ಳಿ; ಸ್ತಂಭ: ಕಂಬ; ಮೇಣ್: ಮತ್ತು; ಸಾರತರ: ಶ್ರೇಷ್ಠವಾದ; ಸುಕೃತ: ಒಳ್ಳೆಯ ಕೆಲಸ; ಸಂಚಿಸು: ಸಂಗ್ರಹಿಸು; ಧೀರ: ಶೂರ, ಪರಾಕ್ರಮ; ಐದು: ಹೋಗಿಸೇರು; ಸತ್ಯಲೋಕ: ಸ್ವರ್ಗ; ದಾರಿ: ಮಾರ್ಗ; ಗಂಗೆ: ಸುರನದಿ; ಧಾರೆ: ಪ್ರವಾಹ; ಮೆರೆ: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಮೇರೆಯಿಲ್ಲದ +ದೇವ+ತತಿಗಲ
ಭಾರದಿಂ+ ಜಗ +ಜರಿವುದೆಂದ್+ಆ
ಮೇರುವಿಂಗಾನಿಸಿದ+ ರಜತಸ್ತಂಭವೊ+ ಮೇಣು
ಸಾರತ +ಸುಕೃತವನು +ಸಂಚಿಸಿ
ಧೀರರೈದುವ +ಸತ್ಯಲೋಕದ
ದಾರಿ+ಎಂಬಂದದಲಿ +ಗಂಗೆಯಧಾರೆ+ ಮೆರೆದಿಹುದು

ಅಚ್ಚರಿ:
(೧) ಉಪಮಾನದ ಬಳಕೆ – ಮೇರೆಯಿಲ್ಲದ ದೇವತತಿಗಲಭಾರದಿಂ ಜಗ ಜರಿವುದೆಂದಾ
ಮೇರುವಿಂಗಾನಿಸಿದ ರಜತಸ್ತಂಭವೊ

ಪದ್ಯ ೩೨: ಬ್ರಹ್ಮನ ಅರಮನೆಯ ಸೊಬಗು ಹೇಗಿತ್ತು?

ಹಲವು ನೆಲೆ ಚೆಲುವಿಕೆಗೆ ಸಲೆ ಹೊಂ
ಗಲಶ ಲೋಕಕೆ ವಿಲಸ ಹೇಮದ
ಕೆಲಸಗತಿಯಲಿ ಚೆಲುವೆನಿಸಿದುಪ್ಪರಿಗೆ ನೋಳ್ಪರಿಗೆ
ಹೊಳಹಿನಲಿ ಥಳಥಳಿಸುತಿಹುದದು
ನಳಿನಪೀಠನ ಭವನ ನಭದಿಂ
ದಿಳಿದ ಗಂಗೆಯಧಾರೆ ಮೆರೆದುದು ಪುರದ ಬಾಹೆಯಲಿ (ಅರಣ್ಯ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹಲವಾರು ಭೂಮಿಯ ಸೌಂದರ್ಯದಕ್ಕೆ ಚಿನ್ನದ ಕಲಶವಿದ್ದಂತೆ ಬ್ರಹ್ಮನ ಅರಮನೆಯಿದೆ. ಬಂಗಾರದ ಉಪ್ಪರಿಗೆಯೂ ಭವನವೂ ಹೊಳೆ ಹೊಳೆಯುತ್ತಿವೆ. ಬ್ರಹ್ಮನ ಭವನದ ಊರಿನ ಹೊರಗೆ ಗಂಗಾಧಾರೆಯು ಚೆಲುವಿನಿಂದ ಮೆರೆಯುತ್ತಿದೆ.

ಅರ್ಥ:
ಹಲವು: ಬಹಳ; ನೆಲೆ: ಭೂಮಿ; ಸಲೆ: ವಿಸ್ತೀರ್ಣ; ಹೊಂಗಲಶ: ಚಿನ್ನದ ಕಳಶ; ಕಲಶ: ಕೊಡ; ಲೋಕ: ಜಗತ್ತು; ವಿಲಸ: ಚೆಲುವು; ಹೇಮ: ಚಿನ್ನ; ಗತಿ: ವೇಗ; ಚೆಲುವು: ಸುಂದರ; ಉಪ್ಪರಿಗೆ: ಮಹಡಿ, ಸೌಧ; ನೋಡು: ವೀಕ್ಷಿಸು; ಹೊಳಹು: ಕಾಂತಿ, ಪ್ರಕಾಶ; ಥಳಥಳಿಸು: ಹೊಳೆ; ನಳಿನ: ಕಮಲ; ಪೀಠ: ಆಸನ; ಭವನ: ಆಲಯ; ನಭ: ಆಗಸ; ಗಂಗೆ: ಸುರನದಿ; ಮೆರೆ: ಹೊಳೆ, ಪ್ರಕಾಶಿಸು; ಪುರ: ಊರು; ಬಾಹೆ: ಪಕ್ಕ, ಪಾರ್ಶ್ವ;

ಪದವಿಂಗಡಣೆ:
ಹಲವು +ನೆಲೆ +ಚೆಲುವಿಕೆಗೆ +ಸಲೆ +ಹೊಂ
ಕಲಶ +ಲೋಕಕೆ+ ವಿಲಸ +ಹೇಮದ
ಕೆಲಸಗತಿಯಲಿ +ಚೆಲುವೆನಿಸಿದ್+ಉಪ್ಪರಿಗೆ +ನೋಳ್ಪರಿಗೆ
ಹೊಳಹಿನಲಿ+ ಥಳಥಳಿಸುತಿಹುದ್+ಅದು
ನಳಿನಪೀಠನ +ಭವನ +ನಭದಿಂದ್
ಇಳಿದ +ಗಂಗೆಯಧಾರೆ +ಮೆರೆದುದು +ಪುರದ+ ಬಾಹೆಯಲಿ

ಅಚ್ಚರಿ:
(೧) ಬ್ರಹ್ಮನನ್ನು ಕರೆಯುವ ಪರಿ – ನಳಿನಪೀಠನ

ಪದ್ಯ ೩೧: ಕಮಲಭವ ಪುರದಲ್ಲಿ ಯಾರಿರುತ್ತಾರೆ?

ಹರಳುಗಳ ಕೇವಣದ ಮಂಗಳ
ತರವೆನಿಪ ತೊಡಿಗೆಗಲ ದಿವ್ಯಾಂ
ಬರದಿ ಬೆಳಗುವ ತನುಲತೆಯ ನವಮಣಿಯ ಮೌಳಿಗಳ
ತರಳಲೋಚನದಿಂದು ವದನದ
ಪರಮಸೌಭಾಗ್ಯದ ವಿಲಾಸದ
ಪರಿಜನಂಗಳು ಕಮಲಭವ ಪುರದಲ್ಲಿ ನೆಲಸಿಹರು (ಅರಣ್ಯ ಪರ್ವ, ೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ರತ್ನದ ಆಭರಣದಿಂದ ಕೂಡಿದ ಮಂಗಳತರ ತೊಡಿಗೆಯು, ದಿವ್ಯಾಂಬರಗಳನ್ನು ತೊಟ್ಟಿರುತ್ತಾರೆ. ಪ್ರಕಾಶಮಾನವಾದ ದೇಹಕಾಂತಿ, ನವರತ್ನಗಳ ಶಿರೋಭೂಷಣಗಳು, ಚಂಚಲವಾದ ಕಣ್ಣುಗಳು, ಚಂದ್ರನಂತಹ ಮುಖಗಳು, ಅತ್ಯಂತ ಮಂಗಳಕರವಾದ, ಚೆಲುವಿನ ಬಂಧುಗಳು

ಅರ್ಥ:
ಹರಳು: ಕಲ್ಲಿನ ಚೂರು, ಬೆಲೆಬಾಳುವ ರತ್ನ; ಕೇವಣ: ಹರಳನ್ನು ಕೂಡಿಸುವುದು; ಮಂಗಳ: ಶುಭ; ತೊಡಿಗೆ: ಆಭರಣ; ದಿವ್ಯ: ಶ್ರೇಷ್ಠ; ಅಂಬರ: ಬಟ್ಟೆ; ಬೆಳಗು: ಹೊಳೆ; ತನು: ದೇಹ; ಲತೆ: ಬಳ್ಳಿ; ನವ: ಹೊಸ; ಮಣಿ: ಬೆಲೆಬಾಳುವ ರತ್ನ; ಮೌಳಿ: ಶಿರ; ತರಳ: ಚಂಚಲವಾದ; ಲೋಚನ: ಕಣ್ಣು; ವದನ: ಮುಖ; ಪರಮ: ಶ್ರೇಷ್ಠ; ಸೌಭಾಗ್ಯ: ಮಂಗಳಕರ; ವಿಲಾಸ: ವಿಹಾರ, ಚೆಲುವು; ಪರಿಜನ: ಸುತ್ತಲಿನ ಜನ, ಪರಿವಾರ; ಕಮಲಭವ: ಬ್ರಹ್ಮ; ಪುರ: ಊರು; ನೆಲಸು: ವಾಸಿಸು;

ಪದವಿಂಗಡಣೆ:
ಹರಳುಗಳ +ಕೇವಣದ +ಮಂಗಳ
ತರವೆನಿಪ +ತೊಡಿಗೆಗಲ+ ದಿವ್ಯಾಂ
ಬರದಿ+ ಬೆಳಗುವ +ತನುಲತೆಯ +ನವ+ಮಣಿಯ +ಮೌಳಿಗಳ
ತರಳ+ಲೋಚನದ್+ಇಂದು +ವದನದ
ಪರಮ+ಸೌಭಾಗ್ಯದ+ ವಿಲಾಸದ
ಪರಿಜನಂಗಳು +ಕಮಲಭವ+ ಪುರದಲ್ಲಿ+ ನೆಲಸಿಹರು

ಅಚ್ಚರಿ:
(೧) ಸುಂದರ ದೇಹ ಎಂದು ಹೇಳಲು – ತನುಲತೆ ಪದದ ಬಳಕೆ

ಪದ್ಯ ೩೦: ಭೂಮಿಯ ವಿಸ್ತಾರವೆಷ್ಟು?

ಲಕ್ಕದೊಳು ಹದಿನಾರು ಸಾವಿರ
ಮಿಕ್ಕವಸುಧೆಯೊಳಾಳುಗೊಂಡುದು
ಮಿಕ್ಕ ಚೌರಾಶೀತಿಸಾಸಿರಯೋಜನದ ನಿಲುವು
ಲೆಕ್ಕಿಸಲು ಗಿರಿಶಿಖರದಗಲವ
ದಕ್ಕು ಮೂವತ್ತೆರಡುಸಾವಿರ
ದಿಕ್ಕಿನೊಡೆಯರಿಗೆಂಟು ಪಟ್ಟಣವದರ ಮೇಲಿಹುದು (ಅರಣ್ಯ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಲಕ್ಷಯೋಜನದುದ್ದದ ಮೇರುವಿನಲ್ಲಿ ಹದಿನಾರು ಸಾವಿರ ಯೋಜನ ಭೂಮಿಯೊಗಳಗಿದೆ. ಇದರ ಮೇಲೆ ಎಂಬತ್ನಾಲ್ಕು ಯೋಜವವಿದ್ದು, ಗಿರಿಶಿಖರದ ಅಗಲವು ಮೂವತ್ತೆರಡು ಸಾವಿರವಿದೆ. ಅದರ ಮೇಲೆ ಎಂಟು ದಿಕ್ಪಾಲಕರ ಪಟ್ಟಣಗಳಿವೆ.

ಅರ್ಥ:
ಲಕ್ಕ: ಲಕ್ಷ; ಸಾವಿರ: ಸಹಸ್ರ; ವಸುಧೆ: ಭೂಮಿ; ಆಳು: ಮುಳುಗು, ಪೋಷಿಸು; ಮಿಕ್ಕ: ಉಳಿದ; ಸಾಸಿರ: ಸಾವಿರ; ಯೋಜನ: ಅಳತೆಯ ಪ್ರಮಾಣ; ನಿಲುವು: ಇರುವಿಕೆ, ಸ್ಥಿತಿ, ಅವಸ್ಥೆ; ಲೆಕ್ಕಿಸು: ಎಣಿಕೆಮಾಡು; ಗಿರಿ: ಬೆಟ್ಟ; ಶಿಖರ: ತುದಿ; ಅಗಲ: ವಿಸ್ತಾರ; ದಿಕ್ಕು: ದಿಶೆ; ಒಡೆಯ: ನಾಯಕ; ಪಟ್ಟಣ: ಊರು; ಮೇಲೆ: ಅಗ್ರಭಾಗ;

ಪದವಿಂಗಡಣೆ:
ಲಕ್ಕದೊಳು +ಹದಿನಾರು +ಸಾವಿರ
ಮಿಕ್ಕ+ವಸುಧೆಯೊಳ್+ಆಳುಗೊಂಡುದು
ಮಿಕ್ಕ+ ಚೌರಾಶೀತಿ+ಸಾಸಿರ+ಯೋಜನದ+ ನಿಲುವು
ಲೆಕ್ಕಿಸಲು +ಗಿರಿ+ಶಿಖರದ್+ಅಗಲವ
ದಕ್ಕು+ ಮೂವತ್ತೆರಡು+ಸಾವಿರ
ದಿಕ್ಕಿನ್+ಒಡೆಯರಿಗ್+ಎಂಟು +ಪಟ್ಟಣವ್+ಅದರ+ ಮೇಲಿಹುದು

ಅಚ್ಚರಿ:
(೧) ಸಾವಿರ, ಸಾಸಿರ – ಸಮನಾರ್ಥಕ ಪದ
(೨) ಹದಿನಾರು ಸಾವಿರ, ಚೌರಾಶೀತಿ ಸಾವಿರ, ಮೂವತ್ತೆರಡು ಸಾವಿರ – ಅಳತೆಯ ವಿವರ

ಪದ್ಯ ೨೯: ಭೂಮಿಯ ವರ್ಣನೆಯನ್ನು ಮಾತಲಿ ಹೇಗೆ ಮಾಡಿದನು?

ಧರಣಿ ತಾನೈವತ್ತು ಕೋಟಿಯ
ಹರಹು ಸಪ್ತ ಸಮುದ್ರ ಹೊರಗಾ
ವರಿಸಿ ಜಂಬೂ ದ್ವೀಪ ನಡುವಿಹುದಲ್ಲಿ ಭದ್ರಾಶ್ವ
ವರುಷ ಭಾರತ ಕೇತು ಮಾಲವು
ಕುರುವರುಷವಿವು ಪತ್ರವಾ ಸುರ
ಗಿರಿಯ ಹೊರಗಾಗಿಹವು ಕರ್ಣಿಕೆಯಂತೆ ಕನಕಾದ್ರಿ (ಅರಣ್ಯ ಪರ್ವ, ೮ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೂಮಿಯು ಐವತ್ತು ಕೋಟಿ ವಿಸ್ತಾರವುಳ್ಳದ್ದು, ಸುತ್ತಲೂ ಸಪ್ತ ಸಾಗರವು ಬಳಸಿವೆ. ನಡುವೆ ಜಂಬೂದ್ವೀಪ, ಅದರಲ್ಲಿ ಭದ್ರಾಶ್ವ, ಭಾರತ, ಕೇತುಮಾಲ, ಕುರುವರ್ಷಗಳಿವೆ. ಇವು ಎಲೆಗಳಂತಿವೆ. ಹಿಮಾಲಯದ ಹೊರಗೆ ಕರ್ಣಿಕೆಯಂತೆ ಕನಕಾದ್ರಿಯಿದೆ.

ಅರ್ಥ:
ಧರಣಿ: ಭೂಮಿ; ಹರಹು: ವಿಸ್ತಾರ; ಸಪ್ತ: ಏಳು; ಸಮುದ್ರ: ಸಾಗರ; ಆವರಿಸು: ಸುತ್ತುವರಿ; ದ್ವೀಪ: ನೀರಿನಿಂದ ಆವರಿಸಿದ ಭೂಭಾಗ; ನಡುವೆ: ಮಧ್ಯ; ಪತ್ರ: ಎಲೆ; ಸುರ: ದೇವತೆ; ಗಿರಿ: ಬೆಟ್ಟ; ಹೊರಗೆ: ಆಚೆ; ಕರ್ಣಿಕೆ: ಮಲದ ಮಧ್ಯ ಭಾಗ; ಕನಕಾದ್ರಿ: ಚಿನ್ನದ ಬೆಟ್ಟ;

ಪದವಿಂಗಡಣೆ:
ಧರಣಿ +ತಾನೈವತ್ತು +ಕೋಟಿಯ
ಹರಹು +ಸಪ್ತ +ಸಮುದ್ರ +ಹೊರಗ್
ಆವರಿಸಿ +ಜಂಬೂ +ದ್ವೀಪ +ನಡುವಿಹುದಲ್ಲಿ +ಭದ್ರಾಶ್ವ
ವರುಷ+ ಭಾರತ+ ಕೇತು +ಮಾಲವು
ಕುರುವರುಷವಿವು+ ಪತ್ರವ್+ಆ+ ಸುರ
ಗಿರಿಯ +ಹೊರಗಾಗಿಹವು +ಕರ್ಣಿಕೆಯಂತೆ +ಕನಕಾದ್ರಿ

ಅಚ್ಚರಿ:
(೧) ಕನಕಾದ್ರಿಯ ವರ್ಣನೆ – ಸುರಗಿರಿಯ ಹೊರಗಾಗಿಹವು ಕರ್ಣಿಕೆಯಂತೆ ಕನಕಾದ್ರಿ
(೨) ೬ನೇ ಸಾಲಿನ ಮೊದಲ ಹಾಗು ಕೊನೆ ಪದ – ಗಿರಿ, ಅದ್ರಿ – ಸಮನಾರ್ಥಕ ಪದ

ಪದ್ಯ ೨೮: ಭೂಮಿಯನ್ನು ಯಾರು ಹೇಗೆ ಹೊತ್ತಿದ್ದಾರೆ?

ಧಾರಿಣಿಯನಹಿತಾಳ್ದನಾತನ
ವೀರ ಕಮಠನು ಹೊತ್ತನಿಬ್ಬರ
ಭಾರವನು ನಿಜಶಕ್ತಿ ಧರಿಸಿದಳೊಂದು ಲೀಲೆಯಲಿ
ತೋರಗಿರಿಗಳುವೆರೆಸಿದಿಳೆ ತಾ
ನೀರೊಳದ್ದುವುದೆಂದು ಸಲೆ ಮದ
ವಾರಣಂಗಳು ಧರಿಸಿಕೊಂಡಿಹುವೆಂಟು ದಿಕ್ಕಿನಲಿ (ಅರಣ್ಯ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಭೂಮಿಯನ್ನು ಆದಿಶೇಷನು ಹೊತ್ತಿದ್ದಾನೆ, ಅವನನ್ನು ಕೂರ್ಮನು ಹೊತ್ತಿದ್ದಾನೆ, ಇವರಿಬ್ಬರನ್ನೂ ಶ್ರೀದೇವಿಯು ತನ್ನ ಲೀಲೆಯಿಂದ ಧರಿಸಿದ್ದಾಳೆ. ಭೂಮಿಯು ನೀರಿನಲ್ಲಿ ಮುಳುಗೀತೆಂದು ಎಂಟು ದಿಕ್ಕಿನಲ್ಲಿ ಎಂಟು ಆನೆಗಳು ಹೊತ್ತಿವೆ.

ಅರ್ಥ:
ಧಾರಿಣಿ: ಭೂಮಿ; ಅಹಿ: ಹಾವು; ಆಳು: ಅಧಿಕಾರ ನಡೆಸು; ವೀರ: ಶೂರ, ಪರಾಕ್ರಮಿ; ಕಮಠ: ಕೂರ್ಮ; ಹೊತ್ತು: ಹೊರು; ಭಾರ: ಹೊರೆ; ನಿಜ: ದಿಟ; ಶಕ್ತಿ: ಸಾಮರ್ಥ್ಯ, ಬಲಾಢ್ಯ; ಧರಿಸು: ಹೊರು; ಲೀಲೆ: ಆನಂದ,ಕ್ರೀಡೆ; ತೋರು: ಗೋಚರಿಸು; ಗಿರಿ: ಬೆಟ್ಟ; ನೀರು: ಜಲ; ಅದ್ದು: ಮುಳುಗು, ತೋಯು; ಸಲೆ: ವಿಸ್ತೀರ್ಣ; ಮದ: ಅಮಲು, ಸೊಕ್ಕು; ವಾರಣಂಗಳು: ಆನೆ; ಧರಿಸು: ಹೊರು; ದಿಕ್ಕು: ದಿಶೆ;

ಪದವಿಂಗಡಣೆ:
ಧಾರಿಣಿಯನ್+ ಅಹಿತಾಳ್ದನ್+ಆತನ
ವೀರ+ ಕಮಠನು +ಹೊತ್ತನಿಬ್ಬರ
ಭಾರವನು +ನಿಜ+ಶಕ್ತಿ+ ಧರಿಸಿದಳೊಂದು +ಲೀಲೆಯಲಿ
ತೋರ+ಗಿರಿಗಳುವ್+ಎರೆಸಿದ್+ಇಳೆ+ ತಾ
ನೀರೊಳ್+ಅದ್ದುವುದೆಂದು +ಸಲೆ +ಮದ
ವಾರಣಂಗಳು+ ಧರಿಸಿಕೊಂಡಿಹುವ್+ಎಂಟು +ದಿಕ್ಕಿನಲಿ

ಅಚ್ಚರಿ:
(೧) ಧಾರಿಣಿ, ಇಳೆ – ಸಮನಾರ್ಥಕ ಪದ