ಪದ್ಯ ೭: ದೇವತೆಗಳು ಯಾವ ಅಸ್ತ್ರಗಳನ್ನು ನೀಡಿದರು?

ಆ ಮಹಾಸ್ತ್ರಕೆ ಬಳುವಳಿಯ ಕೊ
ಳ್ಳೀಮದೀಯಾಸ್ತ್ರವನೆನುತ ಸು
ತಾಮನಿತ್ತನು ದಿವ್ಯ ಬಾಣವನಿಂದ್ರ ಸಂಜ್ಞಿಕವ
ಸಾಮವರ್ತಿಕ ದಂಡ ವಾರುಣ
ತಾಮಸದ ಸಮ್ಮೋಹನವಿದೆಂ
ದಾ ಮಹಾಂತಕ ವರುಣ ಧನದರು ಕೊಟ್ಟರಂಬುಗಳ (ಅರಣ್ಯ ಪರ್ವ, ೮ ಸಂಧಿ, ೭ ಪದ್ಯ)

ತಾತ್ಪರ್ಯ:
ಆ ಪಾಶುಪತಾಸ್ತ್ರಕ್ಕೆ ಬಳುವಳಿಯಾಗಿ ನನ್ನ ಐಂದ್ರಾಸ್ತ್ರವನ್ನು ತೆಗೆದುಕೋ ಎಂದು ಇಂದ್ರನು ತನ್ನ ಅಸ್ತ್ರವನ್ನು ಅರ್ಜುನನಿಗೆ ನೀಡಿದನು. ಯಮನು ಯಮದಂಡಾಸ್ತ್ರವನ್ನು ವರುಣನು ಅಮ್ಮೋಹನಾಸ್ತ್ರವನ್ನು, ಕುಬೇರನು ಅಂತರ್ಧನಾಸ್ತ್ರವನ್ನು ನೀಡಿದರು.

ಅರ್ಥ:
ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ಬಳುವಳಿ: ಕಾಣಿಕೆ, ಕೊಡುಗೆ; ಕೊಡು: ನೀಡು; ಬಾಣ: ಶರ; ಸುತ್ರಾಮ: ಇಂದ್ರ, ದೇವೇಂದ್ರ; ಸಂಜ್ಞಿಕ: ಗುರುತು; ಸಾಮವರ್ತಿಕ: ಯಮ; ದಂಡ: ಕೋಲು; ತಾಮಸ: ಕತ್ತಲೆ, ಅಂಧಕಾರ; ಸಮ್ಮೋಹ: ಮೋಹ, ಆಕರ್ಷಣೆ; ಅಂತಕ: ಯಮ; ವರುಣ: ನೀರಿನ ಅಧಿದೇವತೆ; ಧನದರು: ಕುಬೇರ; ಕೊಟ್ಟರು: ನೀಡಿದರು; ಅಂಬು: ಬಾಣ;

ಪದವಿಂಗಡಣೆ:
ಆ+ ಮಹಾಸ್ತ್ರಕೆ+ ಬಳುವಳಿಯ +ಕೊಳ್
ಈ+ಮದೀಯಾಸ್ತ್ರವನ್+ಎನುತ+ ಸು
ತ್ರಾಮನ್+ಇತ್ತನು +ದಿವ್ಯ +ಬಾಣವನ್+ಇಂದ್ರ+ ಸಂಜ್ಞಿಕವ
ಸಾಮವರ್ತಿಕ+ ದಂಡ +ವಾರುಣ
ತಾಮಸದ+ ಸಮ್ಮೋಹನನ್+ಇದೆಂದ್
ಆ+ ಮಹಾಂತಕ+ ವರುಣ+ ಧನದರು+ ಕೊಟ್ಟರ್+ಅಂಬುಗಳ

ಅಚ್ಚರಿ:
(೧) ಮಹಾಸ್ತ್ರ, ಮಹಾಂತಕ – ಮಹಾ ಪದದ ಬಳಕೆ
(೨) ಸುತ್ರಾಮ, ಇಂದ್ರ – ಸಮನಾರ್ಥಕ ಪದ

ಪದ್ಯ ೬: ಅರ್ಜುನನು ದೇವತೆಗಳನ್ನು ಹೇಗೆ ಬರೆಮಾಡಿಕೊಂಡನು?

ಕಂಡನನಿಬರ ಬರವನೊಲಿದಿದ
ರ್ಗೊಂಡವನರವರುಚಿತದಲಿ ಮುಂ
ಕೊಂಡು ಮನ್ನಿಸಿ ಮನವ ಪಡೆದನು ಲೋಕ ಪಾಲಕರ
ಖಂಡಪರಶುವಿನಸ್ತ್ರವನು ಕೈ
ಕೊಂಡೆ ನಿನಗೇನರಿದು ನೀನು
ದ್ದಂಡ ಬಲನೆಂದನಿಬರುಪಚರಿಸಿದನು ಫಲುಗುಣನ (ಅರಣ್ಯ ಪರ್ವ, ೮ ಸಂಧಿ, ೬ ಪದ್ಯ)

ತಾತ್ಪರ್ಯ:
ಅರ್ಜುನನು ಅವರೆಲ್ಲರೂ ಬಂದುದನ್ನು ಕಂಡು, ಸರಿಯಾದ ರೀತಿಯಲ್ಲಿ ಗೌರವಿಸಿ, ಲೋಕಪಾಲಕರ ಮನಸ್ಸನ್ನು ಗೆದ್ದನು. ಅವರೆಲ್ಲರೂ ನೀನು ಮಹಾಪರಾಕ್ರಮಶಾಲಿ, ಶಿವನ ಪಾಶುಪತಾಸ್ತ್ರವನ್ನು ಪಡೆದ ಮಹಾವೀರ, ನಿನಗೆ ಅಸಾಧ್ಯವಾದುದಾದರೂ ಏನು ಎಂದು ಅರ್ಜುನನನ್ನು ಹೊಗಳಿದರು.

ಅರ್ಥ:
ಕಂಡನು: ನೋಡಿದ; ಅನಿಬರ: ಅವರೆಲ್ಲರನ್ನು; ಬರವ: ಆಗಮನ; ಒಲಿ: ಪ್ರೀತಿ, ಒಲವು; ಇದರ್ಗೊಂಡು: ಎದುರುನೋಡು; ಉಚಿತ: ಸರಿಯಾದ; ಮುಂಕೊಂಡು: ಮುಂದೆ, ಅಗ್ರಭಾಗ; ಮನ್ನಿಸು: ಗೌರವಿಸು; ಮನ: ಮನಸ್ಸು; ಪಡೆ: ತೆಗೆದುಕೋ; ಲೋಕ: ಜಗತ್ತು; ಪಾಲಕ: ರಕ್ಷಕ; ಖಂಡ: ತುಂಡು, ಚೂರು; ಪರಶು: ಕೊಡಲಿ, ಕುಠಾರ; ಅಸ್ತ್ರ: ಶಸ್ತ್ರ; ಕೈಕೊಂಡು: ಪಡೆದು; ಅರಿ: ತಿಳಿ; ಉದ್ದಂಡ: ಪ್ರಬಲವಾದ, ಪ್ರಚಂಡ; ಬಲ: ಶಕ್ತಿ; ಉಪಚರಿಸು: ಸತ್ಕರಿಸು;

ಪದವಿಂಗಡಣೆ:
ಕಂಡನ್+ಅನಿಬರ+ ಬರವನ್+ಒಲಿದ್+ಇದ
ರ್ಗೊಂಡವನರವರ್+ಉಚಿತದಲಿ+ ಮುಂ
ಕೊಂಡು +ಮನ್ನಿಸಿ+ ಮನವ+ ಪಡೆದನು+ ಲೋಕ +ಪಾಲಕರ
ಖಂಡ+ಪರಶುವಿನ್+ಅಸ್ತ್ರವನು +ಕೈ
ಕೊಂಡೆ +ನಿನಗೇನ್+ಅರಿದು+ ನೀನ್
ಉದ್ದಂಡ +ಬಲನೆಂದ್+ಅನಿಬರ್+ಉಪಚರಿಸಿದನು+ ಫಲುಗುಣನ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮುಂಕೊಂಡು ಮನ್ನಿಸಿ ಮನವ

ಪದ್ಯ ೫: ಸ್ವರ್ಗದಿಂದ ಅರ್ಜುನನನ್ನು ನೋಡಲು ಯಾರು ಬಂದರು?

ಹಿಡಿದ ಸಾಲಿನ ಸತ್ತಿಗೆಯ ಬಲ
ಕೆಡಕೆ ಕೆದರುವ ಸೀಗುರಿಯ ಮುಂ
ಗುಡಿಯ ವಿದ್ಯಾಧರ ಮಹೋರಗ ಯಕ್ಷ ರಾಕ್ಷಸರ
ಜಡಿವ ಕಹಳಾರವದ ನೆಲನು
ಗ್ಗಡಣೆಗಳ ಕೈವಾರಿಗಳ ಗಡ
ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇಂದ್ರ (ಅರಣ್ಯ ಪರ್ವ, ೮ ಸಂಧಿ, ೫ ಪದ್ಯ)

ತಾತ್ಪರ್ಯ:
ಕೈಯಲ್ಲಿ ಹಿಡಿದ ಛತ್ರಿಗಳ ಸಾಲುಗಳು, ಎಡಕ್ಕೆ ಬಲಕ್ಕೆ ಬೀಸುವ ಚಾಮರಗಳು, ಯಕ್ಷರು, ರಾಕ್ಷಸರು, ವಿದ್ಯಾಧರರು, ಮಹಾ ಸರ್ಪಗಳೊಡನೆ ದೇವೇಂದ್ರನು ಬಂದನೆಂದು ಭೂಮಿಯಿಡೀ ಕೇಳುವಂತೆ ಸ್ತುತಿಪಾಠಕರು ಘೋಷಿಸಿದರು.

ಅರ್ಥ:
ಹಿಡಿ:ಮುಷ್ಟಿ, ಬಂಧನ; ಸಾಲು: ಆವಳಿ, ಓಲಿ, ಶ್ರೇಣಿ; ಸತ್ತಿಗೆ: ಛತಿ; ಬಲ: ಬಲಗಡೆ, ದಕ್ಷಿಣ ಭಾಗ; ಕೆದರು: ಹರಡು; ಸೀಗುರಿ: ಚಾಮರ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ವಿದ್ಯಾಧರ: ದೇವತೆಗಳ ಒಂದು ವರ್ಗ; ಮಹ: ದೊಡ್ಡ, ಶ್ರೇಷ್ಠ; ಉರಗ: ಹಾವು; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ರಾಕ್ಷಸ: ದಾನವ; ಜಡಿ: ಹೊಡೆತ, ಗದರಿಸು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ರವ: ಶಬ್ದ; ನೆಲ: ಭೂಪ್ರದೇಶ; ಉಗ್ಗಡ: ಅತಿಶಯ, ಶ್ರೇಷ್ಠ; ಕೈವಾರಿ: ಹೊಗಳು ಭಟ್ಟ; ಗಡಬಡ: ಗಟ್ಟಿಯಾದ ಶಬ್ದ; ಗರುವಾಯಿ: ದೊಡ್ಡತನ, ಠೀವಿ; ಗಗನ: ಆಗಸ; ಇಳಿ: ಕೆಳಕ್ಕೆ ಬಾ; ಅಮರೇಂದ್ರ: ಇಂದ್ರ, ಶಕ್ರ;

ಪದವಿಂಗಡಣೆ:
ಹಿಡಿದ+ ಸಾಲಿನ +ಸತ್ತಿಗೆಯ +ಬಲ
ಕೆಡಕೆ +ಕೆದರುವ +ಸೀಗುರಿಯ +ಮುಂ
ಗುಡಿಯ +ವಿದ್ಯಾಧರ+ ಮಹ+ಉರಗ+ ಯಕ್ಷ +ರಾಕ್ಷಸರ
ಜಡಿವ+ ಕಹಳಾ+ರವದ+ ನೆಲನ್
ಉಗ್ಗಡಣೆಗಳ +ಕೈವಾರಿಗಳ+ ಗಡ
ಬಡೆಯ +ಗರುವಾಯಿಯಲಿ +ಗಗನದಿನ್+ಇಳಿದನ್+ಅಮರೇಂದ್ರ

ಅಚ್ಚರಿ:
(೧) ಇಂದ್ರ ಬಂದನೆಂದು ಹೇಳುವ ಪರಿ – ನೆಲನುಗ್ಗಡಣೆಗಳ ಕೈವಾರಿಗಳ ಗಡ ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇಂದ್ರ

ಪದ್ಯ ೪: ಇಂದ್ರಕೀಲ ಪರ್ವತಕ್ಕೆ ಅರ್ಜುನನನ್ನು ನೋಡಲು ಯಾರು ಬಂದರು?

ವಿಕಟ ರಾಕ್ಷಸ ಯಕ್ಷ ಜನ ಗು
ಹ್ಯಕರು ಕಿನ್ನರಗಣಸಹಿತ ಪು
ಷ್ಪಕದಲೈತಂದನು ಧನೇಶ್ವರನಾ ತಪೋವನಕೆ
ಸಕಲ ಪಿತೃಗಣಸಹಿತ ದೂತ
ಪ್ರಕರ ಧರ್ಮಾಧ್ಯಕ್ಷರೊಡನಂ
ತಕನು ಬೆರಸಿದನಿಂದ್ರಕೀಳ ಮಹಾವನಾಂತರವ (ಅರಣ್ಯ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ವಿಕಾರ ರೂಪದ ರಾಕ್ಷಸರು, ಯಕ್ಷರು, ಗುಹ್ಯಕರು, ಕಿನ್ನರರು, ಗಣಗಳೊಡನೆ ಕುಬೇರನು ಪುಷ್ಪಕ ವಿಮಾನದಲ್ಲಿ ಇಂದ್ರಕೀಲ ವನಕ್ಕೆ ಬಂದನು. ಯಮನು ಪಿತೃಗಣ ಧರ್ಮಾಧ್ಯಕ್ಷರ ಪರಿವಾರದೊಡನೆ ಇಂದ್ರಕೀಲ ಪರ್ವತಕ್ಕೆ ಅರ್ಜುನನನ್ನು ಕಾಣಲು ಬಂದನು.

ಅರ್ಥ:
ವಿಕಟ: ವಿಕಾರವಾದ, ಕುರೂಪಗೊಂಡ; ರಾಕ್ಷಸ: ದಾನವ; ಯಕ್ಷ: ದೇವತೆಗಳ ಒಂದು ವರ್ಗ; ಗುಹ್ಯಕ: ಯಕ್ಷ; ಕಿನ್ನರ: ಕಿಂಪುರುಷ, ಕುಬೇರನ ಪ್ರಜೆ; ಗಣ: ಗುಂಪು; ಸಹಿತ: ಜೊತೆ; ಪುಷ್ಪಕ: ವಿಮಾನದ ಹೆಸರು; ಧನೇಶ್ವರ: ಕುಬೇರ; ತಪೋವನ: ತಪಸ್ಸು ಮಾಡುವ ಕಾಡು; ಸಕಲ: ಎಲ್ಲಾ; ಪಿತೃ: ಪೂರ್ವಜ; ದೂತ: ರಾಯಭಾರಿ, ಸೇವಕ; ಪ್ರಕರ: ಗುಂಪು, ಸಮೂಹ; ಅಧ್ಯಕ್ಷ: ಒಡೆಯ; ಧರ್ಮ: ಧಾರಣೆ ಮಾಡಿದುದು; ಅಂತಕ: ಯಮ; ಬೆರಸು: ಸೇರು, ಕೂಡು; ಅಂತರ: ಸಮೀಪ; ವನ: ಕಾಡು; ಐತರು: ಬಂದು ಸೇರು;

ಪದವಿಂಗಡಣೆ:
ವಿಕಟ+ ರಾಕ್ಷಸ+ ಯಕ್ಷ +ಜನ +ಗು
ಹ್ಯಕರು +ಕಿನ್ನರ+ಗಣ+ಸಹಿತ+ ಪು
ಷ್ಪಕದಲ್+ಐತಂದನು +ಧನೇಶ್ವರನ್+ಆ+ ತಪೋವನಕೆ
ಸಕಲ+ ಪಿತೃ+ಗಣ+ಸಹಿತ +ದೂತ
ಪ್ರಕರ+ ಧರ್ಮಾಧ್ಯಕ್ಷರೊಡನ್+
ಅಂತಕನು +ಬೆರಸಿದನ್+ಇಂದ್ರಕೀಳ +ಮಹಾವನಾಂತರವ

ಅಚ್ಚರಿ:
(೧) ತಪೋವನ, ಮಹಾವನ – ಇಂದ್ರಕೀಲವನವನ್ನು ಕರೆದ ಪರಿ
(೨) ಧನೇಶ್ವರ, ಅಂತಕ – ಕುಬೇರ, ಯಮನನ್ನು ಕರೆದ ಪರಿ

ಪದ್ಯ ೩: ಅರ್ಜುನನನ್ನು ನೋಡಲು ಯಾರು ಬಂದರು?

ಅರಸ ಕೇಳದ್ಭುತವನಿತ್ತಲು
ಚರಮ ದಿಗ್ಭಾಗದಲಖಿಳ ಜಲ
ಚರ ನಿಕಾಯದ ಮುಂಗುಡಿಯಲಿಕ್ಕೆಲದ ಫಣಿಕುಲದ
ವರ ನದೀ ನದ ಕೋಟೆಗಳ ಸಾ
ಗರದ ಪರಿವಾರದಲಿ ಬಂದನು
ವರುಣನಮರೇಂದ್ರನ ಕುಮಾರನ ಕಾಂಬ ತವಕದಲಿ (ಅರಣ್ಯ ಪರ್ವ್, ೮ ಸಂಧಿ, ೩ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಮತ್ತೊಂದು ಅದ್ಭುತವನ್ನು ಕೇಳು, ಆಗ ಪಶ್ಚಿಮ ದಿಕ್ಕಿನಿಂದ ವರುಣನು ಅರ್ಜುನನನ್ನು ನೋಡಲು ತವಕದಿಂದ ಬಂದನು. ಅವನ ಮುಂದೆ ಜಲಚರಗಳ ಹಿಂಡು, ಎರಡು ಕಡೆಯಲ್ಲಿ ಸರ್ಪಸಂಕುಲ, ಅಸಂಖ್ಯಾತ ನದೀನದಗಳು ಮತ್ತು ಸಾಗರದ ಪರಿವಾರವು ಅವನನ್ನು ಸುತ್ತುವರಿದಿತ್ತು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಅದ್ಭುತ: ಆಶ್ಚರ್ಯ; ಚರಮ: ಪಶ್ಚಿಮ ದಿಕ್ಕಿನ; ದಿಕ್ಕು: ದಿಶೆ; ಅಖಿಳ: ಎಲ್ಲ; ಜಲಚರ: ಜಲದಲ್ಲಿ ಜೀವಿಸುವ ಜೀವಿಗಳು; ನಿಕಾಯ: ಗುಂಪು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಇಕ್ಕೆಲ: ಎರಡೂ ಕಡೆ; ಫಣಿ: ಹಾವು; ಕುಲ: ವಂಶ; ವರ: ಶ್ರೇಷ್ಠ; ನದಿ: ಸರೋವರ; ನದ: ಗಂಡು ತೊರೆ, ಗಂಡು ನದಿ; ಕೋಟೆ:ಊರಿನ ರಕ್ಷಣೆಗಾಗಿ ಕಟ್ಟಿದ ಗೋಡೆ; ದೇಹ; ಸಾಗರ: ಸಮುದ್ರ; ಪರಿವಾರ: ಸುತ್ತಲಿನವರು, ಪರಿಜನ; ಬಂದು: ಆಗಮಿಸು; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ದೇವತೆ; ಅಮರೆಂದ್ರ: ಇಂದ್ರ; ಅಮರ: ದೇವತೆ; ಕುಮಾರ: ಮಗ; ಕಾಂಬ: ನೋಡಲು; ತವಕ: ಆತುರ;

ಪದವಿಂಗಡಣೆ:
ಅರಸ +ಕೇಳ್+ಅದ್ಭುತವನ್+ಇತ್ತಲು
ಚರಮ+ ದಿಕ್+ಭಾಗದಲ್+ಅಖಿಳ +ಜಲ
ಚರ +ನಿಕಾಯದ +ಮುಂಗುಡಿಯಲ್+ಇಕ್ಕೆಲದ +ಫಣಿಕುಲದ
ವರ +ನದೀ+ ನದ +ಕೋಟೆಗಳ+ ಸಾ
ಗರದ+ ಪರಿವಾರದಲಿ +ಬಂದನು
ವರುಣನ್+ಅಮರೇಂದ್ರನ +ಕುಮಾರನ +ಕಾಂಬ +ತವಕದಲಿ

ಅಚ್ಚರಿ:
(೧) ಅರ್ಜುನನನ್ನು ಅಮರೇಂದ್ರನ ಕುಮಾರ ಎಂದು ಕರೆದಿರುವುದು
(೨) ಪಶ್ಚಿಮ ದಿಕ್ಕನ್ನು ಹೇಳುವ ಪರಿ – ಚರಮ ದಿಗ್ಭಾಗ