ಪದ್ಯ ೨೭: ಭೂಲೋಕಗಳ ಮೇಲಿರುವ ಲೋಕಗಳು ಯಾರಿಂದ ತುಂಬಿವೆ?

ತರವಿಡಿದ ಮೇಲಣ ಜಗಂಗಳು
ತರಣಿಮಂಡಲ ತೊಡಗಿ ಯತಿ ವಿ
ಸ್ತರವೆನಿಸಿ ಬೊಮ್ಮಾಂಡ ಪರಿಯಂತಡಕಲಾಗಿಹವು
ಮರುತನಾಧಾರದಲಿ ಲಕ್ಷ್ಮೀ
ಕರವೆನಿಸಿ ದೇವರುಗಳಿಂದವೆ
ಭರಿತವಾಗಿಹುವವರ ಮಹಿಮೆಯ ಹೇಳಲರಿದೆಂದ (ಅರಣ್ಯ ಪರ್ವ, ೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೂಲೋಕದಿಂದ ಸತ್ಯಲೋಕದವರೆಗಿನ ಏಳು ಲೋಕಗಳು ವಿಸ್ತಾರವಾಗಿ ಒಂದರ ಮೇಲೊಂದು ಅಡಕಿಲಿನಂತೆ ನಿಂತಿವೆ. ಇವಕ್ಕೆ ವಾಯುವೇ ಆಧಾರ. ಸಂಪತ್ಕರವಾಗಿವೆ. ದೇವತೆಗಳಿಂದ ತುಂಬಿವೆ.

ಅರ್ಥ:
ತರ: ಸಾಲು; ಜಗ: ಪ್ರಪಂಚ, ಜಗತ್ತು; ತರಣಿ: ಸೂರ್ಯ; ಮಂಡಲ: ವರ್ತುಲಾಕಾರ; ತೊಡಗು: ಸೆಣಸು, ಹೋರಾಡು; ವಿಸ್ತರ: ವಿಶಾಲ; ಬೊಮ್ಮಾಂಡ: ಬ್ರಹ್ಮಾಂಡ; ಪರಿಯಂತ: ವರೆಗೆ, ತನಕ; ಮರುತ: ವಾಯು; ಆಧಾರ: ಅವಲಂಬನ; ಲಕ್ಷ್ಮೀಕರ: ಶ್ರೀಮಂತಿಕೆ; ಭರಿತ: ತುಂಬಿದ; ಮಹಿಮೆ: ಶ್ರೇಷ್ಠತೆ, ಔನ್ನತ್ಯ;

ಪದವಿಂಗಡಣೆ:
ತರವಿಡಿದ ಮೇಲಣ ಜಗಂಗಳು
ತರಣಿಮಂಡಲ ತೊಡಗಿ ಯತಿ ವಿ
ಸ್ತರವೆನಿಸಿ ಬೊಮ್ಮಾಂಡ ಪರಿಯಂತಡಕಲಾಗಿಹವು
ಮರುತನಾಧಾರದಲಿ ಲಕ್ಷ್ಮೀ
ಕರವೆನಿಸಿ ದೇವರುಗಳಿಂದವೆ
ಭರಿತವಾಗಿಹುವವರ ಮಹಿಮೆಯ ಹೇಳಲರಿದೆಂದ

ಪದ್ಯ ೨೬: ಭೂಮಿಯ ಮೇಲಿನ ೭ ಲೋಕಗಳಾವುವು?

ಉತ್ತಮವು ಭೂಲೋಕವಲ್ಲಿಂ
ದತ್ತ ಭುವ ಸ್ವರ್ಲೊಖವಲ್ಲಿಂ
ದತ್ತ ಮಹ ಜನ ಲೋಕವಲ್ಲಿಂದತ್ತ ತಪಲೋಕ
ಉತ್ತಮೋತ್ತಮವಿವಕೆ ಮೇಲಣ
ಸತ್ಯಲೋಕಾದಿಗಳ ನೋಡಿ ಧ
ರಿತ್ರಿಯಲಿ ಬಲುಗಾಹ ಕೊಟ್ಟನು ಲೋಕಪಾಲಕರ (ಅರಣ್ಯ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೂಲೋಕವು ಉತ್ತಮವಾದುದು, ಅದಕ್ಕಿಂತ ಉತ್ತಮವಾದ ಭುವ, ಸ್ವಃ, ಮಹ, ಜನ, ತಪ ಲೋಕಗಳು, ಇವೆಲ್ಲಕ್ಕಿಂತಲೂ ಅತ್ಯುತ್ತಮವಾದುದು (ಬ್ರಹ್ಮನ) ಸತ್ಯ ಲೋಕ. ಇವು ಮೇಲಿನ ಏಳು ಲೋಕಗಳು. ಇವನು ಸೃಷ್ಟಿಸಿ ಭೂಮಿಗೆ ಲೋಕಪಾಲಕರ ರಕ್ಷೆಯನ್ನು ಪರಬ್ರಹ್ಮವು ಕೊಟ್ಟಿತು.

ಅರ್ಥ:
ಉತ್ತಮ: ಶ್ರೇಷ್ಠ; ಭೂಲೋಕ: ಧರಿತ್ರಿ; ಭುವನ: ಲೋಕ; ತಪ: ಜಪ; ಲೋಕ: ಜಗತ್ತು; ಸತ್ಯ: ದಿಟ; ಧರಿತ್ರಿ: ಭೂಮಿ; ಬಲುಗಾಹು: ಭದ್ರವಾದ ರಕ್ಷಣೆ; ಪಾಲಕ: ಕಾಪಾಡುವ ವ್ಯಕ್ತಿ, ರಕ್ಷಕ;

ಪದವಿಂಗಡಣೆ:
ಉತ್ತಮವು +ಭೂಲೋಕವ್+ಅಲ್ಲಿಂದ್
ಅತ್ತ+ ಭುವ+ ಸ್ವರ್ಲೊಖವ್+ಅಲ್ಲಿಂದ್
ಅತ್ತ+ ಮಹ+ ಜನ+ ಲೋಕವ್+ಅಲ್ಲಿಂದ್+ಅತ್ತ+ ತಪಲೋಕ
ಉತ್ತಮೋತ್ತಮವಿವಕೆ+ ಮೇಲಣ
ಸತ್ಯ+ಲೋಕಾದಿಗಳ+ ನೋಡಿ +ಧ
ರಿತ್ರಿಯಲಿ +ಬಲುಗಾಹ +ಕೊಟ್ಟನು +ಲೋಕಪಾಲಕರ

ಅಚ್ಚರಿ:
(೧) ಉತ್ತಮ, ಉತ್ತಮೋತ್ತಮ – ಪದಗಳ ಬಳಕೆ

ಪದ್ಯ ೨೫: ಭೂಮಿಯ ಕೆಳಗಿನ ೭ ಲೋಕಗಳಳಾವು?

ಹತ್ತಿರೆಯಲಿಹುದತಳವಲ್ಲಿಂ
ದತ್ತ ವಿತಳ ಸುತಳ ತಳಾತಳ
ದೊತ್ತಿನ ಮಹಾತಳ ರಸಾತಳ ಕೆಳಗೆ ಪಾತಾಳ
ಬಿತ್ತರದ ಲೋಕಂಗಳೇಳು ಧ
ರಿತ್ರಿಯೊಳಗೊಂದೊಂದರಂತರ
ಹತ್ತು ಹತ್ತು ಸಹಸ್ರ ಯೋಜನ ಪಾರ್ಥ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೂಮಿಯ ಕೆಳಗೆ ಅತಳ, ನಂತರ ಹತ್ತು ಸಾವಿರ ಯೋಜನ ದೂರದಲ್ಲಿ ವಿತಳ, ಸುತಳ, ತಳಾತಳ, ಮಹಾತಳ, ರಸಾತಳ ಪಾತಾಳಗಳೆನ್ನುವ ಏಳು ಲೋಕಗಳಿವೆ

ಅರ್ಥ:
ಹತ್ತಿರ: ಸಮೀಪ; ಬಿತ್ತರ:ಹರಹು, ವ್ಯಾಪ್ತಿ; ಲೋಕ: ಜಗತ್ತು; ಧರಿತ್ರಿ: ಭೂಮಿ; ಅಂತರ: ದೂರ; ಸಹಸ್ರ: ಸಾವಿರ; ಯೋಜನ: ಅಳತೆಯ ಪ್ರಮಾಣ; ಕೇಳು: ಆಲಿಸು;

ಪದವಿಂಗಡಣೆ:
ಹತ್ತಿರೆಯಲ್+ಇಹುದ್+ಅತಳವ್+ಅಲ್ಲಿಂದ್
ಅತ್ತ+ ವಿತಳ+ ಸುತಳ+ ತಳಾತಳದ್
ಒತ್ತಿನ +ಮಹಾತಳ+ ರಸಾತಳ+ ಕೆಳಗೆ +ಪಾತಾಳ
ಬಿತ್ತರದ +ಲೋಕಂಗಳ್+ಏಳು +ಧ
ರಿತ್ರಿಯೊಳಗ್+ಒಂದೊಂದರ್+ಅಂತರ
ಹತ್ತು+ ಹತ್ತು+ ಸಹಸ್ರ+ ಯೋಜನ +ಪಾರ್ಥ +ಕೇಳೆಂದ

ಅಚ್ಚರಿ:
(೧) ೭ ಪಾತಾಳ ಲೋಕಗಳು: ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳ

ಪದ್ಯ ೨೪: ಭೂಮಿಯು ಯಾವುದರ ಮೇಲಿದೆ?

ಕೇಳಗಣಂಡ ಕಟಾಹ ತೊಡಗಿಯೆ
ಜಲವು ತುಮ್ಬಿಹುದದರ ಘಾತವು
ತಿಳಿಯಲಿಪ್ಪತ್ತೈದು ಕೋಟಿಯ ಪವಣ ಪಡೆದಿಹುದು
ಇಳೆಯದರ ಮೇಲೊಂದು ಕೋಟಿಯ
ದಳದಲಿಹುದಲ್ಲಿಂದ ಮೇಲಣ
ದಳತೆಯದು ಚೌಷಷ್ಟಿ ಕೋಟಿಯಜಾಂಡ ಪರಿಯಂತ (ಅರಣ್ಯ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕೆಳಗಿನ ಬ್ರಹ್ಮಾಂಡದಲ್ಲಿ ನೀರು ತುಂಬಿದೆ. ಅದರ ಆಳ ಇಪ್ಪತ್ತೈದು ಕೋಟಿ ಯೋಜನೆ, ಭೂಮಿಯು ಅದರ ಮೇಲೆ ಒಂದು ಕೋಟಿ ವಿಸ್ತಾರದಲ್ಲಿದೆ. ಅದರ ಮೇಲೆ ಇಪ್ಪತ್ತು ನಾಲ್ಕು ಕೋಟಿ ವಿಸ್ತಾರದ ಬ್ರಹ್ಮಾಂಡದ ಪರ್ಯಂತ.

ಅರ್ಥ:
ಕೆಳಗೆ: ; ಕಟಾಹ: ಕಡಾಯಿ; ತೊಡಗು: ಉಂಟಾಗು; ಜಲ: ನೀರು; ತುಂಬು: ಪೂರ್ಣವಾಗಿರು; ಘಾತ: ಪೆಟ್ಟು; ಪವಣ: ಹವಣ, ಸುಲಭ; ಪಡೆ: ಹೊಂದು; ಇಳೆ: ಭೂಮಿ; ದಳ: ದಟ್ಟ, ಸಾಂದ್ರ; ಮೇಲಣ: ಮೇಲೆ; ಅಜಾಂಡ: ಬ್ರಹ್ಮಾಂಡ; ಪರಿ: ರೀತಿ;

ಪದವಿಂಗಡಣೆ:
ಕೇಳಗಣಂಡ+ ಕಟಾಹ+ ತೊಡಗಿಯೆ
ಜಲವು+ ತುಂಬಿಹುದ್+ಅದರ +ಘಾತವು
ತಿಳಿಯಲ್+ಇಪ್ಪತ್ತೈದು +ಕೋಟಿಯ +ಪವಣ +ಪಡೆದಿಹುದು
ಇಳೆ+ಅದರ +ಮೇಲೊಂದು +ಕೋಟಿಯ
ದಳದಲಿಹುದ್+ಅಲ್ಲಿಂದ +ಮೇಲಣ
ದಳತೆಯದು +ಚೌಷಷ್ಟಿ +ಕೋಟಿ+ಅಜಾಂಡ +ಪರಿಯಂತ

ಅಚ್ಚರಿ:
(೧) ಒಂದು ಕೋಟಿ, ಚೌಷಷ್ಟಿ ಕೋಟಿ, ಇಪ್ಪತ್ತೈದು ಕೋಟಿ – ಅಳತೆಯ ವಿವರ