ಪದ್ಯ ೧೭: ಅರ್ಜುನನು ಇಂದ್ರಕೀಲ ಪರ್ವತಕ್ಕೆ ಹೇಗೆ ಬೀಳ್ಕೊಟ್ಟನು?

ಎನುತ ತೇರಿನೊಳೊಂದು ಕಾಲಿ
ಟ್ಟನು ಧನಂಜಯನಿಂದ್ರಕೀಲದ
ವನಕೆ ಕೈಮುಗಿದೆರಗಿ ನುಡಿದನು ಮಧುರ ವಚನದಲಿ
ಮುನಿಜನವೆ ಪರ್ವತವೆ ಪಂಕಜ
ವನವೆ ತರುಲತೆಗುಲ್ಮ ಖಗ ಮೃಗ
ವನಚರರೆ ತಾ ಹೋಗಿ ಬಹೆನೈ ನಿಮ್ಮನುಜ್ಞೆಯಲಿ (ಅರಣ್ಯ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ಅರ್ಜುನನು ರಥದಲ್ಲಿ ಒಂದು ಕಾಲಿಟ್ಟನು, ಕೆಳಗಿಳಿದು ಇಂದ್ರನೀಲ ವನಕ್ಕೆ ನಮಸ್ಕಾರವನ್ನು ಮಾಡಿ ಕೈಮುಗಿದು ನಿಂತು, ಓ ಇಂದ್ರಕೀಲದಲ್ಲಿರುವ ಮುನಿಜನರೇ, ಪರ್ವತವೇ, ಕಮಲ ವನಗಳೇ, ಮರ, ಬಳ್ಲಿ, ಪೊದೆಗಳೇ, ಪಕ್ಷಿಗಳೇ, ಮೃಗಗಳೇ, ವನಾರರೇ, ಮುನಿಜನರೇ, ನಾನು ನಿಮ್ಮ ಕರುಣೆಯಿಂದ ಇಷ್ಟು ದಿನ ಇಲ್ಲಿ ಸುಖವಾಗಿದ್ದೆನು, ಈಗ ನೀವು ಅಪ್ಪಣೆನೀಡಿ, ನಾನು ಹೋಗಿ ಬರುವೆ ಎಂದು ಬೇಡಿದನು.

ಅರ್ಥ:
ತೇರು: ರಥ; ಕಾಲು: ಪಾದ; ವನ: ಕಾಡು; ಎರಗು: ನಮಸ್ಕರಿಸು; ನುಡಿ: ಮಾತಾಡು; ಮಧುರ: ಸಿಹಿಯಾದುದು, ಸವಿಯಾದುದು; ವಚನ: ಮಾತು; ಮುನಿ: ಋಷಿ; ಜನ: ಗುಂಪು, ಮನುಷ್ಯ; ಪರ್ವತ: ಗಿರಿ; ಪಂಕಜ: ತಾವರೆ; ವನ: ಕಾಡು; ತರು: ಮರ; ಲತೆ: ಬಳ್ಳಿ; ಗುಲ್ಮ: ಪೊದೆ, ಪೊದರು; ಖಗ: ಪಕ್ಷಿ; ಮೃಗ: ಪ್ರಾಣಿ; ವನಚರರು: ಕಾಡಿನಲ್ಲಿ ಚಲಿಸುವ, ಜೀವಿಸುವ; ಹೋಗಿಬಹೆನೈ: ಹೋಗಿಬರುವೆ; ಅನುಜ್ಞೆ: ಒಪ್ಪಿಗೆ, ಅಪ್ಪಣೆ;

ಪದವಿಂಗಡಣೆ:
ಎನುತ +ತೇರಿನೊಳ್+ಒಂದು +ಕಾಲಿ
ಟ್ಟನು +ಧನಂಜಯನ್+ಇಂದ್ರಕೀಲದ
ವನಕೆ+ ಕೈಮುಗಿದ್+ಎರಗಿ +ನುಡಿದನು +ಮಧುರ +ವಚನದಲಿ
ಮುನಿಜನವೆ+ ಪರ್ವತವೆ+ ಪಂಕಜ
ವನವೆ+ ತರು+ಲತೆ+ಗುಲ್ಮ +ಖಗ +ಮೃಗ
ವನಚರರೆ +ತಾ +ಹೋಗಿ +ಬಹೆನೈ+ ನಿಮ್+ಅನುಜ್ಞೆಯಲಿ

ಅಚ್ಚರಿ:
(೧) ವನಕ್ಕೆ ತನ್ನ ಕೃತಜ್ಞತೆಯನ್ನು ತಿಳಿಸುವ ಪರಿ – ಇಂದ್ರಕೀಲದ ವನಕೆ ಕೈಮುಗಿದೆರಗಿ.. ತಾ ಹೋಗಿ ಬಹೆನೈ ನಿಮ್ಮನುಜ್ಞೆಯಲಿ;

ಪದ್ಯ ೧೬: ಅರ್ಜುನನು ಮಾತಲಿಗೆ ಏನು ಹೇಳಿದನು?

ಬಲ್ಲರಾರದನಶ್ವಮೇಧದ
ಮಲ್ಲರನು ಕೃತರಾಜಸೂಯರು
ಬಲ್ಲರೇ ಕಡೆಬೀಡ ಕೋಟಿಯ ಗುಡಿಯ ಬೊಡ್ಡಿಯರ
ಎಲ್ಲಿಯಮರಾವತಿ ನರಾಧಮ
ರೆಲ್ಲಿ ನಾವೀಶ್ವರನ ಕರುಣದ
ಭುಲ್ಲವಣೆಯಲಿ ಭಾಗ್ಯನೆಂದನು ನಗುತ ಕಲಿಪಾರ್ಥ (ಅರಣ್ಯ ಪರ್ವ, ೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಮಾತಲಿಯ ಮಾತಿಗೆ ಅರ್ಜುನನು, ಅಮರಾವತಿಯ ವಾಸದ ಪೂರ್ಣ ಸಂತೋಷ ವೈಭವಗಳನ್ನು ಯಾರು ಬಲ್ಲರು? ಅಶ್ವಮೇಧ, ರಾಜಸೂಯ ಯಾಗಗಳನ್ನು ಮಾಡಿದ ವೀರರು ಅಮರಾವತಿಯ ಕಡೆಯ ಬೀಡುಗಳಲ್ಲಿ ದೊರಕುವ ಅಪ್ಸರೆಯರನ್ನು ಮಾತ್ರ ಕಾಣಬಹುದು, ಆದರೆ ಪರಮೇಶ್ವರನು ನನ್ನ ಮೇಲೆ ತೋರಿಸಿದ ಕೃಪೆಯ ದೆಸೆಯಿಮ್ದ ನನಗೆ ಅಮರಾವತಿಯ ಅರಮನೆಯ ವಾಸಲಭಿಸಿತು. ಈ ಭಾಗ್ಯವು ಶಂಕರನ ಕರುಣೆ ಎಂದು ನಗುತ್ತಾ ಹೇಳಿದನು.

ಅರ್ಥ:
ಬಲ್ಲರು: ತಿಳಿದವರು; ಅಶ್ವಮೇಧ: ಕುದುರೆಯನ್ನು ಬಲಿಕೊಡುವ ಒಂದು ಯಾಗ; ಮಲ್ಲ: ಜಟ್ಟಿ ; ಕೃತ: ಮಾಡು; ರಾಜಸೂಯ: ಚಕ್ರವರ್ತಿಯು ಮಾಡುವ ಒಂದು ಬಗೆಯ ಯಾಗ; ಬಲ್ಲರು: ತಿಳಿದ; ಕಡೆ: ಕೊನೆ; ಬೀಡು: ಮನೆ, ಗೃಹ; ಕೋಟೆ: ಊರಿನ ರಕ್ಷಣೆಗಾಗಿ ಕಟ್ಟಿದ ಗೋಡೆ; ಗುಡಿ: ಆಲಯ; ಬೊಡ್ಡಿ: ಸೂಳೆ, ವೇಶ್ಯೆ, ಅಪ್ಸರೆ; ನರ: ಮನುಷ್ಯ; ಅಧಮ: ಕೀಳು, ನೀಚ; ಈಶ್ವರ: ಶಂಕರ; ಕರುಣೆ: ದಯೆ; ಭುಲ್ಲವಣೆ: ಹರ್ಷ; ಭಾಗ್ಯ: ಅದೃಷ್ಟ, ಸುದೈವ; ನಗು: ಸಂತಸ; ಕಲಿ: ಶೂರ;

ಪದವಿಂಗಡಣೆ:
ಬಲ್ಲರಾರ್+ಅದನ್+ಅಶ್ವಮೇಧದ
ಮಲ್ಲರನು+ ಕೃತ+ರಾಜಸೂಯರು
ಬಲ್ಲರೇ +ಕಡೆ+ಬೀಡ+ ಕೋಟಿಯ+ ಗುಡಿಯ +ಬೊಡ್ಡಿಯರ
ಎಲ್ಲಿ+ಅಮರಾವತಿ+ ನರ+ಅಧಮ
ರೆಲ್ಲಿ +ನಾವ್+ಈಶ್ವರನ+ ಕರುಣದ
ಭುಲ್ಲವಣೆಯಲಿ +ಭಾಗ್ಯನೆಂದನು+ ನಗುತ+ ಕಲಿಪಾರ್ಥ

ಅಚ್ಚರಿ:
(೧) ಹೋಲಿಕೆ ಮಾಡುವ ಪರಿ – ಎಲ್ಲಿಯಮರಾವತಿ ನರಾಧಮರೆಲ್ಲಿ
(೨) ಯಾಗಗಳ ಹೆಸರು – ಅಶ್ವಮೇಧ, ರಾಜಸೂಯ
(೩) ಅಮರಾವತಿಯಲ್ಲಿ ಅಪ್ಸರೆಯರು ಕಾಣುವ ಸ್ಥಳ – ಕಡೆಬೀಡ ಕೋಟಿಯ ಗುಡಿಯ ಬೊಡ್ಡಿಯರ

ಪದ್ಯ ೧೫: ಯಾವ ಪುರವು ಅರ್ಜುನನಿಗೆ ವಶವಾಯಿತು?

ಏಳು ಫಲುಗುಣ ಹರಿ ವರೂಥದ
ಮೇಲೆ ಬಿಜಯಂಗೈವ ಬಹಳ ಫ
ಲಾಳಿಯಿದೆಲಾ ನಿನ್ನ ಪುಣ್ಯದ್ರುಮದ ಬೇರೊಡೆದು
ಸಾಲಕುರಿದರಿಹಿಗಳ ಕರ್ಮದ
ಕೂಲಿಗರ ಜಡ ಜಂಘ ಪೂಗರ
ಜಾಲ ಸಿರಿಯನಿಮಿಷರಪುರಿ ವಶವಾಯ್ತು ನಿನಗೆಂದ (ಅರಣ್ಯ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಕಂಡು ಮಾತಲಿಯು, ಏಳು ಅರ್ಜುನ, ನಿನ್ನ ಪುಣ್ಯ್ದ ವೃಕ್ಷದ ಬೇರು ಚಿಗುರಿ ಇಂದ್ರರಥದ ಮೇಲೆ ಪ್ರಯಾಣ ಮಾಡುವ ಫಲ ದೊರಕಿದೆ. ಅನೇಕ ಪಶುಯಾಗಗಳನ್ನು ಮಾಡಿದವರು ಸ್ಥಿರಾಸನದಲ್ಲಿ ಕುಳಿತು ತಪಸ್ಸು ಮಾಡಿದವರು, ತಮ್ಮ ಸತ್ಕರ್ಮಗಳಿಗೆ ಕೂಲಿಯಾಗಿ ಪಡೆಯುವ ಧನದಂತಿರುವ ಅಮರಾವತಿಯು ನಿನಗೆ ವಶವಾಗಿದೆ ಎಂದು ಹೇಳಿದನು.

ಅರ್ಥ:
ಏಳು: ಮೇಲೇಳು; ಹರಿ: ಇಂದ್ರ; ವರೂಥ: ತೇರು, ರಥ; ಬಿಜಯಂಗೈ: ದಯಮಾಡಿಸು; ಬಹಳ: ತುಂಬ; ಫಲ: ಪರಿಣಾಮ; ಆಳಿ: ಗುಂಪು; ಪುಣ್ಯ: ಸದಾಚಾರ; ದ್ರುಮ: ಮರ, ವೃಕ್ಷ; ಬೇರು: ಅಡಿಭಾಗ, ಮೂಲ; ಕರ್ಮ: ಕಾರ್ಯ, ಕೆಲಸ; ಕೂಲಿ: ದುಡಿತ; ಜಡ: ಅಚಲ, ಅಚೇತನ; ಪೂಗ: ಅಡಿಕೆ; ಜಾಲ: ಗುಂಪು; ಸಿರಿ: ಐಶ್ವರ್ಯ; ಅನಿಮಿಷ: ದೇವತೆ; ಅನಿಮಿಷಪುರ: ಅಮರಾವತಿ; ವಶ: ಅಧೀನ;

ಪದವಿಂಗಡಣೆ:
ಏಳು +ಫಲುಗುಣ +ಹರಿ +ವರೂಥದ
ಮೇಲೆ +ಬಿಜಯಂಗೈವ +ಬಹಳ +ಫ
ಲಾಳಿಯಿದೆಲಾ+ ನಿನ್ನ+ ಪುಣ್ಯದ್ರುಮದ+ ಬೇರೊಡೆದು
ಸಾಲಕುರಿದರಿಹಿಗಳ+ ಕರ್ಮದ
ಕೂಲಿಗರ+ ಜಡ +ಜಂಘ +ಪೂಗರ
ಜಾಲ+ ಸಿರಿ+ಅನಿಮಿಷರಪುರಿ+ ವಶವಾಯ್ತು +ನಿನಗೆಂದ

ಅಚ್ಚರಿ:
(೧) ಅಮರಾವತಿಯನ್ನು ಅನಿಮಿಷರಪುರ ಎಂದು ಕರೆದಿರುವುದು

ಪದ್ಯ ೧೪: ಇಂದ್ರನ ರಥದ ಆಗಮನ ಹೇಗಿತ್ತು?

ಲಲಿತ ಹೇಷಾಧ್ವನಿಯ ಹಯಮಂ
ಡಲಿಯ ಮೌಳಿಯ ಮೇಲು ದಾಯದ
ಲುಳಿಯ ಚೀತ್ಕೃತಿರವದ ಪಲಪಲತೆರದ ಪಳಹರದ
ಚಲತುರಗ ಖುರಹತಿಯ ರಭಸೋ
ಚ್ಚಲಿತ ಧೂಳೀಧೂಸರದ ರಥ
ದೊಳಗೆ ನಿಂದ ಶಕ್ರಸಾರಥಿ ನುಡಿಸಿದನು ನರನ (ಅರಣ್ಯ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಇಂದ್ರನ ರಥದ ಕುದುರೆಗಳು ಹೇಷಾರವವನ್ನು ಮಾಡುತ್ತಾ ತಲೆಯನ್ನು ಮೇಲೆತ್ತಿ ನಿಂತವು. ರಥವನ್ನು ನಿಲ್ಲಿಸುವ ಶಬ್ದವಾಯಿತು. ಹಲವು ಬಗೆಯ ಬಾವುಟಗಳು ಹಾರಾಡುತ್ತಿದ್ದವು. ಕುದುರೆಗಳ ಖುರಪುಟದ ಹೊಡೆತದಿಂದೆದ್ದ ಧೂಳು ರಥದೊಳಗೆ ಆವರಿಸಿತು. ಆಗ ಇಂದ್ರನ ಸಾರಥಿಯು ಎದ್ದು ನಿಂತು ಅರ್ಜುನನನ್ನು ಮಾತನಾಡಿಸಿದನು.

ಅರ್ಥ:
ಲಲಿತ: ಚೆಲುವಾದ, ಸುಂದರವಾದ; ಹೇಷಧ್ವನಿ: ಕುದುರೆಧ್ವನಿ, ಕೆನೆಯುವಿಕೆ; ಹಯ: ಕುದುರೆ, ಅಶ್ವ; ಮಂಡಲಿ: ತಿರುಗುವಿಕೆ, ಸಮೂಹ; ಮೌಳಿ: ಶಿರ; ಲುಳಿ: ರಭಸ; ರವ: ಶಬ್ದ; ಚೀತ್ಕೃತಿ: ಚೀತ್ಕಾರ; ಪಲ: ಕಾಲದ ಒಂದು ಪರಿಮಾಣ; ಚಲ: ಚಲಿಸುವ; ತುರಗ: ಕುದುರೆ; ಖುರ: ಕುದುರೆಗಳ ಕಾಲಿನ ಗೊರಸು; ಹತಿ: ಪೆಟ್ಟು, ಹೊಡೆತ; ರಭಸ; ವೇಗ; ಉಚ್ಚಲ: ಮೇಲಕ್ಕೆ – ಚಿಮ್ಮು; ಧೂಳು: ಮಣ್ಣಿನ ಪುಡಿ; ಧೂಸರ: ಕಂದು ಬಣ್ಣ; ರಥ: ಬಂಡಿ; ಶಕ್ರ: ಇಂದ್ರ; ಸಾರಥಿ: ರಥವನ್ನು ಓಡಿಸುವವ; ನುಡಿಸು: ಮಾತನಾಡಿಸು; ನರ: ಅರ್ಜುನ;

ಪದವಿಂಗಡಣೆ:
ಲಲಿತ +ಹೇಷಾ+ಧ್ವನಿಯ +ಹಯ+ಮಂ
ಡಲಿಯ +ಮೌಳಿಯ +ಮೇಲುದ್ + ಆಯದ
ಲುಳಿಯ+ ಚೀತ್ಕೃತಿ+ರವದ+ ಪಲಪಲತೆರದ+ ಪಳಹರದ
ಚಲತುರಗ+ ಖುರಹತಿಯ +ರಭಸೋ
ಚ್ಚಲಿತ+ ಧೂಳೀ+ಧೂಸರದ +ರಥ
ದೊಳಗೆ +ನಿಂದ +ಶಕ್ರ+ಸಾರಥಿ+ ನುಡಿಸಿದನು +ನರನ

ಅಚ್ಚರಿ:
(೧) ಪಲಪಲತೆರದ ಪಳಹರದ – ಪದಗಳ ಬಳಕೆ
(೨) ಹೇಷಾಧ್ವನಿ, ಚೀತ್ಕೃತಿರವ – ಪದಗಳ ಬಳಕೆ

ಪದ್ಯ ೧೩: ಅರ್ಜುನನು ಯಾವ ರಥಕ್ಕೆ ಎದಿರಾಗಿ ನಡೆದನು?

ಏನಿದಚ್ಚರಿ ಮೇಲೆ ಮೇಲೆ ನ
ವೀನದರುಶನವೆನ್ನ ಪುಣ್ಯವ
ನೂನವೈಸಲೆಯೆನುತ ನರನಿದಿರಾದನಾ ರಥಕೆ
ನೀನಹೈ ಕಲಿ ಪಾರ್ಥನೆಂಬ ಮ
ಹಾನರೇಶ್ವರನೆನುತ ಮಿಗೆ ಸ
ನ್ಮಾನಿಸುತ ಸುರಪತಿಯ ಸಾರಥಿ ನಿಲಿಸಿದನು ರಥವ (ಅರಣ್ಯ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಇಂದ್ರನ ಹೊಳೆಯುವ ರಥವನ್ನು ನೋಡಿದ ಅರ್ಜುನನು, ನನ್ನ ಪುಣ್ಯಕ್ಕೆ ಕೊರತೆಯೇ ಇಲ್ಲ, ಇನ್ನು ಮೇಲೆ ನೂತನ ದರ್ಶನಗಳಾಗುತ್ತವೆ ಎಂದುಕೊಂಡು ಅರ್ಜುನನು ಇಂದ್ರ ರಥಕ್ಕೆ ಎದಿರಾಗಿ ಹೋದನು. ಇಂದ್ರನ ಸಾರಥಿ ಮಾತಲಿಯು, ವೀರನಾದ ಅರ್ಜುನನು, ಮಹಾಕ್ಷತ್ರಿಯನು ನೀನೆಯೆಲ್ಲವೇ ಎಂದು ಹೇಳುತ್ತ ಅರ್ಜುನನ ಬಳಿ ರಥವನ್ನು ನಿಲ್ಲಿಸಿದನು.

ಅರ್ಥ:
ಅಚ್ಚರಿ: ಆಶ್ಚರ್ಯ; ನವೀನ: ಹೊಸ; ದರುಶನ: ನೋಟ; ಪುಣ್ಯ: ಸದಾಚಾರ; ಊನ: ಕುಂದು ಕೊರತೆ; ನರ: ಅರ್ಜುನ; ಇದಿರು: ಎದುರು; ರಥ: ಬಂಡಿ; ಕಲಿ: ಪರಾಕ್ರಮಿ; ಮಿಗೆ: ಮತ್ತು; ಸನ್ಮಾನ: ಗೌರವ; ಸುರಪತಿ: ಇಂದ್ರ; ಸಾರಥಿ: ರಥವನ್ನು ಓಡಿಸುವವ; ನಿಲಿಸು: ತಡೆ;

ಪದವಿಂಗಡಣೆ:
ಏನಿದಚ್ಚರಿ +ಮೇಲೆ +ಮೇಲೆ +ನ
ವೀನ+ದರುಶನವ್+ಎನ್ನ +ಪುಣ್ಯವನ್
ಊನ+ವೈಸಲೆಯೆನುತ +ನರನ್+ಇದಿರಾದನಾ+ ರಥಕೆ
ನೀನಹೈ+ ಕಲಿ+ ಪಾರ್ಥನೆಂಬ+ ಮ
ಹಾ+ನರೇಶ್ವರನ್+ಎನುತ +ಮಿಗೆ +ಸ
ನ್ಮಾನಿಸುತ +ಸುರಪತಿಯ +ಸಾರಥಿ +ನಿಲಿಸಿದನು +ರಥವ

ಅಚ್ಚರಿ:
(೧) ಮಹಾನರೇಶ್ವರ, ಪಾರ್ಥ, ನರ – ಅರ್ಜುನನನ್ನು ಕರೆದ ಪರಿ